ಗರ್ಭಧಾರಣೆ: ಹಲವು ಕೌತುಕಗಳನ್ನು ಒಡಲಲ್ಲಿಟ್ಟುಕೊಂಡಿರುವ ಆಚರಣೆ

 

author-shamaಗರ್ಭಾವಸ್ಥೆ ಮತ್ತು ಮನೆಗೆ ಕಂದ ಕಾಲಿಡುವುದು ಜಗತ್ತಿನೆಲ್ಲೆಡೆಯೂ ಸಂಭ್ರಮ ತರುವ ಪ್ರಕ್ರಿಯೆ ಆದ ಕಾರಣ ಬಹುಪಾಲು ಎಲ್ಲ ಕಡೆಯೂ ಈ ಖುಷಿಗೆ ಅಂತಲೇ ಒಂದಷ್ಟು ಆಚರಣೆಗಳಿವೆ. ಮಗುವೆಂಬುದು ಜಗತ್ತಿನ ಬಹುದೊಡ್ಡ ಆಕರ್ಷಣೆ ಎನ್ನುವುದು ಇದಕ್ಕೇ ಏನೋ!

ವೈವಿಧ್ಯವೇ ವಿಶೇಷವಾಗಿರುವ ನಮ್ಮ ದೇಶದೆಲ್ಲೆಡೆಯೂ ಇರುವ ಈ ಖುಷಿಗೆ ತರಾವರಿ ಹೆಸರುಗಳು. ಉತ್ತರ  ಭಾರತದ ಕಡೆ ‘ಗೋಧ್ ಭರಾಯಿ’ (ಮಡಿಲು ತುಂಬುವುದು) ಬಹು ದೊಡ್ಡ ಆಚರಣೆ. ಕುಲ ಪುರೋಹಿತರನ್ನು ಕೇಳಿ ಅವರ ಸಲಹೆಯಂತೆ ಸುಮುಹೂರ್ತದಲ್ಲಿ ಇದನ್ನು ಆಚರಿಸುವುದು ಸಂಪ್ರದಾಯ. ಬಸುರಿಯನ್ನು ಮದುಮಗಳಂತೆ ಶೃಂಗಾರ ಮಾಡಿಸಿ ಎತ್ತರದ ಜಾಗದಲ್ಲಿ ಅಥವಾ ಮಣೆಯ ಮೇಲೆ ಕೂರಿಸುತ್ತಾರೆ. (ಈಗ ಆಧುನಿಕ ಪದ್ಧತಿಯಂತೆ ಕುರ್ಚಿಗಳನ್ನು ಬಳಸುವುದುಂಟು). ನಂತರ ಆಕೆ ಸೆರಗನ್ನು ಮುಂಚಾಚುತ್ತಾಳೆ. ಆವಾಗ ಸಮಾರಂಭಕ್ಕೆ ಬಂದ ಎಲ್ಲರೂ ತಾವು ತಂದಿರುವ ಉಡುಗೊರೆಗಳನ್ನು ಅವಳ ಉಡಿಗೆ ತುಂಬುತ್ತಾರೆ. ಅಮ್ಮ ಮತ್ತು ಅತ್ತೆ ಇಬ್ಬರೂ ಸೇರಿ ತಯಾರಿಸಿದ ಅವಳಿಷ್ಟದ ಭಕ್ಷ್ಯ ಭೋಜ್ಯಗಳನ್ನು ಅವಳಿಗೆ ನೀಡಲಾಗುತ್ತದೆ. ವಿಶೇಷವೆಂದರೆ ಅಲ್ಲಿಗೆ ಆಗಮಿಸಿದ ಪ್ರತಿ ಹೆಂಗಸು ಕೂಡ ಹುಟ್ಟಲಿರುವ ಮಗುವಿನ ಬಗ್ಗೆ ಒಳ್ಳೆಯ ವಿಚಾರಗಳನ್ನು ಅವಳ ಕಿವಿಯಲ್ಲಿ ಗುಟ್ಟಾಗಿ ಉಸುರಿ ಹೋಗುತ್ತಾರೆ. ಕೊನೆಗೆ ಹಾಡುಗಳು, ನೃತ್ಯಗಳನ್ನು ಮಾಡಿ ಅವಳನ್ನು ರಂಜಿಸುತ್ತಾರೆ. ಸಾಮಾನ್ಯವಾಗಿ ಇದನ್ನು ಏಳನೇ ತಿಂಗಳಿನಲ್ಲಿ ಮಾಡುತ್ತಾರೆ. ಆರೋಗ್ಯ ಮತ್ತು ಅನುಕೂಲಗಳನ್ನು ನೋಡಿಕೊಂಡು ಒಮ್ಮೊಮ್ಮೆ ಎಂಟು ಅಥವಾ ಒಂಭತ್ತನೇ ತಿಂಗಳಲ್ಲಿ ಮಾಡುವುದೂ ಇದೆ. ಸಾಂಪ್ರದಾಯಿಕವಾಗಿ ಈ ಸಮಾರಂಭಕ್ಕೆ ಗಂಡಸರಿಗೆ ಆಮಂತ್ರಣವಿರುವುದಿಲ್ಲ ಆದರೆ ಇಂದಿನ ಸಮಾನತೆಯ ಯುಗದಲ್ಲಿ ಅವರು ಕೂಡ ಕಾರ್ಯಕ್ರಮದ ಭಾಗವಾಗುತ್ತಾರೆ.

ಹಾಲುಮತ ಸಂಪ್ರದಾಯದ ಮೂರು ತಿಂಗಳ ಸೂತಕ: ಎಲ್ಲೆಡೆಯಲ್ಲೂ ಮನೆಗೆ ಮಗು ತರುವ ಹೆಣ್ಣನ್ನು ವಿಶೇಷ ಕಾಳಜಿಯಿಂದ ನೋಡಿಕೊಂಡರೆ ಹಾಲುಮತ ಸಂಪ್ರದಾಯದ ಆಚರಣೆಗಳು ಬಹು ವಿಚಿತ್ರವಾಗಿವೆ. ಸಾಧಾರಣವಾಗಿ ಜನನದಂಥ ವೃದ್ಧಿ ಸೂತಕವಿರಲಿ, ಸಾವಿನಂಥ ಕ್ಷಯ ಸೂತಕವಿರಲಿ ಹೆಚ್ಚೆಂದರೆ ಹದಿಮೂರು ದಿನಕ್ಕೆ ಕೊನೆಯಾಗುತ್ತದೆ. ಆದರೆ ಹಾಲುಮತದವರಲ್ಲಿ ಪ್ರಥಮ ಬಾರಿಗೆ ಗರ್ಭ ಧರಿಸುವ ಮಹಿಳೆಗೆ ಮೂರು ತಿಂಗಳ ಸೂತಕದ ಹೊರೆ. ಅವಳು ಮೊದಲ ಮೂರು ತಿಂಗಳು ಹೊಸ ಬಟ್ಟೆ ಧರಿಸುವುದು, ಹೂ ಮುಡಿಯುವುದು ಮತ್ತು ಹೊಳೆ ದಾಟುವುದು ನಿಷಿದ್ಧ. ಮೂಢ ನಂಬಿಕೆಯೆಂದೋ ಕಂದಾಚಾರವೆಂದೋ, ಹೆಣ್ಣಿನ ಶೋಷನೆಯೆಂದೋ ನಾವು ಇಂದು ಕರೆಯುವ ಈ ಆಚರಣೆಯ ಹಿಂದಿನ ಕೆಲವು ವೈಜ್ಞಾನಿಕ ದೃಷ್ಟಿಯನ್ನು ಅಲ್ಲಗಳೆಯುವುದೂ ಕಷ್ಟ. ಹೊಸ ಬಟ್ಟೆ ಧರಿಸಿದರೆ ಒಮ್ಮೊಮ್ಮೆ ಅಲರ್ಜಿಯಾಗುವ ಸಂಭವವಿದ್ದು ಆರೋಗ್ಯ ಕೆಡಬಹುದು, ದೇಹ ಬಹು ಸೂಕ್ಷ್ಮ ಸ್ಥಿತಿಯಲ್ಲಿರುವಾ ಹೂವಿನ ಘಮ ತಾಳಲಾರದೇ ವಾಂತಿ, ಕೆಮ್ಮುಗಳು ಜಾಸ್ತಿಯಾಗಬಹುದು, ಮತ್ತು ಹೊಳೆ ದಾಟುವ ಮೂಲಕ ಶಾರೀರಿಕ ಒತ್ತಡ, ಕಾಲಿನ ಚಲನೆಯಿಂದ ಗರ್ಭಪಾತವಾಗುವ ಸಾಧ್ಯತೆಗಳನ್ನು ತಡೆಯಲು ಹೀಗೆ ನಿರ್ಬಂಧ ಹೇರಿದ್ದರೂ ಇರಬಹುದು.

ಗರ್ಭ ನಿಂತು ಮೂರು ತಿಂಗಳ ನಂತರ ತವರು ಮನೆಯವರು ಬಂದು ಹುಳಿ ತೆಗೆದ ಗಡಿಗೆಯಲ್ಲಿ ಅಂಬಲಿ ಬೇಯಿಸಿ ತಿನ್ನುವುದರೊಡನೆ ಅವಳ ಸೂತಕ ಕಳೆಯುತ್ತದೆ. ತವರು ಮನೆಯವರು ಬರುವಿಕೆ ನಿಗದಿಯಾದ ತಕ್ಷಣ ಅವಳ ಮನೆಯ ಮುತ್ತೈದೆಯರು ಹೊಸ ಗಡಿಗೆಯಲ್ಲಿ ಅಂಬಲಿ ತಯಾರಿಸುತ್ತಾರೆ. ತವರು ಮನೆ ಮಂದಿ ಮಗಳಿಗೆ ಪಂಚಾಮೃತ ಪ್ರೋಕ್ಷಿಸಿ ಸ್ನಾನ ಮಾಡಿಸುತ್ತಾರೆ. ನಂತರ ಅವಳಿಗೆ ಹಸಿರು ರವಿಕೆ ಖಣವಿತ್ತು ಜತೆಗೇ ಅಂಬಲಿ ಮಡಿಕೆಗೂ ಹಸಿರು ಖಣ ಏರಿಸುತ್ತಾರೆ. ಈ ಖಣದಿಂದ ಅವಳು ಕಂಕುಳು ಖಾಲಿಯಿರುವ (ಇವತ್ತಿನ ಭಾಷೆಯಲ್ಲಿ ಸ್ಲೀವ್^ಲೆಸ್) ಕುಪ್ಪಸ ಹೊಲಿಸಿಕೊಳ್ಳುವುದು ಶಾಸ್ತ್ರ. ಅಂಬಲಿ ಗಡಿಗೆಗೆ ಏರಿಸಿದ ಖಣವನ್ನು ಎತ್ತಿಟ್ಟು ಹುಟ್ಟಿದ ಮಗುವಿಗೆ ಕುಂಚಗಿ ಹೊಲಿಸಬೇಕಿರುತ್ತದೆ. ಅಂಬಲಿ ಗಡಿಗೆಯೊಳಗಿನ ಹುಳಿಯನ್ನು ತೆಗೆದು ಕುಟ್ಟಿದ ಜೋಳದಲ್ಲಿ ಕುದಿಸಿ ಬಾನ ತಯಾರಿಸಿ ಅವಳಿಗೆ ತಿನ್ನಿಸುವ ಮೂಲಕ ಬಯಕೆ ತೀರಿಸುವ ಪ್ರಕ್ರಿಯೆ ಆರಂಭ.  ಇಷ್ಟೆಲ್ಲ ಮುಗಿದ ನಂತರವಷ್ಟೇ ಅವಳಿಗೆ ಹೋಳಿಗೆ ಊಟ ಬಡಿಸಲಾಗುತ್ತದೆ. ಮತ್ತು ಅಂಬಲಿ ಗಡಿಗೆಯನ್ನು ಹಾಗೇ ಜತನದಿಂದ ಕಾಪಿಟ್ಟು ಮಗು ಹುಟ್ಟಿದ ನಂತರ ಹೊಕ್ಕಳ ಬಳ್ಳಿಯನ್ನು ಇದೇ ಗಡಿಗೆಯಲ್ಲಿಟ್ಟು ಹೂಳಲಾಗುತ್ತದೆ.

ನಿಜವೋ ಸುಳ್ಳೋ ಕಾಕತಾಳೀಯವೋ ಒಂದಷ್ಟು ನಂಬಿಕೆಗಳು ನಮ್ಮ ಆಚಾರ, ವಿಚಾರ ಆಚರಣೆಗಳಷ್ಟೇ ಭದ್ರವಾಗಿ ಬೇರೂರಿವೆ. ಮಗುವಿನ ಚರ್ಮಕ್ಕೆ ಬಣ್ಣ ಬರಿಸುವುದರಿಂದ ಹಿಡಿದು ಯಾವಾಗ ಹೆಣ್ಣು ಯಾವಾಗ ಗಂಡು ಎಂಬುದೆಲ್ಲ ಇಲ್ಲಿದೆ.

ವೈಜ್ಞಾನಿಕ ಹಿನ್ನೆಲೆ ಇರುವಂಥವು:

ಮೂರನೇ ತಿಂಗಳ ನಂತರ ಪ್ರತಿ ತಿಂಗಳಿಗೆ ಐದು ದಿನ ಒಂದು ಮುದ್ದೆ ಬೆಣ್ಣೆ ತಿಂದರೆ ಮಗು ಬೆಳ್ಳಗಾಗುತ್ತದೆ. (ಬೆಣ್ಣೆ ತಿನ್ನುವುದರಿಂದ ಗರ್ಭದ್ವಾರದಲ್ಲಿ ಜಾರುವ ಪ್ರವೃತ್ತಿ ಹೆಚ್ಚಿ ಮಗು ಜಾರಲು ಸಹಾಯ ಮಾಡುತ್ತದೆ ಇದರಿಂದ ಸಹಜ ಹೆರಿಗೆಗೆ ಅನುಕೂಲ)

ಐದು ತಿಂಗಳ ನಂತರ ಕೇಸರಿ ಮಿಶ್ರಿತ ಹಾಲು ಸೇವಿಸುವುದರಿಂದ ಮಗುವು ಬೆಳ್ಳಗಾಗುತ್ತದೆ. (ಇದು ಕೇಸರಿ ಮಾಡುವ ಚಮತ್ಕಾರವಾದರೂ ಅನುವಂಶಿಕವಾಗಿ ಬರುವ ಬಣ್ಣವನ್ನು ತಡೆಯುವುದು ಅಥವಾ ಬದಲಾಯಿಸುವುದು ಸಾಧ್ಯವಿಲ್ಲ)

ಬ್ರಾಹ್ಮಿ ತಿಂದರೆ ಮಗುವಿನ ಬುದ್ಧಿ ಚುರುಕಾಗುತ್ತದೆ (ಆಯುರ್ವೇದ ಪಂಡಿತರು ಕಂಡುಕೊಂಡ ಸತ್ಯವಿದು)

ಕೆಮ್ಮಣ್ಣು, ಕಬ್ಬಿಣ ತಿನ್ನುವ ಬಯಕೆ ಬಂದರೆ ಮಗುವಿಗೆ ಆ ಖನಿಜಾಂಶಗಳ ಅವಶ್ಯಕತೆ ಇದೆ ಅಂತ ಅಮ್ಮನಿಗೆ ಹೇಳೋ ರೀತಿ.

ಇನ್ನು, ಕನಸಲ್ಲಿ ಏನು ಕಾಣುವುದೆಂಬ ಆಧಾರದ ಮೇಲೆ ಎಂಥ ಮಗು ಎಂಬ ಲೆಕ್ಕಾಚಾರ ಹಾಕುವುದರಿಂದ ಹಿಡಿದು ಹಲವು ನಂಬಿಕೆಗಳು ಇವೆ. ಅವ್ಯಾವವೂ ವೈಜ್ಞಾನಿಕವಾಗಿ ಸಾಬೀತಾಗಿರುವಂಥವುಗಳಲ್ಲ. ಬಹುಶಃ ಆ ಕಾಲದಲ್ಲಿ ಮನಸ್ಸಿನ ಸಮಾಧಾನಕ್ಕೋ, ಸಮಯ ಕಳೆವುದಕ್ಕೋ ಅಂಥ ಆಲೋಚನೆಗಳು ಹುಟ್ಟಿಕೊಂಡಿರಬಹುದೇನೋ. ಅಂಥ ನಂಬಿಕೆಗಳ ದೊಡ್ಡ ಪಟ್ಟಿಯೇ ಇದೆ.

Leave a Reply