ಚೂರು ಸುದ್ದಿ: ತಿಮಿಂಗಿಲಗಳ ಸಾವು, ಆಸ್ಟ್ರೇಲಿಯ ವಿರುದ್ಧ ಕ್ರಿಕೆಟ್ ನಲ್ಲಿ ಭಾರತದ ಸೋಲು..

(ಚಿತ್ರಕೃಪೆ- ಬಿಬಿಸಿ)

ಕಡಲ ತೀರಕ್ಕೆ ಬಂದು ಸತ್ತು ಕರುಳು ಕಲಕಿದವು ತಿಮಿಂಗಿಲಗಳು

ಸಮುದ್ರ ತೀರದಲ್ಲಿ 44 ತಿಮಿಂಗಿಲಗಳು ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ತಮಿಳುನಾಡಿನ ತುತುಕೋರಿನ್ ಜಿಲ್ಲೆಯಲ್ಲಿ ನಡೆದಿದೆ. ಸಮುದ್ರದ ತಳದಲ್ಲಿ ಭೂಕಂಪನ ಅಥವಾ ಜ್ವಾಲಾಮುಖಿ ಉಕ್ಕಿರುವ ಸಾಧ್ಯತೆಯಿಂದ ಈ ಘಟನೆ ಸಂಭವಿಸಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸ್ಥಳೀಯ ಮೀನುಗಾರರು, ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಮತ್ತು ಪೋಲೀಸರ ನೆರವಿನಿಂದ ದಡದಲ್ಲಿ ಸಿಲುಕಿಕೊಂಡಿದ್ದ ಸುಮಾರು 36 ತಿಮಿಂಗಿಲಗಳನ್ನು ಸಮುದ್ರದ ಆಳಕ್ಕೆ ಬಿಟ್ಟು ಉಳಿಸಿದ್ದಾರೆ.

ತಿಮಿಂಗಿಲಗಳ ತೂಕ ಅತಿಯಾಗಿರುವುದರಿಂದ ಒಮ್ಮೆ ದಡಕ್ಕೆ ಬಂದು ಬಿದ್ದವುಗಳಿಗೆ ಅಲೆಯೊಂದಿಗೆ ಮರಳಿ ಸಮುದ್ರಕ್ಕೆ ಹೋಗುವುದು ಕಷ್ಟವಾಗುತ್ತದೆ. ಇವುಗಳ ಮೈ ರಚನೆ ಕೊಬ್ಬಿನಿಂದ ಕೂಡಿರುವುದರಿಂದ ಅವು ನಿರಂತರವಾಗಿ ನೀರಿನಲ್ಲಿರಬೇಕಾದ ಅಗತ್ಯವಿರುತ್ತದೆ. ಸ್ಥಳೀಯರು ತಿಮಿಂಗಿಲಗಳ ಮೈಮೇಲೆ ಆಗಾಗ ನೀರು ಸುರಿದು ಬದುಕಿಸಲು ಪ್ರಯತ್ನಿಸಿದಾದರೂ ಎಲ್ಲ ಯತ್ನಗಳೂ ಫಲ ನೀಡದೇ ಹಲವು ತಿಮಿಂಗಿಲಗಳು ಸಾಯಬೇಕಾಯಿತು.

ಇಂಥದೇ ಘಟನೆ ಈ ಹಿಂದೆ 1973ರಲ್ಲಿ ನಡೆದಿತ್ತು. ಆಗ 147 ತಿಮಿಂಗಿಲಗಳು ಸತ್ತಿದ್ದವು.

 

ರೋಹಿತ್ ಶತಕ, ವಿರಾಟ ಪ್ರದರ್ಶನಗಳ ಹೊರತಾಗಿಯೂ ಗೆಲುವು ಆಸ್ಟ್ರೇಲಿಯಕ್ಕೆ…

ಆಸ್ಟ್ರೇಲಿಯಾದ ಪರ್ತ್ ನಲ್ಲಿ ಮಂಗಳವಾರದಿಂದ ಪ್ರಾರಂಭವಾಗಿರುವ 5 ಏಕ ದಿನ ಪಂದ್ಯಗಳ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತದ ವಿರುದ್ಧ ಆಸ್ಟ್ರೇಲಿಯ 5 ವಿಕೆಟ್ ಗಳ ಅಂತರದಲ್ಲಿ ಜಯಗಳಿಸಿದೆ. ಅತಿಥೇಯ ತಂಡಕ್ಕೆ ಭಾರತ ನೀಡಿದ್ದ 309 ರನ್ ಗಳ ಗುರಿಯ ಬೆನ್ನುಹತ್ತಿ 49.2 ಓವರ್ ಗಳಲ್ಲಿ 310 ರನ್ ಗಳಿಸುವ ಮೂಲಕ ಪ್ರವಾಸಿ ತಂಡದ ಮೇಲೆ ಗೆಲುವಿನ ಹಿಡಿತ ಸಾಧಿಸಿದೆ. ಪಂದ್ಯದಲ್ಲಿ ಆಸಿಸ್ ನಾಯಕ ಸ್ಟೇವನ್ ಸ್ಮಿತ್(149) ಮತ್ತು ಜಾರ್ಜ್ ಬೇಯ್ಲಿ (112) ರವರುಗಳ ಆಕರ್ಷಕ ಶತಕಗಳ 242 ರನ್ ಗಳ ಜೊತೆಯಾಟ ಆಸಿಸ್ ಗೆಲುವಿಗೆ ಪ್ರಮುಖ ಕಾರಣವಾಯಿತು.

ಮೊದಲು ಬ್ಯಾಟ್ ಮಾಡಿದ ಭಾರತ ಪರ ರೋಹಿತ್ ಶರ್ಮಾ (171) ಮತ್ತು ವಿರಾಟ್ ಕೋಯ್ಲಿ (91) ರವರ 207 ರನ್ ಗಳ ಜೊತೆಯಾಟ ಭಾರತದ ಮೊತ್ತವನ್ನು ಮೂರು ವಿಕೆಟ್ ನಷ್ಟಕ್ಕೆ 300 ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. 2 ನೇ ಏಕದಿನ ಪಂದ್ಯ ಜನವರಿ 5 ರ ಶುಕ್ರವಾರದಂದು ಬ್ರಿಸ್ ಬೇನ್ ನಲ್ಲಿ ನಡೆಯಲಿದೆ.

 

…ಆದ್ರೆ ಆಸ್ಟ್ರೇಲಿಯ ನೆಲದಲ್ಲಿ ಸಾನಿಯಾ ಗೆದ್ರು ಅನ್ನೋ ಸಮಾಧಾನ!

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಸಿಡ್ನಿ ಇಂಟರ್ ನ್ಯಾಶನಲ್ ಟೆನೀಸ್ ಟೂರ್ನಿಯಲ್ಲಿ ಸಾನಿಯಾ ಮೀರ್ಜಾ ಮತ್ತು ಮಾರ್ಟಿನ ಹಿಂಗೀಸ್ ಜೋಡಿ ರೊಡಿಯೊನೋವಾ ಮತ್ತು ಆರೀನಾ ರೊಡಿಯೋನೋವಾ ಜೋಡಿಯನ್ನು ಪ್ರಾರಂಭಿಕ ಸುತ್ತಿನಲ್ಲೇ ಸೊಲಿಸಿ ಸತತ 27 ಪಂದ್ಯಗಳ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ. ವಿಶ್ವದ ಮೊದಲ ಎರಡು ಶ್ರೇಯಾಂಕಿತರಾದ ಸಾನಿಯಾ ಮತ್ತು ಸ್ವಿಜ್ ನ ಹಿಂಗಿಸ್ ಜೋಡಿ ಆಸ್ಟ್ರೇಲಿಯಾದ ರೊಡಿಯೋನೋವಾ ರ ಜೋಡಿಯನ್ನು 6-2, 6.3 ಸೆಟ್ ಗಳಿಂದ ಸೊಲಿಸಿ ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ.

ಎಟಿಪಿ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ರೋಮೆನಿಯಾದ ಫ್ಲೋರಿನ್ ಜೋಡಿ ಡೇನಿಸ್ ಇಸ್ತೋಮಿನ್ ಮತ್ತು ಹೆನ್ರಿ ಕೊಂಟಿನೆನ್ ಜೋಡಿಯನ್ನು 6-7, 6-3, 10-8 ಸೆಟ್ ಗಳಿಂದ ಸೋಲಿಸಿ ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ.

Leave a Reply