ವಾರಾಂತ್ಯದ ರಾಜ್ಯ: ಜಾಧವರ ಪರಾಕ್ರಮ, ಕಿಕ್ ಸೂಚಿಸುತ್ತಿರೇ ಸಚಿವರ ಹೇಳಿಕೆ, ಹಾಲು ತುಟ್ಟಿ ಆಯ್ತೇಕೆ…

ಅಚ್ಚರಿಗೆ ತಾವು ಸಮನಾರ್ಥಕ ಅಂತ ನಿರೂಪಿಸಿದರೇ ಮುಖ್ಯ ಕಾರ್ಯದರ್ಶಿ?

ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮದವರನ್ನು ಕಾಣುತ್ತಲೇ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಮೂರು ಅಂತಸ್ತುಗಳನ್ನು ಒಂದೇ ಉಸಿರಿನಲ್ಲಿ ಹತ್ತಿ ಕೊಠಡಿಯೊಂದರಲ್ಲಿ ಮುಚ್ಚಿಟ್ಟುಕೊಂಡು ಭಾರಿ ಸುದ್ದಿ ಮಾಡಿದ್ದರು. ಶನಿವಾರ ಸರ್ಕಾರಿ ರಜೆ ಇದ್ದರೂ ವಿಧಾನಸೌಧದಲ್ಲಿ ಪ್ರತ್ಯಕ್ಷವಾಗಿ ಕೆಲಸದಲ್ಲಿ ತೊಡಗಿಸಿಕೊಂಡು ಇನ್ನೊಂದು ಅಚ್ಚರಿ ಕೊಟ್ಟರು. ಈ ಕುತೂಹಲಕ್ಕೆ ಉತ್ತರವಾಗಿ ಸ್ವಲ್ಪ ಸಮಯದಲ್ಲೇ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಕ್ಕೆ ಭೇಟಿನೀಡಿ ಕಚೇರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಕಚೇರಿಗಳ ಬೀಗಿ ತೆಗೆಸಿದ್ದಲ್ಲದೆ ಶೌಚಾಲಯ, ಕಾರಿಡಾರ್ ಮತ್ತು ವಾಹನ ನಿಲುಗಡೆ ಸ್ಥಳದ ಸ್ಥಿತಿಗತಿ ಗಮನಿಸಿದರು. ಅವ್ಯವಸ್ಥೆ ಕಂಡುಬಂದ ಕಡೆಗಳಲ್ಲಿ ಸಂಬಂಧಪಟ್ಟವರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ನಂತರ 7-8 ಅಧಿಕಾರಿಗಳೊಂದಿಗೆ ಎಂ.ಎಸ್.ಬಿಲ್ಡಿಂಗ್ ನಲ್ಲೇ ಸಣ್ಣ ಸಭೆ ನಡೆಸಿ ಅಲ್ಲಿಯೂ ಖದರು ಮರೆದರು. ‘ಇಲಾಖೆಗಳ ಕಡತ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿ ರಾಜ್ಯ ಸಚಿವ ಸಂಪುಟ ಕಡತ ವಿಲೇವಾರಿಗೆ ಡೆಡ್ ಲೈನ್ ನೀಡಿದೆ. ಆದರೂ ಯಾಕೆ ವಿಳಂಬ? ಕಾನೂನು ತೊಡಕು ಇದೆಯಾ? ನನ್ನಿಂದ ಸಮಸ್ಯೆಯಾ? ಹೇಳಿ, ಈಗಲೇ ಪರಿಹರಿಸುತ್ತೇನೆ’ ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳು ತಡಬಡಾಯಿಸಬೇಕಾಯಿತು.

ಮಧ್ಯರಾತ್ರಿವರೆಗೆ ಬಾರ್ ಭಾಗ್ಯಕ್ಕೆ ಪರಂ ಚಿಂತನೆ

ಪ್ರತಿದಿನ ಮಧ್ಯರಾತ್ರಿವರೆಗೂ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ- ಹಾಗಂತ ವಾರಾಂತ್ಯದಲ್ಲಿ ಕಿಕ್ ಕೊಟ್ಟಿದ್ದಾರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಕೆಲವು ನಗರಗಳಲ್ಲಿ ವಾರದ ಕೊನೆಯ ಮೂರು ದಿನಗಳಿಗೆ ಮಾತ್ರ ಮಧ್ಯರಾತ್ರಿವರೆಗಿನ ಅವಧಿ ಸೀಮಿತ ಮಾಡಲಾಗಿದ್ದು ಈ ಬಗ್ಗೆ ಪರ ವಿರೋಧ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಅಬಕಾರಿ, ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರಂತೆ ಸಚಿವರು. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿರೋದಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ಕಾರಣ ಅಂತಲೂ ಸ್ಪಷ್ಟಪಡಿಸಿದರು.

ಹಾಲು ದರ ಏರಿಕೆಗೆ ಪ್ರಭಾವಿಸಿದ ಅಂಶ ಯಾವುದು?

ಕೇಂದ್ರ ಕೃಷಿ ಸಚಿವಾಲಯವೇ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದ್ದರಿಂದ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ದೇಶದ ಉಳಿದೆಲ್ಲ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇರುವುದರಿಂದ ವಿವಿಧ ರಾಜ್ಯಗಳು ಅಪಸ್ವರ ಎತ್ತುತ್ತಿರೋದು ಈ ಕ್ರಮಕ್ಕೆ ಕಾರಣವೇ ಎಂಬ ಪ್ರಶ್ನೆ ಎದ್ದಿದೆ.

ದೇಶದ ಎಲ್ಲಾ ರಾಜ್ಯಗಳಲ್ಲಿ ಹಾಲಿನ ದರ ಮೂವತ್ತೈದು ರೂಪಾಯಿಗಳಿಗಿಂತ ಹೆಚ್ಚಿದ್ದು ಕರ್ನಾಟಕದಲ್ಲಿ ಇಪ್ಪತ್ತೊಂಬತ್ತು ರೂಪಾಯಿ ಇರುವುದರಿಂದ ಖಾಸಗಿ ಸಂಸ್ಥೆಗಳು ಕರ್ನಾಟಕದಿಂದ ಹಾಲು ಖರೀದಿ ಮಾಡಿ ತಮ್ಮ ರಾಜ್ಯಗಳಲ್ಲಿರುವ ಹಾಲು ಒಕ್ಕೂಟಗಳನ್ನು ಸಂಕಷ್ಟಕ್ಕೆ ಸಿಲುಕಿಸವ ಆತಂಕವಿದೆ ಎಂಬ ಅಭಿಮತ ಕೇಂದ್ರದ್ದಾಗಿತ್ತು. ದೇಶಾದ್ಯಂತ ಪಶು ಆಹಾರದ ಬೆಲೆ ಹೆಚ್ಚಾಗಿದ್ದು ರೈತರ ಹಿತದೃಷ್ಟಿಯಿಂದ ಹಾಲಿನ ದರವನ್ನು ಹೆಚ್ಚಿಸಿ ಎಂದಿತ್ತು. ಇದಕ್ಕೆ ತಕ್ಕಂತೆ ರಾಜ್ಯದಲ್ಲೂ ಹಾಲು ಉತ್ಪಾದಕರು ತಾವು ಒದಗಿಸುತ್ತಿರುವ ಹಾಲಿಗೆ ಪ್ರತಿಯಾಗಿ ಹೆಚ್ಚುವರಿ ದರವನ್ನು ಒದಗಿಸುವಂತೆ ಬೇಡಿಕೆ ಮುಂದಿಟ್ಟಿದ್ದರು. ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಅರ್ಧದಷ್ಟು ಹಾಲು ಪೌಡರ್ ಮಾಡಲಾಗುತ್ತಿದ್ದು ಖಾಸಗಿಯವರಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಾಲನ್ನು ಮಾರಾಟ ಮಾಡಲು ಅಗತ್ಯವಾದ ತಂತ್ರಗಾರಿಕೆಯನ್ನು ರೂಪಿಸಿ ಎಂದು ರಾಜ್ಯ ಸರ್ಕಾರ ಕೆಎಂಎಫ್ ಗೆ ಸೂಚಿಸಿದೆ.

Leave a Reply