ಏನಿದು ಸ್ಟಾರ್ಟ್ ಅಪ್ ಇಂಡಿಯಾ? ನೀವು ತಿಳಿದಿರಲೇಬೇಕಾದ 4 ಆಯಾಮಗಳು

ಡಿಜಿಟಲ್ ಕನ್ನಡ ಟೀಮ್

ಯುವ ಜನರಲ್ಲಿ ಉದ್ಯಮಶೀಲತೆ ಬೆಳೆಸುವ ಸ್ಟಾರ್ಟ್ ಅಪ್ ಇಂಡಿಯಾ ಅಭಿಯಾನಕ್ಕೆ ಕೇಂದ್ರ ಸರ್ಕಾರ ಶನಿವಾರ ಚಾಲನೆ ನೀಡಿದೆ. ಸಮ್ಮೇಳನವನ್ನು ಉದ್ಘಾಟಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಲೈಸೆನ್ಸ್ ರಾಜ್ ನಿಂದ ಮುಕ್ತವಾಗುವ ಅಂತಿಮ ಹಂತವೇ ಸ್ಟಾರ್ಟ್ ಅಪ್ ಇಂಡಿಯಾ ಎಂದು ಹೇಳಿದ್ದಾರೆ. ಸಂಜೆ ಪ್ರಧಾನಿ ನರೇಂದ್ರ ಮೋದಿಯವರೂ ಪಾಲ್ಗೊಳ್ಳುವ ಸಮಾರಂಭಕ್ಕೆ ಖ್ಯಾತನಾಮ ಕಂಪನಿಗಳ ಸಿಇಒಗಳು, ಜನಪ್ರಿಯ ಸ್ಟಾರ್ಟ್ ಅಪ್ ಗಳ ಸಂಸ್ಥಾಪಕರು ಸೇರಿದಂತೆ ಹಲವು ಗಣ್ಯರು ಹಾಜರಿದ್ದಾರೆ. ದಿನವಿಡೀ ಸಂವಾದ- ವಿಚಾರಗೋಷ್ಟಿಗಳಿವೆ.

ಈ ಸಂದರ್ಭದಲ್ಲಿ ‘ಸ್ಟಾರ್ಟ್ ಅಪ್ ಇಂಡಿಯಾ’ಕ್ಕೆ ಇರುವ ಸವಾಲುಗಳನ್ನು, ಈ ಸಮ್ಮೇಳನವು ಹುಡುಕುತ್ತಿರುವ ಉತ್ತರಗಳನ್ನು ಹೀಗೆಲ್ಲ ಪಟ್ಟಿ ಮಾಡಬಹುದು.

  1. ಸ್ಟಾರ್ಟ್ ಅಪ್ ಅಂತ ಯಾವುದನ್ನು ಕರೆಯಬೇಕು ಎಂಬುದು ಮುಖ್ಯಪ್ರಶ್ನೆ. ಹೊಸದಾಗಿ ಪ್ರಾರಂಭವಾಗಿರುವ ಎಲ್ಲವನ್ನೂ ಸ್ಟಾರ್ಟ್ ಅಪ್ ಎಂದೇ ಕರೆಯುವ ರೂಢಿ ಬಂದಿದೆ. ಆದರೆ ಸ್ಟಾರ್ಟ್ ಅಪ್ ಎಂಬುದಕ್ಕೆ ಕೆಲವು ನಿರ್ದಿಷ್ಟ ವ್ಯಾಪ್ತಿ- ವ್ಯಾಖ್ಯೆ ಬೇಕಿದೆ ಅಂತ ನಾಸ್ಕಾಂ ಹೇಳಿದೆ. ಭಾರತದಲ್ಲೇ ಮುಖ್ಯ ಕಚೇರಿ ಹೊಂದಿ, ಐದು ವರ್ಷಗಳ ಒಳಗೆ ಎಲ್ಲ ಕಾನೂನು ಪ್ರಕ್ರಿಯೆ ಮುಗಿಸಿರಬೇಕು. ವಾರ್ಷಿಕ 25 ಕೋಟಿ ರುಪಾಯಿಗಳಿಗಿಂತ ಹೆಚ್ಚು ವಹಿವಾಟು ಮಾಡುವ ಉದ್ಯಮಕ್ಕೆ ಸ್ಟಾರ್ಟ್ ಅಪ್ ಪಟ್ಟ ಬೇಕಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
  2. ಸ್ಟಾರ್ಟ್ ಅಪ್ ಉದ್ಯಮಕ್ಕೆ ಪ್ರಾರಂಭದಲ್ಲಿ ಒದಗುವ ಬಂಡವಾಳವನ್ನು ತೆರಿಗೆ ಮುಕ್ತಗೊಳಿಸುವ ಬಗ್ಗೆ ಸರ್ಕಾರ ಈಗಾಗಲೇ ಯೋಚಿಸಿರುವ ವರದಿಗಳಿವೆ. ಈಗಿರುವ ಕಾಯ್ದೆಗಳ ಪ್ರಕಾರ ಪ್ರಾರಂಭದ ಸೀಡ್ ಫಂಡಿಂಗ್ (ಬೀಜ ಬಂಡವಾಳ) ಸಹ ಸ್ಟಾರ್ಟ್ ಅಪ್ ಗಳ ಆದಾಯ ಅಂತ ಪರಿಗಣಿಸಿ ಅದಕ್ಕೆ ತೆರಿಗೆ ಬೀಳುತ್ತಿತ್ತು.
  3. ಸ್ಟಾರ್ಟ್ ಅಪ್ ಹೊಂದುವುದರಲ್ಲಿ ಜಾಗತಿಕವಾಗಿ ಭಾರತವು ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಇಂಗ್ಲೆಂಡ್ ಗಳು ಮೊದಲೆರಡು ಸ್ಥಾನಗಳಲ್ಲಿವೆ. ಭಾರತದ ಎದುರಿಗಿರುವ ಅತಿದೊಡ್ಡ ಸವಾಲೆಂದರೆ ಇಲ್ಲಿನ ಬೃಹತ್ ಯುವ ಸಮುದಾಯಕ್ಕೆ ಉದ್ಯೋಗವನ್ನು ಒದಗಿಸುವುದು. ಈ ಪ್ರಮಾಣದಲ್ಲಿ ಉದ್ಯೋಗ ನೀಡುವುದು ಸರ್ಕಾರಕ್ಕಂತೂ ಆಗದ ಮಾತು. ಇದನ್ನೇ ತಮ್ಮ ಉದ್ಘಾಟನಾ ಭಾಷಣದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರೂ ಹೇಳಿದ್ದಾರೆ. ಹಾಗೆಂದೇ ಪ್ರಧಾನಿ ನರೇಂದ್ರ ಮೋದಿಯವರು ಮಹಾತ್ವಾಕಾಂಕ್ಷೆಯಿಂದ ಹಮ್ಮಿಕೊಂಡಿರುವ ಯೋಜನೆ ಈ ಸ್ಟಾರ್ಟ್ ಅಪ್ ಇಂಡಿಯಾ. ಇಲ್ಲಿ ಸರ್ಕಾರದ ಪಾತ್ರವೇನೆಂದರೆ, ಖಾಸಗಿ ನವೋದ್ಯಮಗಳು ಅರಳುವುದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುವುದು.
  4. ನವೋದ್ಯಮದ ಈ ಎಲ್ಲ ಸಂಭ್ರಮಗಳ ಹೊರತಾಗಿಯೂ ವಾಸ್ತವಿಕ ನೆಲೆಯ ಆತಂಕಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಸ್ವತಃ ನವೋದ್ಯಮಗಳಿಗೆ ಹಣ ಹೂಡುತ್ತಿರುವ ಟಿ. ವಿ. ಮೋಹನದಾಸ್ ಪೈ ಅವರು ಕೆಲ ತಿಂಗಳ ಹಿಂದೆ ಆಡಿದ್ದ ಮಾತುಗಳು ಮುಖ್ಯವಾಗುತ್ತವೆ. ‘ಈಗಿನ ಸ್ಟಾರ್ಟ್ ಅಪ್ ಗಳಲ್ಲಿಶೇ. 10ರಷ್ಟು ಮಾತ್ರವೇ ಯಶಸ್ಸು ಪಡೆಯುತ್ತವೆ. ಶೇ. 25ರಷ್ಟು ಸಂಭಾಳಿಸಿಕೊಂಡು ಹೋಗಬಹುದಾದ ಮಟ್ಟದಲ್ಲಿರುತ್ತವೆ. ಉಳಿದವಕ್ಕೆಲ್ಲ ವೈಫಲ್ಯವೇ ಎದುರಾಗಲಿದೆ.’

ಇಂಥ ವೈಫಲ್ಯದ ಹೊಡೆತ ಕಡಿಮೆಯಾಗಿಸುವುದರಲ್ಲೇ ‘ಸ್ಟಾರ್ಟ್ ಅಪ್ ಇಂಡಿಯಾ’ ಯೋಜನೆಯ ಸವಾಲು ಅಡಗಿದೆ. ಸದ್ಯಕ್ಕೆ ಭಾರತದಲ್ಲಿ 75 ಬಿಲಿಯನ್ ಡಾಲರ್ ಮೌಲ್ಯದ ಸುಮಾರು 18 ಸಾವಿರ ನವೋದ್ದಿಮೆಗಳು 3 ಲಕ್ಷ ಜನರಿಗೆ ಉದ್ಯೋಗ ನೀಡಿವೆ.

Leave a Reply