ಲೋಕಾಯುಕ್ತ ನೇಮಕದಲ್ಲೂ ಜಾತಿ ರಾಜಕೀಯದ ಭೂತ, ಹುದ್ದೆಯ ಗೌರವ, ಘನತೆ ಗತ

ಡಿಜಿಟಲ್ ಕನ್ನಡ ವಿಶೇಷ

ಜಾತಿ, ರಾಜಕೀಯ, ವೈಷಮ್ಯ, ಪ್ರತಿಷ್ಠೆ, ಹಠಮಾರಿತನದ ವರ್ತುಲದಲ್ಲಿ ಸಿಕ್ಕಿರುವ ಲೋಕಾಯುಕ್ತ ನೇಮಕ ವಿಚಾರವು ಆ ಹುದ್ದೆಯ ಘನತೆ, ಗೌರವಕ್ಕೇ ಎರವಾಗಿದೆ.

ದಿನ ಬೆಳಗಾದರೆ ಆ ಪಕ್ಷದವರು ಈ ಪಕ್ಷದವರ ಮೇಲೆ, ಈ ಪಕ್ಷದವರು ಆ ಪಕ್ಷದವರ ಮೇಲೆ ಕೆಸರು ಎರಚಲು, ಜಾತಿ ಆಧಾರದ ಮೇಲೆ ತುಲನೆ ಮಾಡಲು ಒಂದು ವಸ್ತುವಾಗುವಷ್ಟರ ಮಟ್ಟಿಗೆ ಲೋಕಾಯುಕ್ತ ಹುದ್ದೆ ಅಗ್ಗವಾಗಿ ಹೋಗಿದೆ. ಅದು ಎಲ್ಲಿಯವರೆವಿಗೂ ಎಂದರೆ ಲೋಕಾಯುಕ್ತ ಹುದ್ದೆಗೆ ರಾಜ್ಯ ಸರಕಾರ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದ ಮೂವರ ಪೈಕಿ ಒಬ್ಬರಾದ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಅವರು ತಮಗೆ ಈ ಹುದ್ದೆಯ ಸಹವಾಸ ಬೇಡವೇ ಬೇಡ ಎಂದು ಕೈಮುಗಿಯುವಷ್ಟರ ಮಟ್ಟಿಗೆ!

ಒಂದು ಕಾಲದಲ್ಲಿ ಲೋಕಾಯುಕ್ತ ಹುದ್ದೆ ಎಂದರೆ ಜನರಲ್ಲಿ ಅದೆಂಥ ಪೂಜ್ಯಭಾವ, ಪ್ರೀತಿ, ಗೌರವ. ಭ್ರಷ್ಟರಿಗೆ ಯಮಸ್ವರೂಪಿಗಳಾಗಿದ್ದ ನ್ಯಾಯಮೂರ್ತಿ ವೆಂಕಟಾಚಲ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಅವಧಿಯಲ್ಲಂತೂ ಲಂಚಾವತಾರ ಅಂತ್ಯವಾಗಿಯೇ ಹೋಯಿತು ಎಂದೇ ಜನ ಭಾವಿಸಿದ್ದರು. ಬರೀ ಸರಕಾರಿ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಕ್ರಮಕ್ಕಷ್ಟೇ ಸೀಮಿತವಾಗಿದ್ದ ಲೋಕಾಯುಕ್ತ ಕಾಯಿದೆಯ ಸೂಕ್ಷ್ಮ ನಿಯಮಗಳನ್ನು ಅನ್ವಯ ಮಾಡಿ ಪಾಲಿಕೆ ಸದಸ್ಯನಿಂದ ಹಿಡಿದು ಮಂತ್ರಿ, ಮುಖ್ಯಮಂತ್ರಿವರೆಗೂ ಜನಪ್ರತಿನಿಧಿಗಳನ್ನು ಜೈಲಿಗೆ ಕಳುಹಿಸಿದ ಹೆಗ್ಗಳಿಕೆ ಈ ಹುದ್ದೆಗಿದೆ. ಆದರೆ ಇತ್ತೀಚಿನ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್ ಅವರು ಸ್ವತಃ ಭ್ರಷ್ಟಾಚಾರ ಆಪಾದನೆಗೆ ಗುರಿಯಾದಾಗ, ತೀವ್ರ ಟೀಕೆಗಳ ನಡುವೆಯೂ ಅಧಿಕಾರದಲ್ಲಿ ಮುಂದುವರಿದಾಗ, ಕೊನೆಗೆ ಒತ್ತಡ ತಾಳಲಾರದೆ ರಾಜೀನಾಮೆ ಕೊಟ್ಟಾಗ ಈ ಹುದ್ದೆಯ ಗೌರವ ಹಂತ-ಹಂತದಲ್ಲಿ ಪಾತಾಳಕ್ಕಿಳಿದ್ದಿತ್ತು. ಇನ್ನೂ ಉಳಿದಿತ್ತು ಎಂದು ಭಾವಿಸಲಾದ ಅಲ್ಪಸ್ವಲ್ಪ ಗೌರವವನ್ನು ಈಗ ಉತ್ತರಾಧಿಕಾರಿ ನೇಮಕ ಸಂಬಂಧ ಜಗಳದ ಮೂಲಕ ಆಡಳಿತ ಮತ್ತು ಪ್ರತಿಪಕ್ಷಗಳು ಮೂರು ಕಾಸಿಗೆ ಹರಾಜು ಹಾಕುತ್ತಿವೆ.

ಸಾಕಷ್ಟು ಪುರಾವೆಗಳಿದ್ದರೂ ನ್ಯಾಯಮೂರ್ತಿ ಭಾಸ್ಕರರಾವ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರಕಾರದ ವಿಳಂಬ ನೀತಿಗೆ, ಕೆಲವು ಪ್ರಕರಣಗಳಲ್ಲಿ ಸರಕಾರಕ್ಕೆ ಅವರಿಂದ ಆಗಿರುವ ಅನುಕೂಲಗಳೇ ಕಾರಣ ಎಂದು ಬಿಜೆಪಿ ಆರೋಪಿಸಿತ್ತು. ಸಾಕಷ್ಟು ಸತಾಯಿಸಿದ ನಂತರ ಭಾಸ್ಕರರಾವ್ ಅವರು ರಾಜೀನಾಮೆ ಕೊಟ್ಟದ್ದನ್ನು ಬಿಜೆಪಿ ವಿಜಯೋತ್ಸವದಂತೆ ಬಿಂಬಿಸಿಕೊಂಡಿತ್ತು. ಇದು ಸಿದ್ದರಾಮಯ್ಯನವರ ಸರಕಾರವನ್ನು ಕೆರಳಿಸಿತ್ತು. ಪ್ರತೀಕಾರ ಮನೋಭಾವವನ್ನೂ ಮೂಡಿಸಿತ್ತು.

ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಉಪಲೋಕಾಯುಕ್ತ ಹುದ್ದೆಗೆ ನೇಮಕಗೊಂಡಿದ್ದ ನ್ಯಾಯಮೂರ್ತಿ ಸುಭಾಷ್ ಆಡಿ ಅವರ ಅವಧಿಯಲ್ಲಿನ ಹುಳುಕುಗಳನ್ನು ಹುಡುಕಲಾರಂಭಿಸಿತು. ಕೈಗೆ ಸಿಕ್ಕ ಒಂದಷ್ಟನ್ನು ಹಿಡಿದುಕೊಂಡು ಅಡಿ ಅವರ ಪದಚ್ಯುತಿಗೆ ವಿಧಾನಸಭೆಯಲ್ಲಿ ಅಗತ್ಯ ಪ್ರಕ್ರಿಯೆಯನ್ನೂ ಆರಂಭಿಸಿದ್ದು, ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಸರಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಆಪಾದಿಸುತ್ತಿದ್ದರೆ, ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಾಗಿರುವ ಹುಳುಕುಗಳನ್ನು ಮುಚ್ಚಿಕೊಳ್ಳಲು ಆ ಪಕ್ಷದ ಮುಖಂಡರು ಸುಭಾಷ್ ಅಡಿ ಅವರ ಪರ ಮಾತಾಡುತ್ತಿದ್ದಾರೆ ಎಂದು ತಿರುಗೇಟು ನೀಡುತ್ತಿದ್ದಾರೆ.

ಇದೀಗ ಲೋಕಾಯುಕ್ತ ಹುದ್ದೆಗೆ ಸರಕಾರ ನ್ಯಾಯಮೂರ್ತಿ ಎಸ್.ಆರ್. ನಾಯಕ್ ನೇಮಕ ಮಾಡಲು ಮುಂದಾಗಿರುವುದರನ್ನು ಬಿಜೆಪಿ ಮುಖಂಡರು ವಿರೋಧಿಸಿದ್ದಾರೆ. ಅವರ ವಿರುದ್ಧ ಸಾಕಷ್ಟು ಆಪಾದನೆಗಳಿದ್ದರೂ ‘ಅಹಿಂದ’ ಹಿನ್ನೆಲೆಯಲ್ಲಿ ಅವರ ನೇಮಕಕ್ಕೆ ಸರಕಾರ ಮುಂದಾಗಿದೆ ಎಂಬುದು ಅವರ ಅಭಿಮತ. ಏಟಿಗೆ ಪ್ರತಿಯೇಟು. ನ್ಯಾ. ನಾಯಕ್  ವಿರುದ್ಧ ಅಕ್ರಮ ಆಸ್ತಿ ಸಂಪಾದನೆ, ಆಸ್ತಿ ನೋಂದಣಿ ಕಾಯಿದೆ ಉಲ್ಲಂಘನೆ ಮತ್ತಿತರ ಆರೋಪ ಹೊರಿಸಿ ಜನಾಧಿಕಾರ ಸಂಘರ್ಷ ಪರಿಷತ್ತಿನ ಸಹ ಅಧ್ಯಕ್ಷ ಆದರ್ಶ ಅಯ್ಯರ್ ಎಂಬುವರು ಲೋಕಾಯುಕ್ತ ಪೊಲೀಸರಿಗೇ ದೂರು ನೀಡಿದ್ದಾರೆ. ಇದು ಬಿಜೆಪಿ ಪ್ರತಿರೋಧಕ್ಕೆ ಮತ್ತೊಂದು ಅಸ್ತ್ರ ಸೇರ್ಪಡೆ ಆದಂತಾಗಿದೆ.

ಇದಕ್ಕೆ ಕಾಂಗ್ರೆಸ್ ತಿರುಗೇಟೂ ಸಿದ್ಧ. ಪಕ್ಷದ ಮುಖಂಡ ಉಗ್ರಪ್ಪನವರು ನ್ಯಾ. ಅಡಿ ಅವರ ವಿರುದ್ಧ ಸ್ವಜನ ಪಕ್ಷಪಾತ, ಭ್ರಷ್ಟಾಚಾರದ ಆರೋಪಗಳನ್ನು ನಿದರ್ಶನಸಮೇತ ಮಾಡಿದ್ದಾರೆ. ಅಲ್ಲದೇ, ನ್ಯಾ. ಎಸ್. ಆರ್. ನಾಯಕ್ ವಿರುದ್ಧ ಮಾತಾಡುವ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರು ಸುಭಾಷ್ ಅಡಿ ಅವರ ವಿರುದ್ಧ ಉಸಿರೆತ್ತದಿರುವುದಕ್ಕೆ ತಮ್ಮ ಜಾತಿಯವರು, ತಮ್ಮ ಊರಿವನರು ಎಂಬ ಮಮಕಾರ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. ಹೀಗೆ ತರೇಹವಾರಿ ವಾದ-ವಿವಾದ, ಆರೋಪ-ಪ್ರತ್ಯಾರೋಪಗಳಿಗೆ ಸಿಕ್ಕಿರುವ ಲೋಕಾಯುಕ್ತರ ನೇಮಕ ಆ ಹುದ್ದೆಯ ಗಾಂಭಿರ್ಯವನ್ನೇ ಕಳೆದು ಹಾಕಿದೆ.

Leave a Reply