ಹೆಣ್ಣನ್ನು ಮಾರಾಟದ ಸರಕಾಗಿಸುತ್ತಿರುವ ಜಾಹೀರಾತುಗಳು

author-vasundara ಮಾರುಕಟ್ಟೆ ಸಂಸ್ಕೃತಿ ಎಲ್ಲೆಡೆ ಹಬ್ಬಿದೆ. ಕೊಳ್ಳುಬಾಕ ಮನಸ್ಥಿತಿ ಜನರಲ್ಲಿ ಮನೆಮಾಡಲು ಬಹುರಾಷ್ಟ್ರೀಯ ಕಂಪನಿಗಳು ಪ್ರಮುಖ ಕಾರಣವಾಗಿವೆ. ವಸ್ತುಗಳು ಮಿತಿಮೀರಿದ ಉತ್ಪಾದನೆ ಮತ್ತು ಅವುಗಳನ್ನು ಅತಿಯಾದ ಲಾಭಕ್ಕಾಗಿ ಮಾರಾಟ ಮಾಡಬೇಕೆಂಬ ದುರಾಸೆಯಿಂದ ಈ ಬಹುರಾಷ್ಟ್ರೀಯ ಕಂಪನಿಗಳು ಅದೆಷ್ಟೋ ಬಾರಿ ಅನಗತ್ಯ ವಸ್ತುಗಳನ್ನೂ “ಮಾರಾಟವಾಗಬಲ್ಲ” ಸರಕನ್ನಾಗಿಸುವ ತಂತ್ರಗಾರಿಕೆಯೇ ಜಾಹೀರಾತು. ಇಂದು ಜಾಹೀರಾತು ಒಂದು ಬೃಹತ್ ಉದ್ಯಮವಾಗಿದೆ. ಜಾಹೀರಾತುಗಳಲ್ಲಿ ಅತ್ಯಧಿಕವಾಗಿ ಬಳಕೆಯಾಗುತ್ತಿರುವವಳು ಹೆಣ್ಣು. ಬಹುತೇಕ ಸಂದರ್ಭಗಳಲ್ಲಿ ಅವಳನ್ನು ಅತ್ಯಂತ ಕಳಪೆಯಾಗಿ ಚಿತ್ರಿಸಲಾಗುತ್ತದೆ ಹಾಗೂ ಅವಳ ದೇಹವನ್ನು ಅನಗತ್ಯವಾಗಿ ಪ್ರದರ್ಶಿಸಲಾಗುತ್ತದೆ. ಉದಾಹರಣೆಗೆ, ಮೈಸಾಬೂನಿನ ಜಾಹೀರಾತಿನಲ್ಲಿ ಹೆಣ್ಣಿನ ಶರೀರದ ಖಾಸಗಿ ಭಾಗಗಳನ್ನು ಪ್ರದರ್ಶಿಸುವುದು ಅನಗತ್ಯ. ತ್ವಚೆಯ ಕೋಮಲತೆಯನ್ನು ಹೇಳಬೇಕಾದರೆ ಅವಳ ಮುಖವನ್ನು ತೋರಿಸಿದರೆ ಸಾಲದೇ? ಅದಕ್ಕೂ ಮೀರಿ ಕೋಮಲ ತ್ವಚೆಯ ಗಂಡು ಜಗತ್ತಿನಲ್ಲಿ ಕಾಣಸಿಗುವುದೇ ಇಲ್ಲವೇ? ಅಥವಾ ಸಾಬೂನು ಹೆಣ್ಣು ಮಾತ್ರ ಬಳಸುವ ವಸ್ತುವೇ?

ಜಾಹೀರಾತುಗಳ ಕುರಿತು ತರಬೇತಿ ನೀಡುವ ಶಾಲಾ-ಕಾಲೇಜುಗಳಿವೆ. 2012 ರಲ್ಲಿ ನಮ್ಮ ದೇಶದಲ್ಲಿ ಎಲ್ಲಾ ಮಾಧ್ಯಮಗಳ ಮೂಲದಿಂದ ದೊರೆತಂತಹ ಜಾಹೀರಾತುಗಳ ಒಟ್ಟು ಆದಾಯ ಸುಮಾರು 28,694 ಕೋಟಿ ರೂಪಾಯಿಗಳಾಗಿತ್ತು. ಬಂಡವಾಳ ಹೂಡಿಕೆದಾರರಿಗೆ ಲಾಭ ತಂದುಕೊಡುವುದೇ ಜಾಹೀರಾತು ಕಂಪನಿಗಳ ಪ್ರಮುಖ ಗುರಿಯಾಗಿರುತ್ತದೆ. ಅವುಗಳು ಜನರನ್ನು ತಮ್ಮ ಜಾಹೀರಾತುಗಳೆಡೆಗೆ ಸೆಳೆಯಲು ಎಲ್ಲ ವಿಧಾನಗಳನ್ನೂ ಅನುಸರಿಸುತ್ತವೆ. ಅವುಗಳಿಗೆ ಗುರಿ ಮುಖ್ಯವೇ ಹೊರತು ಮಾರ್ಗ ನಗಣ್ಯವಾಗುತ್ತವೆ. ಇವು ಹೆಚ್ಚುಹೆಚ್ಚು ಹೆಣ್ಣನ್ನು ಕೇಂದ್ರೀಕರಿಸಿರುವುದನ್ನು ನಾವು ಕಾಣಬಹುದು. ತಾವು ಜಾಹೀರಾತು ನೀಡಲಿರುವ ವಸ್ತು ಅಥವಾ ಸೇವೆ ಹೆಣ್ಣಿಗೆ ಸಂಬಂಧಿಸಿದ್ದೋ ಅಲ್ಲವೋ, ಜಾಹೀರಾತಂತೂ ತೆರೆದ ದೇಹವುಳ್ಳ ರೂಪದರ್ಶಿಯನ್ನು ಹೊಂದಿರುವಷ್ಟರ ಮಟ್ಟಿಗೆ ಹೆಣ್ಣಿನ ದೇಹವನ್ನು ಮಾರಾಟದ ಸರಕನ್ನಾಗಿಸಿವೆ. ಅಲ್ಲದೆ ಹೆಣ್ಣನ್ನು ಅಡುಗೆಮನೆಯ ಗುಲಾಮಳನ್ನಾಗಿಸಿ, ಬಚ್ಚಲು ತೊಳೆಯಲು, ಮನೆಯನ್ನು ಮತ್ತು ಕುಟುಂಬದವರನ್ನು ನೋಡಿಕೊಳಲೆಂದೇ ಹುಟ್ಟಿರುವ ಜೀವಿಯನ್ನಾಗಿ ಬಿಂಬಿಸುವ ಬಹುತೇಕ ಜಾಹೀರಾತುಗಳು ಗಂಡನ್ನು ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಿಸುವ, ಅಧಿಕಾರ ನಡೆಸಲು ಯೋಗ್ಯ ಎಂಬ ತುಕ್ಕುಹಿಡಿದ ಸಾಮಾಜಿಕ ಮೌಲ್ಯಗಳನ್ನು ಪಸರಿಸಲು ಯತ್ನಿಸುತ್ತವೆ.

ನಾನು ಈ ಲೇಖನವನ್ನು ಬರೆಯುವ ಹೊತ್ತಿನಲ್ಲೇ ನನ್ನ ಸೆಲ್ ಫೋನ್‍ಗೆ ಎರಡು ಬಾರಿ ಜಾಹೀರಾತಿನ ಸಂದೇಶಗಳು ಬಂದವು. ಬೆಂಗಳೂರಿನ ಬೃಹತ್ ಮಾರಾಟ ಮಳಿಗೆಯೊಂದು (ಮಾಲ್) ಮಹಿಳೆಯರಿಗಾಗಿಯೇ ದಿನವನ್ನು ಆಚರಿಸುತ್ತದೆ ಎಂದೂ, ಅಂದು ಅಡುಗೆಯ ಬಗ್ಗೆ, ತಾಯ್ತನದ ಬಗ್ಗೆ ಮತ್ತು ಅಲಂಕಾರದ ಕುರಿತು ತಜ್ಞರು ಉಚಿತವಾಗಿ ಸಲಹೆಗಳನ್ನು ನೀಡಲಿರುವರೆಂದು! ಈ ಮಳಿಗೆಯು ಒಂದು ಬಹುರಾಷ್ಟ್ರೀಯ ಕಂಪನಿಗೆ ಸೇರಿದ್ದು, ಅದು ಮಹಿಳೆಯರನ್ನು ಕೇವಲ ಗ್ರಾಹಕರನ್ನಾಗಷ್ಟೇ ಕಾಣುತ್ತದೆ. ಅವರನ್ನು ಆಕರ್ಷಿಸುವ ಭರದಲ್ಲಿ ಇದೇ ಸ್ಥಾಪಿತ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳಾ ಸಮಾನತೆಯ, ಮಹಿಳಾ ಸಬಲೀಕರಣದ, ಮಹಿಳಾ ಸ್ವಾತಂತ್ರ್ಯದ, ಮಹಿಳಾ ಸ್ವಾವಲಂಬನೆಯ ಕೂಗಿನಲ್ಲಿ ಕೊಚ್ಚಿಹೋಗಬೇಕಿರುವ ಮೌಲ್ಯಗಳಾದ ಅಡುಗೆಮನೆಯ ಗುಲಾಮಗಿರಿಯನ್ನು ಮರುಸ್ಥಾಪಿಸಹೊರಟಿದೆ. ಹೆಣ್ಣೆಂದರೆ ಕೇವಲ ಅಡುಗೆಮನೆಗೆ ಸೀಮಿತಳಾದವಳಲ್ಲ, ಮಕ್ಕಳನ್ನು ಹಡೆಯುವ ಯಂತ್ರವಲ್ಲ, ಈ ಸಮಾಜವನ್ನು ಮುನ್ನಡೆಸುವ ಉತ್ಪಾದನಾ ಶಕ್ತಿಗಳಲ್ಲಿ ಅವಳದೂ ಸಮಪಾಲಿದೆಯೆಂಬುದನ್ನು ಮರೆಸುವ ಹುನ್ನಾರ ಪ್ರಜ್ಞಾಪೂರ್ವಕವಾಗಿ ನಡೆದಿದೆ. ಒಂಭತ್ತು ತಿಂಗಳು ಮಗುವನ್ನು ಹೊತ್ತು ನೋವುಂಡು ಹೆತ್ತು ತನ್ನ ಮಗುವೇನೆಂದು ಅರಿತಿರುವ ತಾಯಿಗೆ ‘ಪೇರೆಂಟಿಂಗ್ ಟಿಪ್ಸ್’ ನೀಡುತ್ತ ಅವಳನ್ನು ತನ್ನ ಗ್ರಾಹಕಳನ್ನಾಗಿಸಿಕೊಳ್ಳುವ ಹುನ್ನಾರ ಮಾಲ್ ಮತ್ತು ಈಗಿನ ವ್ಯಾಪಾರಿ ಮನೋಭಾವದ ವೈದ್ಯರದ್ದೂ ಕೂಡ! ಕುಟುಂಬದಲ್ಲಿ ಮಗುವಿನ ಬಗ್ಗೆ ಸಮನಾದ ಜವಾಬ್ದಾರಿ ಹೊರಬೇಕಾಗಿರುವ ತಂದೆಯೂ ಕೂಡ ‘ಪೇರೆಂಟ್’ ಎಂದು ಇವರಿಗೆ ಎನಿಸುವುದಿಲ್ಲವೇ? ಹೆಣ್ಣಿಗೆ ಮಾತ್ರ ಏಕೆ ಬೇಕು ಬಾಹ್ಯ ಅಲಂಕಾರ? ಅವಳೇಕೆ ಸುಂದರವಾಗಿ ಕಾಣಬೇಕು? ಗಂಡನ್ನು ಮೆಚ್ಚಿಸಲಿಕ್ಕೇ? ಹಾಗಿದ್ದರೆ ಏಕೆ ಮೆಚ್ಚಿಸಬೇಕು? ಮತ್ತೆ ಬರುವುದು ಅಲಂಕಾರದ ಹೆಸರಿನಲ್ಲಿ ಅವಳ ಶೋಷಣೆ. ದೇಶದ ಸೌಂದರ್ಯವರ್ಧಕ ಉದ್ಯಮದ ವಾರ್ಷಿಕ ಆದಾಯವು ಸುಮಾರು 15,000 ಕೋಟಿ ರೂಪಾಯಿಗಳಷ್ಟಿದೆ. ಈ ಉದ್ಯಮಿಗಳ ಲಾಭಕ್ಕೆ ನಮ್ಮ ಹೆಣ್ಣುಮಕ್ಕಳ ಚರ್ಮ, ಮತ್ತಿತರೆ ಶರೀರದ ಭಾಗಗಳು ಆಹುತಿಯಾಗಬೇಕಾಗಿದೆ! ಕೊಳ್ಳುಬಾಕ ಸಂಸ್ಕ್ರತಿಯನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ವಿನಯದಿಂದ ಜಾಹೀರಾತುಗಳ ಮೂಲಕ ಉತ್ತೇಜಿಸುತ್ತ ಮಹಿಳೆಯನ್ನು ಹಾದಿ ತಪ್ಪಿಸುತ್ತಿವೆ. ಹೆಣ್ಣಿನ ಬೌದ್ಧಿಕ ವಿಕಾಸವನ್ನೂ ಸರ್ವೋತೋಮುಖ ಬೆಳವಣಿಗೆಯನ್ನು ಬದಿಗೊತ್ತಿ  ತನ್ನ ಲಾಭಕ್ಕಾಗಿ ಅವಳ ಬಾಹ್ಯ ಸೌಂದರ್ಯಕ್ಕೆ ಆದ್ಯತೆ ನೀಡುವುದೇ ಬಂಡವಾಳಶಾಹಿ ಆಧಾರಿತ ಸೌಂದರ್ಯವರ್ಧಕ ಉದ್ಯಮದ ಉದ್ದೇಶ.

ಒಳಉಡುಪುಗಳ ಜಾಹೀರಾತುಗಳ ಭರಾಟೆಯಂತೂ ಯಾವುದೇ ಕಾಮಪ್ರಚೋದಕಗಳಿಗಂತಲೂ ಕಡಿಮೆಯೇನಿಲ್ಲ. ಲೈಫ್‍ಸೈಜ್ ಬ್ಯಾನರ್ ಗಳಲ್ಲಿ ಜಾಹೀರಾತು ಕಂಪನಿಗಳು ರೂಪದರ್ಶಿಗಳ ದೇಹವನ್ನು ಅಸಭ್ಯವಾಗಿ ಅನವಶ್ಯಕವಾಗಿ ತೆರೆದಿಡುತ್ತ ಅವಳ ಶರೀರವನ್ನು ಮಾರಾಟದ ಸರಕನ್ನಾಗಿಸಿವೆ. ಹೆಣ್ಣು ಸದಾ ಅಲಂಕಾರದ ಸಂಕೇತವೆಂದು ಚಿತ್ರಿಸುವ ಜಾಹೀರಾತುಗಳು ಅವಳು ಬೆಳ್ಳಗಿರಬೇಕು, ತೆಳ್ಳಗಿರಬೇಕು, ಅಂದಚೆಂದವಾಗಿರಬೇಕು, ಅವಳ ವಯಸ್ಸು ತೋರ್ಪಡಬಾರದು ಎಂಬ ಕಲ್ಪಿತವಾದ ಏಕಪ್ರಕಾರವಾದ ಭಾವನೆಗಳನ್ನು ಬಿತ್ತುತ್ತವೆ. ಎಲ್ಲರ ಚರ್ಮದ ಬಣ್ಣವೂ ಒಂದೇ ಆಗಿರಬೇಕೆಂಬ ಹುಸಿ ಅಭಿಪ್ರಾಯಗಳನ್ನು, ಆಸೆಗಳನ್ನು ಹೆಣ್ಣು ಮಕ್ಕಳಲ್ಲಿ ಮೂಡಿಸುತ್ತ ತಮ್ಮ ಸೌಂದರ್ಯವರ್ಧಕ ಉದ್ಯಮಗಳ ಲಾಭವನ್ನು ಅಧಿಕಗೊಳಿಸುತ್ತವೆ. ಮಹಿಳೆಯರ ಮನಸ್ಸಿನಲ್ಲಿ ನಿರಂತರವಾಗಿ ಅಸಮಾಧಾನದ ಹೊಗೆಯಾಡುತ್ತಿರುವಂತೆ ನೋಡಿಕೊಳ್ಳುತ್ತವೆ. ಎಲ್ಲ ಮಹಿಳೆಯರೂ ಬೆಳ್ಳಗೆ ಸುಂದರವಾಗಿ ಕಾಣಬೇಕೆಂದು ಬಯಸುವಂತೆ ಮಾಡುತ್ತವೆ. ಆದರೆ ಅವರ ಬದುಕಿನ ಹೋರಾಟದ ಬಗ್ಗೆ ಎಂದೂ ಯಾವ ಜಾಹೀರಾತೂ ಕೂಡ ದನಿ ಎತ್ತುವುದಿಲ್ಲ. ಏಕೆಂದರೆ ಇದೊಂದು ಬಂಡವಾಳಶಾಹಿ ಉದ್ಯಮ. ಲಾಭಕ್ಕಾಗಿ ತೆರೆದಿರುವ ಕಂಪನಿಗಳು. ಸಮಾಜದ ಪರಿವರ್ತನೆ ಅವುಗಳ ಆಯ್ಕೆಯಲ್ಲ. ಒಂದು ವಸ್ತುವಿನ ಬಗ್ಗೆ ಪ್ರಚಾರ ಮಾಡುವುದಕ್ಕಿಂತಲೂ ಹೆಚ್ಚಾಗಿ ಜಾಹೀರಾತುಗಳು ಹೆಣ್ಣಿನ ಘನತೆಗೆ ಧಕ್ಕೆ ಉಂಟು ಮಾಡುವಂತಹ ಕಾರ್ಯದಲ್ಲಿ ತೊಡಗಿರುವುದು ನಾವು ಬದುಕುತ್ತಿರುವ ಪುರುಷಪ್ರಧಾನ ವ್ಯವಸ್ಥೆಯನ್ನು ಬಿಂಬಿಸುತ್ತದೆ. ಇಲ್ಲಿಯವರೆಗೆ ಎಂದೂ “ಮಹಿಳೆಯರಿಗಾಗಿ ವಿಶೇಷ ದಿನವನ್ನಾಚರಿಸುತ್ತಿದ್ದೇವೆ, ಮಹಿಳೆಯರಿಗಾಗಿ ಸುರಕ್ಷಿತವಾದ ಸಮಾನವಾದ ಘನತೆಯುಳ್ಳ ಉದ್ಯೋಗಾವಕಾಶಗಳಿವೆ, ಉಚಿತ ಶಿಕ್ಷಣಾವಕಾಶಗಳಿವೆ, ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ” ಎಂದು ಬಹುರಾಷ್ಟ್ರೀಯ ಕಂಪನಿಗಳು ಮೊಬೈಲ್ ಸಂದೇಶಗಳನ್ನು ಕಳುಹಿಸಿದ್ದನ್ನು ನಾ ಕೇಳಿಲ್ಲ!

ಇವುಗಳನ್ನು ನಿಯಂತ್ರಿಸುವ ಆಡಳಿತದ ಯಾವುದೇ ಯಂತ್ರವೂ ಇಲ್ಲದಿರುವುದು ದುರಂತ. ನಮ್ಮ ದೇಶದಲ್ಲಿ ಜಾಹೀರಾತು ಕಂಪನಿಗಳನ್ನು ನಿಯಂತ್ರಣ ಮಾಡಲು ಇರುವ ಅಲ್ಲೊಂದು ಇಲ್ಲೊಂದು ಸಂಸ್ಥೆಗಳೂ ಕೂಡ ಅಷ್ಟೇನೂ ಶಕ್ತಿಯುತವಾಗಿಲ್ಲದೆ ಹಲ್ಲುಕಿತ್ತ ಹಾವಿನಂತಿವೆ. ಇದು ಜಾಗತೀಕರಣದ ನಂತರದ ಸಂದರ್ಭದಲ್ಲಿ ನಮ್ಮ ಸರ್ಕಾರಗಳು ಮಹಿಳೆಯರ ಮೇಲೆ ಉದಾರವಾಗಿ ತೋರುತ್ತಿರುವ ಮನೋಭಾವ! ಭಾರತೀಯ ಸಂಸ್ಕೃತಿಯ ಪಠಣ ಮಾಡುವ ಕೇಂದ್ರ ಸರ್ಕಾರ ಕಾರ್ಪೊರೇಟೀಕರಣಕ್ಕೆ ಮೊರೆ ಹೋಗಿರುವ ಈ ವಿಶಿಷ್ಟ ಸನ್ನಿವೇಶದಲ್ಲಿ ಹೆಣ್ಣಿನ ಶರೀರದ ಯಾವ ಭಾಗವನ್ನೂ ಬಿಡದ ಜಾಹೀರಾತು ಉದ್ಯಮದ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯವೇ?

ಬಸಿರನ್ನೂ ಬಿಡದ ಮಾರುಕಟ್ಟೆ: ಕೊಳ್ಳುಬಾಕ ಸಂಸ್ಕೃತಿಗೆ ಇಂದು ಜಗತ್ತು ಹೆಚ್ಚಾಗಿ ತೆರೆದುಕೊಂಡಿದೆ. ಎಲ್ಲವನ್ನೂ ಮಾರು-ಕೊಳ್ಳು ಎಂಬ ಹುಚ್ಚಿನ ಹೊಳೆಯಲ್ಲಿ ಹೆಣ್ಣಿನ ಶರೀರ ಮತ್ತೊಮ್ಮೆ ಮಾರಾಟಕ್ಕೀಡಾಗಿದೆ. ಅವಳ ಹೆಣ್ತನದ ಪ್ರತೀಕ ಎಂದೇ ಪುರುಷಪ್ರಧಾನ ವ್ಯವಸ್ಥೆ ವ್ಯಾಖ್ಯಾನಿಸಿರುವ ಆದರೆ ಅವಳ ದೈಹಿಕ ಪ್ರಕ್ರಿಯೆಯ ಒಂದು ಭಾಗವಾಗಿರುವ ‘ಬಸಿರ’ನ್ನೂ ಬಿಡದಿರುವ ವ್ಯವಸ್ಥೆ ಅದನ್ನೂ ಮಾರಾಟದ ಸರಕನ್ನಾಗಿಸಿದೆ. ‘ಬಾಡಿಗೆ ತಾಯಿ’ ಎಂಬ ಹೆಸರಿನಲ್ಲಿ ಅವಳ ಶರೀರದ ಸಂತಾನೋತ್ಪತ್ತಿಯ ಅಂಗಗಳನ್ನು ಶೋಷಣೆಗೈಯ್ಯುತ್ತಾ ಅವಳನ್ನು ಉತ್ಪಾದನಾ ಯಂತ್ರವನ್ನಾಗಿಸಲಾಗುತ್ತಿದೆ. ಅವಳ ಜೀವಕ್ಕೆ ಅಲ್ಪ ‘ಹಣ’ದ ಬೆಲೆಯನ್ನು ಕಟ್ಟಲಾಗುತ್ತಿದೆ! ಮತ್ತೊಬ್ಬರ ಮಕ್ಕಳ ಹೆತ್ತು ಕೊಡಬೇಕೆಂಬ ಒತ್ತಾಸೆಗೆ ಓರ್ವ ಹೆಣ್ಣಿನ ಜೀವಕ್ಕೆ ಕುತ್ತು ತರುವ ಇಂತಹ ಬಸಿರಿನ ಮಾರಾಟ ಜೀವ ವಿರೋಧಿಯಲ್ಲವೇ? ಮಹಿಳೆಯರಿಗೆ ನೀಡಲಾಗುವ ಕೆಲವು ಇತ್ತೀಚಿನ ರೋಗನಿರೋಧಕಗಳು, ಅದರಲ್ಲೂ ಗರ್ಭಕಂಠದ ಕ್ಯಾನ್ಸರ್ ಗೆಂದು ಹೇಳಲಾಗಿರುವ ನಿರೋಧಕವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಅವು ಭಾರತದಲ್ಲಿ ಸೂಕ್ತ ಪ್ರಯೋಗಕ್ಕೊಳಗಾಗಲು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೇ ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಾವಿರಾರು ಬಡ ಯುವತಿಯರ ಮೇಲೆ ಪ್ರಯೋಗಿಸಲ್ಪಟ್ಟು, ಅನೇಕರ ಸಾವಿಗೆ ಕಾರಣವಾದದ್ದು ಹಾಗೂ ಪರವಾನಗಿಯನ್ನು ಪಡೆಯುವ ಮುನ್ನವೇ ಮಾರುಕಟ್ಟೆಯನ್ನು ಪ್ರವೇಶಿಸಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದೂ ಕೂಡ ಔಷಧ ಕಂಪನಿಗಳು ಹೆಣ್ಣಿನ ಮೇಲೆ ಬೀರಿರುವ ದಟ್ಟ ಕಪ್ಪುಛಾಯೆಗೆ ನಿದರ್ಶನವಷ್ಟೇ.

(ಅಂಕಣಕಾರ್ತಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕರ್ನಾಟಕ ವಿಜ್ಞಾನ ಪರಿಷತ್ ಗೌರವಾಧ್ಯಕ್ಷೆ, ಆಯುರ್ವೇದ ತಜ್ಞರು. ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.)

Leave a Reply