ಸಾಕೆನಿಸಿರುವ ವಿವಾದಗಳು, ಸ್ವಾಮಿ ವಿವೇಕಾನಂದರನ್ನು ಸರಳವಾಗಿ ಅರ್ಥಮಾಡಿಸಬಲ್ಲ ವಿವೇಕದ ಮಾತುಗಳು…

ಡಿಜಿಟಲ್ ಕನ್ನಡ ಟೀಮ್

ಜನವರಿ 12, ಸ್ವಾಮಿ ವಿವೇಕಾನಂದರ ಜನ್ಮದಿನ. ಅವರ ಬಗ್ಗೆ ವಿಮರ್ಶಕರು ಮಾತುಗಳನ್ನು ಹೊಸೆಯೋದು, ಒಂದು ಪಂಥ ನಮ್ಮವರೆನ್ನೋದು, ಮತ್ತೊಬ್ಬರು- ಇಲ್ಲಿಲ್ಲ, ಅವರು ನಮ್ಮವರು, ಆದ್ರೆ ಎದುರಿನವರು ಹೈಜಾಕ್ ಮಾಡಿಬಿಟ್ಟಿದ್ದಾರೆ ಅನ್ನೋದು ಇಂಥವೆಲ್ಲ ಚರ್ಚೆಗಳೇ ಹಾಸುಹೊಕ್ಕಾಗುತ್ತಿವೆ.

ಅವೆಲ್ಲವನ್ನೂ ಬಿಟ್ಟು, ಸುಮ್ಮನೇ ಸ್ವಾಮಿ ವಿವೇಕಾನಂದರ ವಿವೇಕದ ನುಡಿಗಳ ಮೂಲಕ ಅವರ ಜನುಮದಿನದ ನೆನಕೆ ಮಾಡಿದರೆ ಒಳ್ಳೇದಲ್ಲವೇ?

– ನೀವು ಸ್ವಾರ್ಥವನ್ನು ತೊರೆದಿದ್ದೀರಾ? ಅಷ್ಟಾದರೆ ಸಾಕು. ನೀವು ಒಂದೇ ಒಂದು ಧರ್ಮಗ್ರಂಥವನ್ನೂ ಓದಬೇಕಿಲ್ಲ, ಯಾವ ಚರ್ಚು- ಮಸೀದಿಗಳಿಗೂ ಹೋಗಬೇಕಿಲ್ಲ.

– ಎಲ್ಲ ಶಕ್ತಿಯೂ ನಿಮ್ಮೊಳಗೇ ಇದೆ. ನೀವು ದುರ್ಬಲರು ಎಂದು ಯೋಚಿಸಲೇಬೇಡಿ. ನೀವು ಏನನ್ನು ಬೇಕಾದರೂ ಸಾಧಿಸಬಲ್ಲಿರಿ. ಎದ್ದುನಿಲ್ಲಿ, ನಿಮ್ಮೊಳಗಿನ ದೈವಿಕತೆಯನ್ನು ಅಭಿವ್ಯಕ್ತಿಸಿ.

– ನಮ್ಮ ಹೃದಯ ಸಮುದ್ರವಾಗಿರಲಿ. ಅಂಥ ವೈಶಾಲ್ಯವಿದ್ದಾಗ ಜಗತ್ತಿನ ಎಲ್ಲ ಚಿಕ್ಕಪುಟ್ಟ ಕಿರಿಕಿರಿಗಳ ಆಚೆ ನಿಂತು ಅದನ್ನು ನೋಡುವುದು ಸಾಧ್ಯವಾಗುತ್ತದೆ.

– ವಿಚಾರವೊಂದನ್ನು ಆಯ್ದುಕೊಳ್ಳಿ. ಆ ವಿಚಾರವೇ ನಿಮ್ಮ ಬದುಕಾಗಲಿ. ಆ ಬಗ್ಗೆ ಯೋಚಿಸಿ, ಕನಸು ಕಾಣಿ, ಅದೇ ನಿಮ್ಮ ಜೀವನವಾಗಲಿ. ನಿಮ್ಮ ಮಿದುಳು, ನರಮಂಡಲ, ದೇಹದ ಭಾಗಗಳೆಲ್ಲ ಅದನ್ನೇ ಉಸಿರಾಡಲಿ. ಅದುವೇ ಯಶಸ್ಸಿನ ಮಾರ್ಗ.

– ನಾವು ಯಾರೆಂದರೆ ನಮ್ಮ ವಿಚಾರಗಳು ಅಷ್ಟೆ. ಮಾತು ನಂತರ ಬರುವಂಥದ್ದು. ವಿಚಾರವೇ ಪ್ರಮುಖ. ವಿಚಾರ ಜೀವಂತ, ಅದರ ಪ್ರಯಾಣದ ತಾಕತ್ತೂ ಅನುಪಮವಾದದ್ದು.

– ನೀವು ನಿಜಕ್ಕೂ ಬೇರೆಯವರಿಗೆ ಒಳಿತನ್ನು ಬಯಸಿದ್ದಾದರೆ ಇಡೀ ವಿಶ್ವವೇ ನಿಮ್ಮ ವಿರುದ್ಧ ನಿಂತರೂ ಏನೂ ಮಾಡಲು ಸಾಧ್ಯವಿಲ್ಲ. ನೀವು ಪ್ರಾಮಾಣಿಕರಾಗಿ, ನಿಸ್ವಾರ್ಥಿಗಳಾಗಿದ್ದರೆ ನಿಮ್ಮೊಳಗಿನ ಆ ಪರಮಾತ್ಮನ ಶಕ್ತಿಗೆ ಪ್ರತಿರೋಧಗಳೆಲ್ಲ ಮುರಿದು ಬೀಳುತ್ತವೆ.

1 COMMENT

Leave a Reply