
ಡಿಜಿಟಲ್ ಕನ್ನಡ ಟೀಮ್
ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಠವೇ ಗೆದ್ದಿದೆ. ತಾವು ವಹಿಸಿಕೊಳ್ಳಲು ಆಗಲ್ಲ ಎಂದಿದ್ದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹೊಣೆಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಕೊರಳಿಗೇ ಕಟ್ಟುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಪರಮೇಶ್ವರ ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಸಿದ್ದರಾಮಯ್ಯ ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಮೀಪಿಸಿರುವ ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಹೆಚ್ಚಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ತಮಗೆ ಬೇಕಿಲ್ಲ. ಇದನ್ನು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡುವುದಾಗಿ ಪರಮೇಶ್ವರ ಅವರು ಬುಧವಾರ ಹೇಳಿದ್ದು ಸಿದ್ದರಾಮಯ್ಯ ಅವರನ್ನು ಕೆರಳಿಸಿತ್ತು.
ಏಕೆಂದರೆ ಸಿದ್ದರಾಮಯ್ಯ ಅವರು ಮಂಗಳವಾರವೇ ಪರಮೇಶ್ವರ ಅವರ ಜತೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದರು. ಆದರೂ ಪರಮೇಶ್ವರ ಅವರು ಮಾಧ್ಯಮದವರ ಬಳಿ ವ್ಯತಿರಿಕ್ತ ಹೇಳಿಕೆ ಕೊಟ್ಟದ್ದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಪರಮೇಶ್ವರ ಅವರ ಸಮ್ಮತಿ ಪಡದೇ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಕೂಡ ಬುಧವಾರ ಮಾಧ್ಯಮದವರಿಗೆ ಹೇಳಿದ್ದರು. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರ ವಿಭಿನ್ನ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿತ್ತು.
ಇದೀಗ ನೇಮಕ ಸಂಬಂಧ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿಸುವ ಮೂಲಕ ಪರಮೇಶ್ವರ ಅವರಿಗೆ ಟಾಂಗ್ ಕೊಟ್ಟಿದ್ದಾರೆ.