ಪರಿಶಿಷ್ಟರಿಗೆ ಕೊಳವೆಬಾವಿ, ಹಸಿರು ಮನೆಗೆ ಕೃಷಿಭಾಗ್ಯ ಯೋಜನೆ ಅನುದಾನ

 

ಡಿಜಿಟಲ್ ಕನ್ನಡ ಟೀಮ್

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೊಳವೆ ಬಾವಿ ಕೊರೆಸಲು ಮತ್ತು ಹಸಿರು ಮನೆ ನಿರ್ಮಿಸಲು ಕೃಷಿ ಭಾಗ್ಯ ಯೋಜನೆಯಿಂದ ಅನುದಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಈ ವರ್ಗದ ಕಾಲೋನಿಗಳಲ್ಲಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ವರದಿ ನೀಡುವಂತೆ ವಿಧಾನ ಸೌಧದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ವಸತಿ ನಿಲಯ ನಿರ್ವಹಣೆಗೆ 750 ಕೋಟಿ ರೂ. ಪ್ರತ್ಯೇಕ ಅನುದಾನ ಮೀಸಲಿಟ್ಟಿದ್ದರೂ ಆ ವಸತಿ ನಿಲಯಗಳ ಸ್ಥಿತಿ ಚಿಂತಾಜನಕವಾಗಿದೆ. ಇವುಗಳ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು ಯಾರು, ಅವರಿಗೇನಾದರೂ ಮಾನವೀಯತೆ ಇದೆಯೇ ನಾಲ್ಕು ಗೋಡೆ ಬಿಟ್ಟು, ಹೊರಗಿನ ಪ್ರಪಂಚ ನೋಡಿದರೆ ವಸತಿ ನಿಲಯಗಳ ದುಸ್ಥಿತಿ ಮನದಟ್ಟಾಗುತ್ತದೆ. ಡಿಸೆಂಬರ್ ಅಂತ್ಯದವರೆಗೆ ಶೇಕಡಾ 40 ರಷ್ಟು ಅನುದಾನ ಮಾತ್ರ ಖರ್ಚಾಗಿದೆ. ಇನ್ನೆರಡು ತಿಂಗಳಲ್ಲಿ ಉಳಿದ ಹಣ ಹೇಗೆ ವೆಚ್ಚ ಮಾಡುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪರಿಶಿಷ್ಟ ಜಾತಿ, ಪಂಗಡ ಯೋಜನೆಗೆ ನಿಗದಿಪಡಿಸಿರುವ ಹಣವನ್ನು ಮಾರ್ಚ್ ಅಂತ್ಯದೊಳಗೆ ಬಳಕೆ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಹಣವನ್ನು ನಿಗದಿತ ಸಮಯದೊಳಗೆ ಬಳಕೆ ಮಾಡದಿರುವ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಸಿದರು.

Leave a Reply