ಯಾವ ಸಿದ್ಧಾಂತವೂ ಭಾವನೆಗಳನ್ನೇ ಖಾಲಿಯಾಗಿಸಿ ಸಾವಿಗೆ ದೂಡಬಾರದು, ರೋಹಿತ್ ವೆಮುಲರ ಆತ್ಮಹತ್ಯೆ ಪತ್ರ ಓದಿ ನಾವು ಕಲಿಯಬೇಕಿರುವ ಪಾಠವಿದು!

 

ಚೈತನ್ಯ ಹೆಗಡೆ

ಹೈದರಾಬಾದಿನ ಸೆಂಟ್ರಲ್ ಯುನಿವರ್ಸಿಟಿಯ ಪಿಎಚ್ಡಿ ವಿದ್ಯಾರ್ಥಿ ರೋಹಿತ್ ವೆಮುಲ (26) ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಈ ದಲಿತ ವಿದ್ಯಾರ್ಥಿ ಸಾವು ಪ್ರತಿಭಟನೆ-  ಧರಣಿಗಳಿಗೆ ದಾರಿ ಮಾಡಿಕೊಟ್ಟಿದೆ. ಏಕೆಂದರೆ ವಿಶ್ವವಿದ್ಯಾಲಯದ ರಾಜಕೀಯ ಅಂಗಳವೇ ರೋಹಿತರನ್ನು ಆತ್ಮಹತ್ಯೆ ನಿರ್ಧಾರಕ್ಕೆ ದೂಡಿತಾ ಎಂಬ ಪ್ರಶ್ನೆಗಳೆದ್ದಿವೆ. ಇದೇ ಜಾಡಿನಲ್ಲೇ ರಾಜಕೀಯ ಚರ್ಚೆ ಏಳುವುದೂ ಪಕ್ಕಾ. ಆದರೆ ಇಂಥದೆಲ್ಲ ಉತ್ಸಾಹ ತೋರುವವರು ಮೊದಲಿಗೆ ರೋಹಿತ್ ವೆಮುಲ ಅವರ ಆತ್ಮಹತ್ಯೆ ಪತ್ರವನ್ನು ಓದಬೇಕು. ಅತಿರೇಕದ ಸೈದ್ಧಾಂತಿಕ ಜಗಳಗಳು ಬದುಕನ್ನು ಹೇಗೆಲ್ಲ ಬರಡುಗೊಳಿಸಬಹುದು ಎಂಬ ಚಿತ್ರಣ ನಮಗೆ ಸಿಗೋದು ಅಲ್ಲಿಯೇ.

ಕಳೆದ ಆಗಸ್ಟ್ ನಲ್ಲಿ ವಿಶ್ವವಿದ್ಯಾಲಯದ ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ (ಎಎಸ್ ಎ) ಇನ್ನೂ ಕೆಲ ಸಂಸ್ಥೆಗಳೊಂದಿಗೆ ಸೇರಿಕೊಂಡು ‘ಮುಜಪ್ಫರ್ ನಗರ್ ಬಾಕಿ ಹೈ’ ಎಂಬ ಚಿತ್ರ ಪ್ರದರ್ಶನಕ್ಕೆ ಮುಂದಾಗಿತ್ತು. ರೋಹಿತ್ ವೆಮುಲ ಮುಂಚೂಣಿಯಲ್ಲಿದ್ದ ಈ ಕಾರ್ಯಕ್ರಮವನ್ನು ದೇಶ ವಿರೋಧಿ ಹಾಗೂ ಸಂಘರ್ಷ ಹಬ್ಬಿಸುವ ಯತ್ನ ಎಂಬ ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿರೋಧಿಸಿತು. ರೋಹಿತ್ ವೆಮುಲ ನೇತೃತ್ವದ ವಿದ್ಯಾರ್ಥಿಗಳ ಗುಂಪು ಯಾಕೂಬ್ ಮೆನನ್ ಗೆ ಗಲ್ಲುಶಿಕ್ಷೆಯನ್ನೂ ವಿರೋಧಿಸಿತ್ತು ಎಂಬ ವಿವರಗಳೂ ಸೇರಿಕೊಂಡು ಎಎಸ್ ಎ ಗುಂಪಿಗೆ ವಿಶ್ವವಿದ್ಯಾಲಯ ಆಡಳಿತವು ಕೆಲವು ಪ್ರತಿಬಂಧಗಳನ್ನು ಹೇರಿತು. ಹೊಸ ವೈಸ್ ಚಾನ್ಸೆಲರ್ ಆಗಮನವಾಗುತ್ತಲೇ ಇವರನ್ನೆಲ್ಲ ವಸತಿನಿಲಯದಿಂದ ಡಿಸ್ಮಿಸ್ ಮಾಡಲಾಯಿತು.

ಸದ್ಯಕ್ಕೆ ಇಲ್ಲಿ ಎಎಸ್ ಎ ಸರಿಯೋ, ಎಬಿವಿಪಿ ಸರಿಯೋ ಅಂತೆಲ್ಲ ಪ್ರಚೋದನಾತ್ಮಕ ಚರ್ಚೆ ಮಾಡಿಬಿಡಬಹುದು. ಆದರೆ ಕೊನೆಗೂ ಯೋಚಿಸಬೇಕಿರುವ ಸಂಗತಿ ಎಂದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಜೀವ ತೆಗೆಯುವ, ತೆಗೆದುಕೊಳ್ಳುವ ಮಟ್ಟಿಗೆ ಪ್ರಭಾವಿಸುತ್ತಿವೆಯಲ್ಲ? ಅದೆಂಥದೇ ವೈಚಾರಿಕತೆ, ಬೌದ್ಧಿಕತೆ ಅಂತಂದರೂ ಇಂಥದೊಂದು ವಾತಾವರಣ ಬೇಕಾ ನಮಗೆ?

ರೋಹಿತ್ ಸಾವಿನ ಹಿನ್ನೆಲೆಯಲ್ಲಿ ಅದಾಗಲೇ ಸೈದ್ಧಾಂತಿಕ- ರಾಜಕೀಯ ನೆಲೆಯಲ್ಲಿ ಬಿರುಸು ಚರ್ಚೆಗಳು ಶುರುವಾಗಿವೆ. ಆದರೆ ನಿಜಕ್ಕೂ ಚರ್ಚೆಯಾಗಬೇಕಿರುವುದು ಈ ಸಿದ್ಧಾಂತಗಳ ಬಿರುಸನ್ನು ಕಡಿಮೆ ಮಾಡಿ, ಬದುಕಲು ಕಲಿಯುವುದಕ್ಕೆ ಪ್ರೇರೇಪಿಸುವ ವಿಚಾರಧಾರೆ ಮುಂಚೂಣಿಗೆ ಬರಬೇಕಿರುವುದು ಹೇಗೆ ಎಂಬ ಬಗ್ಗೆ. ಎಡವೋ ಬಲವೋ ಮತ್ತೊಂದೋ… ಯಾರದ್ದೋ ಜೀವನಷ್ಟಕ್ಕೆ ಕಾರಣವಾಗುತ್ತದೆ ಅಂತಾದರೆ ಅಂಥ ಸೈದ್ಧಾಂತಿಕ ಹುಚ್ಚುಗಳು ಏನನ್ನು ಸಾಧಿಸಿದಂತಾಯ್ತು? ಒಂದುಕ್ಷಣ ಈ ರೋಹಿತ್ ವೆಮುಲ ದಲಿತ ವಿದ್ಯಾರ್ಥಿ, ಎಬಿವಿಪಿ ಜತೆಗೆ ಸಂಘರ್ಷ ಇವೆಲ್ಲ ವಿವರಗಳನ್ನು ಪಕ್ಕಕ್ಕಿಟ್ಟುಬಿಡೋಣ. ಕೇವಲ ಒಂದು ಸಹಜೀವಿಯೆಂದು ಪರಿಗಣಿಸಿ ಆತನ ಕೊನೆಯ ಪತ್ರವನ್ನು ಓದಿಕೊಂಡರೆ ಅದೆಂಥ ಸುಂದರ ಭಾವಬಿಂದುವೊಂದು ಆವಿಯಾಗಿಹೋಯಿತಲ್ಲ ಅಂಥ ವಿಷಾದ ಕಾಡದೇ ಇರದು. ಇಷ್ಟು ಚೆಂದಕ್ಕೆ ಅಕ್ಷರಗಳನ್ನು ಪೋಣಿಸಿದ ರೋಹಿತ್ ವೆಮುಲ ಸಾವಿಗೆ ಶರಣಾದ ಎಂಬುದನ್ನು ಮಾತ್ರ ನಂಬಲು ಕಷ್ಟವಾಗುತ್ತಿದೆ. ಆತ ಕೊನೆ ಪತ್ರದಲ್ಲಿ ಬರೆದಿದ್ದಾನೆ-

‘ಗುಡ್ ಮಾರ್ನಿಂಗ್. ನೀವು ಈ ಪತ್ರ ಓದುವಷ್ಟರಲ್ಲಿ ನಾನಿರುವುದಿಲ್ಲ. ನನ್ನ ಮೇಲೆ ಕೋಪಿಸಿಕೊಳ್ಳಬೇಡಿ. ನಿಮ್ಮಲ್ಲಿ ಕೆಲವರು ನನ್ನನ್ನು ನಿಜಕ್ಕೂ ಪ್ರೀತಿಸಿದಿರಿ, ಕಾಳಜಿ ವಹಿಸಿದಿರಿ ಅಂತ ಗೊತ್ತು. ಯಾರ ಮೇಲೂ ನನಗೆ ದೂರುಗಳಿಲ್ಲ. ಸಮಸ್ಯೆಗಳೇನಿದ್ದರೂ ಅದು ನನ್ನದು ಮಾತ್ರವೇ. ನನ್ನ ಆತ್ಮ ಮತ್ತು ದೇಹದ ನಡುವಿನ ಕಂದಕ ಹೆಚ್ಚುತ್ತಲೇ ಸಾಗಿತು. ನಾನು ರಾಕ್ಷಸನಾಗಿಬಿಟ್ಟೆ. ಬರಹಗಾರನಾಗಬೇಕೆಂಬುದು ನನ್ನ ಯಾವತ್ತಿನ ಬಯಕೆ ಆಗಿತ್ತು. ಕಾರ್ಲ್ ಸಗಾನ್ ಥರ ವಿಜ್ಞಾನ ಬರಹಗಾರನಾಗಬೇಕು ಅಂತ ಆಸೆ ಇತ್ತು. ಕೊನೆಯಲ್ಲಿ ನನಗೆ ಬರೆಯುವುದಕ್ಕೆ ಅವಕಾಶವಾಗಿದ್ದು ಈ ಪತ್ರವನ್ನು ಮಾತ್ರ.’

‘ನಾನು ವಿಜ್ಞಾನವನ್ನು, ನಕ್ಷತ್ರಗಳನ್ನು, ಪ್ರಕೃತಿಯನ್ನು ಪ್ರೀತಿಸಿದೆ. ನಂತರ ಮನುಷ್ಯರನ್ನೂ ಪ್ರೀತಿಸಿಬಿಟ್ಟೆ, ಇವರೆಲ್ಲ ಪ್ರಕೃತಿಯಿಂದ ಯಾವತ್ತೋ ವಿಚ್ಛೇದನ ಹೊಂದಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳದೆ. ನಮ್ಮ ಭಾವನೆಗಳು ಬಳಸಿಬಿಟ್ಟಿದ್ದಾಗಿವೆ. ಪ್ರೇಮವನ್ನೂ ಲೆಕ್ಕಾಚಾರದಲ್ಲಿ ಕಟ್ಟಿಕೊಂಡಿದ್ದೇವೆ. ನಮ್ಮ ನಂಬಿಕೆಗಳು ಬಣ್ಣ ಬಳಿದುಕೊಂಡಿವೆ. ಕೃತಕ ಚಿತ್ತಾರಗಳ ಮೂಲಕ ನಮ್ಮ ಒರಿಜಿನಾಲಿಟಿಯನ್ನು ದೃಢೀಕರಿಸಲಾಗುತ್ತಿದೆ. ನೋವು ಮಾಡಿಕೊಳ್ಳದೇ ಪ್ರೀತಿಸುವುದು ನಿಜಕ್ಕೂ ಕಷ್ಟವಾಗಿಬಿಟ್ಟಿದೆ.

ಒಬ್ಬ ಮನುಷ್ಯನ ಮೌಲ್ಯವೆಂಬುದು ಆತನ ಕ್ಷುಲ್ಲಕ ಗುರುತು ಮತ್ತು ಸನಿಹದ ಸಾಧ್ಯತೆಗಳೊಂದಿಗೆ ತಳುಕು ಹಾಕಿಕೊಂಡಿದೆ. ಮನುಷ್ಯನನ್ನು ಒಂದು ಮತವಾಗಿ, ಸಂಖ್ಯೆಯಾಗಿ, ವಸ್ತುವಾಗಿ ನೋಡಿಕೊಂಡಿದ್ದೇವೆ. ಮನುಷ್ಯ ಎಂದರೆ ಮನಸ್ಸು ಅಂತ ನೋಡುತ್ತಲೇ ಇಲ್ಲ. ನಕ್ಷತ್ರದ ಧೂಳಿನಿಂದ ಅರಳಿಕೊಂಡ ಅದ್ಭುತವಿದು ಅಂತ ಗೊತ್ತಾಗುತ್ತಲೇ ಇಲ್ಲ. ಪ್ರತೀ ಕ್ಷೇತ್ರದಲ್ಲಿ, ಅದು ಅಧ್ಯಯನವಿರಬಹುದು, ಬೀದಿ, ರಾಜಕೀಯ, ಸಾವು, ಜೀವನ ಎಲ್ಲದರಲ್ಲೂ…’

‘ನನ್ನ ಜೀವನದಲ್ಲಿ ಈ ಬಗೆಯ ಪತ್ರವನ್ನು ಇದೇ ಮೊದಲ ಬಾರಿ ಬರೆಯುತ್ತಿದ್ದೇನೆ. ಮೊದಲ ಬಾರಿ ಬರೆಯುತ್ತಿರುವ ಕೊನೆಯ ಪತ್ರವಿದು. ಇಲ್ಲಿ ಅರ್ಥವೇ ಇಲ್ಲ ಅಂತನಿಸಿದರೆ ಕ್ಷಮಿಸಿಬಿಡಿ.

ಬಹುಶಃ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ತಪ್ಪು ಹೆಜ್ಜೆ ಇಟ್ಟೆ. ಪ್ರೀತಿ, ನೋವು, ಬದುಕು, ಸಾವು ಇವೆಲ್ಲವನ್ನು ಅರ್ಥ ಮಾಡಿಕೊಳ್ಳುವಲ್ಲೂ ನಾನು ಎಡವಿದೆನೇನೋ. ಇಲ್ಲಿ ತ್ವರಿತವಾಗಿರಬೇಕಿದ್ದೇನೂ ಇರಲಿಲ್ಲ. ಆದರೆ ನಾನು ಗಡಿಬಿಡಿಯಲ್ಲಿದ್ದೆ. ಹೊಸ ಬದುಕು ಸಾಗಿಸುವುದಕ್ಕೆ ಹತಾಶ ಉತ್ಸುಕತೆಗೆ ಬಿದ್ದಿದ್ದೆ. ನನ್ನ ಜನನ ಒಂದು ಆಕಸ್ಮಿಕವಷ್ಟೆ. ನನ್ನ ಬಾಲ್ಯದ ಏಕಾಂಗಿತನದಿಂದ ಸಾವರಿಸಿಕೊಳ್ಳುವುದಕ್ಕೆ ಈತನಕವೂ ಆಗಿಲ್ಲ.’

‘ಈ ಕ್ಷಣದಲ್ಲಿ ನಾನು ನೋವುಣ್ಣುತ್ತಿಲ್ಲ. ದುಃಖಿಯೂ ಅಲ್ಲ. ಕೇವಲ ಖಾಲಿತನ ಅಷ್ಟೆ. ನನಗೆ ನನ್ನ ಬಗ್ಗೆ ಏನೂ ಅನ್ನಿಸುತ್ತಲೇ ಇಲ್ಲ. ಇದು ಕೆಟ್ಟ ಸ್ಥಿತಿ. ಹೀಗಾಗಿಯೇ ಇದಕ್ಕೆ ಮುಂದಾಗುತ್ತಿದ್ದೇನೆ.

ಜನ ನನ್ನನ್ನು ಹೇಡಿ ಅನ್ನಬಹುದೇನೋ. ಸ್ವಾರ್ಥಿ, ಮೂರ್ಖ ಎಂದಾರು. ಆ ಬಗ್ಗೆ ನಾನು ಯೋಚಿಸುವುದಿಲ್ಲ. ಸಾವಿನ ನಂತರದ ಆತ್ಮ, ಪಿಶಾಚಿಗಳ ಕತೆಯಲ್ಲೂ ನನಗೆ ನಂಬಿಕೆ ಇಲ್ಲ. ನಾನೇನಾದರೂ ನಂಬುತ್ತೇನೆ ಅಂತಾದರೆ ಅದು ನಾನು ನಕ್ಷತ್ರಗಳಿಗೆ ಪ್ರಯಾಣಿಸಬಲ್ಲೆ ಎಂಬುದನ್ನು ಮಾತ್ರ. ಅಲ್ಲಿ ಬೇರೆ ಜಗತ್ತನ್ನು ಅರ್ಥಮಾಡಿಕೊಳ್ಳುವೆ.’

‘ಈ ಪತ್ರ ಕೈಗೆ ಸಿಗುವ ಯಾರಾದರೂ ನನಗೋಸ್ಕರ ಮಾಡಬಹುದಾದದ್ದು ಏನೆಂದರೆ- ನನಗೆ ಏಳು ತಿಂಗಳ 1 ಲಕ್ಷ 75 ಸಾವಿರ ರುಪಾಯಿಗಳ ವಿದ್ಯಾರ್ಥಿವೇತನವೊಂದು ಬರಲಿಕ್ಕಿದೆ. ನನ್ನ ಕುಟುಂಬಕ್ಕೆ ಅದು ಸಿಗುವಂತೆ ನೋಡಿಕೊಳ್ಳಿ. ರಾಮ್ಜಿ ಎಂಬುವವರಿಗೆ ನಾನು 40 ಸಾವಿರ ಕೊಡಬೇಕು. ಆತ ಅದನ್ನೇನೂ ತಿರುಗಿ ಕೇಳಿಲ್ಲವಾದರೂ ಅವನಿಗೆ ಹಿಂತಿರುಗಿಸಿಬಿಡಿ.’

‘ನನ್ನ ಅಂತ್ಯಸಂಸ್ಕಾರ ಮೌನ- ಮೃದುವಾಗಿರಲಿ. ಹೀಗೆ ಪ್ರತ್ಯಕ್ಷನಾಗಿ ಹಾಗೆ ಮಾಯವಾದೆ ಎಂಬಂತೆ ನೋಡಿ ಅಷ್ಟೆ. ನನಗಾಗಿ ಕಣ್ಣೀರು ಸುರಿಸಬೇಡಿ. ಬದುಕಿದ್ದಕ್ಕಿಂತ ಸತ್ತ ಮೇಲೆಯೇ ಖುಷಿಯಾಗಿರುವೆ.

ಉಮಾ ಅಣ್ಣಾ… ಈ ಕೆಲಸಕ್ಕಾಗಿ ನಿನ್ನ ಕೊಠಡಿ ಉಪಯೋಗಿಸಿಕೊಂಡಿದ್ದಕ್ಕೆ ಕ್ಷಮಿಸು. ಎಎಸ್ ಎ ಕುಟುಂಬವೇ… ನಿಮಗೆಲ್ಲ ನಿರಾಸೆ ನೀಡುತ್ತಿರುವುದಕ್ಕೆ ಸ್ಸಾರಿ. ನೀವು ನನ್ನನ್ನು ತುಂಬ ಪ್ರೀತಿಸಿದಿರಿ. ಭವಿಷ್ಯದಲ್ಲಿ ನಿಮಗೆಲ್ಲ ಒಳಿತಾಗಲಿ.

ಕೊನೆಯ ಬಾರಿಗೆ…

ಜೈ ಭೀಮ್’

rohit vemula1

‘ಸಂಪ್ರದಾಯದ ವಾಕ್ಯಗಳನ್ನು ಬರೆಯುವುದಕ್ಕೆ ಮರೆತೆನಲ್ಲ.. ನಾನು ಸಾಯಿಸಿಕೊಳ್ಳುತ್ತಿರುವುದಕ್ಕೆ ಯಾರೂ ಜವಾಬ್ದಾರರಲ್ಲ. ಯಾರೂ ನನ್ನನ್ನು ಪ್ರಚೋದಿಸಲಿಲ್ಲ, ಅವರ ಕ್ರಮದ ಮೂಲಕವಾಗಲಿ ಇಲ್ಲವೇ ಶಬ್ದಗಳ ಮೂಲಕವಾಗಲಿ. ನಾನು ಹೋದ ನಂತರ ನನ್ನ ಸ್ನೇಹಿತರಿಗಾಗಲೀ, ವೈರಿಗಳಿಗಾಗಲೀ ಕಷ್ಟ ಕೊಡಬೇಡಿ.’

2 COMMENTS

  1. ohhh… entha patra..
    chaitanya… .. neevu bahala sariyagi hrudaya muttuva reethi barediddeeri.
    kanneeru bantu..
    che.. heegaagabaradittu..

Leave a Reply