ಸುದ್ದಿಸಂತೆ: ಜಿಪಂ-ತಾಪಂ ಚುನಾವಣೆ, ವಾಟ್ಸ್ಯಾಪ್ ಫ್ರೀ, ಜಾಮಿಯಾಕ್ಕಿಲ್ವೇ ಅಲ್ಪಸಂಖ್ಯಾತ ಪಟ್ಟ?…

ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಫೆ. 13 ಹಾಗೂ 20 ರಂದು ಚುನಾವಣೆ

ಡಿಜಿಟಲ್ ಕನ್ನಡ ಟೀಮ್

ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಫೆಬ್ರವರಿ 13 ಹಾಗೂ 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸೋಮವಾರ ಅಧಿಸೂಚನೆ ಹೊರಡಿಸಿದೆ.

ರಾಜ್ಯದ 26 ಜಿಲ್ಲಾ ಪಂಚಾಯಿತಿಯ 922 ಹಾಗೂ 175 ತಾಲ್ಲೂಕು ಪಂಚಾಯಿತಿಯ 3884 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಫೆ. 23 ರಂದು ಫಲಿತಾಂಶ ಪ್ರಕಟವಾಗಲಿದೆ.

ಹೈಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ರಾಯಚೂರು, ಬೀದರ್, ಗುಲ್ಬರ್ಗ, ವಿಜಾಪುರ ಜಿಲ್ಲಾ ಪಂಚಾಯಿತಿಗೆ ಹಾಗೂ ಸೊರಬ ತಾಲ್ಲೂಕು ಪಂಚಾಯಿತಿಗೆ ಚುನಾವಣೆ ಇರುವುದಿಲ್ಲ ಎಂದು ರಾಜ್ಯ ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಚುನಾವಣೆ ಎಂದು, ಎಲ್ಲಿ? ಫೆ. 13: ಬೆಂ.ನಗರ, ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೆಳಗಾವಿ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ, ಹಾಗೂ ಗದಗ.

ಫೆ. 20: ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಬಳ್ಳಾರಿ, ಯಾದಗಿರಿ, ಕೊಪ್ಪಳ. ಅಂದು ಗುಲ್ಬರ್ಗ, ಬೀದರ್, ರಾಯಚೂರು ಹಾಗೂ ವಿಜಾಪುರ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯುವುದಿಲ್ಲ. ಅಲ್ಲಿ ಕೇವಲ ತಾಲ್ಲೂಕು ಪಂಚಾಯಿತಿಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಒಟ್ಟು ಮತದಾರರು 2.89 ಕೋಟಿ.

ಅಂದಹಾಗೆ….

ರಾಜ್ಯದ ಪಂಟಾಯ್ತಿ ಚುನಾವಣೆ ಸುದ್ದಿ ಓದುತ್ತಿರುವಾಗಲೇ ನಿಮ್ಮ ಗಮನಕ್ಕೆ ಇಂಟರೆಸ್ಟಿಂಗ್ ಸಂಗತಿ… ಹರ್ಯಾಣದಲ್ಲಿ ನಡೆದ ಪಂಚಾಯತ್ ರಾಜ್ ಚುನಾವಣೆಯಲ್ಲಿ 12,903 ಪಂಚರು, 86 ಸರಪಂಚರು ಹಾಗೂ 42 ಪಂಚಾಯತ್ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಾಟ್ಸ್ಯಾಪ್ ಯಾವತ್ತೂ ಫ್ರೀ!

ಒಂದು ವರ್ಷ ವಾಟ್ಸ್ಯಾಪ್ ಉಪಯೋಗಿಸಿದ ನಂತರ ನಿಗದಿತ ಶುಲ್ಕ ತುಂಬಿದರಷ್ಟೇ ಮತ್ತೆ ಬಳಕೆಗೆ ಲಭ್ಯ ಅನ್ನೋದು ಈ ಮೊದಲಿನ ನಿಯಮವಾಗಿತ್ತು. ಇದೀಗ ತನ್ನ ಅಧಿಕೃತ ಬ್ಲಾಗ್ ನಲ್ಲಿ ಘೋಷಣೆ ಹೊರಡಿಸಿರುವ ವಾಟ್ಸ್ಯಾಪ್- ಜಗತ್ತಿನಾದ್ಯಂತ ನಾವು ಯಾವತ್ತೂ ಉಚಿತವಾಗಿರುವುದಕ್ಕೆ, ಅಷ್ಟೇ ಅಲ್ಲದೇ ಜಾಹೀರಾತು ಮುಕ್ತವಾಗಿರುವುದಕ್ಕೆ ನಿರ್ಧರಿಸಿದ್ದೇವೆ ಎಂದಿದೆ.

ಟೆನಿಸ್ ಮೇಲೂ ಫಿಕ್ಸಿಂಗ್ ನೆರಳು

ಬಿಬಿಸಿ ಮತ್ತು ಬಜ್ ಫೀಡ್ ಮಾಧ್ಯಮ ಸಂಸ್ಥೆಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಕಳೆದ ದಶಕದಲ್ಲಿ ನಡೆದ ಹಲವು ಟೆನಿಸ್ ಪಂದ್ಯಗಳು ಮೋಸದಾಟವಾಗಿದ್ದವು.

ರಷ್ಯ, ಸಿಸಿಲಿ ಮತ್ತು ಇಟಲಿಯಲ್ಲಿರುವ ಬೆಟ್ಟಿಂಗ್ ಕೇಂದ್ರಗಳು ದೊಡ್ಡಮೊತ್ತದ ಹಣವನ್ನು ಪಂದ್ಯ ಫಲಿತಾಂಶದ ಊಹೆಯ ಮೇಲೆ ಸುರಿದಿದ್ದವು. ಫಲಿತಾಂಶ ತಮ್ಮ ಪರ ಬರುವಂತೆ ಆ ಹಣದಲ್ಲಿ ಕೆಲಭಾಗವನ್ನು ಪಂದ್ಯವನ್ನು ಫಿಕ್ಸ್ ಮಾಡುವುದಕ್ಕೂ ಬಳಸಲಾಗಿತ್ತು ಅಂತ ತನಿಖಾಧಿಕಾರಿಗಳು ಹೇಳುತ್ತಿದ್ದಾರೆ.

ಟೆನಿಸ್ ನಲ್ಲಿ ಬೆಟ್ಟಿಂಗ್ ಸಂಬಂಧದ ಅಕ್ರಮಗಳನ್ನು ಪತ್ತೆ ಮಾಡುವುದಕ್ಕೆ 2007ರಲ್ಲಿ ಟೆನಿಸ್ ಇಂಟಿಗ್ರಿಟಿ ಯೂನಿಟ್ ಎಂಬ ವಿಭಾಗ ಸ್ಥಾಪನೆಯಾಗಿತ್ತು. ಕಳೆದೊಂದು ದಶಕದಲ್ಲಿ ಅಗ್ರ 50ರ ಪಟ್ಟಿಯಲ್ಲಿದ್ದ 16 ಆಟಗಾರರು ಪಂದ್ಯದ ವಿಷಯದಲ್ಲಿ ರಾಜಿ ಮಾಡಿಕೊಂಡಿದ್ದು ಗಮನಕ್ಕೆ ಬಂದರೂ ಅವರನ್ನು ಮುಂದುವರಿಯಲು ಬಿಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ತನಿಖಾಧಿಕಾರಿಗಳ ವರದಿಯಲ್ಲಿತ್ತು. ಆದರೆ 2009ರಲ್ಲಿ ತನಿಖಾ ನಿಯಮಗಳು ಬದಲಾವಣೆ ಆದದ್ದರಿಂದ 2008ರಲ್ಲಿ ಸಲ್ಲಿಸಿದ್ದ ವರದಿ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲಎಂದು ಈಗ ತನಿಖೆಯಲ್ಲಿ ಭಾಗಿಯಾಗಿದ್ದ ಕೆಲ ಅಧಿಕಾರಿಗಳು ಮಾಧ್ಯಮ ಸಂಸ್ಥೆಗಳಿಗೆ ಮಾಹಿತಿ ಸಲ್ಲಿಸಿದ್ದಾರೆ.

ಒತ್ತಡ ಫಲಿಸಿತು, ಗುದ್ದೋಡು ಆರೋಪಿ ಸೆರೆಯಾದ

ಗಣರಾಜ್ಯೋತ್ಸವದ ಪರೇಡ್ ನಲ್ಲಿದ್ದ ಅಧಿಕಾರಿ ಮೇಲೆ ಕಾರು ಹರಿಸಿ ಕೊಂದು ಪರಾರಿಯಾಗಿದ್ದ ಆರೋಪಿ, ತೃಣಮೂಲ ಕಾಂಗ್ರೆಸ್ ಮುಖಂಡನ ಮಗ ಸಾಂಬಿಯಾ ಸೊಹ್ರಬ್ ನನ್ನು ಸೋಮವಾರ ಬಂಧಿಸಲಾಗಿದೆ.

ಘಟನೆ ನಡೆದು ನಾಲ್ಕು ದಿನಗಳ ನಂತರವೂ ಕ್ರಮ ಕೈಗೊಳ್ಳದಿರುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಸಂಶಯದ ಧ್ವನಿಗಳು ಎದ್ದಿದ್ದವು. ಪಶ್ಚಿಮ ಬಂಗಾಳದ ಬಿಜೆಪಿ ಮಹಿಳಾ ವಿಭಾಗದ ಮುಖ್ಯಸ್ಥೆ ರೂಪಾ ಗಂಗೂಲಿ ನೇತೃತ್ವದಲ್ಲಿ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆಯೂ ನಡೆದಿತ್ತು. ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವುದರಿಂದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಜನಾಭಿಪ್ರಾಯದ ಒತ್ತಡಕ್ಕೆ ಮಣಿದಿದ್ದು, ಪಕ್ಷದ ನೇತಾರನ ಮಗನ ಬಂಧನಕ್ಕೆ ಅವಕಾಶವಾಗಿದೆ.

ಸೊಹ್ರಬ್ ತಂದೆ ಮೊಹಮದ್ ಸೊಹ್ರಬ್ ತೃಣಮೂಲಕ್ಕೆ ಬರುವ ಮುಂಚೆ ಆರ್ಜೆಡಿಯಲ್ಲಿ ಶಾಸಕರಾಗಿದ್ದವರು. ಹಣ್ಣುಗಳ ವ್ಯಾಪಾರಿಯಾಗಿರುವ ಅವರ ಮೌಲ್ಯ 500 ಕೋಟಿ ರು. ಆರೋಪಿ ಸ್ಥಾನದಲ್ಲಿರುವ ಮಗ ಕೃತ್ಯ ನಡೆಸಿದ್ದು ದುಬಾರಿ ಆಡಿ ಕಾರು ಚಲಾಯಿಸುತ್ತ.

ಜಾಮಿಯಾ ಮಿಲಿಯಾ ವಿವಿಗೆ ಅಲ್ಪಸಂಖ್ಯಾತ ಪಟ್ಟ ಬೇಕೇ?

ಜಾಮಿಯಾ ಮಿಲಿಯಾವನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಬೇಕಿಲ್ಲ ಎಂದು ಅಟಾರ್ನಿ ಜನರಲ್ ಮುಕುಲ್ ರೊಹ್ತಗಿ ಅವರು ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ವರದಿ ಸಲ್ಲಿಸಿರುವುದು ರಾಜಕೀಯ ಚರ್ಚೆಯೊಂದನ್ನು ಹುಟ್ಟುಹಾಕಿದೆ.

ಜಾಮಿಯಾ ಮಿಲಿಯಾ ವಿವಿ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಎಂದು 2011ರಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗ ಆದೇಶಿಸಿತ್ತು. ಈ ಆದೇಶದ ಮೇಲೆಯೇ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯವು ಎಸ್ ಸಿ- ಎಸ್ ಟಿ ಮೀಸಲನ್ನು ಪಕ್ಕಕ್ಕಿಟ್ಟು ಶೇ. 50ರಷ್ಟು ಸ್ಥಾನಗಳನ್ನು ಮುಸ್ಲಿಮರಿಗೆಂದೇ ಮೀಸಲಿರಿಸಿತು.

ಆದರೆ ಧಾರ್ಮಿಕ ಆಧಾರದ ಮೇಲೆ ಮೀಸಲು ಇಲ್ಲವೇ ತಾರತಮ್ಯ ಸಲ್ಲದೆಂಬ ಸಂವಿಧಾನದ ಆಶಯಕ್ಕೆ ಇದು ಪೂರಕವೇ ಎಂದು ಈಗಿನ ಸರ್ಕಾರ ಅಟಾರ್ನಿ ಜನರಲ್ ಅವರಿಂದ ಕಾನೂನು ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಯಾಗಿ ಸಲ್ಲಿಕೆಯಾಗಿರು ಅಭಿಪ್ರಾಯವು ವಿವಿಯ ಅಲ್ಪಸಂಖ್ಯಾತ ಪಟ್ಟವನ್ನು ಅಲ್ಲಾಡಿಸಿ ಚರ್ಚೆ ಹುಟ್ಟುಹಾಕಿದೆ.

ಇರಾನ್ ನಿಟ್ಟುಸಿರಿಟ್ಟು ಹಣ ಬಾಚ್ಕೊಂಡ್ತು!

ಅಣ್ವಸ್ತ್ರ ತಯಾರಿಕೆ ಚಟುವಟಿಕೆ ನಿಲ್ಲಿಸುವುದಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀಡಿದ್ದ ವಚನವನ್ನು ಇರಾನ್ ಪಾಲಿಸಿದೆ ಅಂತ ಶನಿವಾರವೇ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಘೋಷಿಸಿದೆ. ಇದರ ಪರಿಣಾಮ ಏನಪ್ಪಾ ಅಂದ್ರೆ ಇರಾನ್ ಗೆ ಒಮ್ಮೆಗೇ ಹಣ ಎತ್ತಿಟ್ಟುಕೊಳ್ಳುವ ಭಾಗ್ಯದ ಕ್ಷಣಗಳು! ಈವರೆಗಿನ ಆರ್ಥಿಕ ದಿಗ್ಭಂಧನಗಳ ಸಂಕೋಲೆಯಲ್ಲಿ ಇರಾನ್ ಗೆ ತನ್ನ ತೈಲ ವಹಿವಾಟಿನ ಮೂಲಕ ಜಮೆಯಾಗಿದ್ದ 100 ಬಿಲಿಯನ್ ಡಾಲರ್ ಹಣವನ್ನು ಮುಟ್ಟುವುದಕ್ಕೇ ಆಗಿರಲಿಲ್ಲ. ಈಗ ಸಂಕೋಲೆಗಳು ಕಳಚಿವೆ.

Leave a Reply