ವಿಶಾಲ್ ಸಿಕ್ಕ  ಇನ್ಫೊಸಿಸ್ ಸಿಕ್ಕು ಬಿಡಿಸಿ ಲಾಭದ ಹಳಿಗೆ ತಂದಿದ್ದು ಹೇಗೆ ಗೊತ್ತೇ?

authors-rangaswamyಇನ್ಫೊಸಿಸ್ ಸಂಸ್ಥೆಯ ಆದಾಯ ಹೆಚ್ಚಿದ ವಿಷಯ ಮತ್ತು ಅದರ ಪರಿಣಾಮವಾಗಿ ಹೆಚ್ಚಿದ ಷೇರಿನ ಬೆಲೆ ಇವೆಲ್ಲಾ ಪತ್ರಿಕೆಗಳಲ್ಲಿ ಪೂರ್ಣ ಅಲ್ಲದಿದ್ದರೂ ಹೆಡಿಂಗ್ ನೋಡಿ ತಿಳಿದು ಕೊಂಡಿರುತ್ತೀರಿ. ವಿಶಾಲ್ ಸಿಕ್ಕ ಕೈಯಲ್ಲಿ ಮ್ಯಾಜಿಕ್ ದಂಡ ಏನಾದರು ಹಿಡಿದಿದ್ದಾರೆಯೇ ? ಇನ್ಫೊಸಿಸ್ ನಲ್ಲಿ  31 ಜುಲೈ 2015ಕ್ಕೆ ಒಂದು ವರ್ಷ ಪೂರೈಸಿದ ಇವರು, ಇನ್ಫೊಸಿಸ್ ನ ಮೊದಲ ಸಂಸ್ಥಾಪಕ ನಲ್ಲದ ಕಾರ್ಯಕಾರಿ ನಿರ್ವಾಹಕ ( ನಾನ್ ಫೌಂಡರ್ ಸಿಇಓ ) ರಾಗಿ ಕೆಲಸಕ್ಕೆ ಸೇರುವುದಕ್ಕೆ ಮುಂಚೆ 2014 ರ ಒಂದು ಬೇಸಿಗೆಯ ದಿನದಲ್ಲಿ ದಕ್ಷಿಣ ದೆಹಲಿಯಲ್ಲಿ ಅಂದಿನ ಸಿಇಓ ಶಿಬುಲಾಲ್ ಮತ್ತಿತರ ಉನ್ನತ ಅಧಿಕಾರಿಗಳ ತಂಡವನ್ನು ಭೇಟಿಯಾಗುತ್ತಾರೆ. ಅವರ ಮೊದಲ ಪ್ರಶ್ನೆ , ಸದ್ಯಕ್ಕೆ ಎಷ್ಟು ಪ್ರಾಜೆಕ್ಟ್ ಗಳಲ್ಲಿ ಕೆಲಸ ನಡೆಯುತ್ತಿದೆ? ಶಿಬುಲಾಲ್ ಒಳಗೊಂಡು ಯಾರಿಗೂ ನಿಖರ ಉತ್ತರ ಗೊತ್ತಿರಲಿಲ್ಲ ಎಂದರೆ ನಿಮಗೆ ನಂಬಲು ಕಷ್ಟ ಆಗಬಹುದು.  ಆದರಿದು ನಿಜ. ಅಷ್ಟೇ ಅಲ್ಲ ಒಂದು ತಂಡ ನಾಲ್ಕೈದು ವಾರ ದುಡಿದು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಒಂದು  ಕಂಪನಿ ಎಷ್ಟು ವಿಷಯದ ಬಗ್ಗೆ ಕೆಲಸ ಮಾಡುತ್ತಿದೆ ಎನ್ನುವುದರ ನಿಖರ ಮಾಹಿತಿ ಕಲೆಹಾಕಲು ತಿಂಗಳು ಬೇಕಾಯಿತು ಎಂದರೆ ಅದೆಷ್ಟು ದೊಡ್ಡದಿರಬಹುದು? ಅಂತಹ ದೊಡ್ಡ ಕಂಪನಿ ಹಳಿ ತಪ್ಪಲು ಸಮಯ ಜಾಸ್ತಿ ಬೇಕಾಗುವುದಿಲ್ಲ.  ಆದರೆ ಅದನ್ನು ಮತ್ತೆ ಸರಿದಾರಿಗೆ ತರುವುದು ಸುಲಭವಲ್ಲ.  2014ರ ಆಗಸ್ಟ್ ನಲ್ಲಿ ಇನ್ಫೋಸಿಸ್ ಸಿಇಓ ಆಗಿ ಅಧಿಕಾರವಹಿಸಿ ಕೊಂಡು ಸಿಕ್ಕ ಅತಿ ಕಡಿಮೆ ಸಮಯದಲ್ಲಿ ಹಳಿ ತಪ್ಪುತಿದ್ದ ಕಂಪನಿಯ ಮರಳಿ ಟ್ರಾಕ್ ಗೆ ತರಲು ಏನು ಮಾಡಿದರು? ನಾರಾಯಣ ಮೂರ್ತಿ , ಶಿಬುಲಾಲ್ ಅಂತಹ ಘಟಾನುಘಟಿಗಳು ಎಡವಿದ್ದೆಲ್ಲಿ ? ಒಂದಷ್ಟು ವಿಶ್ಲೇಷಣೆ ಮಾಡೋಣ .

ನಿಮಗೆ ಗೊತ್ತಿರಬಹುದು, ಜರ್ಮನ್ ಸಾಫ್ಟ್ವೇರ್  ಕಂಪನಿ SAP  AG ಯ  ಡಾಟಾ ಅನಲಿಟಿಕಲ್ ಪ್ಲಾಟ್ಫಾರ್ಮ್ HANA  ಇವರ ಬ್ರೈನ್ ಚೈಲ್ಡ್. ಇದೊಂದು ಬ್ಲಾಕ್ಬಸ್ಟರ್ ಸಾಫ್ಟ್ವೇರ್ ಟೂಲ್.  ಇದು ಇವರಿಗೆ ಕಾರ್ಪೊರೇಟ್ ವಲಯದಲ್ಲಿ ಬಹು ದೊಡ್ಡ ಹೆಸರು ತಂದು ಕೊಟ್ಟಿತು. ಇನ್ಫೊಸಿಸ್ ಸೇರಿದ ನಂತರ ಮಾಡಿದ ಮೊದಲ ಕೆಲಸವೆಂದರೆ ತನ್ನೆಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ ಗಳಿಗೆ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಸ್ಪ್ರೆಡ್ ಶೀಟ್ ನಲ್ಲಿ ಮಾಹಿತಿ ಹಂಚಿಕೊಳ್ಳಲು ಹೇಳಿದ್ದು. ಎಲ್ಲವ ಒಂದು ಕಡೆ ಸೇರಿಸಿ ಇನ್ನೊಂದು ಸ್ಪ್ರೆಡ್ ಶೀಟ್ ತಯಾರಿಸಿ ಅದು ತನಗೆ ಸಿಗುವಂತೆ ಮಾಡಿಕೊಂಡಿದ್ದು. ವಾರಾಂತ್ಯದಲ್ಲಿ ಕಂಪನಿಯ ಎಲ್ಲಾ ಕೆಲಸದ ಮಾಹಿತಿ ಒಂದು ಸ್ಪ್ರೆಡ್ ಶೀಟ್ ನಲ್ಲಿ ಪ್ರತಿವಾರ ಅಪ್ಡೇಟ್ ಆಗಿ ಸಿಗುವಂತೆ ಮಾಡಿಕೊಂಡಿದ್ದು ಮೊದಲ ಜಯ.  ಏಕೆಂದರೆ ನಾವಿಕನಿಗೆ ಎತ್ತ ಸಾಗುತಿದ್ದೇನೆ ಎನ್ನುವ ಅರಿವಿಲ್ಲದೆ ತಲುಪುವುದಾದರೂ ಎಲ್ಲಿಗೆ ?

ಇನ್ಫೊಸಿಸ್ ನಲ್ಲಿ ನಾರಾಯಣ ಮೂರ್ತಿ ಹಾಗೂ ಇತರರು ಒಂದು ಹಂತದ ತನಕ ಜಯಗಳಿಸಿದರು. ತಮ್ಮ ಕಾರ್ಯಕ್ಷೇತ್ರದಲ್ಲಿ ದಂತಕಥೆಯಾದರು. ಆದರೂ ಅಂಥವರಿಗೆ ಕಂಪನಿಯ ಪುನರ್ಜೀವನ ಗೊಳಿಸಲು ಅಗಲಿಲ್ಲವೇಕೆ? ಇದೇನು ಯಕ್ಷ ಪ್ರಶ್ನೆಯಲ್ಲ . ಹಾಗೆ ನೋಡಿದರೆ ನಾರಾಯಣ ಮೂರ್ತಿ ಇರಬಹುದು ಅಥವಾ ಅಜೀಂ ಪ್ರೇಮಜಿ ಇರಬಹದು ಅವರು ಒಂದು ಸಿದ್ಧ ಬಿಸಿನೆಸ್ ಫಾರ್ಮ್ಯಾಟ್ ಗೆ ಅಂಟಿ ಕೊಂಡು ಅದರಲ್ಲಿ ಯಶಸ್ಸು ಕಂಡವರು. ಅಂದರೆ ಇಲ್ಲಿ ಕಂಪನಿಯ ಒಂದು ವರ್ಕಿಂಗ್ ಸ್ಟ್ರಕ್ಚರ್ ಇತ್ತು. ಸಿಇಓ ನಂತರ ಆತನ ಕೆಳಗೆ ಒಂದಷ್ಟು ಜನ, ನಂತರ ಪ್ರಾಜೆಕ್ಟ್ ಮ್ಯಾನೇಜರ್ ಗಳು, ಅವರ ಕೆಳಗೆ ಟೀಂ ಲೀಡರ್ ಗಳು… ಹೀಗೆ , ಐದು ಹಂತದಲ್ಲಿ ಶ್ರೇಣಿ ವ್ಯವಸ್ಥೆ ಇತ್ತು.

ಒಂದು ವಿಷಯಕ್ಕೆ ಅಪ್ಪಣೆ ಪಡೆಯಬೇಕೆಂದರೆ ಒಂದು ಇ ಮೇಲ್ ತನ್ನ ಉನ್ನತ ಅಧಿಕಾರಿಗೆ ಕಳಿಸಬೇಕು. ಆತ ಇನ್ನೊಬ್ಬರಿಗೆ… ಹೀಗೆ ಸಾಕಷ್ಟು ಕಟ್ಟುಪಾಡುಗಳು ಇದ್ದವು. ಇವೆಲ್ಲಾ ಬೇಕು, ಆದರೆ ಇವೆಲ್ಲಾ ಒಂದು ಹಂತದವರೆಗೆ ಜಯ ಕಾಣುವ ಫಾರ್ಮುಲಾಗಳು. ಒಂದು ಲಕ್ಷ ಎಪ್ಪತಮೂರು ಸಾವಿರ ಕೆಲಸಗಾರರ ಹೊಂದಿರುವ ಕಂಪನಿ ತನ್ನ ಅನುಕೊಲಕ್ಕೆ ತಕ್ಕಂತೆ ಬದಲಾಗಬೇಕು. ಸಿಕ್ಕ ಮಾಡಿದ್ದೂ ಅದೇ ಬದಲಾವಣೆ. ಅವರ ಕೈಯಲ್ಲಿ ಜಾದು ದಂಡವಿಲ್ಲ, ಜಾಣ್ಮೆಯಿಂದ ಕೆಲಸ ತೆಗೆಸುವ ಕಲೆಯಿದೆ .

ಹೊರಗೆ ನಿಂತು ನೋಡುವರಿಗೆ ಇನ್ಫೊಸಿಸ್ ಒಂದು ಸಂಸ್ಥೆ . ವಿಶಾಲ್ ಸಿಕ್ಕ ಅದನ್ನು ಸಾವಿರಾರು ಸಣ್ಣ ಸ್ಟಾರ್ಟ್ ಅಪ್ ಗಳನ್ನಾಗಿ ವಿಂಗಡಣೆ ಮಾಡಿದ್ದಾರೆ. ಅಧಿಕಾರ ವಹಿಸಿಕೊಂಡಾಗ ಇನ್ಫೊಸಿಸ್ ಒಟ್ಟು 8500 ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿತ್ತು.  ಸಿಕ್ಕ ಮಾಡಿದ್ದೇನೆಂದರೆ ಪ್ರಾಜೆಕ್ಟ್ ಮ್ಯಾನೇಜರ್ ಗಳಿಗೆ ಪೂರ್ಣ ಅಧಿಕಾರ ನೀಡಿದ್ದು.  ಒಬ್ಬ ಪ್ರಾಜೆಕ್ಟ್ ಮ್ಯಾನೇಜರ್ ಗೆ ಒಬ್ಬ ಫೈನಾನ್ಸಿಯಲ್ ಮ್ಯಾನೇಜರ್ , ಸೇಲ್ಸ್ ಮ್ಯಾನೇಜರ್ , ಪ್ರೋಗ್ರಾಮರ್ ಗಳು ಟೀಂ ಲೀಡರ್ ಗಳು ಹೀಗೆ ಒಂದು ಸಣ್ಣ ಉದ್ದಿಮೆಗೆ ಏನೇನು ಬೇಕೋ ಎಲ್ಲವ ಪ್ರಾಜೆಕ್ಟ್ ಮ್ಯಾನೇಜರ್ ಗೆ ನೀಡಿದ್ದು ಮತ್ತು ಎಲ್ಲಾ ಪ್ರಾಜೆಕ್ಟ್ ಗಳನ್ನೂ ಸಪರೇಟ್ ಪ್ರಾಫಿಟ್ ಎಂಟಿಟಿ ಎಂದು ಗುರುತಿಸಿದ್ದು . ಸಾವಿರಾರು ಪ್ರಾಜೆಕ್ಟ್ ಗಳಲ್ಲಿ ಹಲವು ಲಾಭದಾಯಕವಲ್ಲ , ಆದರೆ ಒಟ್ಟು ಆದಾಯದಲ್ಲಿ ಇಂತಹ ನಷ್ಟ ಉಂಟು ಮಾಡುವ ಪ್ರಾಜೆಕ್ಟ್ಗಳು ಗಮನಕ್ಕೆ ಬರದೆ ಹೋಗುತಿದ್ದವು. ಪ್ರತಿ ಪ್ರಾಜೆಕ್ಟ್ ಅನ್ನು ಲಾಭದ ಮೇಲೆ , ಒಂದು ಸಣ್ಣ ಉದ್ದಿಮೆಯಂತೆ ವಿಂಗಡಿಸಿದ್ದು ಇಂದಿನ ಲಾಭಕ್ಕೆ ಕಾರಣ . ಉದಾಹರಣೆ ನೋಡಿ. 8500 ಪ್ರಾಜೆಕ್ಟ್ ನಲ್ಲಿ 8000 ಪ್ರಾಜೆಕ್ಟ್ 1000 ಕೋಟಿ ಲಾಭ ನೀಡಿತು ಎಂದು ಕೊಳ್ಳಿ. ಉಳಿದ 500 ಪ್ರಾಜೆಕ್ಟ್ ಗಳಿಂದ ಆದ ನಷ್ಟ 100 ಕೋಟಿ ಅಂದು ಕೊಂಡರೆ ಒಟ್ಟು ಇನ್ಫೋಸಿಸ್ ಆದಾಯ 900 ಕೋಟಿ ರು. ಒಟ್ಟಾಗಿ ನೋಡಿದಾಗ ತಿಳಿಯದ ವಿಷಯ , ಈಗ ಸರಳ. ನಷ್ಟ ತರುವ 500 ಪ್ರಾಜೆಕ್ಟ್ ಇನ್ನೊಬ್ಬರಿಗೆ ವರ್ಗಾಯಿಸುವುದು ( ಔಟ್ ಸೊರ್ಸ್ ). ಇದರಿಂದ ಸುಮ್ಮನೆ 100 ಕೋಟಿ ಆದಾಯ ಹೆಚ್ಚಿತು ಅಲ್ಲದೆ 500 ಪ್ರಾಜೆಕ್ಟ್ ನಲ್ಲಿ ವ್ಯರ್ಥ ವಾಗುತಿದ್ದ ಸಂಬಳ ಸಹಿತ ಅನೇಕ ಖರ್ಚುಗಳು ಉಳಿತಾಯವಾಯಿತು .

ಝೀರೋ ಡಿಸ್ಟೆನ್ಸ್ ಇನ್ನೊಂದು ಪರಿಕಲ್ಪನೆ. ಈಗ ಇಲ್ಲಿ ಐದು ಹಂತದ ಅಧಿಕಾರಿ – ನೌಕರ  ಸಂಬಂಧವಿಲ್ಲ. ಯಾರು ಯಾರಿಗೆ ಬೇಕಾದರೂ ಫೋನಾಯಿಸಬಹುದು ತಮ್ಮ ಕೆಲಸಕ್ಕೆ ಸಂಬಂಧಪಟ್ಟ ಕಷ್ಟ ಸುಖ ಅರುಹಬಹುದು. ವಾರಗಟ್ಟಲೆ ಇ ಮೇಲ್ ಉತ್ತರ ಕಾಯಬೇಕಾದ ಸ್ಥಿತಿ ಇಲ್ಲ.

ವಿಶಾಲ್ ಸಿಕ್ಕ ತಮ್ಮ ಈ ಪರಿಕಲ್ಪನೆ ಯನ್ನು ಪೂರ್ಣವಾಗಿ ಜಾರಿಗೆ ತಂದಿಲ್ಲ. ಅದು ಪೂರ್ಣವಾಗುವುದಕ್ಕೆ ಸಮಯ ಬೇಕು.  ಎಷ್ಟು ಸಾಧ್ಯವೋ ಅಷ್ಟರಲ್ಲಿ , ಕಡಿಮೆ ಸಮಯದಲ್ಲಿ ವಿಶಾಲ್ ಮಾಡಿರುವ ಸಾಧನೆಗೆ ಭೇಷ್ ಅನ್ನಲೇಬೇಕು.

ತಮ್ಮ ಗುರಿ ಸಾಧನೆಯೆಡೆಗೆ ಸಿಕ್ಕ ಹಾಕಿದ ಹೆಜ್ಜೆ ಗುರುತುಗಳ ಹೀಗೆ ಪಟ್ಟಿ ಮಾಡಬಹುದು .

1) ಎಲ್ಲಿ ಬೇಕೋ ಅಲ್ಲಿ ತಾನೇ ನಿಗಾವಹಿಸಿ ಕೆಲಸ ಮಾಡಿದ್ದು , ಬೇಡದಕ್ಕೆ ಮೂಗು ತೂರಿಸದೆ ಇರುವುದು.
2)ಯೋಗ್ಯ ಮ್ಯಾನೇಜರ್ ಗಳ ಗುರುತಿಸಿ , ಒಂದು ಪ್ರಾಜೆಕ್ಟ್ ನಿಂದ ಇನ್ನೊಂದಕ್ಕೆ ಯೋಗ್ಯತೆ ಆಧಾರದ ಮೇಲೆ ವರ್ಗಾವಣೆ.
3)ಬೇಕಾದಾಗ ಕಂಪನಿ ಹೊರಗಿನವರಿಂದ ಸಹಾಯ ಪಡೆದದ್ದು.
4)ವಿಶ್ವಾಸದ ಆಧಾರದ ಮೇಲೆ ಟೀಂ ಕಟ್ಟಿದ್ದು .
5)ಸುಮ್ಮನೆ ಕೊಟ್ಟ ಕೆಲಸ ಮಾಡುತಿದ್ದ ತನ್ನ ಸಿಬ್ಬಂದಿ ಯೋಚಿಸುವಂತೆ ಮಾಡಿದ್ದು.
6)ಕೆಲಸ ಬಿಟ್ಟು ಹೋಗುವರ  ಸಂಖ್ಯೆ ಆಘಾತಕಾರಿ ಮಟ್ಟದಿಂದ ಇಳಿಸಿದ್ದು.
7) ಎಲ್ಲಕ್ಕೂ ಮುಖ್ಯ ಹೆದರಿ ಕಂಪನಿಯಿಂದ ಹಣ ತೆಗೆಯಲು ಹವಣಿಸುತಿದ್ದ ಹೂಡಿಕೆದಾರರ ಒಂದು ವರ್ಷದಲ್ಲಿ ಐದು ಬಾರಿ ಭೇಟಿ ಮಾಡಿ ಭರವಸೆ ನೀಡಿದ್ದು.

ಮುಂಬರುವ ದಿನಗಳಲ್ಲಿ ಇನ್ಫೋಸಿಸ್ ಮತ್ತಷ್ಟು ಎತ್ತರಕ್ಕೆ ಏರಿದರೆ ಅದರ ಹಿಂದಿನ ತಲೆ , ಪರಿಶ್ರಮದ ಅರಿವು ನಿಮಗಾದೀತು ಎಂದು ಭಾವಿಸುವೆ.

(ಲೆಕ್ಕ ಪರಿಶೋಧಕರಾಗಿ ಹಲವು ದೇಶಗಳನ್ನು ಸುತ್ತಿರುವ, ಹಣಕಾಸು ಜಗತ್ತನ್ನು ಹತ್ತಿರದಿಂದ ನೋಡಿರುವ ಅನುಭವ ಲೇಖಕರದ್ದು. 15 ವರ್ಷಗಳ ಕಾಲ ಸ್ಪೇನ್ ನಿವಾಸಿಯಾಗಿದ್ದವರು ಈಗ ಬೆಂಗಳೂರಿನಲ್ಲಿ ಪೆಟ್ರಾಬೈಟ್ಸ್ ಎಂಬ ತೈಲಕ್ಕೆ ಸಂಬಂಧಿಸಿದ ಡಾಟಾ ಅನಾಲಿಸಿಸ್ ನವೋದ್ದಿಮೆಯ, ವಹಿವಾಟು ವೃದ್ಧಿಯ (ಬಿಸಿನೆಸ್ ಡಿವಲಪ್ಮೆಂಟ್) ಹೊಣೆ ನಿರ್ವಹಿಸುತ್ತಿದ್ದಾರೆ.)

2 COMMENTS

Leave a Reply