ಗಾಂಧಿ ನಗರಕ್ಕೆ ಕನಸು ಕಟ್ಟಿಕೊಂಡು ಬರುವವರಿಗೆ ಸಂಕ್ರಾಂತಿ ಎಂದು?

kodsara

ವಿನಾಯಕ ಕೋಡ್ಸರ

‘ಅಲ್ನೋಡು ಮಗ ಹೆಂಗೆ ಚಚ್ಚುತ್ತಾ ಅವ್ನೆ ದರ್ಶನ್‌. ಸುದೀಪ್‌ ಪೊಲೀಸ್‌ ಗೆಟಪ್ಪಿನಲ್ಲಿ ಹೆಂಗೆ ಕಾಣಿಸ್ತಾನೆ ಅಂದ್ರೆ…ನಾನು ಹೀಗೊಂದು ದಿನ ಹೀರೋ ಆಗಬೇಕು. ದೊಡ್ಡ ಪರದೆಯ ಮೇಲೆ ಬರಬೇಕು’ ಬೀದರ್‌ನಲ್ಲಿ ಸಿನಿಮಾ ನೋಡುತ್ತ ಕುಳಿತವನೊಬ್ಬನ ಕನಸಿದು.

ಅದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಯಾವುದೋ ಚಿತ್ರದ ಮುಹೂರ್ತ. ಊಟಕ್ಕೆ ಯಾವುದೋ ಕೆಟರಿಂಗ್‌ನವರು ಬಂದಿದ್ರು. ಮೊಸರನ್ನ, ಚಿತ್ರಾನ್ನ ಬಡಿಸುತ್ತ ಇದ್ದವನೊಬ್ಬ ಹೇಳ್ತಾ ಇದ್ದ, ಊರಲ್ಲಿ ಇರೋ ಜಮೀನು ಅಷ್ಟು ಮಾರಿಯಾದ್ರು ಸರಿ, ನಾನೊಂದು ದಿನ ಹೀರೋ ಆಗಬೇಕು. ಒಂದು ಸಿನಿಮಾ ಮಾಡಬೇಕು. ಅದ್ಕೆ ನಾನು ಹುಡುಕಿಕೊಂಡು ಈ ಗಾಂಧಿನಗರಕ್ಕೆ ಬಂದಿರೋದು ಅಂತ!

ಹೊಸ ಸಿನಿಮಾ ಕ್ಲಾಪ್‌ಕಟ್‌ ಮಾಡುವ ಹುಡುಗನಿಗೆ ಸಿನಿಮಾ ನಿರ್ದೇಶಕನಾಗುವ ಕನಸು. ಕಾಫಿ ಕೊಡುವ ಪ್ರೊಡೆಕ್ಷನ್‌ ಹುಡುಗನಿಗೆ ಹೀರೋ ಆಗುವ ಬಯಕೆ. ಹಾಗಂತ ಇದು ತಪ್ಪಲ್ಲ. ಕಾಫಿ ಕೊಡುತ್ತ ವೃತ್ತಿ ಆರಂಭಿಸಿ ಇವತ್ತು ದೊಡ್ಡ ನಿರ್ಮಾಪಕರು, ನಾಯಕರು ಆದವರು ನಮ್ಮ ನಡುವೆಯೇ ಇದ್ದಾರೆ. ಆದ್ರೆ ಇವ್ರಿಗೆಲ್ಲ ಗಾಂಧಿನಗರದ ಉದ್ದ-ಅಗಲ ಎಷ್ಟು ಗೊತ್ತಿದೆ ಅನ್ನೋದೇ ಪ್ರಮುಖ ಪ್ರಶ್ನೆ.

ಗಾಂಧಿನಗರಕ್ಕೆ ಬರುವ ಯಾರನ್ನೇ ಕೇಳಿ, ನಾನೊಂದು ಸಿನಿಮಾ ಮಾಡಬೇಕು, ನಾನು ನಾಯಕ ಆಗಬೇಕು, ನಾನು ನಾಯಕಿ ಆಗಬೇಕು ಎಂಬ ಕನಸು. ಅರ್ಹತೆ ಏನು ಅಂದ್ರೆ, ಯಾವುದೋ ದೊಡ್ಡ ಸ್ಟಾರೇ ಸ್ಫೂರ್ತಿ ಅಂತಾರೆ!

ಅದಕ್ಕು ಮಜ ಅಂದ್ರೆ ಗಾಂಧಿನಗರದಲ್ಲಿ ವಾರಕ್ಕೆ ಏನಿಲ್ಲ ಅಂದ್ರು 8-10 ಸಿನಿಮಾಗಳ ಪತ್ರಿಕಾಗೋಷ್ಠಿ ಆಗುತ್ತೆ. 4-5 ಹೊಸ ಸಿನಿಮಾ. ಡೈರೆಕ್ಟರೇ ನಿಮ್ಮ ಅನುಭವ ಅಂತ ಕೇಳಿದ್ರೆ, ನಾನು ಸಾಕಷ್ಟು ಸಿನಿಮ ನೋಡಿಕೊಂಡು ಬೆಳೆದವನು, ನಂಗೆ ಸಿನಿಮಾ ಒಂಥರ ಪ್ಯಾಷನ್‌ ಎಂಬ ಉತ್ತರ. ಅದೆಲ್ಲ ಸರಿ ಡೈರೆಕ್ಟರೆ, ಸಿನಿಮಾ ವೃತ್ತಿಯಲ್ಲಿ ನಿಮ್ಮ ಅನುಭವ ಎಂದ್ರೆ, 98 ಚಿತ್ರಗಳಲ್ಲಿ 4 ನಿರ್ದೇಶಕರು ತಾವು ಎಲ್ಲೋ ಅಸೋಸಿಯೆಟ್‌ ಆಗಿ ದುಡಿದ ಅನುಭವ ಹೇಳುತ್ತಾರೆ. ಉಳಿದವರಿಗೆಲ್ಲ ಚಿತ್ರ ನೋಡಿದ್ದೆ ಅನುಭವ. ವೃತ್ತಿಯ ಎಡಬಲವೂ ಗೊತ್ತಿಲ್ಲದ ಅವರ ಚಿತ್ರ ಹೇಗೆ ಗೆಲ್ಲಲು ಸಾಧ್ಯ ಹೇಳಿ?

‘ನಾವೆಲ್ಲ ಒಂದು ಸಿನಿಮಾದಲ್ಲಿ ಅಸೋಸಿಯೇಟ್‌ ಆಗ್ಲಿಕ್ಕೆ ಎಷ್ಟೆಲ್ಲ ಪರದಾಡಿದೀವಿ ಅಂದ್ರೆ, ಈಗೆಲ್ಲ ೨ ವರ್ಷಕ್ಕೆ ಡೈರೆಕ್ಟರ್‌ ಆಗಿಬಿಡ್ತಾರೆ ಸರ್‌’ ಅನ್ನುತ್ತಿದ್ದರು ನಿರ್ದೇಶಕ ಶಶಾಂಕ್‌. ನಿಜ, ಯಾವುದೇ ಅರ್ಹತೆಯೂ ಇಲ್ಲದೆ ದುಡ್ಡಿದ್ರೆ ಮಾಡಬಹುದಾದ ವೃತ್ತಿಗಳಲ್ಲೊಂದು ಸಿನಿಮಾ. ಹಾಗಾಗಿಯೇ ಎಷ್ಟೋ ಚಿತ್ರಗಳಿಗೆ ಕಥೆ-ಚಿತ್ರಕಥೆ-ನಿರ್ದೇಶನ-ಸಾಹಿತ್ಯ-ಸಂಗೀತ-ನಾಯಕ-ನಿರ್ಮಾಪಕ ಎಲ್ಲವೂ ಒಬ್ಬನೆ ಆಗಿರುತ್ತಾನೆ. ಕೆಲವು ಕಡೆ ನಿರ್ದೇಶಕ ಬೇರೆ ಇರುತ್ತಾರೆ. ನಾಯಕ, ನಿರ್ಮಾಪಕನ ಅಕ್ಕನ ಮಗನೋ, ತಂಗಿ ಮಗನೋ, ಭಾಮೈದನೋ ಆಗಿರುತ್ತಾನೋ!

ಗಾಂಧಿನಗರವೆಂಬ ಭ್ರಮೆಗೆ ಮದ್ದಿಲ್ಲ. ಯಶ್‌ಗೆದ್ದರು. ದರ್ಶನ್‌ ಗೆದ್ದರು. ಸುದೀಪ್‌ ಸೂಪರ್‌ಹಿಟ್ ಎಲ್ಲವೂ ನಿಜ. ಆದ್ರೆ ಒಂದು ಗಾಂಧಿ ನಗರ ವರ್ಷದಲ್ಲಿ ಎಷ್ಟು ದರ್ಶನ್‌, ಪುನೀತ್‌ರನ್ನು ಹುಟ್ಟು ಹಾಕುತ್ತೆ ಲೆಕ್ಕ ಮಾಡಿದ್ದೀರಾ? ಸ್ಟಾರ್‌ಗಳ ಥರ ಬದುಕು ಸೂಪರ್‌. ಇಡೀ ಉದ್ಯಮದಲ್ಲಿ ಅದೆಷ್ಟು ಸ್ಟಾರ್‌ಗಳಿದ್ದಾರೆ ಲೆಕ್ಕ ಹಾಕಿರುವಿರಾ?

ವರ್ಷಕ್ಕೆ ಬರೋಬ್ಬರಿ 160 ಚಿತ್ರ ಆಗುತ್ತೆ. ಆದ್ರೆ 3 ವರ್ಷಕ್ಕೊಬ್ಬ ಹೊಸ ಸ್ಟಾರ್‌ ಹುಟ್ಟುವುದಿಲ್ಲ ಎಂಬುದನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕು. ಎಲ್ಲೋ ೫ ವರ್ಷಕ್ಕೊಂದು ರಂಗಿತರಂಗದಂಥ ಹೊಸಬರ ಚಿತ್ರ ಗೆಲ್ಲುತ್ತೆ. ಹಾಗಂತ ರಂಗಿತರಂಗ ಪೂರ್ತಿ ಹೊಸಬರ ಚಿತ್ರವಲ್ಲ. ಅದರ ಹಿಂದೆ ಕಿರುತೆರೆಯಲ್ಲಿ ಸಾಕಷ್ಟು ವರ್ಷ ಪಳಗಿದವರು, ಗಾಂಧಿನಗರದ ಉದ್ದಗಲ ಗೊತ್ತಿದ್ದವರು ಇದ್ದಾರೆ ಎಂಬುದನ್ನು ನೆನಪಿಡಿ. ಅದಿಲ್ಲ ಅಂದ್ರೆ ಚಿತ್ರಮಂದಿರದಲ್ಲಿ ೨ ವಾರಕ್ಕಿಂತರ ಹೆಚ್ಚು ನಿಲ್ಲಲು ಬಿಡುತ್ತಿರಲಿಲ್ಲ!

ಮತ್ತದೆ ವಿಷಯಕ್ಕೆ ಬರೋಣ. 160 ಚಿತ್ರಗಳಲ್ಲಿ ಒಂದು 30 ಚಿತ್ರ ‘ಎ’ ದರ್ಜೆಯ ಸ್ಟಾರ್‌ಗಳದ್ದು. ಅಂದ್ರೆ ಯಶ್‌, ದರ್ಶನ್‌, ಸುದೀಪ್‌, ಶಿವಣ್ಣ, ಪುನೀತ್‌, ಶರಣ್‌, ಉಪೇಂದ್ರ…ಆ ಥರ ಕೋಟಿ ರೂ. ಸಂಭಾವನೆ ಪಡೆಯುವ ನಾಯಕರದ್ದು. ಅದಾದ ನಂತ್ರ ಇನ್ನೊಂದು ೨೫ ಚಿತ್ರ ಲವ್ಲಿಸ್ಟಾರ್‌ ಪ್ರೇಮ್‌, ಅಜೇಯ್‌ರಾವ್‌, ಕೋಮಲ್‌ ಥರದ ನಾಯಕರದ್ದು.

ಇನ್ನೊಂದು ಹತ್ತಿಪ್ಪತ್ತು ಚಿತ್ರ ಧನಂಜಯ್‌, ಶ್ರೀಕಿ, ನಿನಾಸಂ ಸತೀಶ್‌, ಲೂಸ್‌ಮಾದ ಯೋಗಿ ಥರದ ನಾಯಕರು. ಮಿಕ್ಕವೆಲ್ಲ ಹೊಸಬರದ್ದು. ಇಷ್ಟರಲ್ಲಿ ವಾವ್‌ಅನ್ನುವ ಚಿತ್ರ 5-6. ಓಕೆ ಅನ್ನುವಂತದ್ದು 10 ಚಿತ್ರ. ಮಿಕ್ಕಿದ್ದು ಹಾಕಿದ ಬಂಡವಾಳ ವಾಪಾಸ್‌ ಬರದ ಚಿತ್ರಗಳು. ಇದೆಲ್ಲಕ್ಕಿಂತ ಮುಖ್ಯವಾಗಿ ನೆನಪಿಡಬೇಕಾದ ಅಂಶ, ಸ್ಟಾರ್‌ಗಳು ನಟಿಸಿದ ಅದೆಷ್ಟೋ ಚಿತ್ರಗಳು ಕೂಡ ಹಲವು ಸಲ ಹಾಕಿದ ಬಂಡವಾಳ ವಾಪಾಸ್‌ ದುಡಿಯುವಲ್ಲಿ ವಿಫಲವಾಗಿ ಸ್ಟಾರ್‌ಗಳನ್ನು ಕೈಕಟ್ಟಿ ಕೂರುವಂತೆ ಮಾಡಿದ್ದಿದೆ.

160ರಲ್ಲಿ ಸುಮಾರು 100 ಚಿತ್ರಗಳು ಹಾಕಿದ ಬಂಡವಾಳ ವಾಪಾಸ್‌ ದುಡಿಯದೆ, ಸ್ಟಾರ್‌ಕಥೆ ಹಾಳಾಗಲಿ, ಇದ್ದ ಚೂರುಪಾರನ್ನು ಕಳೆಸಿ ನಿರ್ಮಾಪಕರನ್ನು ಬೀದಿಗೆ ತಳ್ಳುವಂಥ ಚಿತ್ರ. ಇಂಥ ಗಾಂಧಿ ನಗರ ಪಥ ಬದಲಿಸುವುದಕ್ಕೆ ಇನ್ನೆಷ್ಟು ಸಂಕ್ರಾಂತಿಗಳು ಬರಬೇಕು?

1 COMMENT

Leave a Reply