ಸ್ಟಾರ್ಟ್ ಅಪ್ ಉದ್ಯಮಕ್ಕೂ ಅಸಹಿಷ್ಣುತೆಗೂ ಎತ್ತಣಿಂದೆತ್ತ ಸಂಬಂಧವಯ್ಯಾ? ವಿದ್ಯಾರ್ಥಿಗಳೊಂದಿಗಿನ ರಾಹುಲ್ ಸಂವಾದ ಕೇಳಿಸಿಕೊಂಡ್ರೆ ಏಳಬಹುದಾದ ಪ್ರಶ್ನೆ

ಡಿಜಿಟಲ್ ಕನ್ನಡ

ಶನಿವಾರ ಒಂದೆಡೆ ಸ್ಟಾರ್ಟ್ ಅಪ್ ಇಂಡಿಯಾ ಸಮ್ಮೇಳನ ಭಾರಿ ಸದ್ದು ಮಾಡಿಕೊಂಡಿದ್ದರೆ ಇನ್ನೊಂದೆಡೆ ಮಾಧ್ಯಮ ಮತ್ತು ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಭಾಷಣ.

ಮುಂಬೈನ ನಾರ್ಸಿ ಮೊಂಜಿ ಇನ್ ಸ್ಟಿಟ್ಯೂಟ್ ಆಫ್ ಮಾನೇಜ್ ಮೆಂಟ್ ಸ್ಟಡೀಸ್ (ಎನ್.ಎಂ.ಐ.ಎಂ.ಎಸ್) ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಜಿಎಸ್ಟಿ, ಸ್ಟಾರ್ಟ್ ಅಪ್ ಇಂಡಿಯಾ, ಅಸಹಿಷ್ಣುತೆ ಹೀಗೆ ಹಲವು ವಿಷಯಗಳ ಕುರಿತು ಮಾತನಾಡಿದರು.

ರಾಹುಲ್ ಆಡಿದ ಮಾತುಗಳು ಹಾಗೂ ಅವಕ್ಕೆ ಕಾಮೆಂಟ್ ಸೇರಿಸಿದ ಪ್ರಸ್ತುತಿ ಇಲ್ಲಿದೆ.

  •  ಭಾರತದಲ್ಲಿ ಸ್ಟಾರ್ಟ್ ಅಪ್ ಗಳಿಗೆ ಪೂರಕ ವಾತಾವರಣ ನೆಲೆಗೊಳ್ಳಬೇಕು. ಆದರೆ ಅಸಹಿಷ್ಣುತೆ ಮತ್ತು ನವೋದ್ದಿಮೆಗಳು ಒಟ್ಟೊಟ್ಟಿಗೇ ಇರಲಾರವು ಎಂಬುದನ್ನು ಈ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಆರೆಸ್ಸೆಸ್ ಗೆ ಸಮಾಜದ ಕುರಿತು ಕ್ಲಿಷ್ಟ ನೋಟವನ್ನು ಹೊಂದಿದೆ. ನವೋದ್ದಿಮೆಗಳಿಗೆ ಬೇಕಿರುವುದು ಹೊಸ ಐಡಿಯಾ. ನೀನು ಹೆಂಗಸು ಹಾಗೂ ನಿನ್ನ ಸ್ಥಾನ ಅಡುಗೆಮನೆ ಎಂದರೆ ಅಲ್ಲಿಗೆ ಅಭಿವ್ಯಕ್ತಿಯನ್ನೇ ಹತ್ತಿಕ್ಕಿದಂತೆ.

ಕಾಮೆಂಟ್: ಅಸಹಿಷ್ಣುತೆ ವಿಚಾರವನ್ನು ಎಲ್ಲೆಲ್ಲಿಗೆಲ್ಲ ಜಗ್ಗಬೇಕು ಅಂದುಕೊಂಡಿದ್ದೀರಿ? ಪೂರಕ ವಾತಾವರಣ ಬೆಳೆಸುವುದಕ್ಕೆಂದೇ ಕೇಂದ್ರ ಸರ್ಕಾರ ಸಮ್ಮೇಳನ- ಸಂವಾದ ಆಯೋಜಿಸಿದೆ. ಈ ನಿಟ್ಟಿನಲ್ಲಿ ರೂಪುಗೊಳ್ಳಬೇಕಿರುವ ತೆರಿಗೆ ನಿಯಮ, ಕಾಯ್ದೆಗಳಲ್ಲಾಗಿರುವ ಬದಲಾವಣೆಗಳ ಬಗ್ಗೆ ಅಂಕಿಅಂಶಗಳೊಂದಿಗೆ ಮಾತನಾಡಿ. ಅದುಬಿಟ್ಟು ಅಸಹಿಷ್ಣುತೆ, ಆರೆಸ್ಸೆಸ್, ಮಹಿಳಾ ಸಮಾನತೆ ಅಂತ ನಿಮಗೆ ಗೊತ್ತಿರುವ ಮೂರು ಮತ್ತೊಂದು ಸಂಗತಿಯನ್ನೇ ಎಲ್ಲವಕ್ಕೂ ಸುತ್ತಿಬಿಟ್ಟರಾಯಿತೇ? ನವೋದ್ದಿಮೆಯಲ್ಲಿ ತೊಡಗಿರುವವರಲ್ಲಿ ಅದಾಗಲೇ ಅಸಹಿಷ್ಣುತೆ ಇದೆ. ಆದರೆ ಅದು ನೀವು ಬಾಯಿಪಾಠ ಮಾಡಿಕೊಂಡಿರುವ ಅಸಹಿಷ್ಣುತೆ ಅಲ್ಲ. ಸಣ್ಣ ಕಂಪನಿಯೊಂದನ್ನು ನೋಂದಾಯಿಸುವುದಕ್ಕೆ ತಿಂಗಳುಗಟ್ಟಲೇ ಸಮಯ ಹಿಡಿಯುತ್ತೆ ಎಂಬ ಅಸಹಿಷ್ಣುತೆ. ಇದನ್ನು ತಾವು ಅಧಿಕಾರದಲ್ಲಿದ್ದಾಗಲೇ ನಿವಾರಿಸಬಹುದಿತ್ತಲ್ಲವೇ ರಾಹುಲ್ ಜೀ?

  •  ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಮಸೂದೆ ಜಾರಿಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಷರತ್ತುಗಳಿಗೆ ಕೇಂದ್ರ ಸರ್ಕಾರ ಒಪ್ಪಿಕೊಂಡರೆ  15 ನಿಮಿಷಗಳಲ್ಲಿ ಮಸೂದೆ ಪಾಸಾಗಿಬಿಡುತ್ತೆ. ಜಿ.ಎಸ್.ಟಿ ಮಸೂದೆಯ ಮೂಲ ಚಿಂತನೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ್ದು. ಆದರೆ ಸದ್ಯ ಇದನ್ನು ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಜಾರಿಗೆ ತರಲು ಹೊರಟಿದೆ. ಇದರಲ್ಲಿ ಉತ್ಪಾದನೆ ಮಾಡುವ ರಾಜ್ಯಗಳಿಗೆ ವಿಧಿಸುವ ಹೆಚ್ಚುವರಿ ತೆರಿಗೆಯನ್ನು ತೆಗೆದು ಹಾಕಬೇಕು ಮತ್ತು ತೆರಿಗೆ ಕಡಿಮೆಗೊಳಿಸದ ಜಿ.ಎಸ್.ಟಿ ನಮಗೆ ಬೇಡ.

ಕಾಮೆಂಟ್: ಸರಿ. ಜಿಎಸ್ಟಿ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಆದರೆ ಅದು ಚರ್ಚೆಯಾಗಿ ಸಹಮತ ಮೂಡಬೇಕಿರುವುದು ಸಂಸತ್ತಿನಲ್ಲೋ, ವೆಂಕಯ್ಯ ನಾಯ್ಡು ಅವರೊಂದಿಗೆ ನಿಮ್ಮ ನಿವಾಸದಲ್ಲಿ ನಡೆಸುವ ಚಹಾ ಕೂಟದಲ್ಲೋ? ರಾಜಕೀಯ ದ್ವೇಷ, ಅಸಹಿಷ್ಣುತೆ ಎಂದೆಲ್ಲ ಹೇಳಿಕೊಂಡು ರಾಜ್ಯಸಭೆಯಲ್ಲಿ ಕಲಾಪವೇ ಆಗದಂತೆ ಮಾಡಿತಲ್ಲ ಕಾಂಗ್ರೆಸ್? ಇದ್ಯಾವ ಕಾಳಜಿ? ಆದಾಗ್ಯೂ, ತಾವು ಅಧಿಕಾರದಲ್ಲಿದ್ದಾಗ ಬಿಜೆಪಿ ಸತತವಾಗಿ ಜಿಎಸ್ಟಿಗೆ ವಿರೋಧ ವ್ಯಕ್ತಪಡಿಸಿತ್ತು ಎಂದು ರಾಹುಲ್ ಹೇಳಿದ್ದು ಮಾತ್ರ ಒಪ್ಪಿಕೊಳ್ಳಬೇಕಾದದ್ದೇ.

Leave a Reply