
ಪಠಾಣ್ ಕೋಟ್ ದಾಳಿ ಸಂಬಂಧ ಪಾಕ್ ಕುರಿತು ಕೇಂದ್ರ ಸರ್ಕಾರ ನಾಜೂಕಿನಿಂದ ತನ್ನ ನಿಲುವು ರೂಪಿಸಿಕೊಳ್ಳುತ್ತಿದೆ.
- ಜನವರಿ 15ಕ್ಕೆ ಇಸ್ಲಾಮಾಬಾದ್ ನಲ್ಲಿ ನಿಗದಿಯಾಗಿದ್ದ ಭಾರತ- ಪಾಕ್ ನಡುವಿನ ಮಾತುಕತೆ ನಡೆಯುತ್ತದೋ ಇಲ್ಲವೋ ಎಂಬ ಪ್ರಶ್ನೆಗೆ ನಿಖರ ಉತ್ತರಗಳು ಇನ್ನೂ ಲಭ್ಯವಾಗಿಲ್ಲ. ಕೆಲದಿನಗಳ ಹಿಂದೆ ವಿದೇಶ ವ್ಯವಹಾರ ಸಚಿವಾಲಯದ ಅಧಿಕಾರಿ ವಿಕಾಸ್ ಸ್ವರೂಪ್ ಅವರು, ‘ಮಾತುಕತೆ ರದ್ದುಪಡಿಸುವುದಿಲ್ಲ. ಆದರೆ ನಾವೀಗ ಪಾಕಿಸ್ತಾನಕ್ಕೆ ಕೊಟ್ಟಿರುವ ಸಾಕ್ಷ್ಯಗಳ ಮೇಲೆ ಅದು ಎಷ್ಟರಮಟ್ಟಿಗೆ ‘ಪ್ರಾಮಾಣಿಕ’ ಕ್ರಮ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಮಾತುಕತೆ ನಿರ್ಧಾರವಾಗುತ್ತದೆ. ಈ ಪ್ರಾಮಾಣಿಕ ಕ್ರಮ ಎಂಬ ಪದವನ್ನೂ ನಾನು ನಿರ್ದಿಷ್ಟವಾಗಿ ವ್ಯಾಖ್ಯಾನಿಸುವುದಕ್ಕೆ ಹೋಗುವುದಿಲ್ಲ’ ಎಂದಿದ್ದರು. ಇದೀಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾತುಗಳೂ ಸ್ಪಷ್ಟ ಚಿತ್ರಣ ಕೊಡುತ್ತಿಲ್ಲ. ಭಾರತ- ಪಾಕ್ ನಡುವಿನ ಮಾತುಕತೆ ರದ್ದಾಗಿದೆ ಎಂಬುದು ವದಂತಿ ಮಾತ್ರ ಎಂದಿರುವ ದೋವಲ್, ಹಾಗಾದರೆ ಮಾತುಕತೆ ಎಂದಿನಂತೆ ನಡೆಯುತ್ತಾ ಎಂಬ ಪ್ರಶ್ನೆಗೆ, ‘ಪಠಾಣ್ ಕೋಟ್ ದಾಳಿಯ ವಿರುದ್ಧ ಕ್ರಮ ತೆಗೆದುಕೊಂಡರೆ ಮಾತ್ರವೇ ವಿದೇಶಿ ಕಾರ್ಯದರ್ಶಿ ಮಟ್ಟದ ಮಾತುಕತೆ ಸಭೆ ನಡೆಯಲಿದೆ. ಜ. 15ಕ್ಕೆ ಸಭೆ ನಿಗದಿಯೇ ಆಗಿರಲಿಲ್ಲ. ಅದನ್ನು ರದ್ದು ಮಾಜುವ ಪ್ರಶ್ನೆ ಇಲ್ಲ. ಸಭೆ ರದ್ದಾಗಿರುವ ಬಗ್ಗೆ ತಾವು ಹೇಳಿರುವುದಾಗಿ ಪತ್ರಿಕೆಗಳಲ್ಲಿ ಬಂದಿರುವ ಸಂದರ್ಶನದ ಮಾತುಗಳು ತಮ್ಮದಲ್ಲ’ ಎಂದಿದ್ದಾರೆ.
- ನವದೆಹಲಿಯಲ್ಲಿ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಹೇಳಿದ್ದು- ‘ದೇಶಕ್ಕೆ ಯಾರು ನೋವುಂಟು ಮಾಡುತ್ತಾರೋ ನಾವು ಅವರಿಗೆ ಅದೇ ಧಾಟಿಯಲ್ಲೇ ಉತ್ತರ ಕೊಡಬೇಕೆಂಬುದೇ ಸರ್ಕಾರದ ನೀತಿ. ಆದರೆ ಈ ಪ್ರತಿಕ್ರಿಯೆ ಯಾವಾಗ, ಯಾವ ಜಾಗದಲ್ಲಿ ಎಂಬುದನ್ನು ನಾವೇ ನಿರ್ಧರಿಸುತ್ತೇವೆ.’
- ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿ ತನಿಖಾ ತಂಡ ರಚಿಸುವಂತೆ ಅಲ್ಲಿನ ಆಂತರಿಕ ಗುಪ್ತದಳಕ್ಕೆ ಸೂಚನೆ ನೀಡಿದ್ದರು. ಪಾಕಿಸ್ತಾನದ ನಾನಾ ಭಾಗಗಳಲ್ಲಿ ದಾಳಿ ನಡೆಸಿದ ಈ ತಂಡವು ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ ಕೆಲವು ಶಂಕಿತರನ್ನು ಸೋಮವಾರ ವಶಕ್ಕೆ ತೆಗೆದುಕೊಂಡಿದೆ.
- ಪಠಾಣ್ ಕೋಟ್ ದಾಳಿಗೆ ಪೂರ್ವದಲ್ಲಿ ಉಗ್ರರ ಸೆರೆಯಾಗಿದ್ದೆನೆಂದು ಹೇಳಿದ್ದ ಗುರುದಾಸ್ಪುರದ ಪೊಲೀಸ್ ಅಧಿಕಾರಿ ಹೇಳಿಕೆಗಳಲ್ಲಿ ಸಾಕಷ್ಟು ಶಂಕೆಗಳು ವ್ಯಕ್ತವಾಗಿರುವುದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು ಅವರನ್ನು ಸುಳ್ಳುಪತ್ತೆ ಮತ್ತು ವಿಚಾರಣೆಗಳಿಗೆ ಒಳಪಡಿಸಿದೆ.