ಕಾಶ್ಮೀರಿ ಪಂಡಿತರು ಕಣಿವೆಗೆ ಬಂದಿರಲಿ ಎಂದುಬಿಟ್ಟರೆ…. ಅವರೇನು ಬಕ್ರೀದ್ ಕುರಿಗಳೇ?

 

 

ಡಿಜಿಟಲ್ ಕನ್ನಡ ಟೀಮ್

ಕಾಶ್ಮೀರ ಕಣಿವೆಯಿಂದ ಅಮಾನುಷವಾಗಿ ಹೊರದಬ್ಬಿಸಿಕೊಂಡುಬಂದು, ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಬದುಕುತ್ತಿರುವ ಪಂಡಿತ ಸಮುದಾಯವು ಇವತ್ತಿಗೆ (ಜ.19) ಆ ಕರಾಳದಿನದ 26ನೇ ವಾರ್ಷಿಕ ದಿನವನ್ನಾಗಿ ನೆನೆಯುತ್ತಿದೆ.

ಈ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲ ಅವರು, ‘ನಮ್ಮ ಜತೆ ಬಂದಿರಿ ದಯವಿಟ್ಟು ಅಂತ ಕಾಶ್ಮೀರಿ ಪಂಡಿತರ ಬಳಿ ಭಿಕ್ಷಾಪಾತ್ರೆ ಹಿಡಿದು ಬರಬೇಕೇ? ಹಿಂತಿರುಗುವ ಹೊಣೆ ಅವರ ಮೇಲಿದೆ ಅಷ್ಟೆ’ ಎಂದುಬಿಟ್ಟಿದ್ದಾರೆ.

ಹೌದೇ? ಕಣಿವೆಗೆ ಹಿಂತಿರುಗದೇ ಇರುವುದು ಪಂಡಿತರ ತಪ್ಪೇ? ಪಿಡಿಪಿ- ಬಿಜೆಪಿ ಸರ್ಕಾರವಿದ್ದರೂ ಅದೇಕೆ ಸಾಧ್ಯವಾಗುತ್ತಿಲ್ಲ? ಉತ್ತರ ಸುಲಭವಿಲ್ಲ.

  • ಇವತ್ತು ಕಣಿವೆಯಲ್ಲಿ ಯಾವ ಸರ್ಕಾರವಿದೆ ಎಂಬುದಲ್ಲ ಮುಖ್ಯಪ್ರಶ್ನೆ. ಅಲ್ಲಿ ಹಿಂತಿರುಗಿದರೆ ಆತಂಕರಹಿತರಾಗಿ ಇರುವ ಸ್ಥಿತಿ ಇದೆಯೇ ಎಂಬುದಕ್ಕೆ ಇವತ್ತಿಗೂ ನಕಾರಾತ್ಮಕ ಉತ್ತರವೇ ಬರುತ್ತಿದೆ. ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ವಸತಿಗೃಹಗಳನ್ನು ನಿರ್ಮಿಸುವ ಪ್ರಸ್ತಾವ ಬಿಜೆಪಿ ಕಡೆಯಿಂದ ಬಂದಾಗ ಅದಕ್ಕೆ ಪಿಡಿಪಿ- ನ್ಯಾಷನಲ್ ಕಾನ್ಫರೆನ್ಸ್ ಎಲ್ಲ ಕಡೆಯಿಂದಲೂ ಪ್ರತಿರೋಧವೇ ಬಂತು.  ಬರುವುದಾದರೆ ಎಲ್ಲರ ನಡುವೆ ಬೆರೆತಿರಬೇಕು ಎಂಬುದು ಅಲ್ಲಿನವರ ಷರತ್ತು.
  • ಎಲ್ಲವನ್ನೂ ಮರೆತು ಬೆರೆತಿರುವುದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆಯೇ? ಐಸಿಸ್ ಧ್ವಜ ಹಾರಾಡಿಸಿದರು ಎಂಬ ಸುದ್ದಿಗಳನ್ನು ಈಗಲೂ ಕೇಳುತ್ತಿರುತ್ತೇವೆ. 1990ರಲ್ಲಿ ಕಾಶ್ಮೀರಿ ಪಂಡಿತರನ್ನು ಹೊರದಬ್ಬುವಾಗ ಮಸೀದಿಗಳ ಮೈಕುಗಳಿಂದ ಮೊಳಗಿದ ಘೋಷಣೆಗಳಾದರೂ ಯಾವವು? ‘ಕಾಶ್ಮೀರ ಪಂಡಿತರೇ… ನಿಮ್ಮ ಹೆಂಗಸರನ್ನು ಇಲ್ಲಿಯೇ ಬಿಟ್ಟು ಕಣಿವೆ ತೊರೆಯಿರಿ. ನಾವು ಅವರೊಂದಿಗೆ ಪಾಕಿಸ್ತಾನ ಕಟ್ಟುತ್ತೇವೆ.’ ಇಂಥ ಭಯಾನಕ ಧ್ವನಿಯ ಮೊರೆತ ಮನಸಿನಿಂದ ಮಾಸುವುದು ಸಾಧ್ಯವೇ? ಪಂಡಿತರ ಕಾಲನಿ ನಿರ್ಮಾಣವಾದರೆ ಪ್ರತ್ಯೇಕತೆ ಆಗಿಬಿಡುತ್ತದೆಯೇ?
  • ಯಾರೋ ನಾಲ್ವರು ಅವಾಜು ಹಾಕಿದ್ದಕ್ಕೆ ಕಾಶ್ಮೀರಿ ಪಂಡಿತರು ಹೆದರಿ ಕಣಿವೆ ತೊರೆದುಬಿಟ್ಟರು ಎಂದುಕೊಳ್ಳಬೇಡಿ. 1989ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ಸಾಲು ಸಾಲು ಉಗ್ರವಾದಿಗಳನ್ನು ಜೈಲಿಂದ ಬಿಡುಗಡೆ ಮಾಡಿತು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜಿಹಾದಿ ತರಬೇತುಗಳು ನಡೆದವು. ಹಾಡಹಗಲೇ ಕಣಿವೆಯ ಬಿಜೆಪಿ ನಾಯಕ ಟಿಕ್ಕಾಲಾಲ್ ಟಪ್ಲೂ ಅವರನ್ನು ಕೊಂದು ರಸ್ತೆಯಲ್ಲಿ ಬಿಸಾಡಿದರು.  ಜಸ್ಟೀಸ್ ನೀಲಕಂಠ ಗಂಜೂ, ನ್ಯಾಯವಾದಿ ಪ್ರೇಮನಾಥ ಭಟ್ ಹೀಗೆ ಸಾಲು ಸಾಲು ಕೊಲೆಗಳು… ದಾದಿ ಸರಳಾ ಭಟ್ ರನ್ನು ಅಮಾನುಷ ಗ್ಯಾಂಗ್ ರೇಪ್ ಮಾಡಿ ಬೆತ್ತಲೆ ಮೃತದೇಹವನ್ನು ರಸ್ತೆಯಲ್ಲಿ ಎಸೆಯಲಾಯಿತು. ಎಲ್ಲವೂ ನಡೆದಿದ್ದು ಹಿಂದುಗಳನ್ನು ಗುರಿಯಾಗಿಸಿಕೊಂಡು. ಹೀಗೆ ಹಿಂಸಾಚಾರದಲ್ಲಿ ಪಾಲ್ಗೊಂಡ ಒಬ್ಬನೇ ಒಬ್ಬನೂ ಕಾನೂನಿನ ಕಟಕಟೆಗೆ ಬಂದೇ ಇಲ್ಲ. ಹೀಗಿರುವಾಗ, ಬೇಕಿದ್ರೆ ಈಗ ಕಾಶ್ಮೀರಿ ಪಂಡಿತರು ಕಣಿವೆಗೆ ಬಂದಿರ್ಲಿ ಎಂದುಬಿಟ್ಟರೆ…. ಅವರೇನು ಬಕ್ರೀದ್ ಗೆ ಸಿದ್ಧಪಡಿಸಿರುವ ಕುರಿಗಳು ಎಂದರ್ಥವೇ?
  • ಜಮ್ಮು ಮತ್ತು ದೆಹಲಿಯ ನಿರಾಶ್ರಿತ ಶಿಬಿರಗಳಲ್ಲಿರುವವರನ್ನೂ ಅಂದಿನ ಸರ್ಕಾರಗಳು ಎಷ್ಟು ಕೆಟ್ಟದಾಗಿ ನಡೆಸಿಕೊಂಡವು ಎಂದರೆ, ಕೋಳಿಗೂಡಿನಂಥ ಶಿಬಿರಗಳಲ್ಲಿ ಕಾಶ್ಮೀರಿ ಪಂಡಿತರನ್ನು ತುಂಬಿದರು. ಅವರ ಅಂತಃಸತ್ವ, ಆತ್ಮಾಭಿಮಾನಗಳನ್ನೇ ಕುಗ್ಗಿಸಿದರು. ಕಾಶ್ಮೀರಿ ಪಂಡಿತರ ಮೇಲಾದ ಅತ್ಯಾಚಾರ- ಅನಾಚಾರಗಳು ಬೃಹತ್ ಗ್ರಂಥ ಸಂಪುಟದಲ್ಲೂ ಹಿಡಿಯದಷ್ಟಿವೆ. ಇನ್ನೇನು ಮಾಡಲಾಗದಿದ್ದರೂ ಯಾವ ಅವಾರ್ಡ್ ವಾಪಸಿಗೂ ಪ್ರೇರೇಪಿಸದ ಈ ಅಮಾನುಷ ಅಧ್ಯಾಯವನ್ನು ನಾವು ನೆನೆಯುತ್ತಲೇ ಇರೋಣ. ಭಾರತದ ‘ಬಹುತ್ವ ಪ್ರಜ್ಞೆ’ಗೆ ಸ್ವಲ್ಪವಾದರೂ ನಾಚಿಕೆಯಾಗುವವರೆಗೆ….

—–

ನಟ ಅನುಪಮ್ ಖೇರ್ ಪಂಡಿತ ಸಮುದಾಯಕ್ಕೆ ಸೇರಿದವರು. ಕಾಶ್ಮೀರಿ ಪಂಡಿತರ ಪರ ಯಾವತ್ತೂ ಮಾತಾಡುತ್ತ ಬಂದಿರುವ ಖೇರ್, ಜ. 19ರ ತಮ್ಮ ಹೆಚ್ಚಿನ ಟ್ವೀಟ್ ಗಳನ್ನು ಕಾಶ್ಮೀರಿ ಪಂಡಿತರ ಒಕ್ಕಲೆಬ್ಬಿಸಿದ ಅಧ್ಯಾಯಕ್ಕೆ ಮೀಸಲಿಟ್ಟಿದ್ದಾರೆ. ಉಳಿದವರು ಈ ವಿಷಯದಲ್ಲಿ ದಾಖಲಿಸಿರುವ ಟ್ವೀಟ್ ಫೋಟೊಗಳನ್ನೂ ಅವರು ಮರುಟ್ವೀಟ್ ಮಾಡಿದ್ದಾರೆ. ಇಲ್ಲಿನ ಚಿತ್ರಗಳು ಅವರ ಟ್ವಿಟರ್ ಖಾತೆಯಿಂದ ಆಯ್ದದ್ದು.

ಮಗುವಿಗೂ ಕರುಣೆ ತೋರದೆ ಕೊಂದಿದ್ದರು ಪ್ರತ್ಯೇಕತಾವಾದಿಗಳು...
ಮಗುವಿಗೂ ಕರುಣೆ ತೋರದೆ ಕೊಂದಿದ್ದರು ಪ್ರತ್ಯೇಕತಾವಾದಿಗಳು…
23 ಕಾಶ್ಮೀರಿ ಹಿಂದುಗಳು ಸಾಲಾಗಿ ಕೊಲೆಯಾದ ಕರಾಳ ನೆನಪು...
23 ಕಾಶ್ಮೀರಿ ಹಿಂದುಗಳು ಸಾಲಾಗಿ ಕೊಲೆಯಾದ ಕರಾಳ ನೆನಪು…
pandit2
ಜೀವ ಉಳಿಸಿಕೊಳ್ಳಲು ಕಣಿವೆ ತೊರೆದ ತಮ್ಮ ಕುಟುಂಬ ಅಂದು ಖರೀದಿಸಿದ್ದ ಬಸ್ ಪಾಸ್ ಹಂಚಿಕೊಂಡಿದ್ದಾರೆ ಪತ್ರಕರ್ತ ಆದಿತ್ಯರಾಜ್ ಕೌಲ್. ಆಗವರು ಚಿಕ್ಕ ಹುಡುಗ…
ನಿರಾಶ್ರಿತ ನೆಲದಲ್ಲೇ ಹುಟ್ಟಿದ ಪಂಡಿತ ಕುಟುಂಬದ ಕುಡಿಗಳು... ಟ್ವೀಟಿಗ ಪವನ್ ದುರಾನಿ ಹಂಚಿಕೊಂಡಿರುವ ಚಿತ್ರ.
ನಿರಾಶ್ರಿತ ನೆಲದಲ್ಲೇ ಹುಟ್ಟಿದ ಪಂಡಿತ ಕುಟುಂಬದ ಕುಡಿಗಳು… ಟ್ವೀಟಿಗ ಪವನ್ ದುರಾನಿ ಹಂಚಿಕೊಂಡಿರುವ ಚಿತ್ರ.

 

 

 

 

Leave a Reply