ಜಾತಿಮುಕ್ತ ಸಮಾಜಕ್ಕೆ ಹೋರಾಡಿದ ಬಸವಣ್ಣನವರೆಲ್ಲಿ..? ಲೈಂಗಿಕ ದೌರ್ಜನ್ಯ, ಅತ್ಯಾಚಾರದಲ್ಲಿ ಜಾತಿ ಹುಡುಕುತ್ತಿರುವ ಇವರೆಲ್ಲಿ..?

author-thyagarajನಿಜಕ್ಕೂ ಇದೊಂದು ಆಗಬಾರದಿದ್ದ ಆಚಾತುರ್ಯ!

ಹನ್ನೆರಡನೇ ಶತಮಾನದಲ್ಲಿ ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಕಾಯಕ ಸ್ವರೂಪದಲ್ಲಿ ಆಂದೋಲನ ಹಮ್ಮಿಕೊಂಡ ಬಸವಣ್ಣನವರ ಆತ್ಮ ನರಳಿ, ಉರುಳಾಡಿರದಿದ್ದರೆ ಮಾದಾರ ಚೆನ್ನಯ್ಯನ ಮೇಲಾಣೆ, ಅಂಬಿಗರ ಚೌಡಯ್ಯನ ಮೇಲಾಣೆ!

ಯಾವ ಬಸವಣ್ಣನವರು ಜಾತೀಯತೆ ವಿರುದ್ಧ ಹೋರಾಡಿದ್ದರೋ, ಸಮಾಜದ ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದರೋ ಈಗ ಅವರದೇ ಪರಂಪರೆಯ ರೂವಾರಿಗಳು ಎಂದು ಹಣೆಪಟ್ಟಿ ಕಟ್ಟಿಕೊಂಡವರಿಂದಲೇ ಜಾತಿಯ ವರ್ಗೀಕರಣ, ಜಾತಿ ನಿಂದನೆಯ ಮಾತು. ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಸಾಮಾಜಿಕ ಪಿಡುಗಿನಲ್ಲಿಯೂ ಜಾತಿಯತೆಯ ಅನ್ವೇಷಣೆ.

ಅಖಿಲ ಭಾರತ ವೀರಶೈವ ಮಹಾಸಭಾ 41 ನೇ ವಾರ್ಷಿಕ ಅಧಿವೇಶನದಲ್ಲಿ ಮಂಡಿಸಲಾದ ವರದಿಯಲ್ಲಿ ದಾಖಲಾಗಿರುವ ಅಂಶ ಇಡೀ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ‘ಲಿಂಗಾಯತ ಸಮಾಜದ ಹುಡುಗಿಯರ ಮೇಲೆ ಅನ್ಯಜಾತಿಯ ಕೀಳು ಜನಾಂಗದವರು ಲೈಂಗಿಕ ಕಿರುಕುಳ, ಅತ್ಯಾಚಾರ ನಡೆಸುತ್ತಿದ್ದಾರೆ. ವಿವಾಹವಾಗಲು ಒತ್ತಾಯ, ಬಲಾತ್ಕಾರ ಮಾಡುತ್ತಿದ್ದಾರೆ. ಇವು ಕೊಲೆಯಲ್ಲಿ ಅಂತ್ಯವಾಗುತ್ತಿವೆ. ಹೀಗಾಗಿ ಇದನ್ನು ತಡೆಯಲು ಬಜರಂಗದಳ, ಭೀಮಸೇನೆ, ಶಿವಸೇನೆ ಮಾದರಿಯಲ್ಲಿ ಪ್ರಮೀಳಾ ನೇಸರ್ಗಿಯವರ ನೇತೃತ್ವದಲ್ಲಿ ವೀರಬಸವ ಸೇನೆ ರಚಿಸಬೇಕು’ ಎಂಬುದು ವರದಿಯಲ್ಲಿ ಉಲ್ಲೇಖಿತ ವಿಷಯ. ಶಹಬ್ಬಾಸ್!

ಅಲ್ಲ, ಈ ಲೈಂಗಿಕ ಕಿರುಕುಳ, ಅತ್ಯಾಚಾರಕ್ಕೂ ಒಂದು ಜಾತಿ ಇರುತ್ತದೆಯೇ? ಇದು ಒಂದು ಜಾತಿಯವರನ್ನು ಮಾತ್ರ ಕಾಡುತ್ತದೆಯೇ? ಬಸವಣ್ಣನವರು ಜಾತೀಯತೆ ವಿರುದ್ಧ ಅಷ್ಟೆಲ್ಲ ಹೋರಾಡಿದ್ದರೆ, ಈ ಮಹಾನುಭಾವರು ‘ಕೀಳು ಜನಾಂಗ’ದವರು ಎಂಬ ಪದ ಪ್ರಯೋಗ ಮಾಡುತ್ತಾರಲ್ಲ, ಇದು ಎಷ್ಟರ ಮಟ್ಟಿಗೆ ಸರಿ? ಬರೀ ಪರಂಪರೆ ಪ್ರತೀಕವಾಗಿ ಬಸವಣ್ಣನವರ ಹೆಸರು ಹೇಳಿಕೊಂಡರೆ ಸಾಕೇ? ಅವರ ತತ್ವ, ಆದರ್ಶ, ಆಂದೋಲನದ ಸಂದೇಶಗಳು ಇವರ ‘ಪಲ್ಲಕ್ಕಿ’ ಆಗಬಾರದೇ? ಅದನ್ನು ಅನುಸರಿಸಬಾರದೇ? ಲಿಂಗಾಯತ ಸಮಾಜದ ಹುಡುಗಿಯರಿಗೆ ಅನ್ಯ ಜಾತಿಯವರಿಂದ ಲೈಂಗಿಕ ಕಿರುಕುಳ, ಅತ್ಯಾಚಾರ ತಡೆಯುವುದು ಮಾತ್ರ ಇವರ ಉದ್ದೇಶವೇ? ಹಾಗಾದರೆ ಸ್ವಜಾತಿಯವರು ಈ ಅಪರಾಧಗಳನ್ನು ಮಾಡಿದರೆ ಪರವಾಗಿಲ್ಲ, ಅದು ಮಾಫಿಯೋಗ್ಯ ಎಂದು ಇದರ ಅರ್ಥವೇ? ಅನ್ಯ ಜಾತಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಇಂಥದ್ದೇ ಅಪರಾಧಗಳ ಬಗ್ಗೆ ಇವರಿಗೆ ಕಾಳಜಿ ಇಲ್ಲವೇ? ಮಾನ-ಮರ್ಯಾದೆ ಎಂಬುದು ಜಾತಿ ಆಧಾರದ ಮೇಲೆ ವಿಭಜನೆ ಆಗುತ್ತದೆಯೇ? ಸಾರ್ಥಕವಾಯ್ತು, ಹನ್ನೆರಡನೆ ಶತಮಾನದಲ್ಲೇ ಜಡಪರಂಪರೆಗೆ ನವಚೈತನ್ಯ ತುಂಬಿದ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದ ಬಸವಣ್ಣನವರ ಸಮಾನತೆ ಆಂದೋಲನದ ಅಶಯ!

ನಿಜ, ಆ ಕಾಲದ ಶರಣರ ಆಂದೋಲನವು ಧಾರ್ಮಿಕ ಮತ್ತು ಸಾಮಾಜಿಕ ವಲಯದಲ್ಲಿ ಬದಲಾವಣೆಯ ಸುನಾಮಿಯನ್ನೇ ಸೃಷ್ಟಿ ಮಾಡಿತ್ತು. ಬಸವಣ್ಣನವರ ಪ್ರಗತಿಪರ ಚಿಂತನೆಗೆ ಚಿತ್ತಾಕರ್ಷಿತರಾದವರು ಪ್ರವಾಹೋಪಾದಿಯಲ್ಲಿ ಹರಿದು ಬಂದು ಕ್ರಾಂತಿಯ ಸಾಗರ ಸೇರಿಕೊಂಡರು. ಸಮಾನತೆ, ಮಾನವೀಯತೆ, ಭಕ್ತಿ, ಅನುಭಾವಗಳ ಪ್ರತಿಪಾದನೆಯ ಧ್ಯೋತಕವಾಗಿದ್ದ ಈ ಆಂದೋಲನದಲ್ಲಿ ಒಂದಾದ ಶರಣರ ಗುಂಪಿನಲ್ಲಿ ಕೆಳವರ್ಗದವರೇ ಬಹುಸಂಖ್ಯಾತರಾಗಿದ್ದರು. ಮಡಿವಾಳ ಮಾಚಯ್ಯ, ಜೇಡರ ದಾಸಿಮಯ್ಯ, ಬಾಹೂರ ಬ್ರಹ್ಮಯ್ಯ, ಡೋಹರರ ಕಕ್ಕಯ್ಯ, ಕುಂಬಾರ ಗುಂಡಯ್ಯ, ನುಲಿಯ ಚಂದಯ್ಯ ತಮ್ಮ, ತಮ್ಮ ಜಾತಿಯ ಪೊರೆ ಕಳಚಿಕೊಂಡು ಶರಣಸಾಗರದಲ್ಲಿ ಒಂದಾದರು. ಹಾಗೆ ಮಾಡಿದ್ದೇ ಈ ಕ್ರಾಂತಿಯ ಹೆಗ್ಗಳಿಕೆ.

ಆದರೆ ಈಗ..?!

ಎಲ್ಲವೂ ತದ್ವಿರುದ್ಧ. ಒಂದಕ್ಕೊಂದು ತಾಳೆಯೇ ಇಲ್ಲ. ಮೊಗೆದಷ್ಟೂ ನವ ಚಿಂತನೆಗಳನ್ನು ಸ್ಫುರಿಸುವ ಅಕ್ಷಯ ಪಾತ್ರೆಯಂತಿದ್ದ ಆಂದೋಲನದಲ್ಲಿ ಬಹುಸಂಖ್ಯಾರಾಗಿದ್ದ ಕೆಳವರ್ಗದವರು, ಈಗ ಅದೇ ಬಸವ ಪರಂಪರೆಯ ಉತ್ತರಾಧಿಕಾರಿಗಳ ಬಾಯಲ್ಲಿ ‘ಕೀಳುವರ್ಗ’ದವರೆನಿಸಿದ್ದಾರೆ. ಶರಣರ ಪಟ್ಟ ಮತ್ತು ಪಟ್ಟಿಯಿಂದ ಅವರು ಕಿತ್ತುಕೊಂಡು ಹೋಗಿದ್ದಾರೆ. ಸಮಾನತೆ ಎಂಬುದು ಸಮಾನಾಂತರ ಆಗಿದೆ. ಮಾನವೀಯತೆ ಜಾತಿಗಷ್ಟೇ ಸೀಮಿತವಾಗಿದೆ. ಜಾತಿ ಆಧಾರದ ಮೇಲೆ ಈಗ ಇದನ್ನು ಪ್ರತಿಪಾದಿಸುತ್ತಿರುವವರಿಗೆ ಅಂತರಂಗವೂ ಶುದ್ಧಿ ಇಲ್ಲ, ಬಹಿರಂಗವೂ ಶುದ್ದಿ ಇಲ್ಲ.

ವೀರಶೈವ ಮಹಾಸಭಾದ ಆಚಾತುರ್ಯ ನಮ್ಮ ಶ್ರೇಣೀಕೃತ ಜಾತಿಗಳ ಸಮಾಜದ ವೈರುಧ್ಯಗಳ ಒಂದು ಸಂಕೇತ. ಅದು ಆಡಬಾರದ ಮಾತನ್ನು ವರದಿಯಲ್ಲಿ ದಾಖಲಿಸಿ, ತನ್ನ ಮಲೀನ ಮನಸ್ಥಿತಿಯನ್ನು ಬಟಾಬಯಲು ಮಾಡಿಕೊಂಡಿದೆ. ಈ ಮನಸ್ಥಿತಿ ಯಾವುದೇ ಸಮುದಾಯಕ್ಕಿದ್ದರೂ ಅದು ಒಟ್ಟಾರೆ ಸಮಾಜದ ಮೇಲಿನ ಅವಜ್ಞೆಯ ಕರಿನೆರಳೇ ಸರಿ. ಒಕ್ಕಲಿಗರಿರಲಿ, ಬ್ರಾಹ್ಮಣರಿರಲಿ ಅಥವಾ ಇನ್ನಾವುದೇ ಸಮುದಾಯವರಿರಲಿ ಈ ರೀತಿ ಅಲೋಚಿಸುವುದು ಸಲ್ಲ. ಎಲ್ಲ ಸಮುದಾಯದ ಹೆಣ್ಣು ಮಕ್ಕಳಿಗೂ ಈ ಸಮಾಜದಲ್ಲಿ ಸಮಾನ ಗೌರವವಿದೆ. ಮಾನ-ಅವಮಾನ ಎಂಬುದು ಒಂದು ಸಮುದಾಯಕ್ಕೆ ಹೆಚ್ಚು, ಮತ್ತೊಂದು ಸಮುದಾಯಕ್ಕೆ ಕಡಿಮೆ ಎಂದು ವಿಂಗಡಣೆ ಆಗುವುದಿಲ್ಲ. ಎಲ್ಲರೂ ಈ ಸಮಾಜದ ಭಾಗವೇ ಆಗಿರುವುದರಿಂದ ಜತನ, ಕಾಳಜಿ ಎಂಬುದು ಸಹ ಎಲ್ಲರಿಗೂ ಸಮಾನವಾಗಿ ಸಲ್ಲಬೇಕು. ಬರೀ ಲಿಂಗಾಯತ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ.

ಇನ್ನು ಬಸವಣ್ಣನವರು ಪ್ರತಿಪಾದಿಸಿದ ‘ಜಾತಿ ವ್ಯವಸ್ಥೆ ನಿರ್ಮೂಲನೆ’ಯ ಒಂದು ಭಾಗವಾಗಿ ಅಂತರ್ಜಾತಿ ವಿವಾಹಗಳು ಪ್ರೋತ್ಸಾಹ ಪಡೆದದ್ದೂ ಉಂಟು. ಹೀಗಿರುವಾಗ ಅನ್ಯ ಜಾತಿಯವರು ಲಿಂಗಾಯತ ಹುಡುಗಿಯರನ್ನು ಮದುವೆ ಆಗಬಾರದು ಅಂತ ಮಹಾಸಭಾ ವರದಿಯಲ್ಲಿ ಷರಾ ಬರೆದರೆ ಯಾರು ಕೇಳುತ್ತಾರೆ? ಹಾಗಾದರೆ ಈವರೆಗೂ ಲಿಂಗಾಯತ ಸಮುದಾಯದ ಯಾರೋಬ್ಬರೂ ‘ಸ್ವಯಿಚ್ಚೆ’ಯಿಂದ ಅನ್ಯಜಾತಿಯವರನ್ನು ವಿವಾಹ ಮಾಡಿಕೊಂಡೇ ಇಲ್ಲವೇ? ಆಗಿರುವ ಎಲ್ಲ ವಿವಾಹಗಳು ಬಲವಂತವಾಗಿಯೇ ಆಗಿವೆಯೇ? ಎಂಥ ಮೂರ್ಖ ಉಲ್ಲೇಖ. ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು. ಎಲ್ಲ ಸಮುದಾಯದಯಲ್ಲೂ ಅಂತಾರ್ಜಾತಿ ವಿವಾಹಗಳು ಆಗಿವೆ, ಆಗುತ್ತಿವೆ, ಒಕ್ಕಲಿಗರು, ಬ್ರಾಹ್ಮಣರು, ಹಿಂದುಳಿದ ವರ್ಗದವರು, ಪರಿಶಿಷ್ಟರೂ ಯಾರೊಬ್ಬರೂ ಇದಕ್ಕೆ ಹೊರತಲ್ಲ. ಹಾಗೆಂದು ಆಗಿರುವ ಎಲ್ಲ ವಿವಾಹಗಳು ಅಪರಾಧ ಕೋನದಿಂದಲೇ ನಡೆದಿರುವುದಿಲ್ಲ. ಅದೇ ರೀತಿ ಅಪರಹಣ, ಬಲವಂತ ವಿವಾಹ ಮತ್ತಿತರ ಅಪರಾಧಗಳು ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತವಾಗಿಯೂ ನಿಂತಿಲ್ಲ. ಹಾಗಂಥ ಎಲ್ಲ ಜಾತಿಯವರೂ ಒಂದೊಂದು ಹೆಣ್ಣುಮಕ್ಕಳ ರಕ್ಷಣೆಗೆ ಒಂದೊಂದು ಸೇನೆ ಕಟ್ಟಿಕೊಂಡು ಹೊರಟರೆ ಪೊಲೀಸರು ಎಲ್ಲಿಗೆ ಹೋಗಬೇಕು? ಕಾನೂನು, ನೀತಿ-ನಿಯಮ ಅನ್ನುವುದೆಲ್ಲ ಏನು ಮಾಡಬೇಕು?

ಇರಲಿ, ವೀರಶೈವ ಮಹಾಸಭಾ ಪದಾಧಿಕಾರಿಗಳ ಅಚಾತುರ್ಯಕ್ಕೆ ಇಡೀ ಸಮುದಾಯವೇನೂ ಹೊಣೆಯಲ್ಲ. ಹೀಗಾಗಿ ಇದನ್ನು ಸಂಘಟನೆಗೆ ಮಾತ್ರ ಸೀಮಿತವಾಗಿ ನೋಡಬೇಕಾಗುತ್ತದೆ. ಇದು ಅವರ ಲೋಪವಷ್ಟೇ ಎಂದು ಪರಿಗಣಿಸಬೇಕಾಗುತ್ತದೆ. ಈ ತಪ್ಪನ್ನು ಯಾವುದೇ ಸಮುದಾಯದ ಸಂಘಟನೆ ಮಾಡಿದರೂ ಅಷ್ಟೇ. ಆದರೆ ಸಮುದಾಯಗಳನ್ನು ಪ್ರತಿನಿಧಿಸುವ ಸಂಸ್ಥೆಗಳು ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿ ನಿಲ್ಲುತ್ತದೆ.

ಇದು ಕಣ್ತಪ್ಪಿನಿಂದ ಆದ ಪ್ರಮಾದ ಎಂದು ವೀರಶೈವ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದ್ದಾರೆ. ಆದರೆ ಕಣ್ತಪ್ಪಿನಿಂದ ಒಂದು ಅಕ್ಷರವೋ, ಒಂದು ಪದವೋ, ಒಂದು ವಾಕ್ಯವೋ ನುಸುಳಬಹುದು. ಆದರೆ ಇಡೀ ಪ್ಯಾರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಹಾಗೊಂದು ವೇಳೆ ಅದು ತಪ್ಪಿಸಿಕೊಂಡಿದೆ ಎಂದಾದರೆ ವರದಿ ಅಚ್ಚಿಗೆ ಹೋಗುವ ಮೊದಲು ಹಾಗೂ ಅದನ್ನು ಬಿಡುಗಡೆ ಮಾಡುವ ಮೊದಲು ಪದಾಧಿಕಾರಿಗಳು ಯಾರೂ ಅದನ್ನು ಓದಿಯೇ ಇಲ್ಲ ಎಂದಾಯಿತಲ್ಲವೇ? ಅದು ಕೂಡ ಬೇಜವಾಬ್ದಾರಿ ವರ್ತನೆಯೇ ಅಲ್ಲವೇ? ಇಲ್ಲ, ಪದಾಧಿಕಾರಿಗಳು ವರದಿಯನ್ನು ಓದಿದ್ದಾರೆ ಎಂದರೆ ಎಲ್ಲರ ಕಣ್ಣಿನಿಂದಲೂ ಈ ಪ್ಯಾರಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಓದಿಯೂ ಅದು ಬಂದಿದೆ ಎಂದಾದರೆ ವೀರಶೈವ ಮಹಾಸಭೆಯ ಉದ್ದೇಶವೇ ಅದಾಗಿತ್ತು ಎಂಬುದು ಶೃತಪಡುತ್ತದೆ.

‘ನಮಗೆ ಯಾವುದೇ ಜಾತಿ-ಬೇಧ ಇಲ್ಲ. ನಾವು ಜಾತೀವಾದಿಗಳಲ್ಲ. ನಮ್ಮಲ್ಲಿ ಪರಿಶಿಷ್ಟರು, ಹಿಂದುಳಿದವರು ಸೇರಿದಂತೆ ಎಲ್ಲ ಜಾತಿ, ವರ್ಗದವರೂ ಸಮ್ಮಿಳಿತರಾಗಿದ್ದಾರೆ’ ಎಂದು ಮಹಾಸಭಾದ ಬೇರೆ-ಬೇರೆ ಪದಾಧಿಕಾರಿಗಳು ಈಗ ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ಅದು ಸುಳ್ಳು ಎಂಬುದು ಅವರಿಗೇ ಚನ್ನಾಗಿ ಗೊತ್ತಿದೆ. ತೀರಾ ಇತ್ತೀಚೆಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇಮಕ ಸಂದರ್ಭದಲ್ಲಿ ಮಹಾಸಭಾವು ಸಮುದಾಯಕ್ಕೆ ಪ್ರಾತಿನಿಧ್ಯ ದಕ್ಕಿಸಿಕೊಳ್ಳಲು ಯತ್ನಿಸುವ ಭರದಲ್ಲಿ ಇದೇ ರೀತಿ ತನ್ನ ಜಾತಿವಾದವನ್ನು ಅನಾವರಣ ಮಾಡಿಕೊಂಡಿತ್ತು. ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು, ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ನೇಮಕದಲ್ಲಿ ವೀರಶೈವರಿಗೆ ಅನ್ಯಾಯ ಮಾಡಲಾಗುತ್ತಿದೆ. ಮಂತ್ರಿ ಮಂಡಲದಲ್ಲಿ ಸರಿಯಾದ ಪ್ರಾತಿನಿಧ್ಯ ಇಲ್ಲ, ತಮ್ಮ ಸಮುದಾಯದವರೇ ಆದ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಆಡಿ ಅವರನ್ನು ಪದಚ್ಯುತಗೊಳಿಸಲು ಹುನ್ನಾರ ನಡೆಯುತ್ತಿದೆ. ಈಗ ಉಮೇಶ್ ಅವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡದಿದ್ದರೆ ಸಮುದಾಯಕ್ಕೆ ಭಾರೀ ಅನ್ಯಾಯ ಆಗುತ್ತದೆ. ಇದು ಹೀಗೆಯೇ ಮುಂದುವರಿದರೆ ಸರಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಧಮಕಿ ಹಾಕಿದ್ದರು.

ಹಾಗಾದರೆ ಇದು ಯಾವ ಸೀಮೆಯ ಜಾತ್ಯತೀತವಾದ..?

ಲಗೋರಿ : ಸುಳ್ಳು + ಸುಳ್ಳು = ಸುಳ್ಳೇ!

2 COMMENTS

Leave a Reply