ಕರಾವಳಿಯಲ್ಲಿ ಜಾತಿ, ಧರ್ಮಕ್ಕೊಬ್ಬ ಡಾನ್, ಕೋಮು ದ್ವೇಷ, ನೈತಿಕ ಪೊಲೀಸ್ ಜತೆಯಲ್ಲೇ ಅಂಡರ್ ವರ್ಲ್ಡ್ ವಿಜೃಂಭಣೆ! 

ಡಿಜಿಟಲ್ ಕನ್ನಡ ವಿಶೇಷ

ಕರಾವಳಿ ರಾಜಧಾನಿ ಮಂಗಳೂರಿಗೂ ಭೂಗತಲೋಕಕ್ಕೂ ಬಿಡಿಸಲಾಗದ ನಂಟು. ಮಂಗಳೂರು ಅಂದ ಕೂಡಲೇ ತಟ್ಟನೆ ಬರುವ ಮಾತು `ಕ್ರೈಮ್’. ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಛೋಟ ರಾಜನ್‍ನಿಂದ ಹಿಡಿದು ಈಗಿನ ಹೇಮಂತ್ ಪೂಜಾರಿ, ರವಿ ಪೂಜಾರಿ ತನಕ ಅಂಡರ್ ವರ್ಲ್ಡ್ ಮಂದಿ  ಹಡಗಿನ ಈ ನಾಡಿನಲ್ಲಿ ವ್ಯವಹಾರ ನಡೆಸುತ್ತಿರುವುದು ತೆರೆಮರೆಯ ಸತ್ಯ. ಇಲ್ಲಿ ಯಾವಾಗ, ಯಾರ ತಲೆಗಳು ಉರುಳುತ್ತವೆ, ಕೈಕಾಲುಗಳು ಎಗರುತ್ತವೆ ಎಂದು ಹೇಳಲು ಅಸಾಧ್ಯ. ಕೆಲ ದಿನಗಳ ಹಿಂದೆ ಭೂಗತ ಪಾತಕಿ  ಛೋಟಾ ಶಕೀಲ್‍ನ ಸಹಚರರು ಇಲ್ಲಿ ಸೆರೆಯಾಗಿರುವುದು ಮಂಗಳೂರು ಮತ್ತೆ ಖಳನಾಯಕರ ಅಟ್ಟಹಾಸಕ್ಕೆ ನೆಲೆಯಾಗುತ್ತಿದೆ ಎಂಬುದಕ್ಕೊಂದು ಪುಷ್ಠಿ.

ಛೋಟಾ ಶಕೀಲ್ ಹೆಸರು ಮಂಗಳೂರಿನಲ್ಲಿ ಕೇಳಿಬಂದಿರುವುದು ಭೂಗತ ಪಾತಕಿ ರಶೀದ್ ಮಲಬಾರಿ ಮೂಲಕ. 1998 ರ ಜು.7 ರಂದು ಪಣಂಬೂರಿನಲ್ಲಿ ನಡೆದ ಅವಳಿ ಮರ್ಡರ್ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿದ್ದವನು ರಶೀದ್ ಮಲಬಾರಿ. ಮೂಲತಃ ಕೇರಳದವರಾದ ಪ್ರಶಾಂತ್ ಘಾಟೆ ಹಾಗೂ ರೋಬರ್ಟ್ ಡೇವಿಡ್ ಪಿರೇರ ದುಬೈ ಡಾನ್‍ಗಳ ಅಣತಿಯ ಮೇರೆಗೆ ಕೇರಳದವನೇ ಆದ ರಶೀದ್ ಮಲಬಾರಿ ಹತ್ಯೆಗೆ ಸಂಚು ರೂಪಿಸಿದ್ದರು. ಇದರ ಸುಳಿವು ದೊರೆತ ಮಲಬಾರಿ, ತನಗೆ ಸ್ಕೆಚ್ಚು ಹಾಕಿದವರನ್ನೇ ಯಮಲೋಕಕ್ಕೆ ಕಳುಹಿಸಿದ. ಇಂತಹ ಪಾತಕಿ ಬಿಜೆಪಿಯ ಹಾಲಿ ಸಂಸದ ವರುಣ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದಾನೆ ಅನ್ನೋದು ತಿಳಿದದ್ದೇ ತಡ, ಸೆಂಟ್ರಲ್ ಪೊಲೀಸರು ಮಂಗಳೂರು ಪೊಲೀಸರನ್ನು ಸಂಪರ್ಕಿಸಿ, ಮಂಗಳೂರಿನಲ್ಲಿ ಮಲಬಾರಿ ಇರುವಿಕೆಯನ್ನು ಖಚಿತ ಪಡಿಸಿಕೊಂಡು ಆತನನ್ನು ಬಂಧಿಸಿದರು. ತನಿಖೆ ವೇಳೆ ಪಣಂಬೂರು ಜೋಡಿ ಕೊಲೆಯ ಕುರಿತು ಖುದ್ದು ಮಲಬಾರಿಯೇ ಒಪ್ಪಿಕೊಂಡಿದ್ದ. ಹೀಗೆ ಕುಖ್ಯಾತನಾಗಿದ್ದ ರಶೀದ್ ಮಲಬಾರಿ ಪರ ವಾದಿಸಲು ಯಾವುದೇ ವಕೀಲರು ಮುಂದೆ ಬಾರದಾಗ ಆತನ ಪರ ವಾದಿಸಲು ಕೊನೆಗೂ ಮನಸ್ಸು ಮಾಡಿದವರು ಭಟ್ಕಳ ಮೂಲದ ವಕೀಲ ವಕೀಲ ನೌಷಾದ್ ಖಾಸಿಂ. ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ 2009 ರಲ್ಲಿ ಪಾತಕಿ ರವಿ ಪೂಜಾರಿ ಸಹಚರರು ಮಂಗಳೂರಿನ ಹೃದಯಭಾಗವಾದ ಫಳ್ನೀರ್‍ನಲ್ಲಿ ನೌಷದ್‍ನನ್ನೇ ಮುಗಿಸಿಬಿಟ್ಟರು.

ತನ್ನ ಪರ ವಕೀಲನ ಕೊಲೆಗೆ ಪ್ರತೀಕಾರವಾಗಿ ಹಿಂದು ವಕೀಲರೊಬ್ಬರ ಕೊಲೆಗೆ ಸಂಚು ರೂಪಿಸಿದ್ದ ಮಲಬಾರಿಯ ಯೋಜನೆ ಕಾರ್ಯಗತವಾಗುವ ಹಂತದಲ್ಲಿ ಈ ಹಿಂದು ವಕೀಲ ಕೂದಲೆಳೆಯ ಅಂತರದಿಂದ ಸಾವಿನಿಂದ ಪಾರಾಗಿದ್ದಾನೆ. ನಂತರ ಪ್ರಬಲ ಹಿಂದು ಸಂಘಟನೆಯೊಂದರ ನಾಯಕನ ಹತ್ಯೆಗೆ ಮಲಬಾರಿ ಮಂಗಳೂರು ಜೈಲಿನಿಂದಲೇ `ಸ್ಕೆಚ್’ ಹಾಕಿದ್ದ. ಆ `ಸ್ಕೆಚ್’ ಪ್ರಕಾರ ಕಳೆದ ಡಿಸೆಂಬರ್ 12 ರಂದು ಮಂಗಳೂರಿನ ಜೈಲಿನಲ್ಲಿ ಮಲಬಾರಿಯನ್ನು ಭೇಟಿ ಮಾಡಲು ಬಂದ ಆರು ಮಂದಿಯನ್ನು ಸಿಸಿಬಿ,ಡಿಸಿಐಬಿ ಮತ್ತು ಮಂಗಳೂರು ಪೊಲೀಸರು ಜೈಲು ಆವರಣದಲ್ಲಿ ಬಂಧಿಸಿದ್ದರು. ಮಲಬಾರಿ ಸಹೋದರ ಮಗ ಸೊಹೈಲ್ ಇಸ್ಮಾಯಿಲ್ ಶೇಕ್,  ರವಿ ಅಲಿಯಾಸ್ ಬಾಂಬೆ ರವಿ, ಪುರುಷೋತ್ತಮ್, ವಿನೋದ್ ಯಾನೆ ಗ್ಯಾಸ್ ವಿನೋದ್, ದೇವರಾಜ್ ಹಾಗೂ ರಾಮ್ ಯಾನೆ ಬರ್ಮ ಬಂಧಿತರು. ಇವರಿಂದ ಒಂದು ಕಾರು, ಒಂಭತ್ತು ಮೊಬೈಲ್, ಎಟಿಎಂ ಕಾರ್ಡ್, ಸಿಮ್ ಕಾರ್ಡ್, 5 ತಲವಾರು, 200 ಗ್ರಾಂ ಮೆಣಸಿನ ಪುಡಿ, 3 ಮಂಕಿ ಕ್ಯಾಪ್ ಹಾಗೂ ರೂ.700 ನಗದು ವಶಕ್ಕೆ ತೆಗೆದುಕೊಂಡರು. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಬೆಳಕಿಗೆ ಬಂದದ್ದೇ ಹಿಂದು ನಾಯಕನ ಹತ್ಯೆ ಸಂಚು.

ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ ಇರುವುದರಿಂದಲೇ ಇಲ್ಲಿ ಭೂಮಾಫಿಯಾ ಜೋರಾಗಿಯೇ ನಡೆಯುತ್ತಿದೆ. ಹಾಗಾಗಿ ದೂರದ ದುಬೈಯಲ್ಲಿ ಕುಳಿತೇ ಡಾನ್‍ಗಳು ತಮ್ಮ ಸಹಚರರ ಮೂಲಕ ಇಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಉದ್ಯಮಿಗಳಿಗೆ ಅದರಲ್ಲೂ `ರಿಯಲ್ ಎಸ್ಟೇಟ್’ ಕುಳಗಳಿಗೆ ಭೂಗತ ಜಗತ್ತಿನ ಮಂದಿಯಿಂದ ಪದೇ ಪದೇ ಬೆದರಿಕೆ ಕರೆಗಳು ಬರುತ್ತಿವೆ. ಒಂದು ಕಾಲದಲ್ಲಿ ಮಂಗಳೂರಿನ ಭೂಗತ ಜಗತ್ತು ವಿಜೃಂಭಿಸಿತ್ತು. ಪಾತಕಿಗಳು ಇಲ್ಲಿಂದಲೇ ದೂರದ ಮುಂಬೈ, ಬೆಂಗಳೂರು ಭೂಗತ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿ ವ್ಯವಹಾರ ನಡೆಸುತ್ತಿದ್ದರು. ರಸ್ತೆ, ರಸ್ತೆಗೊಂದು ಗ್ಯಾಂಗ್ ತಲೆಯೆತ್ತಿ, ಅಲ್ಲಲ್ಲಿ `ಗ್ಯಾಂಗ್‍ವಾರ್’ಗಳು ನಡೆದು, ರಸ್ತೆಯಲ್ಲಿ ಹೆಣಗಳು ಉರುಳುತ್ತಿದ್ದವು. ಆಗ `ಟಫ್’ ಪೊಲೀಸರ ಬಿಗಿ ಕ್ರಮದಿಂದ `ಗ್ಯಾಂಗ್ ಲೀಡರ್’ಗಳು ಮಣ್ಣಾಗಿ ಅವರ ಗ್ಯಾಂಗ್‍ಗಳು ನಾಪತ್ತೆಯಾಗಿದ್ದವು. ಅಳಿದುಳಿದ ಗ್ಯಾಂಗ್‍ಗಳ ಸದಸ್ಯರು ಜೈಲು ಸೇರಿದ್ದರು, ಇನ್ನು ಕೆಲವರು ಊರು ಬಿಟ್ಟಿದ್ದರು. ಆಗ `ಗ್ಯಾಂಗ್‍ವಾರ್’, ಭೂಗತ ಜಗತ್ತಿನ ಚಟುವಟಿಕೆಗಳು ಮೇಲ್ನೋಟಕ್ಕೆ ತಹಬದಿಗೆ ಬಂದಂತೆ ಕಂಡುಬಂದಿತ್ತು. ಆದರೆ ಇಲ್ಲಿ ಯಾವಾಗ ಇಲ್ಲಿ ಭೂ ವ್ಯವಹಾರ ಚಿಗುರಿತೋ ಅದರ ಜತೆಯಲ್ಲೇ ಭೂಗತ ಲೋಕದ ಚಟುವಟಿಕೆಗಳು ಸದ್ದಿಲ್ಲದೆ ಗರಿಗೆದರಿವೆ. ಜೊತೆಗೆ ಕೋಮು ದ್ವೇಷ, ನೈತಿಕ ಪೊಲೀಸ್ ಗಿರಿಯ ಈ ಮಣ್ಣಿನಲ್ಲಿ ಧರ್ಮವನ್ನು `ಟ್ರಂಪ್‍ಕಾರ್ಡ್’ ಮಾಡಿಕೊಂಡಿರುವ ಒಂದಷ್ಟು ಮಂದಿ ಅದಕ್ಕೆ ನೀರೆರೆದು ಪೋಷಿಸುತ್ತಿರುವುದರಿಂದ ಭೂಗತಲೋಕದ ಮಂದಿಗೆ ಬಲ ಬಂದಂತಾಗಿದೆ. ಅದರ ಖದರ್ರೇ ಬದಲ್ಲಾಗಿದೆ. ಜಾತಿ, ಧರ್ಮಕ್ಕೊಬ್ಬ `ಡಾನ್’ ಹುಟ್ಟಿಕೊಂಡಿದ್ದಾನೆ.

ಕೋಮು ಹಿಂಸಾಚಾರದಿಂದ ನರಳಿ ತಣ್ಣಗಾಗಿರುವ ಮಂಗಳೂರಿನಲ್ಲಿ ಮತ್ತೆ ಕೋಮು ದಳ್ಳುರಿಗೆ ಕಿಡಿ ಹಚ್ಚಲು ಸಂಚು  ತೆರೆಮರೆಯಲ್ಲಿ ನಡೆಯುತ್ತಿದೆ. ಒಂದರ ಮೇಲೊಂದರಂತೆ ಬರುತ್ತಿರುವ ಚುನಾವಣೆಗಳನ್ನು ಎದುರಿಸಲು ಮಂಗಳೂರು ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ `ಭೂಗತ’ ಚಟುವಟಿಕೆ ಪೊಲೀಸರಿಗೆ ತೀವ್ರ ತಲೆನೋವಾಗಿದೆ. ಜತೆಗೆ ಸವಾಲನ್ನೂ ಒಡ್ಡಿದೆ. ಕಠಿಣ ಕ್ರಮಗಳನ್ನೂ ಅಪೇಕ್ಷಿಸಿದೆ.

Leave a Reply