ಮಮತೆ ಸತ್ತಿರುವ ಮಾಲ್ಡಾ, ಪಶ್ಚಿಮ ಬಂಗಾಳದ ಈ ಪ್ರಾಂತ್ಯಕ್ಕೆ ಏರಿರುವ ನಶೆಯಾದರೂ ಯಾವುದು?

 

ಡಿಜಿಟಲ್ ಕನ್ನಡ ಟೀಮ್

 ಮಾಲ್ಡಾದ ಕಾಲಿಯಾ ಚೌಕ (ಕಾಳಿ ಚೌಕ) ದಲ್ಲಿ ಹಲವು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರ, ಪ್ರತಿಭಟನೆಗಳು ಭಿನ್ನ ರಾಜಕೀಯ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೂಪಿಸಿದ್ದ ಪಕ್ಷದ ಸತ್ಯಶೋಧನಾ ಸಮಿತಿಯು ಸೋಮವಾರ ಹಿಂಸಾಗ್ರಸ್ತ ಪ್ರದೇಶಕ್ಕೆ ಭೇಟಿ ನೀಡಲು ಹೋದಾಗ ಅವರನ್ನು ಸರ್ಕಾರಿ ಆಡಳಿತ ಯಂತ್ರ ತಡೆದಿದೆ. ‘ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಬಿಜೆಪಿ ಈ ಘಟನೆಯನ್ನು ಬಳಸಿಕೊಂಡು ಸಂಘರ್ಷದ ಜ್ವಾಲೆಯನ್ನು ತೀವ್ರಗೊಳಿಸುವುದಕ್ಕೆ ಬಂದಿದೆಯೇ ಹೊರತು ಸತ್ಯಶೋಧನೆಗಲ್ಲ’ ಎಂಬುದು ಇವರನ್ನು ತಡೆದ ತೃಣಮೂಲ ಕಾಂಗ್ರೆಸ್ ಸರ್ಕಾರದ ಪ್ರತಿಪಾದನೆ.

ಹಿಂದು ಮಹಾಸಭಾ ನಾಯಕ ಕಮಲೇಶ್ ತಿವಾರಿ, ಪ್ರವಾದಿ ಮೊಹಮ್ಮದರ ಕುರಿತು ನಿಂದನಾತ್ಮಕ ಹೇಳಿಕೆ ನೀಡಿದ್ದರೆಂಬುದು, ಅಲ್ಲಿನ ಮುಸ್ಲಿಂ ಜನಸಂಖ್ಯೆಯ ಪ್ರತಿಭಟನೆಗೆ ಕಾರಣ. ಅದು ಹಿಂಸಾತ್ಮಕ ರೂಪಕ್ಕೆ ತಿರುಗಿ, ಬಿಎಸ್ ಎಫ್ ಕೇಂದ್ರಗಳ ಮೇಲೆ ದಾಳಿ, ಪೊಲೀಸರ ವಾಹನಗಳಿಗೆ ಬೆಂಕಿ, ಸ್ಥಳೀಯ ಹಿಂದು ಅಲ್ಪಸಂಖ್ಯಾತರ ಮನೆಗಳ ದರೋಡೆ ಇವಕ್ಕೆಲ್ಲ ತಿರುಗಿಕೊಂಡಿದೆ. ಪ್ರಕರಣದ ಮೂಲ ಪರಿಚಯಿಸುವ ಡಿಜಿಟಲ್ ಕನ್ನಡದ ಲೇಖನವನ್ನು ಇಲ್ಲಿ ಓದಬಹುದು.

ಆದರೆ, ಕಮಲೇಶ್ ತಿವಾರಿ ಕೇವಲ ಇಲ್ಲಿ ನೆಪವಾ ಎಂಬ ಬಹುದೊಡ್ಡ ಪ್ರಶ್ನೆ ಈಗ ಎದ್ದಿದೆ. ಒಂದು ಕಡೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಾಲ್ಡಾದಲ್ಲಾಗುತ್ತಿರುವುದು ಕೋಮು ಸಂಘರ್ಷ ಅಲ್ಲವೇ ಅಲ್ಲ, ಬಿಎಸ್ ಎಫ್ ಜತೆಗಿನ ತಿಕ್ಕಾಟ ಎಂದಿದ್ದಾರೆ. ಕಾನೂನುಪಾಲಕರೊಂದಿಗೆ ತಪ್ಪು ಕಲ್ಪನೆ- ವೈಮನಸ್ಸಿನಿಂದಾದ ಸಣ್ಣ ಘಟನೆ ಇದು ಅಂತಲೇ ನಂಬಿಸುವಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನ ಪ್ರಯತ್ನ ಢಾಳಾಗಿದೆ.

ಇರಲಿ… ಬಿಎಸ್ ಎಫ್ ಇಲ್ಲವೇ ಸ್ಥಳೀಯ ಪೊಲೀಸರ ಜತೆಯಲ್ಲಿ ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಮುಸ್ಲಿಮರು ಸಂಘರ್ಷಕ್ಕಿಳಿಯುವಂಥ ವಿಷಯ ಏನಿದೆ ಎಂಬುದನ್ನು ಮಾತ್ರ ತೃಣಮೂಲ ಕಾಂಗ್ರೆಸ್ಸಿಗರು ಸ್ಪಷ್ಟಪಡಿಸುತ್ತಿಲ್ಲ. ಇಲ್ಲಿಯೇ ಎದುರಾಗುತ್ತಿದೆ ಕಟು ವಾಸ್ತವ. ಪಂಜಾಬ್ ಮೇಲೆ ಉಗ್ರದಾಳಿಗಳಾಗುವಲ್ಲಿ ಅಲ್ಲಿನ ಮಾದಕ ಪದಾರ್ಥಗಳ ಸಂಪರ್ಕಜಾಲ ಕಾರಣವಾಗುತ್ತಿರುವುದು ಹೇಗೆ ಬೆಳಕಿಗೆ ಬರುತ್ತಿದೆಯೋ ಅಂತೆಯೇ ಈ ಕಾಳಿಯಾ ಚೌಕ ಪ್ರಾಂತ್ಯವೂ ತನ್ನೊಳಗೆ ಮಾದಕ ಪ್ರಪಂಚವೊಂದನ್ನು ಇರಿಸಿಕೊಂಡು, ಅದು ಹೊರಜಗತ್ತಿಗೆ ಕಾಣದಿರುವಂತೆ ಹಿಂಸೆಯ ಹೊದಿಕೆ ಹಾಕುತ್ತಿದೆ.

‘ಮೇಲ್ ಟುಡೆ’ ಮಾಡಿರುವ ವರದಿಗಳು ಈ ಅಂಶವನ್ನು ನಿಚ್ಚಳವಾಗಿಸುತ್ತಿವೆ. ಅಲ್ಲಿನ ಪೊಲೀಸ್ ಮೂಲಗಳು ಮತ್ತು ಬಿಎಸ್ ಎಫ್ ಅಧಿಕಾರಿಗಳನ್ನು ಸಂದರ್ಶಿಸಿದಾಗ ತಿಳಿದ ಅಂಶವೆಂದರೆ- ಮಾಲ್ಡಾದಲ್ಲಿ ಮಾದಕ ಪದಾರ್ಥ (ಪಾಪ್ಪಿ) ವನ್ನು ಅತಿಯಾಗಿ ಬೆಳೆಯಲಾಗುತ್ತಿದೆ. ಈ ಅಫೀಮು ಹಣವೇ ಎಲ್ಲ ಕೋಮು ಸಂಘರ್ಷ- ಉಗ್ರ ಟಚುವಟಿಕೆಗಳಿಗೆ ಬಳಕೆ ಆಗುತ್ತಿರುವುದು. ಒಂದು ಕೆಜಿ ಆಫೀಮಿಗೆ 60-70 ಸಾವಿರ ಮೌಲ್ಯ!

ಕಳೆದ ಒಂದು ವರ್ಷದಿಂದ ಮಾಲ್ಡಾ ಸೇರಿದಂತೆ ಹಲವೆಡೆಗಳಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಆಫೀಮು ಬೆಳೆಗಳನ್ನು ನಾಶ ಮಾಡಲಾಗುತ್ತಿದೆ. ಕಳೆದ ವರ್ಷವೊಂದರಲ್ಲೇ 700 ಎಕರೆಗಳಷ್ಟು ಪ್ರದೇಶದಲ್ಲಿ ಪಾಪಿ ಬೆಳೆಯನ್ನು ನಾಶಪಡಿಸಲಾಗಿದೆ ಅಂತಾರೆ ನ್ಯಾಕ್ರೊಟಿಕ್ ಕಂಟ್ರೋಲ್ ಬೋರ್ಡ್ ಪ್ರಾಂತೀಯ ನಿರ್ದೇಶಕರಾಗಿದ್ದ ಸುಬ್ರತಾ ಬಿಸ್ವಾಸ್.

ಈ ಕ್ರಮಗಳೆಲ್ಲ ಅಲ್ಲಿ ಹುಲುಸಾಗಿ ಬೆಳೆದುಕೊಂಡಿದ್ದ ಮಾಫಿಯಾಕ್ಕೆ ನಿದ್ದೆಗೆಡಿಸಿ, ಆಕ್ರೋಶ ತರಿಸಿದೆ. ಹೀಗಾಗಿ ತಿವಾರಿ ಹೇಳಿಕೆ ಬಳಸಿಕೊಂಡು ಬಿಎಸ್ ಎಫ್, ಸ್ಥಳೀಯ ಪೊಲೀಸರು, ಒಟ್ಟಾರೆ ಕಾನೂನು ಪಾಲಕರು ಇವರೆಲ್ಲರ ಮೇಲೆ ತಿರುಗಿ ಬಿದ್ದಂತಿದೆ ಅಲ್ಲಿನ ಮಾಫಿಯಾ.

ಇದಕ್ಕೆ ಪೂರಕವಾಗಿ ರಾಜಕೀಯವೂ ಕೆಲಸ ಮಾಡುತ್ತಿರಬಹುದು ಎಂಬುದಕ್ಕೆ ಅಲ್ಲಿನ ಮತ ಚಿತ್ರಣ ಇಂಬು ಕೊಡುತ್ತದೆ. ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಮಾಲ್ಡಾದಲ್ಲಿ ಶೇ. 51ರಷ್ಟು ಮುಸ್ಲಿಮರಿದ್ದಾರೆ. 2011ರಲ್ಲಿ ಅಲ್ಲಿನ 12 ಸ್ಥಾನಗಳ ಪೈಕಿ ಎರಡನ್ನಷ್ಟೇ ತೃಣಮೂಲ ಕಾಂಗ್ರೆಸ್ ಗೆದ್ದಿತ್ತಾದರೂ ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಪಕ್ಷಾಂತರಿಗಳಿಂದ ಐದು ಸ್ಥಾನ ಪಡೆದಿದೆ. ಲೋಕಸಭೆಯಲ್ಲಿ ಇಲ್ಲಿನ ಎರಡು ಸ್ಥಾನಗಳನ್ನು ಗೆದ್ದಿರುವುದು ಕಾಂಗ್ರೆಸ್. ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಹೊರತುಪಡಿಸಿ ಬೇರೆ ಚುನಾವಣೆಗಳಲ್ಲಿ ಬಿಜೆಪಿ ಮತಗಳಿಕೆ ಪ್ರಮಾಣ ಹೆಚ್ಚಾಗಿದೆಯಾದರೂ ಸ್ಥಾನಗಳನ್ನು ಗಳಿಸುವಷ್ಟರಮಟ್ಟಿಗಿನ ಪ್ರಭಾವ ಅಲ್ಲಿಲ್ಲ.

ಮಮತೆ ಮುಕ್ಕಾಗಿರುವ ಮಾಲ್ಡಾದಲ್ಲಿ ಅವೆಷ್ಟೋ ಭಯಾನಕ ಸತ್ಯಗಳು ಬಾಯ್ಬಿಡುವುದಕ್ಕೆ ಹಪಹಪಿಸಿದಂತಿವೆ.

Leave a Reply