ಇದೊಳ್ಳೆ ಟ್ರಾಜಿಡಿ! ಈ ದೇವರ ದೂತರನ್ನು ಕಾಮಿಡಿ ಮಾಡಿದ್ರೆ ಧಾರ್ಮಿಕ ಭಾವನೆಗೆ ಘಾಸಿಯಾಗುತ್ತಂತೆ!

ಡಿಜಿಟಲ್ ಕನ್ನಡ ಟೀಮ್

ಕಾಮೆಡಿ ನೈಟ್ಸ್ ವಿಥ್ ಕಪಿಲ್ಸ್ ಎಂಬ ಕಾರ್ಯಕ್ರಮ ನೋಡಿದವರೆಲ್ಲ ಅಲ್ಲೊಂದು ಬಜಾರಿ ಹಿರಿ ಹೆಂಗಸಿನ ಪಾತ್ರ ನೋಡಿಯೇ ಇರುತ್ತೀರಿ. ಆ ಪಾತ್ರ ಮಾಡುತ್ತಿದ್ದ ಕಿಕು ಶರ್ದಾ ಎಂಬ ಕಾಮೆಡಿಯನ್ ಅನ್ನು, ಧಾರ್ಮಿಕ ಭಾವನೆಗಳಿಗೆ ಅಡ್ಡಿ ಮಾಡಿದ ಆರೋಪದ ಮೇಲೆ 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಇವರು ಮಾಡಿದ ಅಪರಾಧ? ಗುರುಮೀತ್ ರಾಮ್ ರಹೀಮ್ ಸಿಂಗ್ ಎಂಬ ಧಾರ್ಮಿಕ ವ್ಯಕ್ತಿ ಮೇಲೆ ಮಿಮಿಕ್ರಿ ಮಾಡಿದ್ದು!

kiku

ಯಾರನ್ನೋ ಮಿಮಿಕ್ರಿ ಮಾಡಿದರೆ ಅವರಿಗೆ ನೋವಾಗುತ್ತದೆ ಎಂಬ ವಾದವನ್ನು ಒಪ್ಪಬಹುದೇನೋ. ಆದರೆ ಆ ವ್ಯಕ್ತಿಯನ್ನು ಅನುಕರಿಸಿ ಹಾಸ್ಯ ಮಾಡುವುದರಿಂದ ಒಂದು ಧಾರ್ಮಿಕ ಗುಂಪಿಗೆ ನೋವಾಗುತ್ತದೆ ಎಂಬ ಕಾನೂನು ಮಾತ್ರ ಓಬಿರಾಯನ ಕಾಲದ್ದು. ಇಂಡಿಯನ್ ಪಿನಲ್ ಕೋಡ್ 295ಎ ಎಂಬುದು ಧಾರ್ಮಿಕ ಭಾವನೆಗಳಿಗೆ ಹಾನಿ ಅಂತ ಯಾರನ್ನಾದರೂ ಒಳಗೆ ಹಾಕುವುದಕ್ಕೆ ಬಳಸಿಕೊಳ್ಳಬಹುದಾದ ಅಸ್ತ್ರ.

ಹೀಗೆ ಧಾರ್ಮಿಕ ಭಾವನೆ ಘಾಸಿ ಎನ್ನುವ ಗುರುಮೀತರ ಅನುಯಾಯಿಗಳಿಗೆ ತಮ್ಮ ಗುರುಗಳ ನಡೆಯಿಂದ ಧರ್ಮಕ್ಕೆ ಹಾನಿ ಆಗಿಲ್ಲವೇ ಎಂಬ ಜಿಜ್ಞಾಸೆ ಏಳದಿರುವುದೇ ಆಶ್ಚರ್ಯ. ಏಕೆಂದರೆ ‘ಮೆಸೆಂಜರ್ ಆಫ್ ಗಾಡ್’ ಎಂಬ ಸಿನಿಮಾ ಮಾಡಿ ಅದರಲ್ಲಿ ಹೀರೋ ಗುರುಮೀತರು ಆನೆ- ವಾಹನಗಳನ್ನೆಲ್ಲ ಎತ್ತೆತ್ತಿ ಒಗೆಯುವ, ರೋಹಿತ್ ಶೆಟ್ಟಿ ಮಾದರಿಯ ಸಾಹಸಗಳಲ್ಲಿ ತಮ್ಮನ್ನು ಬಿಂಬಿಸಿಕೊಂಡಿದ್ದರು. ಸೀರಿಯಸ್ಸಾಗಿ ಧರ್ಮ ಪ್ರವಚನ ಮಾಡಬೇಕಾದ ಗುರುವರ್ಯರು ಹಿಂಗೆಲ್ಲ ಫನ್ನೀ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋದು ಧರ್ಮನಿಂದೆಯೋ, ದೇವನಿಂದೆಯೋ ಆಗದೇ?

ಇವೆಲ್ಲದರ ಉಸಾಬರಿ ಬೇಡ ಅಂತ ಕಿಕು ಶರ್ದಾ ಕ್ಷಮೆ ಕೇಳಿದ್ದಾರೆ. ಆದರೆ ಉಳಿದೇ ಹೋಗಿರುವ ಪ್ರಶ್ನೆ- ಈ ದೇಶದಲ್ಲಿ ಸಂವಾದಗಳ ಕತೆ ಹಾಗಿರಲಿ, ಕಾಮಿಡಿ ಮಾಡಿದರೂ ಎಂಥೆಂಥವರಿಗೆಲ್ಲ ಘಾಸಿ ಆಗಿಬಿಡುತ್ತದಲ್ಲ? ಇದಲ್ಲವೇ ಟ್ರಾಜಿಡಿ ಅಂದ್ರೆ?

ಟ್ವಿಟರ್ ನಲ್ಲಿ ಲೆಫ್ಟ್- ರೈಟ್ ಗಳ ಬಣ ಭಿನ್ನತೆ ಇಲ್ಲದೇ ಈ ವಿದ್ಯಮಾನವನ್ನು ಬಹುತೇಕರು ಖಂಡಿಸಿದ್ದಾರೆ. ಧಾರ್ಮಿಕ ಭಾವನೆಗೆ ಘಾಸಿ ಎಂಬ ಕಾರಣ ನೀಡಿ ಕಿರಿಕಿರಿ ಕೊಡಬಹುದಾದ ಈ ಹಳೇ ಕಾನೂನು ತೊಲಗೋದ್ಯಾವಾಗ ಎಂಬ ಪ್ರಶ್ನೆ ಎದ್ದಿದೆ. ಎಐಬಿಯಂಥ ಕಾಮಿಡಿ ಕಂಪನಿಗಳು ಈ ಕಾಯ್ದೆಯ ಬದಲಾವಣೆಗೆ ಮುಂಚೂಣಿಯಲ್ಲಿ ನಿಂತು ಆಗ್ರಹಿಸುತ್ತಿವೆ.

Leave a Reply