ಚುಟುಕಾಗಿ ತಿಳಿಬೇಕಿರುವ ಸುದ್ದಿಗಳು: ಬಿಡಿಎ ಮೇಲೆ ಕಾಗೋಡು ಗರಂ, ಜಲ್ಲಿಕಟ್ಟು- ಸಮ-ಬೆಸ – ಶಬರಿಮಲೈಗೆ ಮಹಿಳಾ ಪ್ರವೇಶ ವಿಷಯಗಳಲ್ಲಿ ನ್ಯಾಯಾಲಯ ಏನಂತು?

ನಂದೇನ್ ತಪ್ಪಿಲ್ಲ, ಬಿಡಿಎ ಮಣ್ ತಿಂತಿತ್ತಾ ಕೇಳಿ ಅಂದ್ರು ಕಾಗೋಡು

ಭೂ ಒತ್ತುವರಿ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನವಶ್ಯಕವಾಗಿ ಎಳೆದು ತರಲಾಗಿದೆ. ವಿಧಾನಮಂಡಲದ ಗೃಹ ನಿರ್ಮಾಣ ಸಹಕಾರ ಸಂಘವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿದ ಲೇಔಟ್‍ನ್ನು ಖರೀದಿಸಿತ್ತು. ಸಂಘದ ಮೂಲಕ ನಾನು ಸೇರಿದಂತೆ ಹಲವು ಶಾಸಕರು ನಿವೇಶನ ಪಡೆದುಕೊಂಡಿದ್ದೆವೆ. ಇದರಲ್ಲಿ ನನ್ನ ತಪ್ಪೇನಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದ್ದಾರೆ.

ಬಿಡಿಎ ಒಂದು ಸರಕಾರಿ ಸಂಸ್ಥೆ. ಬಡಾವಣೆ ನಿರ್ಮಾಣ ಮಾಡುವಾಗ ಅದೇನು ಮಣ್ಣು ತಿನ್ನುತ್ತಿತ್ತಾ? ಯಾವ ಜಾಗದಲ್ಲಿ ಬಡಾವಣೆ ನಿರ್ಮಾಣ ಮಾಡಬೇಕು ಎಂಬುದು ಅದಕ್ಕೆ ಗೊತ್ತಿರಬೇಕು. ಅದು ಬಿಟ್ಟು ಕೆರೆ ಜಾಗ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಿದರೆ, ಇದರಲ್ಲಿ ಸಹಕಾರ ಸಂಘದ್ದಾಗಲಿ, ಸಂಘದಿಂದ ನಿವೇಶನ ಖರೀದಿಸಿದ ನನ್ನಂತವರದ್ದಾಗಲಿ ಏನು ತಪ್ಪಿದೆ. ಏನಾದರೂ ಕ್ರಮ ಕೈಗೊಳ್ಳುವುದಿದ್ದರೆ ಅದು ಬಿಡಿಎ ವಿರುದ್ಧವಷ್ಟೇ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದ್ದಾರೆ.

ಭೂಗಳ್ಳರು, ರಿಯಲ್ ಎಸ್ಟೇಟ್ ಕುಳಗಳು ಕಬಳಿಸಿರುವ ಸರ್ಕಾರಿ ಭೂಮಿ ವಾಪಸ್ ಪಡೆಯಲು ಸಾಧ್ಯವಾಗದಿದ್ದರೆ ರಾಜ್ಯ ಸರಕಾರ ನಿದ್ದೆ ಮಾಡುವುದು ಸೂಕ್ತ. ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಹಿಂದೆ ಎ.ಟಿ.ರಾಮಸ್ವಾಮಿ, ಬಾಲಸುಬ್ರಹ್ಮಣ್ಯ, ಇದೀಗ ಕೋಳಿವಾಡ್ ಸಮಿತಿ ವರದಿ ಕೊಟ್ಟಿದೆ. ಸರ್ಕಾರಕ್ಕೆ ನಿಜಕ್ಕೂ ತಾಕತ್ತಿದ್ದರೆ ಕ್ರಮ ಕೈಗೊಳ್ಳಲಿ. ಇಚ್ಛಾಶಕ್ತಿ ಪ್ರದರ್ಶಿಸಲಿ. ತಪ್ಪಿತಸ್ಥರನ್ನು ಜೈಲಿಗೆ ಅಟ್ಟಲಿ. ಅದಾಗದಿದ್ದರೆ ಮನೆಗೆ ಹೋಗಿ ವಿಶ್ರಾಂತಿ ಪಡೆಯಲಿ ಎಂದು ವ್ಯಂಗ್ಯವಾಡಿದ್ದಾರೆ.

ಶಬರಿಮಲೈಯಲ್ಲಿ ಮಹಿಳೆಯರಿಗೆ ನಿಷೇಧ ಸರಿ ಅಲ್ಲ: ಸುಪ್ರೀಂಕೋರ್ಟ್

ಕೇರಳದ ಶಬರಿಮಲೈ ಶ್ರದ್ಧಾಕೇಂದ್ರದಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧಿಸುವುದು ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಯಂಗ್ ಲಾಯರ್ ಅಸೋಸಿಯೇಷನ್ ಈ ಸಾಂಪ್ರದಾಯಿಕ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಆಕ್ಷೇಪ ವ್ಯಕ್ತವಾಗಿದೆ.

ಈ ಬಗ್ಗೆ ಫೆಬ್ರವರಿ 8ರಂದು ಅಂತಿಮ ಆದೇಶ ಹೊರಬೀಳಲಿದೆ.

ಸಮ-ಬೆಸ: ಹೈಕೋರ್ಟ್ ಮಧ್ಯಪ್ರವೇಶ ಇಲ್ಲ

ವಾಯುಮಾಲಿನ್ಯವನ್ನು ಹತೋಟಿಗೆ ತರಲು ದಹಲಿ ಸರ್ಕಾರ ಜಾರಿಗೆ ತಂದಿರುವ ಸಮ ಬೆಸ ಆಧಾರದ ಸಂಚಾರ ನಿಯಮಗಳ ವಿಚಾರದಲ್ಲಿ ಹೈಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ ಎಂದು ತಿಳಿಸಿರುವುದರಿಂದ ಮುಖ್ಯಮಂತ್ರಿ ಕೇಜ್ರಿವಾಲರಿಗೆ ಬಲ ಬಂದಂತಾಗಿದೆ.

ದೆಹಲಿ ಸರ್ಕಾರ ರೂಪಿಸಿದ್ದ ಜನವರಿ 15 ರ ವರೆಗೆ ಸಮ ಬೆಸ ನಿಯಮವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠವು, ಈ ಪ್ರಯೋಗಕ್ಕೆ ಎರಡು ವಾರಗಳ ಕಾಲಾವಕಾಶ ನಿಜಕ್ಕೂ ಬೇಕಿತ್ತೇ ಅಂತಲೂ ಕೇಳಿತ್ತು. ಆದರೆ, ಈಗ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ಮತ್ತೆ ಕೋರ್ಟ್ ಕಟ್ಟೆಗೆ ಜಲ್ಲಿಕಟ್ಟು

ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮ್ಮತಿಸಿರುವುದನ್ನು ಪ್ರಶ್ನಿಸಿ ಭಾರತೀಯ ಪ್ರಾಣಿ ದಯಾ ಪ್ರಾಧಿಕಾರ, ಪೇಟಾ ಸೇರಿದಂತೆ ಹಲವು ಸಂಘಟನೆಗಳು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿವೆ.

ಸೋಮವಾರ ಈ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ, ತುರ್ತಾಗಿ ಮಂಗಳವಾರವೇ ಅರ್ಜಿಯ ವಿಚಾರಣೆ ನಡೆಸಲಿದೆ.

ನ್ಯಾಷನಲ್ ಹೆರಾಲ್ಡ್: ಮಾಹಿತಿ ಕಲೆಹಾಕಲು ಮಾರ್ಗ ಸುಸೂತ್ರ

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಶುಲ್ಕ ನೀಡಿ ಪಡೆದುಕೊಳ್ಳುವಂತೆ ದೆಹಲಿ ಕೋರ್ಟ್ ಸೋಮವಾರ ಆದೇಶಿಸಿದೆ.

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿಯವರು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಹಣಕಾಸು ಸಚಿವಾಲಯಕ್ಕೆ, ನಗರಾಭಿವೃದ್ಧಿ ಮತ್ತು ಕಾರ್ಪೋರೇಟ್ ವ್ಯವಹಾರಗಳ ಇಲಾಖೆ, ಆದಾಯ ತೆರಿಗೆ ಇಲಾಖೆ ಮತ್ತು ಇತರ ಸಂಸ್ಥೆಗಳಿಗೆ ಸಮನ್ಸ್ ನೀಡಿ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

Leave a Reply