ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ; ಸಿಎಂ, ಹೋಮ್ ನಡುವೆ ಕ್ಲಾರಿಟಿ ಇಲ್ಲಾರಿ!

ಡಿಜಿಟಲ್ ಕನ್ನಡ ಟೀಮ್

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಹೊಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ.

ಬಂದರು ಸಚಿವ ಅಭಯಚಂದ್ರ ಜೈನ್ ಅವರು ಈವರೆಗೂ ಚಿಕ್ಕಮಗಳೂರು ಜಿಲ್ಲೆ ಉಸ್ತುವಾರು ಸಚಿವರಾಗಿದ್ದರು. ಅವರು ಈ ಹುದ್ದೆ ಬೇಡ ಎಂದ ಹಿನ್ನೆಲೆಯಲ್ಲಿ ಪರಮೇಶ್ವರ ಅವರಿಗೆ ಈ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರು ಜ. 12 ರಂದು ವಹಿಸಿದ್ದರು. ಆದರೆ ಈ ಹುದ್ದೆ ನಿರ್ವಹಣೆ ತಮಗೆ ಸಾಧ್ಯವಿಲ್ಲ ಎಂದು ಪರಮೇಶ್ವರ್ ಹೇಳಿದ್ದು, ಗೊಂದಲ ಸೃಷ್ಟಿಯಾಗಿದೆ.

ಮಿನಿ ವಿಧಾನಸಭಾ ಚುನಾವಣೆ ಎಂದೇ ಪರಿಗಣಿಸಲಾಗುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ ಸದ್ಯದಲ್ಲೇ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ತಮ್ಮ ಜವಾಬ್ದಾರಿ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ನಿಭಾಯಿಸುವುದು ಕಷ್ಟ. ಇದನ್ನು  ಮುಖ್ಯಮಂತ್ರಿ ಅವರಿಗೆ ತಿಳಿಸುವುದಾಗಿ ಪರಮೇಶ್ವರ್ ಬೆಂಗಳೂರಲ್ಲಿ ಬುಧವಾರ ತಿಳಿಸಿದರು.

ಆದರೆ ಸಚಿವ ಪರಮೇಶ್ವರ್ ಅವರೊಂದಿಗೆ ಚರ್ಚಿಸಿಯೇ ಅವರಿಗೆ ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿಯನ್ನು ವಹಿಸಲಾಗಿದೆ. ಇದರಲ್ಲಿ ಯಾವುದೇ ವಿವಾದ ಇಲ್ಲ ಎಂದು ಎಂದು ಸಿದ್ದರಾಮಯ್ಯ ಅವರು ಬೆಂಗಳೂರಲ್ಲಿ ಪ್ರತ್ಯೇಕ ಸಂದರ್ಭದಲ್ಲಿ ಹೇಳಿದ್ದಾರೆ. ಯಾರು ಏನೇ ಹೇಳಲಿ, ಈ ವಿಚಾರದಲ್ಲಿ ಗೊಂದಲ ಇರುವುದನ್ನು ಇವರಿಬ್ಬರ ಮಾತಂತೂ ದೃಢಪಡಿಸಿದೆ.

Leave a Reply