ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧ ಮುಂದುವರಿಯಲಿ ಅಂತು ಸುಪ್ರೀಂಕೋರ್ಟ್, ಗೋಹತ್ಯೆ ಮಾಡುವಾಗ ಇಲ್ಲದ ಹಿಂಸಾಪ್ರಜ್ಞೆ ಗೂಳಿ ಪಳಗಿಸುವ ಆಟಕ್ಕೇಕೆ ಅಂತ ಕೇಳ್ತಿದೆ ಟ್ವಿಟರ್!

ಡಿಜಿಟಲ್ ಕನ್ನಡ ಟೀಮ್

ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಸರ್ಕಾರ ನೀಡಿದ್ದ ಷರತ್ತುಬದ್ಧ ಅನುಮತಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ. ಪ್ರಾಣಿದಯಾ ಸಂಘ ‘ಪೇಟಾ’ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಈ ತಡೆಯಾಜ್ಞೆ ದೊರೆತಿದೆ. ತಡಯಾಜ್ಞೆ ದೊರೆತ ಕೆಲವೇ ಗಂಟೆಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸುಗ್ರೀವಾಜ್ಞೆಯ ಮೂಲಕ ಜಲ್ಲಿಕಟ್ಟು ನಡೆಸುವುದಕ್ಕೆ ಕೇಂದ್ರ ಸರ್ಕಾರ ಅನುವು ಮಾಡಿಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಜಲ್ಲಿಕಟ್ಟು ವಿದ್ಯಮಾನವು ತಮಿಳುನಾಡಿಗೆ ಸೀಮಿತವಾಗಿರದೇ ಸಾಮಾಜಿಕ ತಾಣಗಳು ಮತ್ತು ಮಾಧ್ಯಮದ ಮೂಲಕ ‘ಸಂಪ್ರದಾಯ ಪಲ್ಲಟ’ದ ಬಹುದೊಡ್ಡ ಚರ್ಚೆಯೊಂದನ್ನು ಹುಟ್ಟುಹಾಕುವುದರಲ್ಲಿ ಅನುಮಾನಗಳುಳಿದಿಲ್ಲ.

ಪೊಂಗಲ್ ಹಬ್ಬದ ಭಾಗವಾಗಿ ಗೂಳಿಗಳನ್ನು ಪಳಗಿಸುವ ಜಲ್ಲಿಕಟ್ಟು ಆಟವು ತಮಿಳುನಾಡಿನಲ್ಲಿ ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆ. ಹಾಗೆಂದೇ ಅಲ್ಲಿನ ರಾಜಕೀಯ ಪಕ್ಷಗಳ ಆಸ್ತಿಕ- ನಾಸ್ತಿಕ ನಿಲುವುಗಳೇನೇ ಇದ್ದರೂ ಜಲ್ಲಿಕಟ್ಟು ವಿರುದ್ಧ ಮಾತನಾಡುವವರು ವಿರಳ.

tharoor

ಕಾಂಗ್ರೆಸ್ ನ ಶಶಿ ತರೂರ್ ಅವರು ತಮ್ಮ ಟ್ವೀಟ್ ನಲ್ಲಿ- ‘ಸಂಪ್ರದಾಯ- ಸಂಸ್ಕೃತಿ ಹೆಸರಲ್ಲಿ ಅಮಾನವೀಯತೆ, ಹಿಂಸೆ ಆಚರಿಸಲಾಗುವುದೇ? ಸತಿ ಸಹ ಸಂಪ್ರದಾಯ- ಸಂಸ್ಕೃತಿ ಹೆಸರಲ್ಲೇ ಇತ್ತು. ಹಾಗಂತ ಅದನ್ನು ಬಿಜೆಪಿ ಸಮರ್ಥಿಸುವುದೇ. ತಮಿಳುನಾಡು- ಮಹಾರಾಷ್ಟ್ರಗಳಲ್ಲಿ ಗೂಳಿಗಳಿಗೆ ಹಿಂಸೆ ನಿಲ್ಲಬೇಕು’ ಎಂದೆಲ್ಲ ಟ್ವೀಟ್ ಮಾಡಿದ್ದರು.

ಆದರೆ ತಡೆಯಾಜ್ಞೆ ಬರುತ್ತಲೇ ಟಿವಿ ವಾಹಿನಿಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸದಸ್ಯೆ, ಚಿತ್ರನಟಿ ಖುಷ್ಬೂ ಹೇಳ್ತಾರೆ- ‘ಈ ತಡೆಯಾಜ್ಞೆಯಿಂದ ನನ್ನ ಪರಂಪರೆ- ಸಂಪ್ರದಾಯದ ಒಂದು ಭಾಗವನ್ನೇ ಕಿತ್ತು ಒಯ್ದಂತೆ ಆಗಿದೆ. ಕ್ರೀಡೆಯ ನಂತರ ಗೂಳಿಗಳನ್ನೇನೂ ಅಲ್ಲೇ ಬಿಟ್ಟು ಹೋಗುವುದಿಲ್ಲವಲ್ಲ. ಇದು ಬಹಳ ಕಾಲದಿಂದ ಬೆಳೆಸಿಕೊಂಡುಬಂದ ಸಂಪ್ರದಾಯ.’

ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರವಿರುವುದರಿಂದ ಯಾವ ರಾಜಕೀಯ ಪಕ್ಷಗಳೂ ಜನರ ಸಾಂಪ್ರದಾಯಿಕ ಭಾವನೆಗಳನ್ನು ಕದಡುವುದಕ್ಕೆ ಸಿದ್ಧವಿಲ್ಲ. ಹೀಗಾಗಿ ಪಕ್ಷದಲ್ಲಿರುವವರ ನಿಲುವುಗಳು ಭಿನ್ನವಿದ್ದರೂ, ಸಾಮೂಹಿಕವಾಗಿ ಹೆಚ್ಚಿನ ಪಕ್ಷಗಳೆಲ್ಲ ಜಲ್ಲಿಕಟ್ಟು ಪರವಾಗಿಯೇ ಇವೆ. ಅಂತರ್ಜಾಲದ ಸಾಮಾನ್ಯ ಟ್ವೀಟಿಗರನ್ನು ಗಮನಿಸಿದರೂ ಜಲ್ಲಿಕಟ್ಟು ಪರ ಅಭಿಪ್ರಾಯಗಳು ಸಾಕಷ್ಟಿವೆ. ‘ಹಿಂಸೆಯಾಗುತ್ತದೆ ಅಂತ ಗೂಳಿ ಪಳಗಿಸುವ ಕ್ರೀಡೆ ನಿಲ್ಲಿಸುತ್ತೀರಾದರೆ ಗೋಹತ್ಯೆಯನ್ನೇಕೆ ಆಹಾರ ಕ್ರಮದ ಹೆಸರಲ್ಲಿ ಸಮರ್ಥಿಸಿಕೊಳ್ಳುವಿರಿ? ಹಿಂಸೆಯಾಗುತ್ತದ್ದಾದ್ದರಿಂದ ದೇಶದ ಕಸಾಯಿಖಾನೆಗಳನ್ನೆಲ್ಲ ಮುಚ್ಚಬೇಕು ಅಂತ ಆದೇಶಿಸುವುದು ಸುಪ್ರೀಂ ಕೋರ್ಟ್ ಗೆ ಸಾಧ್ಯವಿದೆಯೇ? ಹಿಂದು ಸಂಪ್ರದಾಯವನ್ನು ಮಾತ್ರವೇ ಏಕೆ ಈ ರೀತಿ ಪ್ರಶ್ನಿಸಲಾಗುತ್ತಿದೆ’ ಅಂತೆಲ್ಲ ಹಲವು ಟ್ವೀಟಿಗರ ಆಕ್ರೋಶ.

tw

tw1ಹಾಗಂತ, ಬಿಜೆಪಿ ಜತೆ ಗುರುತಿಸಿಕೊಂಡಿರುವವರೂ ಸಂಪ್ರದಾಯಕ್ಕೆ ತಲೆಕೆಡಿಸಿಕೊಳ್ಳದೇ ಜಲ್ಲಿಕಟ್ಟು ನಿಷೇಧವನ್ನು ಸ್ವಾಗತಿಸಿರುವ ಉದಾಹರಣೆ ಇದೆ. ‘ಜಲ್ಲಿಕಟ್ಟುವಿನಂಥ ಹಿಂಸಾತ್ಮಕ ಕ್ರೀಡೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ಸೂಕ್ತ ಕ್ರಮವೇ. ಕಾರ್ಯಾಂಗಕ್ಕೆ ಮಾಡಲಾಗದೇ ಇದ್ದಿದ್ದನ್ನು ನ್ಯಾಯಾಂಗ ಮಾಡಿತು’ ಅಂತ ಕಿರಣ್ ಬೇಡಿಯವರು ಟ್ವೀಟ್ ಮಾಡಿದ್ದಾರೆ.

ವಿ ನೀಡ್ ಜಲ್ಲಿಕಟ್ಟು (ನಮಗೆ ಜಲ್ಲಿಕಟ್ಟು ಬೇಕು) ಎಂಬ ವಿಷಯ ಅದಾಗಲೇ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ. ಭಾರತವು ಎಮ್ಮೆ- ಎತ್ತುಗಳ ಮಾಂಸ ರಫ್ತು ಮಾಡುವಲ್ಲಿ ಜಾಗತಿಕ ಅಗ್ರಶ್ರೇಣಿಯಲ್ಲಿದೆ. ಪೇಟ ಎಂಬ ಪ್ರಾಣಿದಯಾಸಂಘದವರು ಆ ವಿಷಯದಲ್ಲಿ ಮಾಡಿರುವುದಾದರೂ ಏನು?- ಈ ಧಾಟಿಯ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಖರವಾಗಿವೆ.

tw3

Leave a Reply