ಜೈಷೆ ಉಗ್ರ ಮಸೂದ್ ವಿಚಾರಣೆ, ಬದಲಾಯ್ತೇ ಪಾಕಿಸ್ತಾನ?… ಸುದ್ದಿಸಂತೆಯ ಚೂರುಪಾರು

ಪಾಕಿಸ್ತಾನ ಸರ್ಕಾರ ತನ್ನದೇ ಪರಿಮಿತಿಯಲ್ಲಿ ಈ ಹಿಂದಿಗಿಂತ ಸ್ವಲ್ಪ ಬದಲಾಗಿದೆಯೇ? ಜೈಷೆ ಸಂಘಟನೆಯ ಪ್ರಮುಖ ಮೌಲಾನಾ ಮಸೂದ್ ನನ್ನು ಬುಧವಾರ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳುವ ಮೂಲಕ ಇಂಥದೊಂದು ಸೂಚನೆ ನೀಡಿದೆ.

ಪಠಾಣ್ ಕೊಟ್ ವಾಯುನೆಲೆ ಮೇಲೆ ದಾಳಿಗೆ ಸಂಬಂಧಿಸಿ ಭಾರತವು ನೀಡಿದ್ದ ಸಾಕ್ಷ್ಯಗಳನ್ನು ಪರಿಗಣಿಸಿ, ಶಂಕಿತ ಜೈಷ್ ಇ ಮಹಮದ್ ಉಗ್ರ ಸಂಘಟನೆಯ ಮಾಸ್ಟರ್ ಮೈಂಡ್ ಸೇರಿದಂತೆ 10 ಉಗ್ರರನ್ನು ಪಾಕಿಸ್ತಾನ ವಶಕ್ಬಂಕೆ ತೆಗೆದುಕೊಂಡಿದೆ. ಸಂಘಟನೆಯ ಕಚೇರಿಗೆ ಬೀಗ ಜಡಿದು ಮುದ್ರೆ ಹಾಕಿದ್ದಾರೆ. ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವುದಕ್ಕಾಗಿ ಭಾರತ ಬಿಡುಗಡೆ ಮಾಡಿದ್ದ ಉಗ್ರನೇ ಈ ಮೌಲಾನಾ ಮಸೂದ್ ಅಜರ್. ಇಂಥವನನ್ನು ವಿಚಾರಣೆಗೆ ಒಳಪಡಿಸುವ ಮೂಲಕ ಪಾಕಿಸ್ತಾನವು ತಾನು ತುಸುವಾದರೂ ಬದಲಾಗಿರುವುದು ಹೌದು ಎಂಬ ಸಂದೇಶವೊಂದನ್ನು ನೀಡುತ್ತಿದೆ. ಇದರಲ್ಲಿ ಭಾರತದ ರಾಜತಾಂತ್ರಿಕತೆ, ಅಮೆರಿಕದ ಒತ್ತಡ ಎರಡೂ ಕೆಲಸ ಮಾಡಿದ್ದಿರಬಹುದು. ಈ ಹಿಂದೆ ಮುಂಬಯಿ ದಾಳಿ ನಡೆದಾಗ ಭಾರತ ನೀಡಿದ್ದ ಸಾಕ್ಷ್ಯಗಳನ್ನು ಪರಿಶೀಲಿಸುವುದಕ್ಕೇ ನಕಾರ ಮನಸ್ಥಿತಿ ತೋರಿದ್ದ ಪಾಕಿಸ್ತಾನ ಈಗ ಇಷ್ಟರಮಟ್ಟಿಗೆ ಬದಲಾಗಿರುವುದಂತೂ ವೇದ್ಯ.

ಇದೀಗ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪಾಕ್ ಸರಕಾರ ಎಸ್.ಐ.ಟಿ ತಂಡವನ್ನು ಭಾರತಕ್ಕೆ ಕಳುಹಿಸಲಿದೆ.

ಮ್ಯಾಗಿ- ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್

ಮ್ಯಾಗಿಯ ನ್ಯೂಡಲ್ಸ್ ನಲ್ಲಿ ನ ಸೀಸ ಮತ್ತು ಗ್ಲುಟಮಿಕ್ ಆಸಿಡ್ ಸಂಬಂಧಿಸಿ ನೀಡಿರುವ ವರದಿಯ ಅಂಶಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಮೈಸೂರಿನ ಸರ್ಕಾರಿ ಪ್ರಯೋಗಾಲಯಕ್ಕೆ ಸುಪ್ರಿಂ ಕೋರ್ಟ್ ಬುಧವಾರ ಆದೇಶಿದೆ.

ಮ್ಯಾಗಿಯಲ್ಲಿ ಸೀಸ ಮತ್ತು ಗ್ಲುಟಮಿಕ್ ಆಸಿಡ್ ಅಪಾಯ ಮಟ್ಟ ಮೀರಿಲ್ಲ ಎಂದು ಸಂಸ್ಥೆಯು ವರದಿ ಕೊಟ್ಟಿರುವುದಾಗಿ ಮ್ಯಾಗಿಯ ಉತ್ಪಾದಕರಾದ ನೆಸ್ಲೆ ಕಂಪನಿ ಹೇಳಿಕೊಂಡಿದ್ದರೆ, ಕೇಂದ್ರ ಸರ್ಕಾರ ಮಾತ್ರ ಈ ವರದಿಯನ್ನು ಕೂಲಂಕಷವಾಗಿ ಅಭ್ಯಸಿಸಿದ ನಂತರವಷ್ಟೇ ತೀರ್ಮಾನಕ್ಕೆ ಬರಲು ಸಾಧ್ಯ ಎಂದಿತ್ತು. ಈ ಬಗೆಯ ದ್ವಂದ್ವಗಳು ಇರುವುದರಿಂದ ನ್ಯಾಯಾಲಯ ಸ್ಪಷ್ಟನೆ ಕೇಳಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 5 ಕ್ಕೆ ಮುಂದೂಡಿದೆ.

ಕೇಂದ್ರದ ಹೊಸ ಬೆಳೆ ವಿಮೆ ಯೋಜನೆ

ಹೊಸ ಬೆಳೆ ವಿಮೆ ಯೋಜನೆಗೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿ ಜಾರಿಗೆ ತಂದಿದೆ. ಇದರಿಂದ ರೈತರು ಕಡಿಮೆ ಪ್ರೀಮಿಯಮ್ ಮೊತ್ತ ನೀಡಿ ನಿಗದಿತ ಪೂರ್ಣ ವಿಮೆಯನ್ನು ಪಡೆಯಬಹುದಾಗಿದೆ. ಈ ಹಿಂದೆ ಇದ್ದ ಹಳೆ ಬೆಳೆ ವಿಮೆ ಯೋಜನೆಯನ್ನು ಬದಲಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ.

ಈ ನೂತನ ಕೃಷಿ ವಿಮಾ ಯೋಜನೆಯಿಂದ ದೇಶದಲ್ಲಿ ಬರ ಪರಿಸ್ಥಿತಿ ಉಂಟಾದಾಗ ಬೆಳೆಗಳು ನಾಶವಾದರೂ ರೈತರು ಸುರಕ್ಷಿತರಾಗುತ್ತಾರೆ. ಕೃಷಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಸಂಸತ್ ಸಭೆ ಒಪ್ಪಿಗೆ ಸೂಚಿಸಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ (ಎನ್.ಎ.ಐ.ಎಸ್) ಯನ್ನು ಪ್ರಧಾನ್ ಮಂತ್ರಿ ಪಸಲ್ ಭೀಮಾ ಯೋಜನ (ಪಿ.ಎಂ.ಎಫ್,ಬಿ,ವೈ) ಎಂಬುದಾಗಿ ಬದಲಾಯಿಸಲಾಗಿದೆ.

ಧಾನ್ಯ ಮತ್ತು ತೈಲದ ಬೆಳೆಗಳಿಗೆ ಶೇ 1.5 ರಿಂದ 2 ರಷ್ಟು ಹಾಗೂ ತೋಟಗಾರಿಕಾ ಮತ್ತು ಹತ್ತಿ ಬೆಳೆಗಳಿಗೆ ಶೇ 5 ರವರೆಗೆ ವಿಮೆಯ ಕಂತನ್ನು ಪಾವತಿ ಮಾಡಲು ಅವಕಾಶವಿದೆ. ಇದೇ ವೇಳೆ ವಿಮೆಗೆ ಒಳಪಡುವ ಪ್ರದೇಶವನ್ನು ಶೇ 50 ರಷ್ಟು ವಿಸ್ತಾರ ಮಾಡಲಾಗಿದ್ದು ಒಟ್ಟು 194.40 ಮಿಲಿಯನ್ ಹೆಕ್ಟೇರ್ ಗೆ ಹೆಚ್ಚಿಸಲಾಗಿದೆ. ಈ ಯೋಜನೆಗೆ 9500 ಕೋಟಿ ರು ವ್ಯಯವಾಗಲಿದೆ ಎಂದು ಅಂದಾಜಿಸಲಾಗಿದೆ. ಖಾಸಗಿ ಬ್ಯಾಂಕ್ ಗಳು ಸಹ ಈ ಯೋಜನೆಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದೆ.

Leave a Reply