ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವೆಂಬ ಆದೇಶ ಪಾಲನೆಯ ಮೊದಲ ದಿನವಾಗಿತ್ತು ಮಂಗಳವಾರ. ಬೆಂಗಳೂರಲ್ಲಿ ಈ ಕಾಯಿದೆ ಪಾಲನೆಗೆ ಜನ ಆಸಕ್ತಿಯನ್ನೇ ತೋರಲಿಲ್ಲ ಎಂಬಂಥ ವಾತಾವರಣವೇನೂ ಇಲ್ಲ. ಆದರೆ, ದೊಡ್ಡ ಸಂಖ್ಯೆಯಲ್ಲಿ ಈ ನಿಯಮ ಪಾಲನೆ ಆಗುವುದಕ್ಕೆ ಇನ್ನೊಂದಿಷ್ಟು ದಿನಗಳು ಬೇಕಾಗುತ್ತವೆ ಎಂಬ ಸೂಚನೆಯಂತೂ ಸಿಕ್ಕಿದೆ. ಹೆಲ್ಮೆಟ್ ಖರೀದಿಸಬೇಕಿದೆ, ಎಲ್ಲ ಬದಲಾವಣೆಗಳ ಪ್ರಾರಂಭದಲ್ಲೂ ಕಂಡುಬರುವ- ನಾನೇಕೆ ಒಗ್ಗಿಕೊಳ್ಳಲಿ ಎಂಬ ನಿಲುವು ನಿಧಾನಕ್ಕೆ ಸಡಿಲಗೊಳ್ಳಬೇಕಿದೆ, ದಂಡದ ಭಯವೂ ಮುಂದಿನ ದಿನಗಳಲ್ಲಿ ಗಟ್ಟಿಯಾಗುತ್ತದೆ… ಹೀಗಾಗಿ, ಈಗ ಇದೇನಿದು ಕಿರಿಕಿರಿ- ಭಾರ ಎನ್ನಿಸುತ್ತಿರುವ ಸಂಗತಿ ಕರಗಿ ಬೈಕು ಸವಾರಿಯ ಉಭಯರೂ ಶಿರಸ್ತ್ರಾಣದೊಂದಿಗೆ ಅಲಂಕೃತರಾಗುವ ಮಾಮೂಲು ಘಟಿಸುವುದು, ಸಂಶಯ ಬೇಡ.
ಆದರೆ, ಹೆಲ್ಮೆಟ್ ಕೈಯಲ್ಲೇ ಹಿಡಿದು ಪೊಲೀಸರು ಕಂಡೊಡನೆ ಹಾಕಿಕೊಳ್ಳೋಣ ಅಂತ ಸವಾರಿ ಮಾಡುತ್ತಿರುವವರು ಹಾಗೂ ಶಿರಸ್ತ್ರಾಣವನ್ನು ಬೈಕಿನ ಹಿಂಬದಿ ಕೊಂಡಿಯೊಂದಕ್ಕೆ ಭೂಷಣವಾಗಿಸಿ ಆರಾಮಿರುವವರು ಎಲ್ಲರ ಬಂಧನವಾಗಿದೆ… ಚಿತ್ರದಲ್ಲಿ!



