ಸಂಕ್ರಾಂತಿಗೆ ಬಿಹಾರ ರಾಜಕೀಯ ಥಿಯೇಟರ್ ನಲ್ಲಿ ಓಡ್ತಿರೋ ಚಿತ್ರ ‘ಜಂಗಲ್ ರಾಜ್ ರಿಟರ್ನ್ಸ್’! ಏನ್ಮಾಡೋದು, ಇದು ‘ಪ್ರೇಕ್ಷಕರ’ ಒತ್ತಾಸೆಯಿಂದ್ಲೇ ಬಂದಿದ್ದು…

ಪ್ರವೀಣ್ ಕುಮಾರ್

ಬಿಹಾರದಲ್ಲಿ ಜೆಡಿಯು- ಆರ್ ಜೆ ಡಿ ಮೈತ್ರಿ ಅಧಿಕಾರ ಪಡೆದುಕೊಂಡ ಎರಡು ತಿಂಗಳ ನಂತರದ ವರದಿ ನೋಡಿದರೆ, 578 ಹತ್ಯೆಗಳು ವರದಿಯಾಗಿವೆ! ಹಣ ವಸೂಲಿ, ಬೆದರಿಕೆ, ಸಂಘರ್ಷ ಇವೆಲ್ಲದರ ಕಡತ ಬೇರೇನೇ ಬಿಡಿ. ಅಲ್ಲಿಗೆ, ನಿತೀಶ್ ಎಂಥದೇ ಸುಭಗರಾಗಿದ್ದರೂ ಲಾಲು ಪ್ರಸಾದ್ ಯಾದವ್ ಜತೆ ಅಧಿಕಾರ ಹಂಚಿಕೊಂಡರೆ ಮತ್ತೆ ಬಿಹಾರದಲ್ಲಿ ಕಾನೂನು- ಸುವ್ಯವಸ್ಥೆಗಳಿಗೆ ಜಾಗವಿಲ್ಲದ ಜಂಗಲ್ ರಾಜ್ ಸ್ಥಾಪನೆಯಾಗಲಿದೆ ಅಂತ ವ್ಯಕ್ತವಾಗಿದ್ದ ಆತಂಕಗಳು ನಿಜವಾಗುತ್ತಿವೆ. ಇದು ಉತ್ತರಾಯಣ ಪುಣ್ಯಕಾಲದಲ್ಲಿ ತೋರುತ್ತಿರುವ ಬಿಹಾರದ ಸ್ಥಿತಿ.

ಇಲ್ಲ, ದೆಹಲಿಯಲ್ಲೂ ಅಪರಾಧಗಳು ನಡೆಯುತ್ತಿಲ್ಲವೇ ಅಂತೆಲ್ಲ ಪ್ರಶ್ನಿಸಿ ಜಂಗಲ್ ರಾಜ್ ಹಣೆಪಟ್ಟಿಯನ್ನು ನಿರಾಕರಿಸುವ ಕೆಲಸ ಆಡಳಿತ ಪಕ್ಷದಿಂದ ಆಗುತ್ತಿದೆಯಾದರೂ ಅದರ ಜಾಯಮಾನವು ಕಣ್ಣಿಗೆ ರಾಚುತ್ತಿದೆ. ಅಪರಾಧ ಎಂದಾದಾಗ ಎಲ್ಲ ಅಂಕಿಸಂಖ್ಯೆಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು ಎಂಬ ವಾದ ಸರಿಯಾದರೂ, ಬಿಹಾರದಲ್ಲಿ ಅದಕ್ಕೊಂದು ಪ್ಯಾಟರ್ನ್ ಇದೆ. ಅದೆಂದರೆ, ಇಲ್ಲಿನ ಹತ್ಯೆಗಳೆಲ್ಲ ಬಹುತೇಕವಾಗಿ ಹಫ್ತಾ ವಸೂಲಿಗೇ ಬೆಸೆದುಕೊಂಡಿರುತ್ತವೆ. ಈ ಸಂಘಟಿತ ಅಪರಾಧವಿದೆಯಲ್ಲ, ಇದು ರಾಜಕೀಯ ಪ್ರಭಾವಗಳನ್ನು ತನ್ನೊಂದಿಗೆ ಇರಿಸಿಕೊಂಡಿರುವುದೇ ಹೆಚ್ಚು. ಈ ಹಿಂದೆ ಬಿಹಾರದಲ್ಲಿ ಲಾಲು ಮುಖ್ಯಮಂತ್ರಿ ಆಗಿದ್ದಾಗ ಯಾವ ಬಗೆಯಲ್ಲಿ ಅಪರಾಧ ನಮೂನೆ ಇತ್ತೋ ಅದೇ ನಮೂನೆ ಇಲ್ಲಿ ಕಾಣಿಸಿಕೊಂಡಿದೆ ಅನ್ನೋದೇ ಪ್ರಮುಖವಾಗಿ ಗಮನಿಸಬೇಕಾದದ್ದು.

ಪ್ರಾರಂಭದಲ್ಲಿ ಅಲ್ಲಿನ ಉದ್ಯಮಿಗಳಿಗೆ ಇಂತಿಷ್ಟು ಹಣ ಕೊಡಿ ಎಂಬ ಬೆದರಿಕೆಗಳು ಬರುತ್ತವೆ. ಬಗ್ಗದಿದ್ದರೆ ಅಪಹರಣ. ಇನ್ನೂ ಯಾಮಾರಿದರೆ ಕೊಲೆ. ಕಾಮಗಾರಿಗಳಲ್ಲಿ ಲೋಪ- ಭ್ರಷ್ಟಾಚಾರ ಪ್ರಶ್ನಿಸುವ ಮಾತು ದೂರವೇ ಉಳೀತು.

ಡಿಸೆಂಬರ್ 27ರಂದು ಬ್ರಜೇಶ್ ಕುಮಾರ್, ಮುಕೇಶ್ ಕುಮಾರ್ ಎಂಬಿಬ್ಬರು ಸಿವಿಲ್ ಎಂಜಿನಿಯರ್ ಗಳು ಧರ್ಬಾಂಗದ ರಾಜ್ಯ ಹೆದ್ದಾರಿ ಕಾಮಗಾರಿಯ ಪರಿವೀಕ್ಷಣೆಗೆ ತೆರಳಿದ್ದಾಗ, ಮೊಟಾರ್ ಸೈಕಲ್ ನಲ್ಲಿ ಬಂದಿದ್ದ ಅಪರಿಚಿತರು ಇವರನ್ನು ಗುಂಡಿಟ್ಟು ಸಾಯಿಸಿದರು. ಮರುದಿನವೇ ವೈಶಾಲಿ ಜಿಲ್ಲೆಯಲ್ಲಿ ಖಾಸಗಿ ದೂರಸಂಪರ್ಕ ಕಂಪನಿಯ ಎಂಜಿನಿಯರ್ ಒಬ್ಬರ ಕೊಲೆಯಾಯಿತು. ಈ ಪೈಕಿ ಮೊದಲಿಬ್ಬರ ವಿಷಯದಲ್ಲಿ ವಸೂಲಿ ಕರೆಗಳು ಬಂದಿರುವ ಬಗ್ಗೆ ವರದಿಯಾಗಿದೆ ಹಾಗೂ ಇನ್ನೊಬ್ಬ ಎಂಜಿನಿಯರ್ ಕೊಲೆ ಭೂ ವ್ಯವಹಾರಗಳೊಂದಿಗೆ ತಳುಕು ಹಾಕಿಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಡಿಸೆಂಬರ್ 28ರಂದು ಖಾಸಗಿ ನಿರ್ಮಾಣ ಕಂಪನಿಯ ಮೇಲ್ವಿಚಾರಕ ನವಾಲ್ ಕುಮಾರ್ ಕುಶ್ವಾ ಕೊಲೆ, ಮುಜಫ್ಫರಪುರದಲ್ಲಿ ಧಾನ್ಯ ವ್ಯಾಪಾರಿ ಸಂತೋಷ್ ಕುಮಾರ್ ಚೌಧರಿ ಹತ್ಯೆ… ಹೀಗೆ ಹಣ ಎಲ್ಲಿದೆಯೋ ಅಲ್ಲೆಲ್ಲ ಅಪರಾಧ ಮಾಮೂಲಾಗುತ್ತಿದೆ.

ನವೆಂಬರ್ ನಲ್ಲಿ ಕೆನರಾ ಬ್ಯಾಂಕ್ ನಿಂದ 42 ಲಕ್ಷ ಲೂಟಿ, ಡಿಸೆಂಬರ್ ನಲ್ಲಿ ಹಾಜಿಪುರದ ಗ್ರಾಮೀಣ ಬ್ಯಾಂಕ್ ನಿಂದ 6 ಲಕ್ಷ ಲೂಟಿ…

ಇದು ಜಂಗಲ್ ರಾಜ್ ಅಲ್ಲ ಎಂದರೆ ಇನ್ಯಾವುದು?

ಪರಿಸ್ಥಿತಿ ಏನಾಗಿದೆ ಎಂದರೆ, ಆರ್ಜೆಡಿ- ಜೆಡಿಯು ಮೈತ್ರಿಕೂಟ ಅಧಿಕಾರಕ್ಕೆ ಬಂದ ಎರಡೇ ತಿಂಗಳುಗಳಲ್ಲಿ ಅಲ್ಲಿನ ಉದ್ದಿಮೆಗಳಲ್ಲಿ ಯಾರೂ ಕೆಲಸ ಮಾಡಲು ಇಷ್ಟಪಡದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ನಿರ್ಮಾಣ ಸಂಸ್ಥೆಗಳಿಗೆ ಸೇರಿದ ಎಂಜಿನಿಯರ್ ಗಳೆಲ್ಲ ಕಂಪನಿಗಳಿಗೆ ರಾಜೀನಾಮೆ ಸಲ್ಲಿಸಿ ಬಿಹಾರದಿಂದ ಹೊರಗೆ ಕೆಲಸ ಹುಡುಕಿಕೊಳ್ಳುತ್ತಿದ್ದಾರೆ.

ಹತರಾದ ಬ್ರಜೇಶ್ ಮತ್ತು ಮುಕೇಶ್ ಕೆಲಸ ಮಾಡುತ್ತಿದ್ದ ಕಂಪನಿಯ ಮುಖ್ಯ ಯೋಜನಾಧಿಕಾರಿ ಹೇಳಿರುವ ಪ್ರಕಾರ, ಇವರಿಬ್ಬರ ಹತ್ಯೆ ನಂತರ ಹನ್ನೆರಡು ಎಂಜಿನಿಯರ್ ಗಳು ಕೆಲಸ ಬಿಟ್ಟು ಬಿಹಾರದಿಂದ ಹೊರಹೋಗಿದ್ದಾರೆ. ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳು ಪೋಲೀಸ್ ಭದ್ರತೆಗೆ ಬೇಡಿಕೆ ಇಡುತ್ತಿವೆ. ಉಪ ಮುಖ್ಯಮಂತ್ರಿಯಾಗಿರುವ ಲಾಲು ಪುತ್ರ ತೇಜಸ್ವಿ ಬಳಿಯಲ್ಲೇ ರಸ್ತೆ ಕಾಮಗಾರಿಯ ಸಚಿವ ಖಾತೆ ಇದೆ. ಉದ್ಯಮಪತಿಗಳ ಹೆದರಿಕೆಗಳನ್ನೆಲ್ಲ ದೂರ ಮಾಡುವುದಾಗಿ ತೇಜಸ್ವಿ ಹೇಳುತ್ತಿದ್ದರೂ ಆ ಭಾವನೆ ಅಲ್ಲಿರುವವರಲ್ಲಿ ಮೂಡುತ್ತಿಲ್ಲ. ಎಂಜಿನಿಯರ್ ಗಳ ಕತೆ ಹಂಗಿರಲಿ, ಕೆಳಹಂತದ ಕೆಲಸಗಾರರೂ ಬಿಹಾರ ಬೇಡವೆಂದು ತೊರೆಯುತ್ತಿದ್ದಾರೆ ಅಂತ ಅಲ್ಲಿ ವಿದ್ಯುತ್ ಪೂರೈಕೆ ನಿಭಾಯಿಸುತ್ತಿರುವ ಕಂಪನಿ ಗೋಳು ತೋಡಿಕೊಳ್ಳುತ್ತಿದೆ.

ಲಾಲು ಪ್ರಸಾದ್ ಯಾದವ್ ಅಧಿಕಾರಕ್ಕೆ ಅರ್ಹರಲ್ಲದೇ ದೂರ ಉಳಿಯಬೇಕಿರುವ ಪರಿಸ್ಥಿತಿ ಇದ್ದರೂ ಆಡಳಿತದಲ್ಲಿ ಅವರದ್ದೇ ಹುಕುಂ ನಡೆಯುತ್ತಿದೆ ಎಂಬುದಕ್ಕೆ ಉದಾಹರಣೆಗಳಂತೂ ಸಿಗುತ್ತಿವೆ. ದರ್ಭಾಂಗದ ವೈದ್ಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಜಾಗೊಂಡಿದ್ದ ಕೆಲಸಗಾರರನ್ನು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದರ ಆದೇಶದಂತೆ ಮರು ನೇಮಕ ಮಾಡಿಕೊಳ್ಳಲಾಗಿದೆ ಅಂತ ಆ ಸಂಸ್ಥೆಯ ಸುಪರಿಂಟೆಂಡೆಂಟ್ ಖುಲ್ಲಂಖುಲ್ಲ ಸುತ್ತೋಲೆ ಕಳುಹಿಸುವಷ್ಟರಮಟ್ಟಿಗೆ ಲಾಲು ಛಾಪು ಇದೆ.

ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದ ಲಾಲು ಪ್ರಸಾದರನ್ನು ಅಂಕುಶದಲ್ಲಿಡಲಾಗದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರರಿಗೆ, ಬಿಹಾರದಲ್ಲಿ ‘ಜಂಗಲ್ ರಾಜ್ ರಿಟರ್ನ್ಸ್’ ಪ್ರದರ್ಶನ ತಡೆಯೋ ತಾಕತ್ತಿದೆಯೇ? ಸೆಕ್ಯುಲರಿಸಂ ಗೆಲ್ಲಿಸುತ್ತೇವೆಂದು ಮಹಾಘಟಬಂಧನಕ್ಕೆ ಮತವೊತ್ತಿದವರು ಉತ್ತರ ಹುಡುಕುತ್ತಿದ್ದಾರೆ.

ಅಂದಹಾಗೆ, ಅಪಹರಣ- ಹಫ್ತಾ ವಸೂಲಿಗಳೇ ಬಂಡವಾಳವಾಗಿರುವ ಜಂಗಲ್ ರಾಜ್ ಹೇಗಿರುತ್ತೆ, ಅಲ್ಲಿ ರಾಜಕೀಯ ಹೆಂಗೆ ಕೆಲಸ ಮಾಡುತ್ತೆ ಎಂಬ ಕಲ್ಪನೆ ನಿಮ್ಮದಾಗಬೇಕಾದರೆ ಪ್ರಕಾಶ್ ಜಾ ನಿರ್ದೇಶನದ ಹಳೆ ಹಿಂದಿ ಚಿತ್ರ ‘ಅಪಹರಣ್’ ಅನ್ನು ಈ ವಾರಾಂತ್ಯ ವೀಕ್ಷಣೆಗೆ ಹುಡುಕಿಟ್ಟುಕೊಳ್ಳಬಹುದು.

Leave a Reply