ಫೋಟೊಗಳು: ರೋಹಿತ್ ಚಕ್ರತೀರ್ಥ
ಉಡುಪಿಯಲ್ಲಿ 248ನೇ ಪರ್ಯಾಯೋತ್ಸವ. ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂ ಅವರು ದಾಖಲೆಯ ಐದನೇ ಬಾರಿಗೆ ಪರ್ಯಾಯ ವಹಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ. ಅದಕ್ಕಾಗಿಯೇ ಸಮಾಜದ ಶ್ರದ್ಧಾ ಬಾಂಧವರೆಲ್ಲರ ಮಹಾಪೂರ. ಮುಂಜಾನೆ ಪವಿತ್ರ ಸ್ಥಾನಗೈದು ಬಂದ ಸ್ವಾಮೀಜಿಯವರಿಗೆ ಜೋಡುಕಟ್ಟೆಯಲ್ಲಿ ಶಿಷ್ಯಕೋಟಿಯ ಪ್ರಣಾಮ ಸ್ವಾಗತ.
ಈ ವಯಸ್ಸಿನಲ್ಲಿ ವಿಶ್ವೇಶತೀರ್ಥರಲ್ಲಿ ಪುಟಿಯುತ್ತಿರುವ ಉತ್ಸಾಹ ನೋಡುವುದೇ ಒಂದು ಸೊಗಸು ಎಂಬುದು ಪರ್ಯಾಯೋತ್ಸವದಲ್ಲಿ ಪಾಲ್ಗೊಂಡವರ, ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಮಾತನಾಡುತ್ತಿರುವವರ ಒಟ್ಟಾರೆ ಅಭಿಪ್ರಾಯ.
ಪರ್ಯಾಯೋತ್ಸವದ ದರ್ಬಾರಿಗೆ ರಾಜ್ಯ- ರಾಷ್ಟ್ರ ರಾಜಕೀಯದ ದಿಗ್ಗಜರ ದಂಡೇ ಹರಿದುಬಂದಿದ್ದನ್ನು ಪಟ್ಟಿ ಮಾಡಬಹುದು. ಕೊನೆಗೂ ಯಾವುದೇ ಉತ್ಸವಕ್ಕೆ ನಿಜ ಮೆರಗು ತರುವುದು ಜನರಲ್ಲಿರುವ ಉತ್ಸುಕತೆ- ಶ್ರದ್ಧೆಯೇ ಹೊರತಾಗಿ ಮತ್ತೇನಲ್ಲ. ‘ಪರ್ಯಾಯಕ್ಕೆ ಮುಸ್ಲಿಂ-ಕ್ರೈಸ್ತ ಬಾಂಧವರೂ ಸೇರಿದಂತೆ ಸಮಾಜದ ಎಲ್ಲ ವರ್ಗದವರೂ ಬಂದಿದ್ದಾರೆ. ಇದೇ ಸಾಮರಸ್ಯವೇ ಸಮಾಜದಲ್ಲಿ ನೆಲೆಸಬೇಕು. ಮೋಕ್ಷ ನಿರ್ಧಾರವಾಗುವುದು ಧರ್ಮ, ಜಾತಿಗಳ ಆಧಾರದಲ್ಲಿ ಅಲ್ಲವೇ ಅಲ್ಲ. ಎಲ್ಲ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಸ್ಥೆಯನ್ನುಕಟ್ಟುವತ್ತ ಪರ್ಯಾಯದ ಅವಧಿಯಲ್ಲಿ ದೃಷ್ಟಿ ಹರಿಸಲಾಗುವುದು’ ಎಂದೆಲ್ಲ ಶ್ರೀಗಳು ಸಂಭ್ರಮಿಸಿದರು.
ಪರ್ಯಾಯಕ್ಕೆ ಸಾಕ್ಷಿಯಾಗುತ್ತಿರುವ ಜನಪ್ರಿಯ ಲೇಖಕ ರೋಹಿತ್ ಚಕ್ರತೀರ್ಥ ಅವರು ಡಿಜಿಟಲ್ ಕನ್ನಡಕ್ಕಾಗಿ ಒಂದಿಷ್ಟು ಬಿಂಬಗಳನ್ನು ಕಳುಹಿಸಿದ್ದಾರೆ.