ಮಿಮಿಕ್ರಿ ಮಾಡಿದ್ರೆ ಘಾಸಿಯಾಗುತ್ತೆ ಅನ್ನೋ ದುರ್ಬಲ ಹೃದಯಿಗಳು ನೋಡ್ಲೇಬಾರದ 3 ವಿಡಿಯೋಗಳು

ಡಿಜಿಟಲ್ ಕನ್ನಡ ಟೀಮ್

ಬಾಬಾ ರಾಮ್ ರಹೀಮ್ ಗುರುಮೀತ್ ಸಿಂಗ್ ಅವರನ್ನು ಮಿಮಿಕ್ರಿ ಮಾಡಿದ್ದಕ್ಕೆ ಧಾರ್ಮಿಕ ಭಾವನೆ ಧಕ್ಕೆ ಮೊಕದ್ದಮೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಕೀಕು ಶರ್ದಾರಿಗೆ ಜಾಮೀನು ಸಿಕ್ಕಿದೆ. ಬಾಬಾ ತಮ್ಮ ಒಂದು ಟ್ವೀಟ್ ನ ಮೂಲಕ, ‘ಕ್ಷಮೆ ಕೇಳಿರೋದಾದ್ರೆ ಬದುಕ್ಕೋ ಹೋಗು’ ಎಂಬರ್ಥದಲ್ಲಿ ದೇವರಿಗೆ ಮಾತ್ರ ಒಲಿಯಬಹುದಾದ ನಿರ್ಮೋಹ ಮನಸ್ಥಿತಿಯಲ್ಲಿ ಕ್ಷಮೆಯನ್ನೂ ಕರುಣಿಸಿದ್ದಾರೆ.

ಬೆಂಬಲಿಗ ಪಡೆ ಇರಿಸಿಕೊಂಡಿರುವ ಯಾರನ್ನಾದರೂ ದೇವಮಾನವರೆಂದು ಗಣಿಸಿ, ಧಾರ್ಮಿಕ ಭಾವನೆಗೆ ಘಾಸಿಯಾಗಿಬಿಡಬಹುದಾದ ಅವಕಾಶ ಮಾಡಿಕೊಟ್ಟಿರುವ ಕಾಯ್ದೆಗೆ ಸುಧಾರಣೆಯ ಸರ್ಜರಿ ಬೇಕು ಅಂತ ಧ್ವನಿ ಎದ್ದಿದೆ. ಅಂದಹಾಗೆ, ಬೇರೆ ಬೇರೆ ಕ್ಷೇತ್ರಗಳಲ್ಲಿರುವವರಿಗೂ ಭಕ್ತಕೋಟಿ- ಭಕ್ತರ ಕೋಟೆಗಳೆಲ್ಲ ಇವೆ. ಇವಕ್ಕೆಲ್ಲ ಘಾಸಿ ಮಾಡುವ ರೀತಿಯಲ್ಲಿ ಈ ಹುಲುಸದೃಶ ಕಾಮೆಡಿಯನ್ ಗಳು ಹೆಂಗೆಲ್ಲ, ಯಾರ ಮೇಲೆಲ್ಲ ಮಿಮಿಕ್ರಿ ಮಾಡಿದ್ದಾರೆ ಗೊತ್ತೇ? ನೋಡೋಣ ಬನ್ನಿ, ಘಾಸಿ ಹೃದಯದವರು ಇವನ್ನೆಲ್ಲ ನೋಡಿ ಕ್ರುದ್ಧರಾದರೆ ನಾವು ಜವಾಬ್ದಾರರಲ್ಲ ಎಂಬ ನಿರೀಕ್ಷಣಾ ಜಾಮೀನು ಅರ್ಜಿಯೊಂದಿಗೆ…

ಬಹಳ ಹಿಂದೆಯೇ ಹಾಸ್ಯಗಾರ ರಾಜು ಶ್ರೀವಾತ್ಸವ ಸೆಲೆಬ್ರಿಟಿಗಳನ್ನೆಲ್ಲ ಎದುರಿಗೇ ಕೂರಿಸಿಕೊಂಡು ಅವರ ಮೇಲೆ ಜೋಕು- ಮಿಮಿಕ್ರಿ ಮಾಡ್ತಿದ್ದರು. ಲಾಲು ಪ್ರಸಾದರನ್ನು ಎದುರಿಗೇ ಕೂರಿಸಿಕೊಂಡು ಮಿಮಿಕ್ರಿ ಮಾಡುತ್ತ ಹೇಳಿದ್ದರು- ‘ಲಾಲು ಅವರ ಕೊಡುಗೆ ಅಪಾರ. ನಮ್ಮ ದೇಶ 120 ಕೋಟಿ ಜನಸಂಖ್ಯೆ ಹೊಂದಿದೆ. ಈ ಸಂಖ್ಯೆಗೆ ಅತಿಹೆಚ್ಚು ಮಕ್ಕಳನ್ನು ಕೊಟ್ಟ ಖ್ಯಾತಿ ಲಾಲು ಅವರಿಗೆ ಸಲ್ಲಬೇಕು. ಇದಕ್ಕೆ ಅವರ ಪ್ರತಿಕ್ರಿಯೆ ಹೀಗಿದ್ದಿರಬಹುದು- ನೋಡಿ… ಇದರಲ್ಲಿ ಕಾಂಗ್ರೆಸ್ ಪಿತೂರಿ ಇದೆ! ಹೇಗೆ ಅಂತೀರಾ? ಕುಟುಂಬ ಯೋಜನೆ ತಂದವರು ಕಾಂಗ್ರೆಸ್ಸಿನವರು. ನಾನಾಗ ಪ್ರತಿಪಕ್ಷದಲ್ಲಿದ್ದೆ. ಆಡಳಿತ ಪಕ್ಷ ತಂದಿರುವುದನ್ನೆಲ್ಲ ವಿರೋಧಿಸಬೇಕಾದದ್ದು ನನ್ನ ಧರ್ಮವೇ ಆಗಿತ್ತು!’

—-

ಲೋಕಸಭೆ ಚುನಾವಣೆಗೆ ಪೂರ್ವದಲ್ಲಿ ಮೋದಿ, ರಾಹುಲ್, ಕೇಜ್ರಿವಾಲರನ್ನೆಲ್ಲ ಮಿಮಿಕ್ರಿ ಮಾಡಿದ್ದ ಹಾಸ್ಯಗಾರ ಸುನಿಲ್ ಪಾಲ್, ಆಗ ಮೋದಿ ಹೇಳುತ್ತಿದ್ದಿದ್ದನ್ನು ಮಿಮಿಕ್ರಿ ಮಾಡ್ತ ಹೇಳಿದ್ದು- ‘ಮಿತ್ರೋ… ಸೋನಿಯಾ ಹೇಳಿದ್ದೇನು? ನೌಕ್ರಿ ಕೊಡಿಸ್ತೇನೆ ಅಂತ. ನಿಮಗೆ ಕೊಡಿಸಿದ್ಲಾ ಮಿತ್ರೋನ್.. ನಾನು ನಿಮಗೆ ನೌಕರಿ ಕೊಡ್ತೇನೆ. ಅದಕ್ಕೂ ಮೊದ್ಲು ನಂಗೆ ಉನ್ನತ ನೌಕರಿ ನೀವು ಕೊಡ್ಸಿ.’

ಜಾಕಿರ್ ನಾಯಕ್ ಹೆಸರು ಕೇಳಿಯೇ ಇರುತ್ತೀರಿ. ಅದೇ, ಮಂಗಳೂರಿಗೆ ಸದ್ಯಕ್ಕೆ ಬರೋದು ಬೇಡ ಅಂತ ಸ್ಥಳೀಯಾಡಳಿತ ತೀರ್ಮಾನ ಕೈಗೊಂಡಾಗ ಸುದ್ದಿಯಾದ ಮುಸ್ಲಿಂ ಧರ್ಮ ಉಪನ್ಯಾಸಕಾರರು. ಇವರಿಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ. ಕುರಾನ್ ಹಾಗೂ ಧರ್ಮಗ್ರಂಥಗಳ ಸಾಲುಗಳನ್ನೆಲ್ಲ ಉದ್ಧರಿಸುತ್ತ- ಪುಟಸಂಖ್ಯೆ, ಸ್ತ್ರೋತ್ರದ ಸಂಖ್ಯೆ ಎಲ್ಲವನ್ನೂ ಉಲ್ಲೇಖಿಸಿ ಮತ ಸಮರ್ಥನೆ ಮಾಡುವಲ್ಲಿ ಜಾಕೀರ್ ಸಿದ್ಧಹಸ್ತರು.

ಕೆಲದಿನಗಳ ಹಿಂದೆ ಇಂಗ್ಲೆಂಡ್ ನ ಕಾಮೆಡಿಯನ್ ಒಬ್ರು ಜಾಕಿರ್ ನಾಯಕ್ ಅವರನ್ನು ಮಿಮಿಕ್ರಿ ಮಾಡಿದ್ದಾರೆ. ‘ಜಾಕ್ ಆ್ಯಂಡ್ ಜಿಲ್’ ಎಂಬ ನರ್ಸರಿ ಪದ್ಯ ಇಸ್ಲಾಂ ಗೆ ವಿರುದ್ಧವೋ ಎಂಬುದು ಕೇಳಲಾಗುವ ಪ್ರಶ್ನೆ. ಹೌದೇ ಹೌದು ಅಂತ ಜಾಕಿರ್ ಮಾರ್ಗದಲ್ಲಿ ಹೆಂಗೆಲ್ಲ ಸಮರ್ಥನೆ ಮಾಡಿಕೊಳ್ಳಬಹುದು ಎಂಬುದಷ್ಟೇ ಮಿಮಿಕ್ರಿ. ‘ಯಾಕೆ ಅವರಿಬ್ಬರೂ ಗುಡ್ಡಕ್ಕೆ ಹೋಗಿದ್ದರು? ಹೀಗೆಲ್ಲ ಭಿನ್ನಲಿಂಗಿಗಳು ಬೆರೆಯೋದಕ್ಕೆ ಮತವು ಅನುವುಮಾಡಿಕೊಡುವುದಿಲ್ಲ. ‘ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್’ ಪದ್ಯದಲ್ಲೂ ‘ಹೌ ಐ ವಂಡರ್ ವಾಟ್ ಯು ಆರ್’ ಅಂತಿದೆ. ಈ ಮೂಲಕ ಅದು ಜ್ಯೋತಿಷವನ್ನು ಸೂಚಿಸುತ್ತೆ. ಜ್ಯೋತಿಷ ನಮ್ಮ ಧರ್ಮದಲ್ಲಿ ಸಂಪೂರ್ಣ ನಿಷಿದ್ಧ..’ ಅಂತ ವಿಡಿಯೊ ಟಾಂಗ್ ಕೊಡುತ್ತೆ.

Leave a Reply