ಟಕ ಟಕ ಸಾಗ್ತಿರೋ ಬದುಕಿನಲ್ಲಿ 5 ನಿಮಿಷ ಬಿಡುವು ಮಾಡಿಕೊಂಡು ನೋಡಬೇಕಾದ ಕಲ್ಕಿ ಕೊಚ್ಲಿನ್ ಅವರ ವಿಡಿಯೋ ಕವಿತೆ

 

ಡಿಜಿಟಲ್ ಕನ್ನಡ ಟೀಮ್

ಹಿಂದಿ ಸಿನಿಮಾ ನೋಡುಗರಿಗೆ ಹಾಗೂ ರಾಷ್ಟ್ರೀಯ ಸ್ತರದಲ್ಲಿ ರಂಗಭೂಮಿ ಪರಿಚಯ ಇರುವವರಿಗೆ ಕಲ್ಕಿ ಕೊಚ್ಲಿನ್ ಪರಿಚಯವನ್ನೇನೂ ಹೇಳಬೇಕಿಲ್ಲ. ‘ಜಿಂದಗಿ ನ ಮಿಲೇಂಗೆ ದುಬಾರಾ’, ‘ಯೇ ಜವಾನಿ ಹೇ ದಿವಾನಿ’ಯಂಥ ಜನಪ್ರಿಯ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಕಲ್ಕಿ, ‘ದ್ಯಾಟ್ ಗರ್ಲ್ ಇನ್ ಯೆಲ್ಲೊ ಬೂಟ್’, ‘ಮಾರ್ಗರಿಟಾ ವಿತ್ ಅ ಸ್ಟ್ರಾ’ ಇಂಥ ಕಲಾತ್ಮಕ ಚಿತ್ರಗಳಲ್ಲೂ ಅಭಿನಯಿಸಿದವರು, ಚಿತ್ರಕತೆ- ನಾಟಕ ರಚನೆ ಹೀಗೆಲ್ಲ ಭಿನ್ನ ಆಯಾಮಗಳಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು.

ಅಂಥ ಕಲ್ಕಿ ಇಂಗ್ಲಿಷ್ ಕವಿತೆಯೊಂದನ್ನು ಬರೆದು, ಅಭಿನಯ- ಚಿತ್ರಿಕೆಗಳೊಂದಿಗೆ ವಿಡಿಯೋ ಪ್ರಸ್ತುತಿ ಮಾಡಿದ್ದಾರೆ. ‘ಬ್ಲಶ್’ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿರುವ ಐದು ನಿಮಿಷಗಳ ಈ ವಿಡಿಯೋ ಎರಡು ದಿನಗಳಲ್ಲಿ ಮೂರು ಲಕ್ಷ ಚಿಲ್ಲರೆ ಜನರನ್ನು ತಲುಪಿದೆ. ಇದರಲ್ಲಿ ಗಮನ ಸೆಳೆಯುವ ಸಂಗತಿಗಳೆರಡು. ಪುರವಣಿ ಪುಟದಲ್ಲಿ ಕೆಲವೇ ಮಂದಿ ಓದಿ ಆಸ್ವಾದಿಸಬಹುದಾಗಿದ್ದ ಕವಿತೆಯೊಂದು ಬಹುಮಾಧ್ಯಮದಲ್ಲಿ ಹೇಗೆಲ್ಲ ಅರಳಿಕೊಳ್ಳುವ ಸಾಧ್ಯತೆ ಇದೆ ಎಂಬ ಅಚ್ಚರಿಯನ್ನು ಕಲ್ಕಿ ಕಟ್ಟಿಕೊಟ್ಟಿದ್ದಾರೆ. ಇನ್ನೊಂದು ಕವಿತೆಯ ವಸ್ತು.

‘ಪ್ರಿಂಟಿಂಗ್ ಮಷಿನ್’ ಅಂತ ಕವಿತೆ ಹೆಸರು. ‘ಟಕ್ ಟಕ್ ಟಕ ಟಕ ಟಕ್.. ಛಿರ್ರ್….’ ಅಂತ ಜಗತ್ತಿನ ಸಮಸ್ತ ಆಗುಹೋಗುಗಳನ್ನು ಆ ಯಂತ್ರ ಹೇಗೆ ಲಕ್ಷಾಂತರ ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ವಿದ್ಯಮಾನವಾಗಿ ಹಾಗೂ ಪಠ್ಯಗಳಲ್ಲಿ ಇತಿಹಾಸವಾಗಿ ಮುದ್ರಿಸುತ್ತಲೇ ಇದೆಯೋ ಅಂತೆಯೇ ನಾವು. ಅತ್ಯಾಚಾರ, ರಾತ್ರಿ ಹತ್ತಕ್ಕೆಲ್ಲ ಮನೆ ಸೇರಿಬಿಡು ಹುಡುಗಿ ಎಂಬ ಚೀತ್ಕಾರ ಇವೆಲ್ಲವನ್ನೂ ನಾವು ಟಕ್ ಟಕ್ ಟಕ ಟಕ ಟಕ್ ಎಂಬ ಧಾಟಿಯಲ್ಲೇ ನೋಡುತ್ತ, ಚಹಾದೊಂದಿಗೆ ಪುಟ ತಿರುಗಿಸುತ್ತೇವೆ… ಹಾಗೆ ಭಯಾನಕತೆ ಹೊದ್ದ ಪುಟಗಳಲ್ಲೇ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆಂಬುದನ್ನು ಸಾರುವ ಜಾಹೀರಾತುಗಳು. ಮುದ್ರಣ ಯಂತ್ರ ಮತ್ತು ನಮ್ಮ ಬದುಕು ಅದೇ ದೌಡಿನಲ್ಲಿ ಸಾಗ್ತಾನೇ ಇದೆ… ‘ಟಕ್ ಟಕ್ ಟಕ ಟಕ ಟಕ್…ಛಿರ್ರ್…’

Leave a Reply