ಕಪ್ಪುಕುಳಿಗಳನ್ನೇ ಬೇಧಿಸಬಹುದು ಅಂತಂದ್ಮೇಲೆ ಹತಾಶೆಯ ಕಾರ್ಮೋಡ ಅದ್ಯಾವ ಲೆಕ್ಕ ಅಂತ ಕೇಳ್ತಿದಾರೆ ವಿಜ್ಞಾನಿ ಸ್ಟೀಫನ್ ಹಾಕಿಂಗ್!

ಚೈತನ್ಯ ಹೆಗಡೆ

ಸ್ಟೀಫನ್ ಹಾಕಿಂಗ್ ಗೊತ್ತಲ್ಲ, ಕಾಲದ ಬಗ್ಗೆ ವೈಜ್ಞಾನಿಕ ಸಿದ್ಧಾಂತಗಳನ್ನು ಮಂಡಿಸಿದ ವಿಜ್ಞಾನಿ. ತಾರುಣ್ಯದಲ್ಲೇ ವಿಚಿತ್ರ ನರ ಕಾಯಿಲೆಗೆ ತುತ್ತಾಗಿ ಗಾಲಿಕುರ್ಚಿಯಲ್ಲಿ ಬಂಧಿತರಾಗಿದ್ದರೂ ವಿಶ್ವದ ಬಗ್ಗೆ ಅಧ್ಯಯನ ಬಿಡದೇ ಜಗತ್ತಿನ ಗಮನ ಸೆಳೆಯುತ್ತಲೇ ಬಂದವರು.

ಜನವರಿ 8ಕ್ಕೆ ಅವರು ತಮ್ಮ 74ನೇ ಜನ್ಮದಿನ ಆಚರಿಸಿಕೊಂಡರು. 49ನೇ ವಯಸ್ಸಿಗೆಲ್ಲ ಸಾಯುತ್ತಾರೆಂಬ ವೈದ್ಯಕೀಯ ಭವಿಷ್ಯವಾಣಿಯೆ ನೆಗೆದುಬಿದ್ದು, ಆ ಅರ್ಥದಲ್ಲಿ ಕಾಲನನ್ನು ಜಯಿಸಿದವರಿವರು. ಜನ್ಮದಿನದ ಮುನ್ನಾದಿನ ಅವರು ಲಂಡನ್ ನ ರಾಯಲ್ ಇನ್ ಸ್ಟಿಟ್ಯೂಷನ್ ನಲ್ಲಿ ಉಪನ್ಯಾಸ ಕೊಟ್ಟರು. ಸ್ಟೀಫನ್ ಅವರು ವಿಜ್ಞಾನ ವಲಯವನ್ನೂ ಮೀರಿ ಜನಪ್ರಿಯರಾಗಿರುವುದಕ್ಕೆ ಕಾರಣವೇ ಅವರು ವಿಜ್ಞಾನದ ಸಿದ್ಧಾಂತಗಳನ್ನು ವಿವರಿಸುತ್ತಲೇ ಅದರಲ್ಲಿ ಜೀವನ ತತ್ತ್ವಗಳನ್ನು ಸಾರುವ ರೀತಿ ಹಾಗೂ ಅದಮ್ಯ ಜೀವನೋತ್ಸಾಹಕ್ಕೆ.

ಮೊನ್ನೆಯ ಉಪನ್ಯಾಸದಲ್ಲೂ ಅವರು ಮಾಡಿದ್ದು ಅದನ್ನೇ. ಇಷ್ಟಕ್ಕೂ ಅವರು ವಿವರಿಸಿದ್ದು ವಿಜ್ಞಾನದ ಬಹುಚರ್ಚಿತ ವಿಷಯಗಳಲ್ಲೊಂದಾದ ಕಪ್ಪುರಂಧ್ರದ ಬಗ್ಗೆ. ಅದನ್ನು ಬದುಕಿಗೆ ಬೆಸೆಯುತ್ತ, ಹತಾಶೆಯಲ್ಲಿರುವವರಿಗೆ ಹೇಳಿದ ಪಾಠವಿದೆಯಲ್ಲ… ಅದರ ಪ್ರಸ್ತುತಿಯೇ ಅನನ್ಯ.

‘ಕಪ್ಪುಕುಳಿಗಳೆಂದರೆ ಅದರಲ್ಲಿ ಪ್ರವೇಶಿಸಿದ ಎಲ್ಲವೂ ಶಾಶ್ವತವಾಗಿ ಸಿಲುಕಿಕೊಂಡಿರುತ್ತವೆ, ಅದೊಂದು ಶಾಶ್ವತ ಬಂಧೀಖಾನೆ ಅಂತ ಈ ಮೊದಲು ಅಂದುಕೊಂಡಿದ್ದೆವಲ್ಲ… ಅದು ಸರಿಯಲ್ಲ. ಕಪ್ಪುಕುಳಿಯನ್ನು ಪ್ರವೇಶಿಸಿ ಆಚೆ ಬರುವುದಕ್ಕೂ ಮಾರ್ಗವಿದೆ. ಬಹುಶಃ ಅದು ಇನ್ನೊಂದು ವಿಶ್ವಕ್ಕೆ ಕರೆದೊಯ್ಯುತ್ತದೆ.’

ಇಷ್ಟು ಹೇಳಿದ ಸ್ಟೀಫನ್ ಮುಂದುವರಿದು ಮಾತು ಬೆಸೆಯುತ್ತಾರೆ- ‘ನಿಮ್ಮ ಬದುಕಲ್ಲಿ ಕಪ್ಪುಕುಳಿಗೆ ಬಿದ್ದುಬಿಟ್ಟಿದ್ದೇನೆ ಎಂಬಷ್ಟು ಹತಾಶರಾಗಿದ್ದರೆ.. ಖಂಡಿತ ಭರವಸೆ ಕಳೆದುಕೊಳ್ಳದೇ ಪ್ರಯತ್ನ ಮುಂದುವರಿಸಿ. ಹೊರಹೋಗುವ ಮಾರ್ಗ ಇದ್ದೇ ಇದೆ..’

black hole

ಸ್ಟೀಫನ್ ಹಾಕಿಂಗ್ ಬಾಯಿಂದ ಈ ಮಾತು ಬಂದಿರುವುದಕ್ಕೆ ಇರುವ ತೂಕವೇ ಬೇರೆ. ಏಕೆಂದರೆ ತಮ್ಮ ಶಾರೀರಿಕ ಊನದ ಬಗ್ಗೆ ಹತಾಶೆ ಇರಿಸಿಕೊಳ್ಳದೇ ಇಷ್ಟು ವರ್ಷ ಅವರು ಬದುಕಿರುವುದು ಹಾಗೂ ವಿಚಾರಕ್ಕೆ ಪ್ರಚೋದಿಸುತ್ತಿರುವುದೇ ಅತಿದೊಡ್ಡ ವಿಸ್ಮಯ.

ಅಂದಹಾಗೆ….

ಸ್ಟೀಫನ್ ಹಾಕಿಂಗ್ ಬಗ್ಗೆ ಬಂದಿರುವ ‘ದ ಥಿಯರಿ ಆಫ್ ಎವರಿಥಿಂಗ್’ ಎಂಬ ಚಿತ್ರವನ್ನು ನೋಡಿದವರು ಪುಣ್ಯವಂತರು. ಇಲ್ಲವಾದಲ್ಲಿ ಎಲ್ಲಾದರೂ ಸಂಪಾದಿಸಿ ನೋಡಲೇಬೇಕಾದ ಚಿತ್ರ. ಅಲ್ಲಿ ಸೈನ್ಸಿನ ಜತೆ ಬದುಕಿನ ಅನನ್ಯ ನೋಟಗಳಿವೆ. ಸ್ಟೀಫನ್ ಮೊದಲ ಹೆಂಡತಿ ಬರೆದಿರುವ ಪುಸ್ತಕದ ಆಧಾರಿತ ಚಿತ್ರ ಇದು.

ಅಲ್ಲಿ, ನಾಯಕಿ ಧರ್ಮಾಸಕ್ತೆ. ಪರಿಚಯವಾಗುತ್ತಲೇ ಚರ್ಚ್ ಬಗ್ಗೆ, ತನ್ನ ಆಸಕ್ತಿಗಳ ಬಗ್ಗೆ ಹೇಳುತ್ತಾಳೆ. ನಾಯಕನ ಕ್ಷೇತ್ರ ಅಂತರಿಕ್ಷ ಅಧ್ಯಯನ ಎಂದು ತಿಳಿದುಕೊಂಡಾಗ, ಅದೇನದು ಅಂತ ಕೇಳ್ತಾಳೆ ನಾಯಕಿ. ಆಗ ಸ್ಟೀಫನ್ ಪಾತ್ರದ ಮಾತು- ‘ಅಸ್ಟ್ರೊನಮಿ ಅಂತಂದ್ರೆ ನಾಸ್ತಿಕರ ಧರ್ಮ!’

ನಾಯಕ- ನಾಯಕಿ ನಡುವೆ ಇನ್ನೊಂದು ಸಂಭಾಷಣೆ..

ಸ್ಟೀಫನ್ ಪ್ರಶ್ನೆ- ‘ಅದೇನದು, 19ನೇ ಶತಮಾನದ ಸ್ಪಾನಿಷ್ ಕಾವ್ಯವನ್ನು ಅಧ್ಯಯನಕ್ಕೆ ಆಯ್ದುಕೊಂಡಿದೀಯಲ್ಲ ಏಕೆ?’

ಆಕೆಯ ಉತ್ತರ- ‘ನನಗೂ ನಿನ್ನ ಹಾಗೆ ಟೈಮ್ ಟ್ರಾವೆಲ್ (ಕಾಲದಲ್ಲಿ ಚಲಿಸೋದು) ತುಂಬ ಇಷ್ಟ.’

ಹೇಗೆ ವಿಶ್ವಕ್ಕೆ ಮೇರೆಗಳಿಲ್ಲ ಎಂಬ ಕಲ್ಪನೆ ಇದೆಯೋ ಅಂತೆಯೇ ಮನುಷ್ಯ ಪ್ರಯತ್ನಗಳಿಗೂ ಮೇರೆಗಳಿಲ್ಲ. ಬದುಕಿದೆ ಎನ್ನುವುದಾದರೆ ಅಲ್ಲಿ ಭರವಸೆ ಇದ್ದೇ ಇದೆ- ಎಂಬಂಥ ಸ್ಟೀಫನ್ ಹಾಕಿಂಗ್ ಮಾತುಗಳನ್ನು ಅನುರಣಿಸುತ್ತ ಮುಕ್ತಾಯವಾಗುವ ಚಿತ್ರ ಕಟ್ಟಿಕೊಡುವ ಅನುಭವ ವಿಶಿಷ್ಟ.

ಸ್ಟೀಫನ್ ರಿಗೆ ತುಸು ತಡವಾಗಿ ಹ್ಯಾಪಿ ಬರ್ತ್ ಡೇ ಹೇಳುತ್ತ ನಮ್ಮ ಮನಕ್ಕೆ ಆವರಿಸುವ ಕಪ್ಪುಕುಳಿ ಪರದೆಗಳನ್ನು ಸೀಳಿ ಹೊಸ ಜಗತ್ತುಗಳಿಗೆ ಜೀಕೋಣ.

2 COMMENTS

Leave a Reply