ಐಟಿ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಿಗೆ ಕರವೇ ವತಿಯಿಂದ ಸಿಕ್ತು ಮಾರ್ಗದರ್ಶನ

ಬೆಂಗಳೂರು ಐಟಿ ಸಿಟಿ ಹೌದು. ಹೀಗೆ ಹೆಮ್ಮೆ ಪಡುತ್ತಲೇ ಈ ಬಿರುದಿನಿಂದ ಕನ್ನಡಿಗರಿಗೆ ಆಗಿರುವ ಲಾಭದ ಪ್ರಮಾಣವಾದರೂ ಎಷ್ಟು ಎಂಬ ಪ್ರಶ್ನೆ ಆಗಾಗ ಏಳುತ್ತಲೇ ಇರುತ್ತದೆ.

ಬೆಂಗಳೂರು ತಂತ್ರಜ್ಞಾನ ರಾಜಧಾನಿ ಎಂದು ಹೆಮ್ಮೆ ಪಟ್ಟರಷ್ಟೇ ಸಾಲದು, ಅದರಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವಂತೆ ಈ ನೆಲದ ಪ್ರತಿಭೆಗಳನ್ನು ತರಬೇತುಗೊಳಿಸುವ ಕೆಲಸವೂ ಆಗಬೇಕು.

ಕರ್ನಾಟಕ ರಕ್ಷಣಾ ವೇದಿಕೆಯ ಐಟಿ ಘಟಕದ ವತಿಯಿಂದ ಐ.ಟಿ. ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವವರಿಗಾಗಿ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮಾರ್ಗದರ್ಶನ ಶಿಬಿರ ಇಂಥದ್ದೇ ಒಂದು ಪ್ರಯತ್ನ. ಬೆಳಿಗ್ಗೆ 9.30 ಯಿಂದ ಮಧ್ಯಾಹ್ನ 1.30 ವರೆಗೂ ನಡೆದ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಭ್ಯರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಐ.ಟಿ. ಕಂಪನಿಯೊಂದರ ಮುಖ್ಯಸ್ಥರು ಉದ್ಯೋಗ/ಉದ್ಯಮ ಕ್ಷೇತ್ರದಲ್ಲಿ ಮುನ್ನುಗ್ಗಲು ಕನ್ನಡಿಗರು ಬೆಳೆಸಿಕೊಳ್ಳಬೇಕಾದ ಗುಣಗಳ ಬಗ್ಗೆ ಮಾತನಾಡಿ ನೆರಿದಿದ್ದ ಉದ್ಯೋಗಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕರವೇ ಐಟಿ ಘಟಕದ ಪದಾಧಿಕಾರಿಗಳು ಕನ್ನಡಿಗ ಉದ್ಯೋಗಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಉದ್ಯೋಗದ ವಿಚಾರದಲ್ಲಿ ಕರವೇ ಮಾಡಿರುವ ಹೋರಾಟಗಳ ಬಲ ಪಡೆದು ಹಾಗೂ ಕನ್ನಡಿಗರು ಮುನ್ನುಗ್ಗುವ  ಸ್ವಭಾವವನ್ನು ಬೆಳೆಸಿಕೊಂಡು ವಿಫುಲ ಉದ್ಯೋಗಾವಕಾಶಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಐ.ಟಿ. ಕ್ಷೇತ್ರದಲ್ಲೇ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಅನೇಕ ಪರಿಣತರು ತಮ್ಮ ಅನುಭವವನ್ನು ಕನ್ನಡದ ಯುವಕ-ಯುವತಿಯಡೊರಡನೆ ಹಂಚಿಕೊಂಡರು. ಐ.ಟಿ. ಕ್ಷೇತ್ರದಲ್ಲಿರುವ ಅನೇಕ ಉಪ-ಕ್ಷೇತ್ರಗಳು, ಅಲ್ಲಿರುವ ಕಂಪನಿಗಳು, ಅಲ್ಲಿನ ಉದ್ಯೋಗಾವಕಾಶಗಳು, ಅವನ್ನು ಪಡೆಯಲು ಬೇಕಾದ ಕೌಶಲ್ಯಗಳು, ನೇಮಕಾತಿ ಪ್ರಕ್ರಿಯೆ, ಅದಕ್ಕೆ ಬೇಕಾದ ತಯಾರಿ, ಸಂದರ್ಶನ ಎದುರಿಸುವ ಬಗೆ, ಇತ್ಯಾದಿ ಎಲ್ಲ ವಿಚಾರಗಳ ಬಗ್ಗೆ ಎಲ್ಲ ಪರಿಣತರು ಸಲಹೆ ಸೂಚನೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ಅಭ್ಯರ್ಥಿಗಳನ್ನು ಚಿಕ್ಕ ಚಿಕ್ಕ ಗುಂಪುಗಳಾಗಿ ವಿಂಗಡಿಸಿ, ಕೆಲಸ ಪಡೆಯಲು ಬೇಕಾದ ತಯಾರಿಯ ಕುರಿತ ಚರ್ಚೆಗಳನ್ನು ನಡೆಸಿ, ತಮ್ಮೆಲ್ಲರ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಕರವೇ ಐ.ಟಿ. ಘಟಕದ ಪದಾಧಿಕಾರಿಗಳು ಮತ್ತು ಕೆಲವು ಐ.ಟಿ. ಕಂಪನಿಗಳ ಮುಖ್ಯಸ್ಥರೂ ಸಹ ಭಾಗಿಯಾಗಿದ್ದರು.

Leave a Reply