ಮತ್ತೊಂದು ವಿವಾದದ ಸಾಲಿಗೆ ದುನಿಯಾ ವಿಜಿ ‘ಮಾಸ್ತಿಗುಡಿ’, ಅರಣ್ಯ ಇಲಾಖೆ ಅನುಮತಿ ಇಲ್ಲದೇ ಫೋಟೋ ರೆಡಿ!

ಡಿಜಿಟಲ್ ಕನ್ನಡ ವಿಶೇಷ

‘ಮಾಸ್ತಿಗುಡಿ.’

ಕಬಿನಿ ಹಿನ್ನೀರಿಗೆ ಅಂಟಿಕೊಂಡ ನಾಗರಹೊಳೆ ಕಾಡಿನಲ್ಲಿ ಮಾಸ್ತಮ್ಮ ದೇವಿಯ ಗುಡಿ ಇರುವ ಜಾಗ ಮಾಸ್ತಿಗುಡಿಯೆಂದೇ ಹೆಸರುವಾಸಿ. ಅಣ್ಣಾವ್ರ ಅಭಿನಯದ ಗಂಧದಗುಡಿ ಚಿತ್ರದಲ್ಲಿಯೂ ಸೆರೆ ಹಿಡಿಯಲಾಗಿರುವ ಈ ಮಾಸ್ತಿಗುಡಿ ಈಗ ದುನಿಯಾ ವಿಜಯ್ ನಟಿಸುತ್ತಿರುವ ಚಿತ್ರದ ಹೆಸರೂ ಹೌದು.

ವಿಷಯ ಅಷ್ಟೇ ಆಗಿದಿದ್ದರೆ ಪರವಾಗಿರಲಿಲ್ಲ. ವಿಜಯ್ ಅವರ ವಿವಾದಗಳ ಸರಮಾಲೆಗೆ ಈಗ ಈ ಚಿತ್ರ ಕೂಡ ಸೆಟ್ಟೇರುವ ಮೊದಲೇ ಸೇರ್ಪಡೆ ಆಗಿರುವುದು!

ಯೆಸ್, ದುನಿಯ ವಿಜಯ್‌ ಹೊಸ ಚಿತ್ರದ ಫಸ್ಟ್ ಲುಕ್ಕಿನ ಗಮ್ಮತ್ತೇ ಇದು. ದುನಿಯಾ ವಿಜಿ ಪೆಪ್ಪರ್ ಅಂಡ್ ಸಾಲ್ಟ್ ಗೆಟ್ಟಪ್ಪಿನಲ್ಲಿರುವ ಮಾಸ್ತಿಗುಡಿ ಚಿತ್ರದ ಫೋಟೋಗಳು ರಿಲೀಸ್ ಆಗಿವೆ. ಕಾಂಟ್ರೋವರ್ಸಿ ಜತೆಜತೆಗೆ. ಜೀಪ್ ಮೇಲೆ, ಕೆಳಗೆ, ಅಕ್ಕಪಕ್ಕ ಗನ್ ಹಿಡಿದು, ಫಾರೆಸ್ಟ್ ವಾಚ್ ಟವರ್ ಮೆಟ್ಟಿಲ ಮೇಲೆ, ಕಬಿನಿ ಹಿನ್ನೀರಿನ ಹಿನ್ನೆಲೆಯಲ್ಲಿ ದುನಿಯಾ ವಿಜಿ ನಾನಾ ಭಂಗಿಗಳಲ್ಲಿ ಪೋಸ್ ಕೊಟ್ಟ ಪೋಟೋಗಳು ಮಾಸ್ತಮ್ಮನಿಂದ ನೆಟಿಕೆ ತೆಗೆಸಿಕೊಳ್ಳುವಷ್ಟು ಪೊಗದಸ್ತಾಗಿವೆ.

mastigudi-2

ವಿಶೇಷ ಇರುವುದೇ ಇಲ್ಲಿ. ಕಾಡಿನಲ್ಲಿ ಈ ಸಿನಿಮಾದ ಚಿತ್ರೀಕರಣಕ್ಕೆ ಅರಣ್ಯ ಇಲಾಖೆಯಿಂದ ಇನ್ನೂ ಪರ್ಮಿಷನ್ ಸಿಕ್ಕಿಲ್ಲ. ಆದರೂ ಚಿತ್ರತಂಡ ನಾಗರಹೊಳೆ ಕಾಡನ್ನು ಹೊಕ್ಕು ಡಿಸೈನ್, ಡಿಸೈನ್ ಆಗಿ ಪೂರ್ವಭಾವಿ ಚಿತ್ರೀಕರಣ ಮಾಡಿರುವುದು. ಮಾಸ್ತಿಗುಡಿ ಇರುವುದು ಕಾಡಿನ ಕೋರ್ ಏರಿಯಾದಲ್ಲಿ. ಇಲ್ಲಿಗೆ ಪ್ರವಾಸಿಗರ ಭೇಟಿ ನಿಷಿದ್ಧ. ಇಲಾಖೆ ಸಿಬ್ಬಂದಿ ಬಿಟ್ಟು ಬೇರೆ ಯಾರೂ ಕೋರ್ ಏರಿಯಾದೊಳಗೇ ಹೋಗುವಂತಿಲ್ಲ. ಕಾಡುಗಳ್ಳರ ಕಣ್ಗಾವಲಿಗೆ ಇರುವ ವಾಚ್ ಟವರ್ ಗಳನ್ನು ಬಳಸುವಂತಿಲ್ಲ. ಅದು ಶಿಕ್ಷಾರ್ಹ ಅಪರಾಧ. ಬೆಂಗಳೂರಿನಲ್ಲಿರುವ ಮಹಾ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರಿಂದ ಪೂರ್ವಾನುಮತಿ ಪಡೆಯಬೇಕು. ಆದರೆ ಚಿತ್ರತಂಡ ಯಾವುದೇ ಅನುಮತಿ ಪಡೆದಿಲ್ಲ.

ಹಾಗಾದರೆ ಕಾಡಿನಲ್ಲಿ ಚಿತ್ರೀಕರಣ ನಡೆದದ್ದು ಹೇಗೆ? ದುನಿಯಾ ವಿಜಿ ಅವರ ಸ್ಟಾರ್ ಇಮೇಜ್ ಬಳಸಿ ಚಿತ್ರತಂಡದವರು ಸ್ಥಳೀಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಿಬಿಟ್ಟರೇ? ಈ ಅಧಿಕಾರಿಗಳು ಕಣ್ಸನ್ನೆ ಅನುಮತಿ ಕೊಟ್ಟರೇ ಅಥವಾ ಚಿತ್ರತಂಡದವರು ಅಧಿಕಾರಿಗಳ ಕಣ್ತಪ್ಪಿಸಿ ಚಿತ್ರೀಕರಣ ಮಾಡಿಬಿಟ್ಟರೇ?

mastigudi-3

1999 ರಲ್ಲಿ ಮಧ್ಯಪ್ರದೇಶದ ಹುಲಿ ಬೇಟೆಗಾರರು ನಾಗರಹೊಳೆಯಲ್ಲಿ ಹಾಕಿದ್ದ ಜಾಟ್ರಾಪ್ ಗೆ ಬಲ ಮುಂಗಾಲು ಸಿಕ್ಕಿಸಿಕೊಂಡ ಹುಲಿಯನ್ನು ಅರಣ್ಯಾಧಿಕಾರಿಗಳು ಸತತ ಏಳು ದಿನಗಳ ಕಾರ್ಯಾಚರಣೆ ನಂತರ ಅರವಳಿಕೆ ಮದ್ದಿನ ಸೂಜಿ ಹಾರಿಸಿ ಮಾಸ್ತಿಗುಡಿಯಲ್ಲಿ ಸೆರೆಹಿಡಿದಿದ್ದರು. ಜಾಟ್ರಾಪ್ ಗೆ ಸಿಕ್ಕ ಅದರ ಮುಂಗಾಲನ್ನು ಮಂಡಿವರೆಗೂ ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಬೇಕಾಗಿ ಬಂತು. ದಕ್ಷಿಣ ಭಾರತದಲ್ಲಿಯೇ ಮೊದಲ ಜಾಟ್ರಾಪ್ ಹುಲಿಬೇಟೆ ಪ್ರಕರಣ ಇದಾಗಿದ್ದರಿಂದ ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆದಿತ್ತು. ಸಿನಿಮಾ ಕತೆಗೆ ಇದೇ ಪ್ರೇರಣೆ ಎನ್ನಲಾಗಿದೆ. ಆದರೆ ಚಿತ್ರತಂಡ ಅರಣ್ಯ ನಿಯಮ ಉಲ್ಲಂಘನೆಯ ಟ್ರಾಪ್ ನಲ್ಲಿ ಸಿಕ್ಕಿಹಾಕಿಕೊಳ್ಳಲು ಯಾರ ಪ್ರೇರಣೆಯೂ ಗೊತ್ತಿಲ್ಲ. ಮಾಸ್ತಿಗುಡಿ ಕಾಡುಮೇಡು ಸುತ್ತಿ ಬಂದಿರುವ ಚಿತ್ರತಂಡ ಹೇಳಬೇಕು.

ಅಂದಹಾಗೇ ಸಿನಿಮಾ ಇದೇ ತಿಂಗಳ 29 ಕ್ಕೆ ಸೆಟ್ಟೇರಲಿದೆಯಂತೆ. ಆದರೆ ವಿವಾದ ಮಾತ್ರ ಈಗಾಗಲೇ ಸೆಟ್ಟೇರಿದೆ.

Leave a Reply