ಪ್ರಣವ್ ಧನವಾಡೆ ಸಾವಿರ ರನ್ ಸಿಡಿಸಿದ್ದು ಭಾರೀ ಸಾಧನೆ ಅಂದುಕೊಂಡ್ರಾ? ಹಂಗಾದ್ರೆ ಇದನ್ನು ಓದಿ, ಪ್ರಶ್ನೆಗಳಿಗೆ ಉತ್ತರಿಸಿ…

ಎಮ್. ರವಿತೇಜ

ಮುಂಬೈನ ಯುವ ಪ್ರತಿಭೆ ಪ್ರಣವ್ ಧನವಾಡೆ 16 ವರ್ಷದೊಳಗಿನ ಶಾಲಾ ಮಟ್ಟದ ಟೂರ್ನಿಯ ಇನಿಂಗ್ಸ್ ಒಂದರಲ್ಲಿ ಸಹಸ್ರ ರನ್ ಗಳ ಸರದಾರನಾಗಿದ್ದು ಭಾರೀ ಚರ್ಚೆಯಾದ ಐತಿಹಾಸಿಕ ಸಾಧನೆ. ಈ ಇನಿಂಗ್ಸ್ ಕುರಿತು ಮಾಜಿ ದಿಗ್ಗಜ ಕ್ರಿಕೆಟಿಗರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತು. ಯಾವುದೇ ಮಟ್ಟದ ಕ್ರಿಕೆಟ್ ಟೂರ್ನಿಯಾಗಲಿ 323 ಎಸೆತಗಳಲ್ಲಿ 129 ಬೌಂಡರಿ ಹಾಗೂ 59 ಸಿಕ್ಸರ್ ಸೇರಿದಂತೆ ಸಹಸ್ರ ರನ್ ಪೇರಿಸುವುದು ಸಾಮಾನ್ಯ ವಿಷಯವಲ್ಲ ಎಂಬುದು ಒಪ್ಪುವ ಮಾತು. ಅಲ್ಲದೆ ತಂಡದ ಮೊತ್ತ 1,465 ರನ್. ಆದರೆ ಈ ಇನಿಂಗ್ಸ್ ಅನ್ನು ಕೇವಲ ಪ್ರಣವ್ ಅವರ ಸಾಧನೆ ಆಯಾಮದಲ್ಲಿ ನೋಡಿದಾಗ ಮೇಲ್ನೋಟಕ್ಕೆ ಎಲ್ಲವೂ ಶ್ಲಾಘನೀಯ.

ಆದರೆ ಈ ಸಾಧನೆ ಮತ್ತು ಅದರ ಸುತ್ತಲಿನ ಪ್ರಚಾರ ಇವತ್ತಿನ ಸಮಾಜ ಯಶಸ್ಸು ಎಂಬುದನ್ನು ಯಾವ ರೀತಿಯಲ್ಲಿ ನೋಡುತ್ತಿದೆ ಎಂಬುದರ ಬಗ್ಗೆ ಪ್ರಶ್ನೆಗಳನ್ನೂ ಎತ್ತುವಂತಿದೆ. ಒಟ್ಟಿನಲ್ಲಿ ನೀನು ಏನೋ ಮಾಡಬೇಕು, ಅದನ್ನು ಹೆಂಗೆ ಮಾಡ್ತಿ ಅಂತ ಯಾರೂ ಕೇಳೋಲ್ಲ, ತಲುಪುವ ಗುರಿಯಷ್ಟೇ ಮುಖ್ಯ ಆದರೆ ಕ್ರಮಿಸುವ ಹಾದಿಯೇನಲ್ಲ, ಹೆಂಗೆ ಬೇಕಾದ್ರೂ ಹೋಗು…. ಇದು ಇವತ್ತಿನ ಧೋರಣೆ.

ಬನ್ನಿ, ಧನವಾಡೆ ಇನಿಂಗ್ಸ್ ಅನ್ನು ಮತ್ತೊಂದು ಆಯಾಮದಲ್ಲಿ ನೋಡೋಣ. ಪಂದ್ಯದಲ್ಲಿ ಕೆ.ಸಿ ಗಾಂಧಿ ಶಾಲೆಗೆ ಪ್ರತಿಸ್ಪರ್ಧಿ ತಂಡವಾಗಿದ್ದು, ಆರ್ಯ ಗುರುಕುಲ್ ಶಾಲೆ. ಡಿಎನ್ಎಇಂಡಿಯಾ ಅಂತರ್ಜಾಲ  ಪತ್ರಿಕೆ ವರದಿ ಪ್ರಕಾರ ಈ ಪಂದ್ಯದಲ್ಲಿ ಕೆ.ಸಿ ಗಾಂಧಿ ತಂಡ ಆಡಿದ್ದು 16 ವರ್ಷದೊಳಗಿನವರ ತಂಡದ ವಿರುದ್ಧವಲ್ಲ. ಅದು 14 ವರ್ಷದೊಳಗಿನವರ ತಂಡವಾಗಿತ್ತು. ಹೌದು, ಆರ್ಯ ಗುರುಕುಲ್ ಶಾಲಾ ತಂಡದ 16 ವರ್ಷದೊಳಗಿನ ತಂಡದ ಬಹುತೇಕ ಆಟಗಾರರು 10ನೇ ತರಗತಿ ಪರೀಕ್ಷೆಯನ್ನು ಹೊಂದಿದ್ದ ಕಾರಣ, ಆ ಶಾಲೆ 14 ವರ್ಷದೊಳಗಿನ ತಂಡವನ್ನು ಕಣಕ್ಕಿಳಿಸಿತ್ತು. ಈ ನಿರ್ಧಾರ ಪಂದ್ಯದ ಅಂತಿಮ ಕ್ಷಣದಲ್ಲಿ ಕೈಗೊಂಡಿದ್ದಾಗಿದೆ. ಈ ತಂಡದಲ್ಲಿ ಆಡಿದ ಕೆಲ ಆಟಗಾರರು ಮೊದಲ ಬಾರಿಗೆ ಈ ಮಟ್ಟದ ಸ್ಪರ್ಧಾತ್ಮಕ ಪಂದ್ಯವನ್ನಾಡುತ್ತಿರುವವರಾಗಿದ್ದರು. ಅಲ್ಲದೆ ಈ ಆಟಗಾರರು ಸರಿಯಾದ ಅಭ್ಯಾಸ ಮಾಡಲು ಸಾಧ್ಯವಾಗಿರಲಿಲ್ಲ. ಇದನ್ನು ಗಣನೆಗೆ ತೆಗೆದುಕೊಂಡಾಗ ಕೆ.ಸಿ ಗಾಂಧಿ ಶಾಲೆ ತಮ್ಮ ತಂಡಕ್ಕಿಂತ ದುರ್ಬಲ ಅಥವಾ ಕೆಳ ಮಟ್ಟದ ತಂಡದ ವಿರುದ್ಧ ಆಡಿತು ಎಂಬುದು ಸ್ಪಷ್ಟ.

ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಯ ಗುರುಕುಲ ತಂಡ ಮೊದಲ ಇನಿಂಗ್ಸ್ ನಲ್ಲಿ ದಾಖಲಿಸಿದ್ದು, ಕೇವಲ 31 ರನ್ ಮಾತ್ರ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಕೆ.ಸಿ ಗಾಂಧಿ ಶಾಲೆ ತಂಡ ಪ್ರಣವ್ ಅವರ ವೈಯಕ್ತಿಕ ಸಹಸ್ರ ರನ್ ಜತೆಗೆ ಬರೋಬ್ಬರಿ 1465 ರನ್ ದಾಖಲಿಸಿತು. ಆ ಮೂಲಕ 1434 ರನ್ ಗಳ ಮುನ್ನಡೆ ಸಾಧಿಸಿತು. ಮತ್ತೆ ಎರಡನೇ ಇನಿಂಗ್ಸ್ ನಲ್ಲಿ ಆರ್ಯ ಗುರುಕುಲ ತಂಡ 52 ರನ್ ಗಳಿಗೆ ಆಲೌಟ್.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಪಂದ್ಯದ ಮೊದಲ ದಿನ ಆರ್ಯ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿದ ಕೆ.ಸಿ ಗಾಂಧಿ ತಂಡ ಬ್ಯಾಟಿಂಗ್ ಆರಂಭಿಸಿ, ಆ ದಿನದಾಟ ಮುಕ್ತಾಯಕ್ಕೆ ತಂಡದ ಮೊತ್ತ 800ಕ್ಕೂರನ್ ಗಳಿಸಿತ್ತು. ಇಂಗ್ಲೆಂಡ್ ಎಇಜೆ ಕೊಲಿನ್ಸ್ ಅವರ 628 ರನ್ ಗಳ ದಾಖಲೆಯನ್ನು ಪ್ರಣವ್ ಹಿಮ್ಮೆಟ್ಟಿಸಿಯಾಗಿತ್ತು. ಶಾಲಾ ಮಟ್ಟದ ಟೂರ್ನಿಯಲ್ಲಿ ಸಹಜವಾಗಿ ಕೋಚ್ ನ ತೀರ್ಮಾನ ಅಂತಿಮ. ಅದರಲ್ಲೂ ಇನಿಂಗ್ಸ್ ಡಿಕ್ಲೇರ್ ನಂತಹ ತೀರ್ಮಾನ ಕೋಚ್ ನದ್ದೆ ಅಂತಿಮ.

ಮೊದಲ ಇನ್ನಿಂಗ್ಸ್ ನಲ್ಲಿ 31 ರನ್ ಗಳಿಸಿದ್ದ ದುರ್ಬಲ ತಂಡದ ವಿರುದ್ಧ ಪಂದ್ಯವನ್ನು ಗೆಲ್ಲಲು ಅಬ್ಬಬ್ಬಾ ಎಂದರೆ, 400-500 ರನ್ ಮುನ್ನಡೆ ಪಡೆದಿದ್ದರೂ ಸಾಕಿತ್ತು. ಮೊದಲ ದಿನದಾಟದ ಮುಕ್ತಾಯಕ್ಕೆ ಪ್ರಣವ್ ಏಕಾಂಗಿಯಾಗಿ 600ಕ್ಕೂ ಹೆಚ್ಚು ರನ್ ದಾಖಲಿಸಿದ್ದ. ಎರಡನೇ ದಿನವೂ ಬ್ಯಾಟಿಂಗ್ ಮುಂದುವರಿಸಿದ್ದು, ಕೇವಲ ಮತ್ತು ಕೇವಲ ದಾಖಲೆ ಬರೆದುಕೊಳ್ಳುವ ಕಾರಣಕ್ಕೆ ಮಾತ್ರ ಎಂಬುದು ಸ್ಪಷ್ಟ.

ಸಾವಿರ ರನ್ ಗಳ ಸುರಿಮಳೆ ಎಂಬುದು ಕೇಳಲಿಕ್ಕೆ, ಮಾಧ್ಯಮಗಳ ಹೆಡ್ಡಿಂಗ್ ಗೆ ಚೆನ್ನಾಗಿದೆ. ಆದರೆ ಎಲ್ಲ ಹೋಯಿತು ಸ್ವಾಮಿ ಕ್ರೀಡಾಸ್ಫೂರ್ತಿ? ಈಗಷ್ಟೇ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಣಕ್ಕಿಳಿದ ಚಿಕ್ಕ ಹುಡುಗರನ್ನು ಮೈದಾನದಲ್ಲಿ ದಂಡಿಸಿ ಬರೆದ ದಾಖಲೆ ಶ್ರೇಷ್ಠ ಸಾಧನೆಯೇ?

2 COMMENTS

  1. ಅಬ್ಬಾ..ಎಂತ ವಿಕೃತ ವಿಶ್ಲೇಷಣೆ. ಕ್ರೀಡೆಯನ್ನು ಕ್ರೀಡೆಯಾಗಿ ನೋಡಲಾಗದೆ ನಿಮ್ಮಂತವರಿಗೆ ಅನ್ನಿಸಿದ್ದೇ ಎಲ್ಲರಿಗೂ ಅನ್ನಿಸಬೇಕಿಲ್ಲ. ಮುಂದೊಂದು ದಿನ ಇಂಡಿಯಾ ಟೀಮ್ಗೆ ಕೊಡುಗೆಯಾಬಲ್ಲ ಹುಡುಗನ ಬಗ್ಗೆಯೂ ಮತ್ಸರ..ಒಳ್ಳೆಯದಕ್ಕಲ್ಲ..

  2. We know that digitalkannada is right leaning. But this is pushing it to extreme right; this article is here just because a school named ‘arya gurukul’ lost to one named after ‘gandhi’!!! Thats pathetic, you are criticizing a kid who happens to be studying in a school whose name you hate. This, in my opinion, is much worse than RSS’ hate speeches or manusmriti’s atrocious lines.

Leave a Reply