ಅಣ್ಣನ ಪರವಾಗಿ ಅಕ್ಕಾವ್ರು ಬರ್ತಾರೆ, ಅಕ್ಕಂದಿರೆಲ್ಲರ ಅಧಿಕಾರವನ್ನು ಅವರ ಗಂಡಂದಿರೇ ನಿಭಾಯಿಸ್ತಾರೆ!

author-geetha“ನಮಸ್ಕಾರ ಮೇಡಮ್ಮೋರೇ.. ನಮ್ಮ ಅಕ್ಕ ಬಂದವ್ರೇ”

ಬಾಗಿಲು ತೆರೆದು ನಿಂತ ನಾನು ಕಣ್ಣರಳಿಸಿದೆ. ಗುಂಪಿನ ಮಧ್ಯೆ ಜಾಗ ಮಾಡಿಕೊಂಡು ಕೈ ಮುಗಿದುಕೊಂಡೇ ಮುಂದೆ ಬಂದರು ಅಕ್ಕ ನನ್ನ ಕೈಗೆ ಪಾಂಪ್ಲೆಟ್ ತುರುಕಿದಾಗಲೇ ಅವರುಗಳಲೆಲ್ಲಾ ಮತ ಕೇಳಲು ಬಂದಿರುವುದೆಂದು ಅರಿವಾಯಿತು.

ನೀಟಾಗಿ ಎರಡು ಬದಿಯ ಅಂಚು ಎದ್ದು ಕಾಣುವಂತೆ ಸೆರಗು ಪಿನ್ ಮಾಡಿ ಸೀರೆ ಉಟ್ಟಿದ್ದರು ಅಕ್ಕ.

“ನಿಮ್ಮ ಮತ ನಮಗೇ ಹಾಕಬೇಕು”. ಬಿ.ಬಿ.ಎಂ.ಪಿ ಚುನಾವಣೆ, ಕಾರ್ಪೊರೇಟರ್ ಆಗೋಕೆ ಚುನಾವಣೆಯಲ್ಲಿ ನಿಂತು, ನನ್ನ ಪವಿತ್ರ ಮತ ಕೇಳಲು ಬಂದಿದ್ದರು ಆಕೆ. ಆಕೆಯ ಹಿಂದೆ ದೊಡ್ಡ ಗುಂಪು.

“ನಿಮಗೇ ಯಾಕೆ ನನ್ನ ಮತ ಹಾಕಬೇಕು?”

“ನಮ್ಮ ಅಣ್ಣಾವ್ರು… ಹೆಸರು ಕೇಳಿಲ್ವಾ ಮೇಡಂ? ತುಂಬಾ ಕೆಲಸ ಮಾಡಿದ್ದಾರೆ. ಈ ಬಾರಿ ಈ ವಾರ್ಡನ್ನು ಮಹಿಳಾ ಮೀಸಲು ಕ್ಷೇತ್ರ ಮಾಡಿಬಿಟ್ಟಿದ್ದಾರೆ. ಅದಕ್ಕೆ ಅಕ್ಕಾವ್ರು ನಿಂತುಕೊಂಡವ್ರೇ”

ಪಕ್ಕ ನಿಂತವನೇ ಉತ್ತರಿದ. ಆಕೆಯ ಮುಖದ ಮೇಲಿನ ನಗು ಮಾಸಲೇ ಇಲ್ಲ. ಈ ಅಣ್ಣಾವ್ರ ಹೆಂಡ್ತಿ ಅತ್ತಿಗೆಮ್ಮ ಆಗದೆ ಅಕ್ಕಾವ್ರು ಆಗಿದ್ದು ಯಾಕೆ?..

ಪ್ರಶ್ನೆ ಕೇಳದೆ, ಮನೆ ಬಾಗಿಲಿಗೆ ಬಂದ ಅಭ್ಯರ್ಥಿಯನ್ನು ಹಾಗೇ ಕಳಿಸಿದರೆ ನಾನು ವಿದ್ಯಾವತಿ ಹೇಗೆ ಆದೇನು? “ಈ ವಾರ್ಡಿನಲ್ಲಿ ಎಷ್ಟು ಮನೆಗಳಿವೆ? ಎಷ್ಟು ಪಾರ್ಕುಗಳಿವೆ ಅಂತ ಗೊತ್ತಾ ನಿಮಗೆ?” ಆಕೆಯ ತಿದ್ದಿದ ಹುಬ್ಬುಗಳು ಸಂಕುಚಿತಗೊಂಡವು.

“ಯಾಕೋ ಈ ಮೇಡಮ್ಮು ತುಂಬಾ ಪ್ರಶ್ನೆ ಕೇಳ್ತಾ ಅವ್ರೇ.. ನಡೀರಿ ಹೋಗೋಣ… ಈ ರಸ್ತೇಲಿ ಇರೋ ಮನೆಗಳಿಗೆ ಹೋಗೋದು ಬೇಡ” ಎಂದು

ನನಗೆ ಬೆನ್ನು ತಿರುಗಿಸಿ ಆ ಅಕ್ಕಾವ್ರು ತಮ್ಮ ಗುಂಪಿನೊಂದಿಗೆ ಹೊರನಡೆದರು, ಗೇಟನ್ನು ಹಾಗೇ ಹಾರು ಹೊಡೆದು..

ನಂತರ ಮತವೇನೋ ಚಲಾಯಿಸಿ ಬಂದೆ. ಆದರೆ ಯಾರು ಗೆದ್ದರು ಎಂದು ತಿಳಿದುಕೊಳ್ಳಲು ಹೋಗಲಿಲ್ಲ.

ಕಳೆದ ತಿಂಗಳು 25 ಮೇಲ್ಮನೆ ಸದಸ್ಯರನ್ನು ಆರಿಸುವ ಚುನಾವಣೆ. ಮತ ಚಲಾಯಿಸುವ ಅವಶ್ಯಕತೆ ಇಲ್ಲದರಿಂದ ನಾನು ಅಷ್ಟಾಗಿ ಗಮನ ಕೊಡಲಿಲ್ಲ. ಆದರೆ ಚುನಾವಣೆ ಫಲಿತಾಂಶ ಬಂದಾಗ ಅದನ್ನು ಓದಿ ಬೇಸರವಾಗಿದ್ದೇನೋ ನಿಜ. ಮಹಿಳೆಯರೇ ಇಲ್ಲ.

ಮಹಿಳೆಯರನ್ನು ನಿಲ್ಲಿಸಬೇಕೆಂದು ಕಾನೂನು ಇರಲಿಲ್ಲ. ಮಹಿಳಾ ಮೀಸಲು ಕ್ಷೇತ್ರವಾಗಲಿ, ಇಂತಿಷ್ಟು ಮಂದಿ ಮಹಿಳೆಯರಿಗೆ ಅವಕಾಶ ಇರಬೇಕು ಎನ್ನುವ ಕಾನೂನಾಗಲಿ ಇಲ್ಲದೇ ಇದ್ದರಿಂದ ಯಾವ ಪ್ರಮುಖ ರಾಜಕೀಯ ಪಕ್ಷವೂ ಮಹಿಳೆಯರನ್ನು ಚನಾವಣಾ ಕಣಕ್ಕೆ ಇಳಿಸಿಯೇ ಇರಲಿಲ್ಲ. ಇನ್ನು ಗೆಲ್ಲುವುದು ಹೇಗೆ?

ಮಹಿಳಾ ಮೀಸಲಾತಿ ಇಲ್ಲದಿದ್ದರೆ ಅವರು ಇರುವುದೇ ಇಲ್ಲ… ಮೀಸಲಾತಿ ಇದ್ದರೆ ಹೆಂಡತಿಯನ್ನೋ, ಮಗಳನ್ನೋ, ಸೊಸೆಯನ್ನೋ ನಿಲ್ಲಿಸಿ ತಿರುಗಿ ಗಂಡನೋ, ತಂದೆಯೋ, ಮಾವನೋ ಆಡಳಿತ ಹಿಡಿಯುತ್ತಾರೆ, ನಡೆಸುತ್ತಾರೆ. ಮೀಟಿಂಗ್ ಇದ್ದರೆ ಗಂಡನ ಜೊತೆ ಬರುತ್ತಾರೆ, ಹೋಗುತ್ತಾರೆ. ಅಧಿಕಾರಿಗಳೊಂದಿಗೆ ಮಾತನಾಡುವುದು ಗಂಡನೇ. ಅವರ ಮೊಬೈಲ್ಲಿಗೆ ಕರೆ ಮಾಡಿದರೆ ಸ್ವೀಕರಿಸುವುದು ಆತನೇ. ‘ನಮ್ಮ ಹೆಂಗಸ್ರಿಗೆ ಗೊತ್ತಾಗೊಲ್ಲ.. ಏನು ಹೇಳಿ..’ ಎಂದು ಜೋರು ದನಿಯಲ್ಲಿ ಉತ್ತರಿಸುತ್ತಾರೆ.

ಮಹಿಳೆಯರಿಗೆ ಮೀಸಲಿಟ್ಟು ಸಾಧಿಸಿದ್ದೇನು.? ಕಾರ್ಪೊರೇಟರ್ ಅಥವಾ ಎಂ.ಎಲ್.ಎ ಇವರ ಪತ್ನಿ, ಮಗಳು ಚುನಾವಣೆಗೆ ನಿಲ್ಲಬಾರದು ಎಂದು ನನ್ನ ಅಭಿಪ್ರಾಯವಲ್ಲ. ಅವರೇ ಅಧಿಕಾರ ನಡೆಸುತ್ತಾರಾ ಎಂಬುದು ಮುಖ್ಯ. ಮಹಿಳಾ ಮೀಸಲು ಕೇತ್ರಕ್ಕೆ ಮಹಿಳಾ ಕಾರ್ಯಕರ್ತೆಯರನ್ನು ಗಣನೆಗೆ ತೆಗೆದುಕೊಳ್ಳಬೇಕು. ಜನರೊಂದಿಗೆ ಕೆಲಸ ಮಾಡಿರುವ ಮಹಿಳೆಯರಿಗೆ ಅವಕಾಶ ಕೊಡಬೇಕು. ಅದನ್ನು ಕಾರ್ಯರೂಪಕ್ಕೆ ತರುವುದು ಹೇಗೆ? ತರಲು ಸಾಧ್ಯವೇ? ಪುರುಷರ ಪೈಕಿ ಕೂಡ ಮಗ, ಮೊಮ್ಮಗ ಎಂದು ವಂಶವಾಹಿನಿಗೆ ಪ್ರಾಮುಖ್ಯ ಕೊಟ್ಟು ನಡೆದು ಬಂದಿರುವ ಇತಿಹಾಸವೇ ನಮ್ಮ ಕಣ್ಣ ಮುಂದೆ ಇರುವಾಗ ಮಹಿಳೆಯ ವಿಚಾರದಲ್ಲಿ ಮಾತ್ರ ಕಾರ್ಯಕರ್ತೆ ಆಗಿರಬೇಕು, ಕೆಲಸ ಮಾಡಿರಬೇಕು ಎಂದು ಅಪೇಕ್ಷಿಸುವುದು ತಪ್ಪಲ್ಲವೇ? ಎಂಬ ಪ್ರಶ್ನೆಯೂ ಏಳುತ್ತದೆ. ಪ್ರಸ್ತುತ ರಾಜಕೀಯದಲ್ಲಿ ಮಹಿಳೆಯ ಪಾತ್ರ ಎಷ್ಟು ಗೌಣವಾಗಿದೆ ಎಂದರೆ ಈ ಮೀಸಲಾತಿಯೆಂಬ ನಾಟಕವೂ ಬೇಡ ಎಂದು ತಿರಸ್ಕರಿಸಬಾರದೇಕೆ ಎಂದನ್ನಿಸುತ್ತದೆ.

ಪಂಚಾಯತ್ ಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕೆಲವು ಕಡೆ ಅರ್ಥಪೂರ್ಣವಾಗಿದೆ ಎಂದು ಓದಿ ಬಲ್ಲೆ.. ಆದರೆ ಸಂಖ್ಯೆ ತುಂಬಾ ಕಡಿಮೆ.

ಪುರುಷ ಪ್ರಾಧಾನ್ಯದ ವಿರುದ್ಧ ದನಿಯೆತ್ತಿದರೆ ಇಂದಿರಾಗಾಂಧಿ, ಜಯಲಲಿತಾ, ಮಮತಾ ಬ್ಯಾನರ್ಜಿ ಎಂದು ಮೂರು ಮತ್ತೊಂದು ಹೆಸರುಗಳನ್ನು ಉದ್ಧರಿಸಿ ಬಾಯಿ ಮುಚ್ಚಲು ಪ್ರಯತ್ನಿಸುತ್ತಾರೆ. ಉದಾಹರಣೆಗಳು ಅಪವಾದಗಳಷ್ಟೇ (exceptions). ಈ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ. ಪ್ರಾಮಾಣಿಕ ಪ್ರಯತ್ನವಾಗಬೇಕಿದೆ.

ಮಹಿಳೆಯರಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಕ್ಕಿದಾಕ್ಷಣ ಮಹಿಳೆಯರ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ, ಮಹಿಳಾ ನಾಯಕಿಯರು ಮಹಿಳಾಪರ ಧೋರಣೆ ಉಳ್ಳವರೇ ಆಗಿರುತ್ತಾರೆ ಎಂದು ಕೂಡ ಹೇಳಲಾಗುವುದಿಲ್ಲ.

ಪುರುಷರು, ಮಹಿಳೆಯರು ಎಂದು ಬೇಧ ಎಣಿಸದೆ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸಿದರೆ ಮಹಿಳೆಯರಿಗೆ ಮೀಸಲಾತಿ ಬೇಕು ಎಂಬ ವಿಚಾರವೇ ನಗಣ್ಯವಾಗುತ್ತದೆ. ನಾಯಕರು ಎಂದ ಮೇಲೆ ಅವರು ಮಹಿಳೆಯರನ್ನು, ಪುರುಷರನ್ನು, ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಬೇಕು. ಲಿಂಗ ತಾರತಮ್ಯವಿಲ್ಲದೇ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇತಿಹಾಸ ಗಮನಿಸಿದರೆ ಮಹಿಳೆಯರ ಸಮಸ್ಯೆಗೆ ಸ್ಪಂದಿಸಿದ ಧೀಮಂತ ನಾಯಕರು ಕಂಡುಬರುತ್ತಾರೆ. ಮಹಿಳಾ ಅಥವಾ ಪುರುಷ ನಾಯಕರು ಹೆಚ್ಚು ಸಂವೇದನಾಶೀಲರಾಗಬೇಕು.

Leave a Reply