ಕನ್ನಡಿಗರ ಮಾನಸವೀಣೆ ಮಿಡಿದ ಗೀತಪ್ರಿಯ ಈಗ ಮೌನಗೀತೆ

ಡಿಜಿಟಲ್ ಕನ್ನಡ ಟೀಮ್

‘ಬೆಸುಗೆ.. ಬೆಸುಗೆ.., ಜನುಮ ಜನುಮಕೂ ಆತ್ಮದ ಬೆಸುಗೆ..’ ಎಂದು ಕನ್ನಡಿಗರ ಆತ್ಮಗಳಿಗೆ ಗೀತೆಗಳ ಮೂಲಕ ಬೆಸುಗೆ ಬೆಸೆದಿದ್ದ ಗೀತಪ್ರಿಯ ಇನ್ನಿಲ್ಲ.

ಮರಾಠಿ ಮನೆ ಮಾತಾದರೂ ಕನ್ನಡಿಗರ ಮನೆಮಾತಾದ, ಅವರ ಮನಸ್ಸಿನ ‘ಬೆಸುಗೆ’ಯಾದ, ಚಿತ್ರರಂಗದ ನಾನಾ ಮಜಲುಗಳಿಗೆ ‘ಸುವರ್ಣ ಸೇತುವೆ’ ಕಟ್ಟಿ, ‘ಮಾನಸವೀಣೆ’ ಮಿಡಿದ ಗೀತಪ್ರಿಯ ಈಗ ‘ಮೌನಗೀತೆ’ ಯಾಗಿದ್ದಾರೆ. ಗಂಟಲು ಕ್ಯಾನ್ಸರ್ ಪೀಡಿತರಾಗಿದ್ದ 83 ವರ್ಷದ ಗೀತಪ್ರಿಯ ಬೆಂಗಳೂರಿನಲ್ಲಿ ಭಾನುವಾರ ನಿಧನರಾಗಿದ್ದಾರೆ.

1932 ರಲ್ಲಿ ಮೈಸೂರಿನಲ್ಲಿ ಹುಟ್ಟಿ, ಬೆಳೆದ ಗೀತಪ್ರಿಯ ಅವರ ಮೂಲ ಹೆಸರು ಲಕ್ಷ್ಮಣರಾವ್ ಮೋಹಿತೆ.  ಮರಾಠಿ ಮನೆಮಾತು, ಆದರೆ ಕನ್ನಡದ ಹೃದಯಬಡಿತ. ಕನ್ನಡದ ಹಿರಿಯ ಕವಿ ಪು.ತಿ. ನರಸಿಂಹಾಚಾರ್ ಪಕ್ಕದ ಮನೆಯಲ್ಲಿ ಬೆಳೆದು, ತರಾಸು., ಅನಕೃ., ಮಾಸ್ತಿ ಅವರನ್ನು ಓದಿಕೊಂಡ ಲಕ್ಷ್ಮಣರಾವ್ ಮೋಹಿತೆ ಅವರಿಗೆ ಕನ್ನಡ ಒಲಿಯಲು ಬೇರೆ ಕಾರಣಗಳು ಬೇಕಿರಲಿಲ್ಲ. ಮೈಸೂರಿನಿಂದ ಬೆಂಗಳೂರಿಗೆ ಬಂದು 1950 ರ ದಶಕದಲ್ಲಿ ಕಬ್ಬನ್ ಪಾರ್ಕ್ ನ ರೆಸ್ಟೊರೆಂಟ್ ಒಂದರಲ್ಲಿ 35 ರುಪಾಯಿ ತಿಂಗಳ ಸಂಬಳದ ಕ್ಲರ್ಕ್ ಆಗಿ ಉದ್ಯೋಗ ಆರಂಭಿಸಿದ ಅವರು ಜತೆಜತೆಗೆ ರಂಗಭೂಮಿ, ಸಾಹಿತ್ಯದಲ್ಲಿ ತೊಡಗಿಸಿಕೊಂಡರು. ಇಲ್ಲಿ ಕೃಷಿ ಮಾಡುತ್ತಿರುವಾಗ ಖ್ಯಾತ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಒಡನಾಟದಿಂದ ಚಿತ್ರರಂಗದ ನಂಟೂ ಬೆಳೆಯಿತು. ಮೋಹಿತೆ ಅವರನ್ನು ಗೀತಪ್ರಿಯ ಮಾಡುವಷ್ಟರ ಮಟ್ಟಿಗೆ.

ಕಥೆ, ಚಿತ್ರಕಥೆ, ನಿರ್ದೇಶನ, ಗೀತರಚನೆ ಎಲ್ಲ ಕಡೆ ಸೈ ಎನಿಸಿಕೊಂಡ ಗೀತಪ್ರಿಯ ರಾಜಕುಮಾರ್, ವಿಷ್ಣುವರ್ಧನ್, ಶ್ರೀನಾಥ್, ರಾಜೇಶ್, ಕಲ್ಯಾಣಕುಮಾರ್ ಮುಂತಾದ ದಿಗ್ಗಜ ನಟರ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಕಲ್ಪನಾ, ಭಾರತಿ, ಆರತಿ, ಮಂಜುಳಾ ಮತ್ತಿತರ ನಾಯಕಿಯರು ಇವರ ಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟೆಲ್ಲ ಆದರೂ ಗೀತಪ್ರಿಯ ನಮಗೆ ಗೀತೆಗಳ ಮೂಲಕವೇ ಹೆಚ್ಚು ಪ್ರಿಯ. ‘ಜಗದೀಶನಾಡುವ ಜಗವೇ ನಾಟಕರಂಗ’, ‘ಆಡುತಿರುವಾ ಮೋಡಗಳೇ, ಹಾರುತಿರುವ ಹಕ್ಕಿಗಳೇ’, ‘ಭಗವಂತ ಕೈ ಕೊಟ್ಟ ದುಡಿಯೋಕಂತಾ’, ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’, ‘ಜೀವವೀಣೆ ನೀಡು ಮಿಡಿತದ ಸಂಗೀತ’ – ಹೀಗೆ ಅವರ ಗೀತಾಮೃತ ಯಾನ ಸಾಗುತ್ತದೆ. ಹಿಂದಿ ಖ್ಯಾತ ಗಾಯಕ ಮೊಹಮ್ಮದ್ ರಫಿ ಅವರು ಹಾಡಿದ ‘ನೀನೆಲ್ಲಿ ನಡೆವೆ ದೂರ’ ಇವರದೇ ರಚನೆ.

ಪೌರಾಣಿಕ ಹಿನ್ನೆಲೆಯ ‘ರಾಮಾಂಜನೆಯ ಯುದ್ಧ’ದಿಂದ ಹಿಡಿದು ‘ಪುಟಾಣಿ ಏಜೆಂಟ್ಸ್ 1,2,3’ ನಂಥ ಮಕ್ಕಳ ಚಿತ್ರದವರೆಗೂ ನಾನಾ ಬಗೆಯ ಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಾರೆ. ‘ಇದೇನ ಸಭ್ಯತೆ’ ಎಂದು ದೇಶಭಕ್ತಿ ಕಲಿಸಿದರು. ‘ನಾಗರೀಕ ಮಾನವ’ ಎಂದು ಮಾನವೀಯತೆ ಪಾಠ ಹೇಳಿದರು. ‘ಬೆಳುವಲದ ಮಡಿಲಲ್ಲಿ’ ಎನ್ನುತ್ತಾ ರೈತನ ಬೆವರ ಹನಿ ದರ್ಶಿಸಿದರು. ‘ವೀಣಾ ನಿನಗೇಕೋ ಈ ಕಂಪನ’ ಎಂದು ಪ್ರೀತಿಯ ಸಮ್ಮೋಹನಿಯಲ್ಲಿ ಮುಳುಗಿಸಿದರು. ರಾಷ್ಟ್ರ, ರಾಜ್ಯ ಸೇರಿದಂತೆ ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.  ‘ನಡೆ, ನಡೆ, ನಡೆ, ನಡೆ, ನಡೆ ಮನವೇ.. ನವಜೀವನದ ಕಡೆಗೆ’ ಎಂದು ಹುರುದುಂಬಿಸಿದ ಗೀತಪ್ರಿಯ ಇಂದು ದೂರ, ಬಹುದೂರ ನಡೆದಿದ್ದಾರೆ. ಅವರೇ ರಚಿಸಿದ ‘ನೀನೆಲ್ಲಿ ನಡೆವೆ ದೂರ’ ಗೀತೆ ಅವರನ್ನೇ ಕೇಳುತ್ತಿದೆ. ಆದರೆ ಉತ್ತರಿಸಲು ಅವರೇ ಇಲ್ಲ.

1 COMMENT

  1. ಅವರು ದೂರ ಹೋದರೂ ಅವರ ಚಿತ್ರಗಳು, ಅವರ ಹಾಡುಗಳು ಮನದಲ್ಲಿವೆ. ಗೀತಪ್ರಿಯರಿಗೆ ಹೃತ್ಪೂರ್ವಕ ಶೃದ್ಧಾಂಜಲಿ.

Leave a Reply