ಸುದ್ದಿಸಂತೆ: ಸಂಕ್ರಾಂತಿ ಬಂತು ಕರ್ನಾಟಕದ ಪಥಗಳಿಗೆ, ಕೇಜ್ರಿಗೆ, ಪಂಪ್ ಸೆಟ್ ಗೆ; ಸಂಕ್ರಮಣದ ಸೊಬಗಿಲ್ಲ ಪಾಕ್ ಮಾತುಕತೆಗೆ, ಇಂಡೋನೇಷ್ಯಕ್ಕೆ…

People purchasing Sankranthi festival items at Market in Bengaluru on Thursday.

ಕರ್ನಾಟಕಕ್ಕೆ ಕೇಂದ್ರದ ಸಂಕ್ರಾಂತಿ ಕೊಡುಗೆ, 1656 ಕಿ.ಮೀ. ರಸ್ತೆ ಇನ್ನು ರಾಷ್ಟ್ರೀಯ ಹೆದ್ದಾರಿ

ಪ್ರಧಾನಿ ನರೇಂದ್ರ ಮೋದಿ ಸರಕಾರವು ಕರ್ನಾಟಕಕ್ಕೆ ಸಂಕ್ರಾಂತಿ ಬಂಪರ್ ಕೊಡುಗೆ ನೀಡಿದೆ. ಅದು ಒಟ್ಟು 15 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಯೋಜನೆಗೆ ಅನುಮೋದನೆ ನೀಡಿದೆ.

ಈ ಯೋಜನೆ ಅನ್ವಯ ರಾಜ್ಯದಲ್ಲಿ ಒಟ್ಟಾರೆ 1656 ಕಿ.ಮೀ. ಉದ್ದದ ರಸ್ತೆಯು ನಾಲ್ಕು ಅಥವಾ ಆರು ಪಥಗಳ ರಸ್ತೆಯಾಗಲಿದೆ. ಎಲ್ಲ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ವಾಹನಗಳು ನಿಗದಿತ ಟೋಲ್ ಪಾವತಿಸಿ ಈ ರಸ್ತೆಗಳಲ್ಲಿ ಪ್ರಯಾಣಿಸಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಈ ಯೋಜನೆಗಳ ಅನುಷ್ಠಾನದ ನಂತರ ಕರ್ನಾಟಕವು ಇಡೀ ದೇಶದಲ್ಲಿ ಮಹಾರಾಷ್ಟ್ರದ ನಂತರ ಅತ್ಯಂತ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿ ಹೊಂದಿದ ರಾಜ್ಯವಾಗುತ್ತದೆ.

ಮಾನಂದವಾಡಿ- ಎಚ್.ಡಿ. ಕೋಟೆ– ಮೈಸೂರು, ಮೈಸೂರು- ಬನ್ನೂರು- ಮಳವಳ್ಳಿಯ 50 ಕಿ.ಮೀ.,  ಯಲ್ಲಾಪುರ-ಸಿದ್ದಾಪುರ-ತಾಳಗುಪ್ಪದ 219, ಬೆಳಗಾವಿ- ಬಾಗಲಕೋಟೆಯ 336, ಶಿರಸಿ-ಹಾವೇರಿ-ಕೂಡ್ಲಗಿಯ 247, ಚಿಂತಾಮಣಿ-ಚೆಳ್ಳೂರು 55, ಮೊಳಕಾಲ್ಮೂರು-ರಾಯದುರ್ಗ 12, ತುಮಕೂರು-ಕೊರಟಗೆರೆ- ಪಾವಗಡ-ಕಲ್ಯಾಣದುರ್ಗದ 95, ರಾಮನಗರ-ಸದಾಶಿವಘಡ 118, ದಾವಣಗೆರೆ-ಚನ್ನಗಿರಿ 60, ಚಿತ್ರದುರ್ಗ-ಚಳ್ಳಕೆರೆ- ಪಾವಗಡ 120, ಗುಲ್ಬರ್ಗ-ಉಮರ್ಜ 64, ಸಂಕೇಶ್ವರ್-ಗೋಕಾಕ್ 127, ಹಾಗೂ ಖಾನಾಪುರ-ಯಲ್ಲಪುರ ನಡುವಿನ 50 ಕಿ.ಮೀ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಲಿದೆ ಎಂದು ವಿವರಿಸಿದರು.

ಸಂಕ್ರಾಂತಿಗೆ ಪಥ ಬದ್ಲಾಗುತ್ತೆ… ರೈತರೇ ನಿಮ್ಮ ಹಳೇ ಕೃಷಿ ಪಂಪ್ ಸೆಟ್ ಬದಲಿಸಿ!

ವಿದ್ಯುತ್ ಉಳಿತಾಯ ವರ್ಷಾಚರಣೆಗೆ ಇದೀಗ ಕೊಡುಗೆ ನೀಡುವ ಸರದಿ ರೈತರದು. ಅವರು ಹಳೆಯ ಕೃಷಿ ಪಂಪ್‍ಸೆಟ್‍ಗಳನ್ನು ಬದಲಿಸಿ, ಇಂಧನ ಇಲಾಖೆ ಸೂಚಿಸುವ ಹೊಸ ಮಾದರಿಯ ಕೃಷಿ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಮಳವಳ್ಳಿ, ನಿಪ್ಪಾಣಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕುಗಳ ರೈತರಿಗೆ ಪ್ರಾಯೋಗಿಕವಾಗಿ ಸರಕಾರವೇ ಅಳವಡಿಸಿಕೊಟ್ಟಿದ್ದ ಅತ್ಯಾಧುನಿಕ ಕೃಷಿ ಪಂಪ್‍ಸೆಟ್‍ಗಳಿಂದ ಶೇಕಡಾ 38 ರಷ್ಟು ವಿದ್ಯುತ್ ಉಳಿತಾಯವಾಗಿದೆ. ಹೀಗಾಗಿ ಇದನ್ನು ರಾಜ್ಯದ 176 ತಾಲ್ಲೂಕುಗಳಲ್ಲೂ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಹೊಸದಾಗಿ ಕೊಳವೆ ಬಾವಿ ತೊಡಿಸುವ ರೈತರು ಇಲಾಖೆ ಸೂಚಿಸುವ ಹೊಸ ಮಾದರಿ ಕೃಷಿ ಪಂಪ್‍ಸೆಟ್‍ಗಳನ್ನು ಅಳವಡಿಸಿದರೆ ಮಾತ್ರ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಗುರುವಾರ ತಿಳಿಸಿದರು.

ಸರಕಾರ ಪ್ರತಿವರ್ಷ ಪ್ರತಿ ಕೃಷಿ ಪಂಪ್‍ಸೆಟ್‍ಗೆ 40 ಸಾವಿರ ರುಪಾಯಿ ವಿದ್ಯುತ್ ದರ ಭರಿಸುತ್ತಿದೆ. ಹೊಸ ನಿರ್ಧಾರದಿಂದ ರೈತರು ಹಾಗೂ ಹಾಗೂ ಇಲಾಖೆಗೆ ಉಳಿತಾಯವಾಗಲಿದೆ. ಈ ಉಳಿತಾಯದ ಹಣದಲ್ಲೇ ರೈತರು ಅಳವಡಿಸುವ ಹೊಸ ಪಂಪ್‍ಸೆಟ್‍ ಖರ್ಚಿನಲ್ಲಿ ಶೇಕಡಾ 50 ರಷ್ಟನ್ನು ಇಲಾಖೆ ಭರಿಸುವ ಚಿಂತನೆ ನಡೆದಿದೆ ಎಂದರು.

ಮಸೂದ್ ಸೆರೆ ಅಧಿಕೃತವಲ್ಲ, ಭಾರತ- ಪಾಕ್ ಮಾತುಕತೆಗೆ ಬಂದಿಲ್ಲ ಸಂಕ್ರಮಣ ಕಾಲ

ಜೈಷೆ ಉಗ್ರ ಮಸೂದ್ ನನ್ನು ಪಾಕಿಸ್ತಾನವು ವಿಚಾರಣಾ ವಶಕ್ಕೆ ತೆಗೆದುಕೊಂಡಿರುವುದರಿಂದ ಉಭಯ ದೇಶಗಳ ನಡುವಿನ ಕಾರ್ಯದರ್ಶಿ ಮಟ್ಟದ ಮಾತುಕತೆ ಮುಂದುವರಿಯಬಹುದು ಎಂಬ ಊಹೆಗಳು ತಲೆಕೆಳಗಾಗಿವೆ. ಕಾರಣ ಮಸೂದ್ ಸೆರೆ ಕುರಿತು ಭಾರತಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ ಮಾತುಕತೆ ಸಹ ಮುಂದಕ್ಕೆ ಹೋಗಿದೆ.

‘ಪಠಾಣ್ ಕೊಟ್ ವಾಯು ನೆಲೆ ಮೇಲಿನ ದಾಳಿಯ ಆರೋಪಿ, ಜೈಷ್ ಇ ಮಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನನ್ನ ಬಂದಿಸಿರುವುದು ಸ್ವಾಗತಾರ್ಹ. ಭಾರತದ ಮನವಿಗೆ ಸ್ಪಂದಿಸಿ ಪಾಕಿಸ್ತಾನ ತೆಗೆದುಕೊಂಡಿರುವ ಬಹು ಮುಖ್ಯ ಆಶಾದಾಯಕ ಹೆಜ್ಜೆ ಆಗಿದೆ. ಆದರೆ ಇದನ್ನು ಪಾಕಿಸ್ತಾನ ಮಾಧ್ಯಮಗಳಿಂದ ಮಾತ್ರ ತಿಳಿಯುತ್ತಿದ್ದು ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ’ ಎಂದು ವಿದೇಶಾಂಗ ವ್ಯವಹಾಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಸ್ಪಷ್ಟ ಪಡಿಸಿದ್ದಾರೆ. ಇದೇ ವೇಳೆ ವಿದೇಶಿ ಕಾರ್ಯದರ್ಶಿ ಮಟ್ಟದ ಸಭೆಯ ಬಗ್ಗೆ ತಿಳಿಸಿರುವ ರಾಷ್ಟೀಯ ಭದ್ರತಾ ಸಚಿವಾಲಯ, ಉಗ್ರ ಅಜರ್ ನ ಬಂಧನದ ಬಗ್ಗೆ ಪಾಕಿಸ್ತಾನ ಸ್ಪಷ್ಟಪಡಿಸದ ಕಾರಣ ದ್ವಿರಾಷ್ಟ್ರಗಳ ವಿದೇಶಿ ಕಾರ್ಯದರ್ಶಿ ಮಟ್ಟದ ಸಭೆಯನ್ನು ಮುಂದೂಡಲಾಗಿದೆ.

ಆದರೆ ಮಾತುಕತೆಯನ್ನು ಇಬ್ಬರ ಒಪ್ಪಿಗೆಯೊಂದಿಗೇ ಮುಂದೂಡಲಾಗಿದೆ ಎಂದು ಹೇಳಿರುವುದರಲ್ಲಿ, ಪಠಾಣ್ ಕೋಟ್ ನ ದಾಳಿ ಆಕ್ರೋಶ ತಣ್ಣಗಾಗಲಿ ಎಂಬ ನಾಜೂಕಿನ ನಡೆ ಇದೆ. ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ದಿನವೂ ಸಂವಾದದಲ್ಲಿದ್ದಾರೆ ಹಾಗೂ ಭಾರತವು ಪಾಕಿಸ್ತಾನದ ತನಿಖಾ ತಂಡ ಪಠಾಣ್ ಕೋಟ್ ಗೆ ಭೇಟಿ ನೀಡುವುದನ್ನು ಕಾಯುತ್ತಿದೆ ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ.

ಇದು ಕೇಜ್ರಿವಾಲ್ ಸಂಕ್ರಾಂತಿ: ಸಮ- ಬೆಸ ಸಂಚಾರ ನಿಯಮ ತಡೆಗೆ ಸುಪ್ರೀಂ ನಕಾರ

ಮಾಲಿನ್ಯ ತಡೆಗಟ್ಟುವುದಕ್ಕೆ ದೆಹಲಿ ಸರ್ಕಾರ ತಂದಿರುವ ಸಮ- ಬೆಸ ಸಂಚಾರ ನಿಯಮದಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ಈ ನಿಯಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಪೀಠ, ‘ಮಾಲಿನ್ಯ ತಡೆಗೆ ಸರ್ಕಾರ ಕೈಗೊಂಡ ಕ್ರಮಗಳನ್ನು ಜನರು ಬೆಂಬಲಿಸಬೇಕಾಗುತ್ತದೆ. ಇದಕ್ಕೆ ಹೊರತಾದ ಆಯ್ಕೆ ಇಲ್ಲ. ಜನರ ಸಹಭಾಗಿತ್ವದಿಂದ ಮಾತ್ರವೇ ಯಶಸ್ಸು ಸಾಧ್ಯ’ ಎಂದಿದೆ.

ಛೇ, ಇದಲ್ಲ ಸಂಕ್ರಾಂತಿ… ಇಂಡೋನೇಷ್ಯದಲ್ಲಿ ಉಗ್ರದಾಳಿ

ಇಂಡೋನೆಷಿಯಾದ ರಾಜಧಾನಿ  ಜಕಾರ್ತ್ ನ ಜನಸಂದಣಿ ವ್ಯಾಪಾರ ಪ್ರದೇಶದ ಸ್ಟಾರ್ ಬಗ್ಸ್ ಕೆಫೆಯಲ್ಲಿ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಪೋಟಕ್ಕೆ ಇಬ್ಬರು ನಾಗರಿಕರು ಮೃತರಾಗಿ ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಸಹ ಸತ್ತಿದ್ದಾರೆ.

ಈ ದಾಳಿಗೆ ಐಎಸ ಐಎಸ್ ಉಗ್ರ ಸಂಘಟನೆಯೇ ಕಾರಣ ಎಂಬುದು ಸದ್ಯಕ್ಕಿರುವ ಊಹೆ. ಇಸ್ಲಾಮಿಕ್ ಉಗ್ರವಾದಿಗಳು ಬೃಹತ್ ಪ್ರಮಾಣದ ದಾಳಿ ನಡೆಸುವ ಬಗ್ಗೆ ಇಂಡೋನೆಷಿಯಾ ಪೊಲೀಸರಿಗೆ ಮಾಹಿತಿ ಇತ್ತಾದರೂ ಖಚಿತತೆ ಇರಲಿಲ್ಲ.

Leave a Reply