ನವೋದ್ದಿಮೆಯ ನವಭಾರತಕ್ಕೆ ಪ್ರಧಾನಿ ಹರವಿಟ್ಟ ನೀಲನಕ್ಷೆಯಲ್ಲಿ ತೆರಿಗೆ ನಿರಾಳತೆ, ಪ್ರಕ್ರಿಯೆಗಳ ಸರಳೀಕರಣ, ವೈಫಲ್ಯಗಳಿಗೂ ಇದೆ ಸಮಾಧಾನ

 

ಡಿಜಿಟಲ್ ಕನ್ನಡ ಟೀಮ್

ದೆಹಲಿ ವಿಜ್ಞಾನ ಭವನದಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಸಮ್ಮೇಳನ ಶನಿವಾರ ಬೆಳಗಿನಿಂದ ನಡೆಯುತ್ತಿತ್ತು. ನವೋದ್ದಿಮೆಗಳಿಗೆ ಸರ್ಕಾರದಿಂದ ಆಗಬೇಕಾದದ್ದು ಏನು ಎಂಬ ಬಗ್ಗೆ ಮಂಥನಗಳಾಗುತ್ತಿದ್ದವು. ಶನಿವಾರ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಪ್ರಕಟಿಸಿದ ಮಾರ್ಗಸೂಚಿಯಲ್ಲಿ ಭಾರೀ ಉತ್ತೇಜಕ ಕ್ರಮಗಳೇ ಪ್ರಕಟವಾಗಿದ್ದು, ನವೋದ್ದಿಮೆಯ ನೇತಾರರಲ್ಲಿ ಸಂತಸ ಹಬ್ಬಿಸಿರುವುದು ಸುಳ್ಳಲ್ಲ.

  • ನವೋದ್ದಿಮೆಗಳಿಗೆ ಮೊದಲ ಮೂರು ವರ್ಷ ಯಾವ ತಪಾಸಣೆಗಳಿಲ್ಲ. ಅಷ್ಟೇ ಅಲ್ಲ, ಮೂರು ವರ್ಷ ತೆರಿಗೆಯೂ ಇಲ್ಲ.
  • ಯಾರು ನವೋದ್ದಿಮೆ ಆರಂಭಕ್ಕೆ ತಮ್ಮದೇ ಸ್ವತ್ತು- ಸಂಪತ್ತನ್ನುಮಾರಿಕೊಳ್ಳುತ್ತಾರೋ ಅಂಥ ವ್ಯವಹಾರಗಳ ಮೇಲೆ ಕ್ಯಾಪಿಟಲ್ ಗೇನ್ ತೆರಿಗೆ ಅನ್ವಯವಾಗುವುದಿಲ್ಲ.
  • ನವೋದ್ದಿಮೆಗಾಗಿ 10 ಸಾವಿರ ಕೋಟಿ ಕಾರ್ಪಸ್ ನಿಧಿ.
  • ಪೇಟೆಂಟ್ ಶುಲ್ಕದಲ್ಲಿ ಶೇ. 80ರಷ್ಟು ಇಳಿಕೆ.
  • ನವೋದ್ದಿಮೆ ಆರಂಭ ಪ್ರಕ್ರಿಯೆ- ನೋಂದಣಿಗಳಿಗೆ ಸಮಯ ಹಿಡಿಯುವುದನ್ನು ತಪ್ಪಿಸುವುದಕ್ಕೆ ನೋಂದಣಿಗೆಂದೇ ಮೊಬೈಲ್ ಕಿರು ತಂತ್ರಾಂಶವೊಂದರ ಅಭಿವೃದ್ಧಿ.

ಇವು ನರೇಂದ್ರ ಮೋದಿಯವರು ಸ್ಟಾರ್ಟ್ ಅಪ್ ಉದ್ದಿಮೆ ಮುಂದೆ ಹರಡಿಟ್ಟಿರುವ ನೀಲನಕ್ಷೆ. ಇದನ್ನು ಪ್ರಕಟಿಸುವುದಕ್ಕೂ ಮುಂಚೆ ಪ್ರಧಾನಿ ಸ್ಟಾರ್ಟ್ ಅಪ್ ಗಳ ಟ್ರೆಂಡ್ ಚಿತ್ರಣ ಕಟ್ಟಿಕೊಡುತ್ತ ಆಸಕ್ತಿಕರವಾಗಿ ಮಾತಿಗಿಳಿದರು.

‘ಜನರ ಯೋಚನೆ ಏನು ಎಂದರೆ ಈ ವಿಷಯದಲ್ಲಿ ಸರ್ಕಾರ ಏನು ಮಾಡಿದರೆ ಏನಾಗುತ್ತದೆ ಅನ್ನೋದು. ಆದರೆ ಇಷ್ಟು ವರ್ಷಗಳಲ್ಲಿ ಸರ್ಕಾರಗಳು ಏನೇನೋ ಮಾಡಿವೆ. ಇವೆಲ್ಲವುಗಳಿಂದ ನಾವು ತಲುಪಿರೋದೆಲ್ಲಿ ಅಂತಲೂ ನಮಗೆ ಗೊತ್ತಿದೆ. ಹೀಗಾಗಿ ನಾವಿವತ್ತು ನಿಮ್ಮಂಥ ಸ್ಟಾರ್ಟ್ ಅಪ್ ಪ್ರಯತ್ನಶೀಲರ ನಡುವೆ ಬಂದು ನಿಂತಿರೋದು ಏಕೆ ಅಂತಂದ್ರೆ- ಸರ್ಕಾರ ಏನು ಮಾಡದೇ ಇದ್ದರೆ ನಿಮಗೆ ಒಳ್ಳೇದಾಗುತ್ತೆ ಅಂತ ಹೇಳಿ, ಹಾಗೆ ನಡೆದುಕೊಳ್ಳುತ್ತೇವೆ’ ಎಂದಾಗ ಚಪ್ಪಾಳೆ- ನಗೆಗಡಲ ಮೊರೆತ.

ಸ್ಟಾರ್ಟ್ ಅಪ್ ಪ್ರಯಾಣವೆಂಬುದು ಉದ್ಯಮಿಯಾಗುವವನ ಪಾಲಿಗೆ ಸುಲಭವಾಗಿ ಒಲಿಯುವಂಥದ್ದಲ್ಲ ಎಂಬುದನ್ನು ವಿವರಿಸುತ್ತ, ಪ್ರಧಾನಿ ಮೋದಿ ನವೋದ್ದಿಮೆಯಲ್ಲಿ ತೊಡಗಿಕೊಂಡವರ ಸ್ಫೂರ್ತಿ ಹೆಚ್ಚಿಸುವ ಮಾತುಗಳನ್ನಾಡಿದರು.

‘ಉದ್ದಿಮೆ ಆರಂಭಿಸುವುದರಿಂದ ಎಷ್ಟು ಹಣ ಮಾಡಲಿಕ್ಕಾಗುವುದು ಎಂಬ ಯೋಚನೆಯೇ ಪ್ರಮುಖವಾಗಿದ್ದರೆ ಖಂಡಿತ ನೀವ್ಯಾರೂ ಏನನ್ನೂ ಕಟ್ಟುತ್ತಿರಲಿಲ್ಲ. ಸಮಸ್ಯೆಯೊಂದನ್ನು ಹೇಗೆ ಪರಿಹರಿಸಬಹುದು ಎಂಬುದೇ ಪ್ರಾರಂಭದಲ್ಲಿ ಆವರಿಸಿಕೊಳ್ಳುವ ಯೋಚನೆ ಆಗಿರುತ್ತದೆ. ಹಣ ಎಂಬುದು ಈ ಪ್ರಕ್ರಿಯೆಯಲ್ಲಿ ಬರುವ ಉಪೋತ್ಪನ್ನವಷ್ಟೆ. ಅದನ್ನುಅರ್ಥ ಮಾಡಿಕೊಂಡಿರೋದ್ರಿಂದಲೇ ನಿಮ್ಮಲ್ಲಿ ಹಲವರು ಇಂದು ಕುಬೇರರಾಗಿದ್ದೀರಿ. ‘

‘ಹೊಸ ವಿಚಾರಗಳು ಪ್ರಾರಂಭದಲ್ಲಿ ಹುಚ್ಚು ಹುಚ್ಚಾಗಿಯೇ ಕಾಣುತ್ತವೆ. ಆದರೆ ಅವು ಸಾಕಾರಗೊಂಡಾಗ ಅನನ್ಯವೆನಿಸುತ್ತವೆ. ಬಾಹ್ಯಾಕಾಶ ಯೋಜನೆಗಳನ್ನು ಪ್ರಾರಂಭಿಸಿದಾಗಲೂ ಇದೇನು ಹುಚ್ಚಾಟ ಅಂತ ನಕ್ಕವರಿರಬಹುದು’ ಅಂತ ಪ್ರಧಾನಿ ಮೋದಿ ಸ್ಫೂರ್ತಿ ತುಂಬಿದರು.

ಅಲ್ಲದೇ, ನವೋದ್ದಿಮೆಯ ಯೋಜನೆಯೊಂದು ವೈಫಲ್ಯ ಎದುರಿಸಿದಾಗ ಅದನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯೂ ಸರಳವಾಗಿರಬೇಕು. ಏಕೆಂದರೆ ವೈಫಲ್ಯವೆಂಬುದು ಭಾರದ ಸಂಗತಿ ಆಗಲೇಬಾರದು. ನೀರಲ್ಲಿ ಒಂದೆರಡು ಸಾರಿ ಮುಳುಗು ಹಾಕಿದ ನಂತರವಷ್ಟೇ ಈಜೋದಕ್ಕೆ ಸಾಧ್ಯವಾಗುವುದಲ್ಲವೇ? ಈ ನಿಟ್ಟಿನಲ್ಲಿ 90 ದಿನಗಳಲ್ಲೇ ನಿರ್ಗಮನ ಮಾಡಬಹುದಾದ ಅವಕಾಶದ ಮಸೂದೆಯೊಂದನ್ನು ತರುವವರಿದ್ದೇವೆ. ಆದರೆ ಸಂಸತ್ತಿನ ಕಾರ್ಯನಿರ್ವಹಣೆ ಸ್ಥಿತಿ ನಿಮಗೇ ಗೊತ್ತು. ಸಂಸತ್ ಕಲಾಪ ಹಿಡಿದಿಟ್ಟಿರುವವರ ಮೇಲೆ ಟ್ವಿಟ್ಟರ್ ಇತ್ಯಾದಿಗಳ ಮೂಲಕ ಈ ತಲೆಮಾರಿನವರು ಒತ್ತಡ ಸೃಷ್ಟಿಸಿ ಎನ್ನುವ ಮೂಲಕ ನಗೆ ಉಕ್ಕಿಸಿದರು ಪ್ರಧಾನಿ.

Leave a Reply