ಸೋಷಿಯಲ್ ಮೀಡಿಯಾ ಮಾನವತೆಯನ್ನು ಬೆಸೆಯುತ್ತಿದೆ ಅಂತ ಸಾರುತ್ತಿರುವ ಬೆಂಗಳೂರಿನ ಒಂದು ಫೋಟೋ ಹಾಗೂ ಪಾಕಿಸ್ತಾನದ ಒಂದು ವಿಡಿಯೊ!

ಡಿಜಿಟಲ್ ಕನ್ನಡ ಟೀಮ್

ಫೇಸ್ಬುಕ್, ವಾಟ್ಸ್ ಆ್ಯಪ್ ನಂಥ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುವ ಹಲವರಿಗೆ, ಮಹಿಳೆಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿರುವ ಚಿತ್ರ ನೋಡಿರುವ ನೆನಪು ಮಾಸಿರಲಿಕ್ಕಿಲ್ಲ. ಕೆಲವು ದಿನಗಳ ಹಿಂದೆ ಗ್ರೂಪ್ ನಿಂದ ಗ್ರೂಪ್ ಗೆ ದಾಟುತ್ತ, ಫೇಸ್ಬುಕ್ ನಲ್ಲಿ ಹಂಚಿಕೆ ಆಗುತ್ತ, ಮಹಿಳೆಯ ಪರಿಚಿತರು ಯಾರಾದರೂ ಇದ್ದರೆ ಗುರುತಿಸಿ ಎಂಬ ಕೋರಿಕೆ ಹೊತ್ತಿತ್ತು.

lady

ಸಾಮಾಜಿಕ ಮಾಧ್ಯಮದ ಆ ಪ್ರಯತ್ನ ಸಫಲವಾಯಿತು. ಮಹಿಳೆಯ ಪತಿ, ಶ್ಯಾಮ್ ಅತ್ತಂಗಡಿ ಅವರು ಸಾಮಾಜಿಕ ತಾಣಗಳ ಮಾಹಿತಿ ಆಧಾರದಲ್ಲೇ ಬೌರಿಂಗ್ ಆಸ್ಪತ್ರೆಗೆ ಬಂದು, ಜ. 4ರಂದು ಕಳೆದುಹೋಗಿದ್ದ ತಮ್ಮ ಹೆಂಡತಿಯನ್ನು ಸಂಧಿಸಿ, ಮತ್ತೆ ಕರೆದೊಯ್ಯುವುದಕ್ಕೆ ಅನುವಾಯ್ತು.

ಶ್ಯಾಮ್ ಪತ್ನಿ ಜಯಾ ಅವರು ಜ. 4ರಂದು ಬೆಳಗಿನ ವಾಯುವಿಹಾರಕ್ಕೆ ಹೋಗಿದ್ದರು. ಎಚ್ ಎ ಎಲ್ ವಿಮಾನ ನಿಲ್ದಾಣದತ್ತ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರಾದರೂ ನಂತರ ಹೆಬ್ಬಾಳ ಕೆರೆ ಹತ್ತಿರ ಮಾರ್ಗ ಬದಲಿಸಿದರು. ಆ ಮಾರ್ಗದಲ್ಲೇ ಅವರು ಎಚ್ಚರದಪ್ಪಿ ಬಿದ್ದುಬಿಟ್ಟರು. ಆಟೊ ಚಾಲಕರ ಸಹಾಯದಿಂದ ಇನ್ನಿಬ್ಬರು ಅವರನ್ನು ಬೌರಿಂಗ್ ಆಸ್ಪತ್ರೆಗೆ ಸೇರಿಸಿದ್ದರು. ಇವರು ಯಾರು- ಎತ್ತ ಎಂಬುದು ಬಗೆಹರಿದಿರಲಿಲ್ಲ. ಇತ್ತ ಅವರ ಪತಿ ಶ್ಯಾಮ್, ವಿಮಾನ ನಿಲ್ದಾಣದ ಪೋಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು. ಜನವರಿ 6ರಂದು ಶ್ಯಾಮ್ ಅವರಿಗೆ ಪರಿಚಿತರ್ಯಾರೋ ಕರೆ ಮಾಡಿ, ನಿಮ್ಮ ಪತ್ನಿಯ ಸುಳಿವು ಸಾಮಾಜಿಕ ತಾಣಗಳಿಂದ ಸಿಕ್ಕಿದೆ ಎಂದಾಗ ಆಸ್ಪತ್ರೆಗೆ ಧಾವಿಸಿದರು.

ಇದು ಬೆಂಗಳೂರಿನ ಕತೆಯಾದರೆ, ಪಾಕಿಸ್ತಾನದಲ್ಲಿ ಸಾಮಾಜಿಕ ತಾಣದ ‘ವೈರಲ್’ ಜಾಯಮಾನದಿಂದಾಗಿಯೇ ನಿರ್ಗತಿಕನೊಬ್ಬನಿಗೆ ವಸತಿ ಸಿಕ್ಕಿದೆ. ಪಾಕಿಸ್ತಾನದ ಕಿರುತೆರೆ ನಟ ಅಹ್ಸನ್ ಖಾನ್ ಅವರಿಗೆ ಲಾಹೋರ್ ನ ಬೀದಿಯಲ್ಲಿ ಚಿಂದಿಬಟ್ಟೆಯ ಹಿರಿಜೀವವೊಂದು ಎದುರಾಗುತ್ತದೆ. ಬದುಕಿನ ಯಾವುದೋ ದುರ್ಭರ ಗಳಿಗೆಯ ಹೊಡೆತಕ್ಕೆ ಸಿಕ್ಕು ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿರುವ ವ್ಯಕ್ತಿ ಆತ ಎಂಬುದು ಮಾತುಕತೆಯಲ್ಲಿ ತಿಳಿಯುತ್ತದೆ. ಏಕೆಂದರೆ ಈ ಅಜ್ಜನ ಇಂಗ್ಲಿಷು ಅದ್ಭುತ ಎಂಬಂತೆ ಇದೆ. ಕೇವಲ ಇಂಗ್ಲಿಷು ಬರುತ್ತದೆ ಎಂಬುದಕ್ಕಿಂತ ಬದುಕಿನ ಬಗ್ಗೆ ಅವರ ಸಹ್ಯ ದೃಷ್ಟಿಕೋನ, ಸಕಾರಾತ್ಮಕ ನೋಟ ಎಂಥವರನ್ನೂ ತಾಗಿಬಿಡುತ್ತದೆ.

ಭಿಕ್ಷುಕ ಸ್ಥಿತಿಯಲ್ಲಿದ್ದೂ ಯಾವುದೇ ದೈನ್ಯವಿಲ್ಲದೇ, ಹಾಗಂತ ಆಕ್ರೋಶ- ಅಹಂಕಾರಗಳೂ ಇಲ್ಲದೇ ಆತ ತನ್ನ ಸಮಸ್ಯೆ ಹೇಳಿಕೊಳ್ಳುವುದನ್ನು ಕೇಳಬೇಕು. ‘ನನಗೆ ಏನಾದರೂ ಕೆಲಸ ಕೊಡಿ. ಕಂಪ್ಯೂಟರ್ ಬಗ್ಗೆ ಎಲ್ಲ ನಂಗೆ ಗೊತ್ತಿಲ್ಲ. ಆದ್ರೆ ಆಫೀಸ್ ಸಹಾಯಕ, ಏನಾದರೂ ತಂದುಕೊಡೋದು.. ಈ ಥರದ್ದು ಏನೇ ಆಗಿರಬಹುದು.. ಒಂದೂವರೆ ವರ್ಷದಿಂದ ಈ ಸ್ಥಿತಿಯಲ್ಲಿದ್ದೇನೆ. ಯಾರೋ ಪುಣ್ಯಾತ್ಮರು ಅವರ ಖಾಲಿ ಜಾಗದಲ್ಲಿ ನಂಗೆ ಮಲಗೋಕೆ ಬಿಟ್ಟಿದ್ದಾರೆ. ಅಲ್ಲಿ ಚಳಿಗಾಳಿ ಎಲ್ಲ ಕಡೆಯಿಂದಲೂ ಬೀಸುತ್ತೆ. ನಿನ್ನೆ ರಾತ್ರಿ ಪುಕ್ಕಟೆ ಸ್ನಾನವಾಯ್ತು…ಹಹ್ಹಹ್ಹಾ… ಪುಕ್ಕಟೆ ಅಂದ್ರೆ ಪೂರ್ತಿ ಪುಕ್ಕಟೆ.. ನಮಗೆ ಆಯ್ಕೆಗಳಿಲ್ಲ ಸರ್. ಮುಂದಿನ ಕ್ಷಣದಲ್ಲಿ ಏನಾಗುತ್ತೆ ಅಂತ ಗೊತ್ತಿರಲ್ಲ. ಆದರೆ ಈ ಕ್ಷಣದಲ್ಲಿ ನಾನು ಬದುಕುತ್ತಿರಬೇಕಾದ್ರೆ ಮುಂದೇನಾಗುತ್ತೆ ಅಂತ ತಲೆ ಕೆಡಿಸಿಕೊಳ್ಳಬೇಕಾಗಿಯೂ ಇಲ್ಲ ಅಲ್ವಾ? ನಾನು ಯಾರಿಗೂ ಕೆಟ್ಟದ್ದು ಮಾಡಲಿಲ್ಲ… ಆದ್ರೂ ಹಿಂಗೇಕಾಯ್ತು? ಬಹುಶಃ ಟೈಮ್ ಇರ್ಬೇಕು, ಏನೋ ಗೊತ್ತಿಲ್ಲ ಬಿಡಿ.’ ಹೀಗೆಲ್ಲ ಮಾತಾಡುತ್ತ ತನ್ನ ಇಡೀ ಸಂಸಾರ ಅಪಘಾತದಲ್ಲಿ ಸತ್ತಿದ್ದು, ಮಧ್ಯಪ್ರಾಚ್ಯದಲ್ಲಿ ದುಡಿದಿದ್ದನ್ನೆಲ್ಲ ತನ್ನವರ ಮೋಸದಿಂದ ಕಳೆದುಕೊಂಡಿದ್ದು ಇದನ್ನೆಲ್ಲ ಯಾವ ಏರಿಳಿತಗಳಿಲ್ಲದೆ ಸ್ಫುಟವಾದ ಇಂಗ್ಲಿಷಿನಲ್ಲಿ ಈ ಅಜ್ಜ ಹೇಳುತ್ತಿರುವುದನ್ನು ವಿಡಿಯೋ ಮಾಡಿ, ‘ವೈರಲ್ ಇನ್ ಪಾಕಿಸ್ತಾನ್’ ಜಾಲತಾಣ ಮತ್ತು ಫೇಸ್ಬುಕ್ ಪುಟಗಳಲ್ಲಿ ಬಿಟ್ಟಿದ್ದರು ಅಹ್ಸನ್ ಖಾನ್. ಜಗತ್ತಿನ ಜಾಲಿಗರೆಲ್ಲ ಹಿತವಾಗಿ ಕಂಪಿಸಿಬಿಟ್ಟರು. ಪಾಕಿಸ್ತಾನದ ಜಾಲಿಗರಂತೂ ತಮ್ಮ ಕೈಲಾದ್ದನ್ನು ಮಾಡುತ್ತೇವೆಂದು ಮುಂದೆ ಬಂದರು. ಸದ್ಯ, ಅಜ್ಜನಿಗೆ ಮಹಿಳೆಯೊಬ್ಬರು ಕೆಲಸ- ಗೌರವದ ಬದುಕು ಕಲ್ಪಿಸಿದ್ದಾರೆ ಅಂತ ಜ. 7ಕ್ಕೆ ಅಹ್ಸನ್ ಅಪಡೇಟ್ ಮಾಹಿತಿ ಹಂಚಿಕೊಂಡಿದ್ದಾರೆ.

Leave a Reply