ಸುದ್ದಿಸಂತೆ: ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಕ್ಕೆ ಶಿಫಾರಸು, ಬಂಗಾಳದ ಗುದ್ದೋಡುವಿನಲ್ಲೇಕಿಲ್ಲ ಬಂಧನ?

ಲಾಲ್ ಬಾಗ್ ನಲ್ಲಿ ಶನಿವಾರ ಶುರುವಾದ ಫಲಪುಷ್ಪ ಪ್ರದರ್ಶನ ಜ.26ರವರೆಗೆ ನಡೆಯಲಿದೆ.

 

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಕ್ಕೆ ಡಾ. ಹಿ.ಚಿ. ಬೋರಲಿಂಗಯ್ಯ ಸಮಿತಿ ಶಿಫಾರಸ್ಸು

 

ಬರುವ ಶೈಕ್ಷಣಿಕ ವರ್ಷದಿಂದಲೇ ಎಂಜಿನಿಯರಿಂಗ್, ಮೆಡಿಕಲ್, ಕಾನೂನು, ಕೃಷಿ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಕನ್ನಡ ಬೋಧನೆ ಕಡ್ಡಾಯಗೊಳಿಸಬೇಕು ಎಂದು ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆಯ ಸಮಿತಿ ವರದಿ ಶಿಫಾರಸ್ಸು ಮಾಡಿದೆ.

ವೃತ್ತಿ ಶಿಕ್ಷಣದಲ್ಲಿ ಕನ್ನಡ ಬೋಧನೆ ಕುರಿತು ಬೋರಲಿಂಗಯ್ಯ ಸಮಿತಿಯು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಶನಿವಾರ ವರದಿ ಸಲ್ಲಿಸಿದ್ದು, ಮುಖ್ಯಾಂಶಗಳು ಹೀಗಿವೆ:

ಕರ್ನಾಟಕದಲ್ಲಿರುವ ಎಲ್ಲಾ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು, ವಿಶ್ವೇಶ್ವರಯ್ಯ ತಾಂತ್ರಿಕ, ಕಾನೂನು, ಕೃಷಿ, ಪಶು, ಪಶುವೈದ್ಯಕೀಯ, ಮೀನುಗಾರಿಕೆ ವಿಜ್ಞಾನ ಸೇರಿದಂತೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷಾ ಬೋಧನೆ ಕಡ್ಡಾಯ.

ಪದವಿ ಶಿಕ್ಷಣ ಮುಗಿಸಿ ಬಂದವರಿಗೆ 1 ರಿಂದ 4 ರವರೆಗಿನ ಸೆಮಿಸ್ಟರ್ ಗಳಲ್ಲಿ ಕಡ್ಡಾಯವಾಗಿ ಕನ್ನಡ ಬೋಧಿಸಬೇಕು. ಬಿಎ, ಬಿಕಾಂ, ಬಿಎಸ್ಸಿ ಪದವಿ ಮುಗಿಸಿ ಮೂರು ವರ್ಷದ ಎಲ್‍ಎಲ್‍ಬಿ ಪ್ರವೇಶ ಪಡೆದವರಿಗೆ ಎರಡು ಸೆಮಿಸ್ಟರ್ ಗಳಲ್ಲಿ ಹಾಗೂ ಐದು ವರ್ಷದ ಎಲ್‍ಎಲ್‍ಬಿ ವಿದ್ಯಾರ್ಥಿಗಳಿಗೆ 4 ಸೆಮಿಸ್ಟರ್ ಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ. ಕನ್ನಡ ಮಾತೃಭಾಷಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕನ್ನಡದ ಜತೆಗೆ ಅವರು ವ್ಯಾಸಂಗ ಮಾಡುವ ತಾಂತ್ರಿಕ ವಿಷಯಗಳ ಜ್ಞಾನಕ್ಕೆ ಪೂರಕವಾಗಿ ಕ್ರಿಯಾತ್ಮಕ ಕನ್ನಡ ಕಲಿಕೆ.

ಕನ್ನಡೇತರ ವಿದ್ಯಾರ್ಥಿಗಳಿಗೆ ಸರಳ ಪಠ್ಯ ರೂಪಿಸಬೇಕು. ಕನ್ನಡ ಸಂಸ್ಕೃತಿ ಮತ್ತು ಅವರ ಮಾತೃಭಾಷೆ ನಡುವೆ ಜೀವಾತ್ಮಕ ಸಂಬಂಧ ಏರ್ಪಡಿಸುವಂತಿರಬೇಕು. ಅವರಿಗೆ ಕನ್ನಡ ಕಲಿಕೆ ಶಿಕ್ಷೆ ಎನಿಸಬಾರದು. ಕನ್ನಡ ಮತ್ತು ಕನ್ನಡೇತರರಿಗೆ ಬೇರೆ ಬೇರೆ ಪಠ್ಯಕ್ರಮ ರೂಪಿಸಬೇಕು. ಶೇಕಡಾ 50 ರಷ್ಟು ಪಠ್ಯಕ್ರಮಗಳು ಎಲ್ಲಾ ವಿವಿಗಳಲ್ಲೂ ಏಕರೂಪವಾಗಿರಬೇಕು. ಉಳಿದ ಶೇಕಡಾ 50 ಆಯಾ ವಿವಿಗಳು ಕಲಿಸುವ ವಿಷಯಗಳಿಗೆ ಪೂರಕವಾಗಿರಬೇಕು.

ಪಠ್ಯ ರೂಪಿಸುವಾಗ ಪ್ರಾಂತ್ಯವಾರು ಭಾಷೆಯಲ್ಲಿನ ಏರಿಳಿತಗಳನ್ನು ಪರಿಗಣಿಸಬೇಕು. ಅದು ಸ್ಥಳೀಯವಾಗಿ ಹೊಂದಿಕೊಳ್ಳುವಂತಿರಬೇಕು. ಪ್ರತಿಯೊಂದು ವಿವಿಯು ಭಾಷಾ ತಜ್ಞರನ್ನೊಳಗೊಂಡ ಉಪ ಸಮಿತಿ ಸಲಹೆ ಮೇರೆಗೆ ಪಠ್ಯ ರೂಪಿಸಿ, ಅಧ್ಯಯನ ಮಂಡಳಿಯಲ್ಲಿ ಚರ್ಚಿಸಿದ ನಂತರ ಅಧಿಕೃತಗೊಳಿಸಬೇಕು. ಕನ್ನಡೇತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಂಗ್ಲಿಷಿನ ಅರಿವಿರುವ ಕನ್ನಡ ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು. ಕನ್ನಡ ಬೋಧನೆ, ಪಠ್ಯ ಪುಸ್ತಕ ರಚನೆ ಹಾಗೂ ಕನ್ನಡ ಚಟುವಟಿಕೆಗಳಿಗೆ ಬಜೆಟ್‍ನಲ್ಲಿ ಅನುದಾನ ಕಾಯ್ದಿರಿಸಿ, ಬಳಸಬೇಕು. ಪದವಿ ತರಗತಿಗಳಲ್ಲಿ ಇಂಗ್ಲಿಷ್ ಕಡ್ಡಾಯ ಮಾಡಿರುವ ಮಾದರಿಯಲ್ಲೇ ಕನ್ನಡವನ್ನೂ ಕಡ್ಡಾಯಗೊಳಿಸಬೇಕು.

ಗುದ್ದೋಡು: ಮಮತಾ ಸರ್ಕಾರ ಆರೋಪಿಯನ್ನು ರಕ್ಷಿಸುತ್ತಿದೆಯೇ?

ವಾಯುಪಡೆ ಅಧಿಕಾರಿ ಮೇಲೆ ಕಾರು ಹರಿದು ಅವರು ಸಾವಿಗೀಡಾದ ವಿದ್ಯಮಾನ ನಡೆದು ನಾಲ್ಕು ದಿನಗಳಾದವು. ಅಪಘಾತಕ್ಕೆ ಕಾರಣನಾದವ ಕಾನೂನಿನ ಕಟಕಟೆಗೆ ಬಂದಿಲ್ಲ. ಕಾರಣವಿಷ್ಟೆ, ಆರೋಪಿ ಸ್ಥಾನದಲ್ಲಿರುವಾತ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮುಖಂಡನ ಪುತ್ರ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಗುಂಪೊಂದು ಸರ್ಕಾರದ ಮೇಲೆ ಒತ್ತಡ ತಂದು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ರಕ್ಷಣಾ ವಕ್ತಾರ ವಿಂಗ್ ಕಮಾಂಡರ್ ಬಿರ್ದಿ ಆರೋಪಿಸಿದ್ದಾರೆ.

ಗಣರಾಜೋತ್ಸವದ ಪೆರಡ್ ಗಾಗಿ ವಾಯು ಪಡೆ ಹಲವು ತುಕಡಿಗಳು ತಾಲಿಮು ನಡೆಸುತ್ತಿದ್ದ ವೇಳೆ ಟಿ.ಎಂ.ಸಿ ಮುಖಂಡ ಮಹ್ಮದ್ ಸೊಹ್ರಬ್ ರ ಪುತ್ರ ಅಂಬಿಯಾ ಸೊಹ್ರಬ್ ಎನ್ನುವವನು ತನ್ನ ಆಡಿ ಕಾರನ್ನು ಏಕಾ ಏಕಿ ವಾಯು ಪಡೆ ಅಧಿಕಾರಿ ಮೇಲೆ ಹರಿಸಿ ಸಾವಿಗೆ ಕಾರಣವಾಗಿದ್ದ ಘಟನೆ ಕಳೆದ ಬುಧವಾರ ನಡೆದಿತ್ತು. ಆದರೆ ಘಟನೆ ನಡೆದು 3 ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆಯೂ 2 ಭಾರಿ ಪೊಲೀಸರ ಮೇಲೆ ಕೈಮಾಡಿ ತಂದೆಯ ಅಧಿಕಾರವನ್ನು ಬಳಸಿಕೊಂಡು ಬಚಾವಾಗಿದ್ದನು.

ಆರೋಪಿಯ ತಂದೆ ಮಹ್ಮದ್ ಸೊಹ್ರಬ್ ಆರ್.ಜೆ.ಡಿ ಪಕ್ಷದಲ್ಲಿ ಶಾಸಕರಾಗಿದ್ದ ನಂತರ ಪಕ್ಷ ತೊರೆದು 2013 ರಲ್ಲಿ ಟಿ.ಎಂ.ಸಿ. ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಸದ್ಯ ಪುತ್ರರಾದ ಅಂಬಿಯಾ ಮತ್ತು ಸಾಂಬಿಯಾ ಸೊಹ್ರಬ್ ರೊಂದಿಗೆ ತಂದೆಯೂ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಕೊಲ್ಕತ್ತಾ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಮಾಡಿದ್ದು ತನಿಖೆ ಮುಂದುವರೆಸಿದ್ದಾರೆ.

Leave a Reply