ಭಾನುವಾರಕ್ಕೊಂದು ಸ್ಫೂರ್ತಿಕತೆ: ರತನ್ ಟಾಟಾರನ್ನು ಅವಮಾನಿಸಿದ್ದ ಫೋರ್ಡ್ ಕಂಪನಿ ಕೊನೆಗೆ ಸಹಾಯ ಕೋರಿ ಅವರ ಬಳಿಯೇ ಬಂತು!

ಡಿಜಿಟಲ್ ಕನ್ನಡ ಟೀಮ್

1998ನೇ ಇಸ್ವಿ. ಟಾಟಾ ಕಂಪನಿ ತನ್ನ ಮೊದಲ ಪ್ರಯಾಣಿಕರ ಕಾರಾದ ಟಾಟಾ ಇಂಡಿಕಾವನ್ನು ಹೊರತಂದಿತ್ತು. ಅದೇಕೋ ಬಿಸಿನೆಸ್ಸು ಕೈಹಿಡಿಯಲೇ ಇಲ್ಲ. ಸರಿ, ಟಾಟಾ ಇಂಡಿಕಾವನ್ನು ಯಾವುದಾದರೂ ಆಟೊಮೊಬೈಲ್ ಕಂಪನಿಗೆ ಮಾರಿಬಿಡೋಣ ಎಂಬ ನಿರ್ಧಾರಕ್ಕೆ ಬಂದ ರತನ್ ಟಾಟಾ ಈ ಬಗ್ಗೆ ಜಾಗತಿಕ ದೈತ್ಯ ಫೋರ್ಡ್ ಕಂಪನಿಯನ್ನು ಸಂಪರ್ಕಿಸಿದರು.

ಸರಿ, ಮಾತಾಡೋಣ; ಅಮೆರಿಕದ ಡೆಟ್ರಾಯಿಟ್ ನಲ್ಲಿರುವ ತಮ್ಮ ಮುಖ್ಯ ಕಚೇರಿಗೆ ಬನ್ನಿ ಅಂತ ಫೋರ್ಡ್ ನಿಂದ ಆಹ್ವಾನ ಬಂತು. ತಮ್ಮ ಉನ್ನತಾಧಿಕಾರಿಗಳ ಜತೆಗೆ ಟಾಟಾ ಅಲ್ಲಿಗೆ ಭೇಟಿ ಕೊಟ್ಟರು.

ಅಲ್ಲಿ ನೋಡಿದರೆ ಫೋರ್ಡ್ ಕಂಪನಿ ಇವರೊಂದಿಗೆ ಒಪ್ಪಂದಕ್ಕಲ್ಲ, ಅವಮಾನಿಸಲೆಂದೇ ಕರೆಸಿಕೊಂಡಂತಿತ್ತು. ಮೂರು ತಾಸುಗಳ ಮೀಟಿಂಗ್ ಅನ್ನು ಟಾಟಾ ಪ್ರಯತ್ನವನ್ನು ಗೇಲಿ ಮಾಡಲೆಂದೇ ಉಪಯೋಗಿಸಿಕೊಳ್ಳಲಾಯಿತು. ‘ಗೊತ್ತಿಲ್ದೇ ಇರೋ ಕೆಲ್ಸ ಯಾಕ್ರೀ ಮಾಡೋಕೆ ಹೋಗ್ತೀರಿ? ನಿಮಗೆ ಪ್ರಯಾಣಿಕರ ಕಾರುಗಳ ಬಗ್ಗೆ ಏನೇನೂ ಗೊತ್ತಿಲ್ಲ. ಟಾಟಾ ಇಂಡಿಕಾ ಬ್ರಾಂಡ್ ಅನ್ನು ನಿಮ್ಮಿಂದ ತೆಗೆದುಕೊಳ್ಳಬೇಕು ಅಂತಾದ್ರೆ ಅದು ನಾವು ನಿಮಗೆ ಮಾಡುವ ಉಪಕಾರ ಅಷ್ಟೆ’ ಅಂತೆಲ್ಲ ಮಾತಾಡಿದ್ರು.

ಸ್ವಾಭಿಮಾನಿ ಟಾಟಾರಿಗೆ ಇಷ್ಟೆಲ್ಲ ಕೇಳಿಸಿಕೊಂಡು ಇಂಡಿಕಾ ಒಪ್ಪಿಸಿ ಬರೋದಕ್ಕೆ ಇಷ್ಟವಾಗಲಿಲ್ಲ. ಒಪ್ಪಂದವನ್ನು ಅಲ್ಲೇ ಮೊಟಕುಗೊಳಿಸಿ ಹಿಂತಿರುಗಿದರು. ಆದರೆ ತುಂಬ ನೋವುಂಡುಬಿಟ್ಟರು. ವಿಮಾನ ಪ್ರಯಾಣದುದ್ದಕ್ಕೂ ಯಾರೊಂದಿಗೂ ಮಾತನಾಡಲಿಲ್ಲ. ಇವೆಲ್ಲ ಆಗಿದ್ದು 1999ರಲ್ಲಿ.

ಕಾಲಚಕ್ರ ತಿರುಗಿತು. 2008ರಲ್ಲಿ ಅಮೆರಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿತಲ್ಲ, ಆಗ ಇದೇ ಫೋರ್ಡ್ ಕಂಪನಿಯ ಬಿಲ್ ಫೋರ್ಡ್, ರತನ್ ಟಾಟಾ ಬಳಿ ಓಡೋಡಿ ಬಂದರು. ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದಕ್ಕೆ ಫೋರ್ಡ್ ಕಂಪನಿಯ ಬ್ರಾಂಡ್ ಗಳಲ್ಲಿ ಒಂದಾದ ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಖರೀದಿಸಿ ಎಂಬ ಬೇಡಿಕೆ ಅವರದ್ದಾಗಿತ್ತು.

ಇಲ್ಲ… ರತನ್ ಟಾಟಾ ಸಿಕ್ಕಿದ್ದೇ ಅವಕಾಶ ಅಂತ ತಿರುಗಿ ಅವರನ್ನು ಅವಮಾನಿಸಲಿಲ್ಲ. ಒಬ್ಬ ಉದ್ಯಮಿಯಾಗಿ ಒಪ್ಪಂದ ನೆರವೇರಿಸಿಕೊಂಡರು. ಎಲ್ಲ ಮುಗಿದಾಗ ಬಿಲ್ ಫೋರ್ಡ್ ಹೇಳಿದರು- ‘ಜಾಗ್ವಾರ್ ಲ್ಯಾಂಡ್ ರೋವರ್ ಸ್ವಾಧೀನ ಪಡಿಸಿಕೊಳ್ಳುವ ಮೂಲಕ ನೀವು ನಮಗೆ ದೊಡ್ಡ ಉಪಕಾರ ಮಾಡುತ್ತಿದ್ದೀರಿ!’

tata

ಇದನ್ನೆಲ್ಲ ಬಿಚ್ಚಿಟ್ಟಿದ್ದು ಇವೆಲ್ಲವುದಕ್ಕೆ ಸಾಕ್ಷಿಯಾಗಿದ್ದ ಪ್ರವೀಣ್ ಕಾಡ್ಲೆ ಎಂಬ ಟಾಟಾ ಸಮೂಹದ ಉನ್ನತಾಧಿಕಾರಿ. ಟಾಟಾ ಕ್ಯಾಪಿಟಲ್ ನೇತೃತ್ವ ವಹಿಸಿದ್ದ ಅವರು 2014ರಲ್ಲಿ ರತನ್ ಟಾಟಾ ಪರವಾಗಿ ಪ್ರಶಸ್ತಿ ಸ್ವೀಕರಿಸುತ್ತ ಇವನ್ನೆಲ್ಲ ಹಂಚಿಕೊಂಡಿದ್ದರು.

ತಡೀರಿ.. ಕತೆ ಇಷ್ಟಕ್ಕೇ ಮುಗಿದಿಲ್ಲ. ಯಾವ ಜಾಗ್ವಾರ್ ಲ್ಯಾಂಡ್ ರೋವರ್ ಕಾರು ಫೋರ್ಡ್ ಕಂಪನಿಗೆ ಆರ್ಥಿಕವಾಗಿ ಭಾರವಾಗಿಬಿಟ್ಟಿತ್ತೋ ಅದೀಗ ಟಾಟಾದ ಬಹುಲಾಭದಲ್ಲಿರುವ ಉತ್ಪನ್ನಗಳಲ್ಲೊಂದು!

ಸಲಾಂ ಟಾಟಾ, ನಿಮ್ಮ ಉದ್ಯಮಶೀಲತೆಗೆ ಹಾಗೂ ಯಶಸ್ಸಿನ ಶಿಖರದಲ್ಲಿ ಕುಳಿತೂ ದರ್ಪರಹಿತ ಸಂಸ್ಕಾರ ಹೊಂದಿರುವುದಕ್ಕೆ!

2 COMMENTS

Leave a Reply