ಇಡೀ ಬೆಂಗಳೂರಿಗೆ ಟೆನ್ಷನ್ ಕೊಟ್ಟ ಕಾವೇರಿ ಜಂಕ್ಷನ್, ಸ್ಫೋಟಗೊಂಡದ್ದು ಬಾಂಬಲ್ಲ, ಜನರ ಡಿಸ್ಕಷನ್!

 

ಡಿಜಿಟಲ್ ಕನ್ನಡ ಟೀಮ್

ಯಾರೋ, ಏನೋ ಗೊತ್ತಿಲ್ಲ. ಸಂಕ್ರಾಂತಿ ಹಬ್ಬದ ದಿನ ಬೆಂಗಳೂರಿಗರಿಗೆ ಸರಿಯಾಗಿಯೇ ‘ಎಳ್ಳು-ಬೆಲ್ಲ’ ತಿನ್ನಿಸಿದ್ದಾರೆ!

ಸದಾಶಿವನಗರದ ಕಾವೇರಿ ಜಂಕ್ಷನ್ ಬಳಿ ಶುಕ್ರವಾರ ಮಧ್ಯಾಹ್ನ ಬಾಯಿ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ  ನಾಲ್ಕು ಗೋಣಿಚೀಲಗಳು ಕ್ಷಣಮಾತ್ರದಲ್ಲಿ ಮಾಧ್ಯಮಗಳ ಮೂಲಕ ತರೇಹವಾರಿ ಸಂದೇಶಗಳನ್ನು ರವಾನಿಸಿಬಿಟ್ಟವು. ಅದೂ ಚೀಲಗಳು ಟ್ರಾನ್ ಫರ್ಮರ್ ಗೆ ಒತ್ತಿಕೊಂಡು ಅನಾಥವಾಗಿ ಬಿದ್ದಿದ್ದದ್ದು, ಆ ಚೀಲಗಳ ಮೇಲೆ ಚೀನಿಭಾಷೆಯಲ್ಲಿ ಬೇರೆ ಬರೆದಿದ್ದದ್ದು ಬೆಂಗಳೂರು ಯಾವುದೋ ಅನಾಹುತಕ್ಕೆ ಟಾರ್ಗೆಟ್ ಆಗಿದೆ ಎಂಬ ಭೀತಿಯನ್ನು ಮೂಡಿಸಿತು.

ಗೋಣಿಚೀಲದಲ್ಲಿ ಪ್ರಬಲ ಬಾಂಬ್ ಗಳಿವೆ.  ಆರ್ ಡಿಎಕ್ಸ್ ತುಂಬಿಡಲಾಗಿದೆ, ಜಿಲೆಟಿನ್ ಕಡ್ಡಿಗಳು ಬೇರೆ ಜತೆಯಲ್ಲಿವೆ ಎಂಬಲ್ಲಿಂದ ಶುರುವಾದ ಸುದ್ದಿ ಇಡೀ ಬೆಂಗಳೂರನ್ನು ಉಡಾಯಿಸಲು ಇಷ್ಟು ಸಾಕು ಎಂಬಲ್ಲಿಗೆ ಹೋಗಿ ನಿಂತಿತು. ಇಸಿಸ್ ಉಗ್ರರು ಬೆಂಗಳೂರಿಗೇ ದೊಡ್ಡ ಸ್ಕೆಚ್ ಹಾಕಿದ್ದಾರೆ. ಅವರ ಸಂಘಟನೆ ಜತೆ ಸಂಪರ್ಕ ಇದ್ದ ಮೌಲ್ವಿಯನ್ನು ಬಂಧಿಸಿರುವುದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಈ ಬಾಂಬ್ ಗಳನ್ನು ಇಟ್ಟಿದ್ದಾರೆ ಎಂಬ ಸುದ್ದಿಗಳು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡಿದವು.

ಮೊನ್ನೆ ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ ಜಿ) ವಿಧಾನಸೌಧದಲ್ಲಿ ಉಗ್ರರ ಸದೆಬಡಿವ ಅಣುಕು ಪ್ರದರ್ಶನ ಮಾಡಿದ್ದು ಸುಖಾಸುಮ್ಮನೆ ಅಲ್ಲ. ಅವರಿಗೆ ಉಗ್ರರು ದಾಳಿ ನಡೆಸುತ್ತಾರೆ ಎಂಬ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಅಣುಕು ಪ್ರದರ್ಶನ ನೆಪದಲ್ಲಿ ಪೂರ್ವ ತಯಾರಿ ಮಾಡಿಕೊಂಡಿದ್ದರು. ಅವರಿಗೆ ಬಂದಿದ್ದ ಮಾಹಿತಿ ಇದೀಗ ನಿಜವಾಗಿದೆ. ಕಾವೇರಿ ಜಂಕ್ಷನ್ ಬಳಿ ಬಾಂಬ್ ಇಡಲಾಗಿದೆ ಎಂದೆಲ್ಲ ಜನ ಸಂಕ್ರಾಂತಿ ಕಿಚ್ಚು ಹಾಯುವ ಬಸವನನ್ನು ಸಿಂಗರಿಸಿದಂತೆ ತಮಗೆ ತೋಚಿದ ಮಾತುಗಳಿಂದ ಘಟನೆಗೆ ಬಣ್ಣ ತುಂಬಿದರು.

ಜನ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಪೊಲೀಸರು ಇನ್ನೂ ಚೀಲಗಳ ಹತ್ತಿರ ಹೋಗಿಯೇ ಇಲ್ಲ. ಆಗಲೇ, ಚೀಲಗಳಲ್ಲಿದ್ದ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸ ಆರಂಭವಾಗಿದೆ. ಸ್ಫೋಟ ನಿರೋಧ ತಜ್ಞರು ಒಂದೊಂದೇ ಚೀಲವನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ. ಅಬ್ಬಾ, ಎಲ್ಲ ಬಾಂಬ್ ಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಯಿತು. ಭಾರೀ ಅನಾಹುತ ತಪ್ಪಿತು ಎಂದು ನಿಟ್ಟುಸಿರು ಬಿಟ್ಟರು.

ಆದರೆ ಚೀಲಗಳನ್ನು ಜಾಲಾಡಿದ ನಂತರ ಬೆಂಗಳೂರು ಪೊಲೀಸ್ ಕಮೀಷನರ್ ಮೇಘರಿಕ್ ಹೇಳಿದ್ದು – ಗೋಣಿಚೀಲದಲ್ಲಿ ಬಾಂಬೂ ಇಲ್ಲ, ಗೀಂಬೂ ಇಲ್ಲ. ಯಾವುದೋ ಎಣ್ಣೆ..!

ಆದರೆ ಜನ ಮಾತಾಡಿಕೊಂಡದ್ದನ್ನು ಕೇಳಿದ್ದರೆ ಇಷ್ಟೊತ್ತಿಗೆ ಕಾವೇರಿ ಜಂಕ್ಷನ್ ಬಳಿ ಬಾಂಬ್ ಸ್ಫೋಟಿಸಿ, ಇಡೀ ಬೆಂಗಳೂರೇ ಹೊಗೆ ಹಾಕಿಕೊಳ್ಳಬೇಕಿತ್ತು. ಪುಣ್ಯಕ್ಕೆ ಅದಾಗಲಿಲ್ಲ. ಸ್ಫೋಟಗೊಂಡದ್ದು ಅವರ ಮಾತಷ್ಟೇ..!

ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಸಂಗತಿ ಎಂದರೆ, ಅನುಮಾನಾಸ್ಪದ ವಸ್ತು ಕಂಡೊಡನೆ ಜನ ಪೋಲೀಸರ ಗಮನಕ್ಕೆ ತಂದದ್ದು ಹಾಗೂ ಅಷ್ಟೇ ವೇಗವಾಗಿ ಪೋಲೀಸರು ಕೂಡ ಸ್ಪಂದಿಸಿದ್ದು.

Leave a Reply