ಕ್ಷಮಿಸಿ ರೋಹಿತ್ ವೆಮುಲ, ನಿಮ್ಮ ಸಾವು ನಮ್ಮನ್ನು ಮತ್ತಷ್ಟು ಸಿದ್ಧಾಂತವಾದಿಗಳನ್ನಾಗಿಸಿದೆಯಷ್ಟೆ ಹೊರತು ಸಂವೇದನಾಶೀಲರನ್ನಾಗಿಸಿಲ್ಲ…

ಚೈತನ್ಯ ಹೆಗಡೆ

‘ಒಬ್ಬ ಮನುಷ್ಯನ ಮೌಲ್ಯವೆಂಬುದು ಆತನ ಕ್ಷುಲ್ಲಕ ಗುರುತು ಮತ್ತು ಸನಿಹದ ಸಾಧ್ಯತೆಗಳೊಂದಿಗೆ ತಳುಕು ಹಾಕಿಕೊಂಡಿದೆ. ಮನುಷ್ಯನನ್ನು ಒಂದು ಮತವಾಗಿ, ಸಂಖ್ಯೆಯಾಗಿ, ವಸ್ತುವಾಗಿ ನೋಡಿಕೊಂಡಿದ್ದೇವೆ. ಮನುಷ್ಯ ಎಂದರೆ ಮನಸ್ಸು ಅಂತ ನೋಡುತ್ತಲೇ ಇಲ್ಲ. ನಕ್ಷತ್ರದ ಧೂಳಿನಿಂದ ಅರಳಿಕೊಂಡ ಅದ್ಭುತವಿದು ಅಂತ ಗೊತ್ತಾಗುತ್ತಲೇ ಇಲ್ಲ. ಪ್ರತೀ ಕ್ಷೇತ್ರದಲ್ಲಿ, ಅದು ಅಧ್ಯಯನವಿರಬಹುದು, ಬೀದಿ, ರಾಜಕೀಯ, ಸಾವು, ಜೀವನ ಎಲ್ಲದರಲ್ಲೂ…’

ಹೀಗೆಂದು ಬರೆದು ನೇಣಿಗೆ ಶರಣಾದ ರೋಹಿತ್ ವೆಮುಲ ಅನಿಸಿಕೆಗಳು ಎಷ್ಟು ನಿಜವಾದದ್ದು ಅಂತ ಈಗ ಎಲ್ಲ ಸಿದ್ಧಾಂತವಾದಿಗಳೂ ಸೇರಿಕೊಂಡು ನಿಜ ಮಾಡುತ್ತಿದ್ದಾರೆ. ರೋಹಿತ್ ಸಾವು ಎರಡೂ ಬಣದವರನ್ನೂ ತಣ್ಣಗಾಗಿಸಿ, ಒಟ್ಟಿಗೆ ಕುಳಿತು ಯೋಚಿಸುವಂತೆ ಮಾಡಬೇಕಿತ್ತು. ‘ಬದುಕಿಗಿಂತ ಸತ್ತಾಗಲೇ ಹೆಚ್ಚು ಖುಷಿಯಾಗಿರುತ್ತೇನೆ ಬಿಡಿ’ ಅಂತ ಬರೆದುಹೋಗಿದ್ದ ರೋಹಿತ್ ಬಹುಶಃ ಸತ್ತೂ ದುಃಖಿತರಾಗಿದ್ದಿರಬಹುದು.

ನನ್ನದು ಈ ವಾದ- ಅವನದ್ದು ಆ ವಾದ. ಆದರೆ ಅದು ಸಂವಾದದಲ್ಲಿ ಕೊನೆಗೊಂಡು ನಮ್ಮ ನಮ್ಮ ನಿಲುವುಗಳನ್ನು ಕಾಪಿಟ್ಟುಕೊಳ್ಳುತ್ತಲೇ ಒಟ್ಟಿಗೇ ಕಾಫಿ ಕುಡಿಯುತ್ತ ವೆಮುಲ ಮಾದರಿಯಲ್ಲೇ ನಕ್ಷತ್ರ, ಬದುಕು, ಏಕಾಕಿತನ, ಸಂಭ್ರಮ ಇವೆಲ್ಲವುಗಳ ಬಗ್ಗೆ ಹರಟುವಂತಾಗಬೇಕು ಅಂತ ಯಾವುದೇ ಬಣದಲ್ಲಿರುವ ಒಬ್ಬನೇ ಒಬ್ಬನಿಗೂ ಅನ್ನಿಸುತ್ತಿಲ್ಲ.

ರೋಹಿತ್ ಸಾವು ಈಗ ಎಲ್ಲರಿಗೂ ಮತ್ತೆ ತಮ್ಮ ಸೈದ್ಧಾಂತಿಕ ಖಡ್ಗಗಳನ್ನು ಝಳಪಳಿಸುವುದಕ್ಕೆ ಒದಗಿರುವ ಅವಕಾಶ. ಪ್ರತಿಭಟನಾಕಾರರರಿಗೆ ಬಂಡಾರು ದತ್ತಾತ್ರೇಯ, ಸ್ಮೃತಿ ಇರಾನಿ ಇವರನ್ನು ಹಣಿದರೆ ರೋಹಿತ್ ಆತ್ಮಕ್ಕೆ ಶಾಂತಿ ದೊರಕಿಸಿಬಿಟ್ಟಂತೆ. ಇತ್ತಲಿನವರಿಗೆ, ‘ಏನೋ ವೈಯಕ್ತಿಕ ಬೇಜಾರಲ್ಲಿ ಸತ್ತ ಬಿಡಿ, ಯಾಕೆ ಬೊಬ್ಬೆ ಹೊಡಿತೀರಿ’ ಅಂತ ಮುಂದಕ್ಕೋಡುವ ತರಾತುರಿ.

ಯಾವ ಸೈದ್ಧಾಂತಿಕ ಅಮಲೂ ಇಲ್ಲದೇ ಅಷ್ಟು ಸಂವೇದನೆಯಿಂದ ಕೊನೆಯ ಪತ್ರ ಬರೆದನಲ್ಲ… ಆ ಹುಡುಗ ಯಾವ ವಾದದ ಅಡ್ಡೆಯಲ್ಲಿ ಬೇಕಾದರೂ ಗುರುತಿಸಿಕೊಂಡಿದ್ದಿರಲಿ, ನಾವು ಆತನ ಜತೆ ಸಿಟ್ಟು ಪಕ್ಕಕ್ಕಿಟ್ಟು ಮಾತಾಡಬೇಕಿತ್ತು ಎಂಬ ಸಹಜ ಮಾನವ ಕಂಪನವೇ ಹೆಚ್ಚಿನವರಲ್ಲಿ ಬತ್ತಿ ಹೋಗಿದೆಯಲ್ಲ…

ರೋಹಿತ್ ವೆಮುಲ ಹೇಳಿಹೋದಂತೆ ಈ ಜಗತ್ತಲ್ಲಿ ಎಲ್ಲರಿಗೂ ಅವರವರ ಐಡೆಂಟಿಟಿ ಗಟ್ಟಿಯಾದರೆ ಸಾಕು. ಹೀಗಾಗಿಯೇ ರೋಹಿತ್ ಮತ್ತವರ ಸಹಪಾಠಿಗಳನ್ನು ಎರಡು ವಾರಗಳಿಂದ ಹಾಸ್ಟೆಲ್ ಹೊರಗೆ ತಳ್ಳಿದ್ದಾಗ ಆ ವಿಚಾರವೇ ಗೊತ್ತಿರದ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲರಿಗೆಲ್ಲ ಇವತ್ತು ಸರ್ಕಾರದ ವಿರುದ್ಧ ಕೂಗಾಡುವುದಕ್ಕೆ, ‘ಅಹಹಾ ಸಿಕ್ಕಿತೊಂದು ಅವಕಾಶ’ ಎನ್ನಿಸಿಬಿಡುತ್ತದೆ. ಇತ್ತ, ಬಂಡಾರು ದತ್ತಾತ್ರೇಯರಂಥ ಸಂಸದರಿಗೂ- ಎಬಿವಿಪಿ ಬೆಂಬಲದಿಂದಲೇ ತನ್ನ ರಾಜಕೀಯ ಅಭ್ಯುದಯ ಹೌದಾದರೂ, ಇವರು ಬಂದು ದೂರಿದರೆಂಬ ಕಾರಣಕ್ಕೆ ಅತ್ತ ಕಡೆಯಿಂದ ಯಾವುದೇ ಅಭಿಪ್ರಾಯ ಪಡೆಯದೇ, ಸಂವಾದಕ್ಕೆ ಮುಂದಾಗದೇ ಅವರ ವಿರುದ್ಧ ಕಠಿಣ ಕ್ರಮ ತಗೊಳ್ಳಿ ಅಂತ ಪತ್ರ ಬರೆದುಬಿಟ್ಟೆನಲ್ಲಅಂತ ವ್ಯಥೆಯಾಗುವುದೇ ಇಲ್ಲ. ಅವನ ಪತ್ರ ನೋಡ್ರೀ… ಕ್ಲಿಯರಾಗಿ ಹೇಳ್ಬಿಟ್ಟಿದಾನೆ ಆತನ ಸಾವಿಗೆ ನಾವ್ಯಾರೂ ಕಾರಣರಲ್ಲ ಅಂತ ಎಂದು ವಾದ ಮಂಡಿಸುವ ಚಾಕಚಕ್ಯತೆ ಢಾಳಾಗಿದೆಯೇ ಹೊರತು, ‘ನಾವು ಹಿಂದುತ್ವದ ಭಾಷಣ ಹೊಡೆಯುವಾಗ ಯಾವ ಔದಾರ್ಯ, ಕ್ಷಮಾಗುಣಗಳನ್ನೆಲ್ಲ ಉದಾಹರಿಸಿ ಚಪ್ಪಾಳೆ ಗಿಟ್ಟಿಸುತ್ತೇವೆಯೋ ಅಂಥದೇ ನಂಜಿಲ್ಲದ ಮನಸ್ಥಿತಿ ಈ ಹುಡುಗನ ಕೊನೆಯ ಪತ್ರದಲ್ಲಿ ಇಷ್ಟು ನಿಚ್ಚಳವಾಗಿದೆಯಲ್ಲ. ಇವನಲ್ಲವೇ ನಿಜವಾದ ಹಿಂದೂ ಹುಡುಗ’ ಅಂತ ಅನ್ನಿಸುವುದೇ ಇಲ್ಲ! ‘ಹಿಂದು ಅಂದರೆ ಧರ್ಮ ಅಲ್ಲಾರೀ… ಹಿಂದುಸ್ತಾನದಲ್ಲಿ ವಾಸಿಸುವವರೆಲ್ಲ ಹಿಂದುಗಳೇ’ ಎಂಬ ಭಾವೋದ್ರೇಕದ ಮಾತುಗಳು ಭಾಷಣಕ್ಕಷ್ಟೇ ಸೀಮಿತ. ನಮ್ಮ ಸಿದ್ಧಾಂತಕ್ಕೆ ಭಿನ್ನವಾದ ಅಭಿಪ್ರಾಯ ಮಂಡಿಸಿದವರೆಲ್ಲ ಹಿಂದುಗಳಾಗೋದಕ್ಕೆ ಸಾಧ್ಯವೇ ಇಲ್ಲ, ಅವರು ರಾಷ್ಟ್ರ ವಿರೋಧಿಗಳು… ಹಿಂದುಗಳಾಗಬೇಕೆಂದರೆ ಆ ಸಿದ್ಧಾಂತದ ಧ್ವಜ ಹಿಡಿದಿರುವ ಸಂಘಟನೆಗಳ ಮಾತಿಗೆ ತಲೆದೂಗಬೇಕು, ಅವರು ಬೆಂಬಲಿಸುವ ರಾಜಕೀಯ ವ್ಯಕ್ತಿಯನ್ನು ಹೀರೋ ಎಂದು ಭಜಿಸಬೇಕು… ಇಂಥ ಸ್ಥಿತಿಗೆ ಹೋಗುತ್ತಿರುವುದು ಅತಿರೇಕದ ಒಂದು ತುದಿ.

ನೋಡಿ ನೋಡಿ, ದಾದ್ರಿ ಆಯ್ತು… ಈಗ ಹೈದರಾಬಾದ್ ಕ್ಯಾಂಪಸ್ ಆತ್ಮಹತ್ಯೆ.. ಈ ಸರ್ಕಾರ ತೊಲಗಬೇಕು ಅನ್ನುವವರದ್ದು ಮತ್ತೊಂದು ಅತಿರೇಕ. ‘ಮನುಷ್ಯನನ್ನು ಒಂದು ಅನನ್ಯ ಮನಸ್ಸಾಗಿ ನೋಡುವುದೇ ಇಲ್ಲವಾಗಿದೆ. ಪ್ರಕೃತಿಯೊಂದಿಗೆ ವಿಚ್ಛೇದಿತನಾಗಿಬಿಟ್ಟಿರುವ ಮನುಷ್ಯನನ್ನು ಪ್ರೀತಿಸಲು ಹೊರಟಿದ್ದೇ ನನ್ನ ತಪ್ಪಾಯಿತು’ ಅಂತ ರೋಹಿತ್ ಹೇಳಿರುವುದನ್ನು ಸಮಗ್ರವಾಗಿ ಗ್ರಹಿಸಬೇಕೇ ಹೊರತು ಆತನ ಸಿದ್ಧಾಂತ ವಿರೋಧಿಗಳಿಗೆ ಮಾತ್ರವೇ ಹೇಳಿದ್ದಲ್ಲ ಅದು. ರೋಹಿತ್ ವೆಮುಲ ಸೇರಿದಂತೆ ಹೋರಾಟದಲ್ಲಿರುವ ಯಾರೇ ಆದರೂ ಸಿದ್ಧಾಂತ ವಿರೋಧಿಗಳಿಂದ ನಿರಂತರ ಪ್ರತಿರೋಧವನ್ನು ನಿರೀಕ್ಷಿಸಿಯೇ ಇರುತ್ತಾರೆ. ಮಾನಸಿಕ ಆಘಾತ ಆಗುವುದು ತನ್ನದೇ ಪಾಳೆಯದಲ್ಲಿರುವವರಿಂದ ಪ್ರೀತಿ ಸಿಗದಿದ್ದಾಗ ಅಥವಾ ಅದು ಲೆಕ್ಕಾಚಾರದ ಪ್ರೀತಿ ಆದಾಗ. ‘ಬಾಲ್ಯದ ಏಕಾಂಗಿತನದಿಂದ ಹೊರಬರುವುದಕ್ಕೆ ಆಗಲೇ ಇಲ್ಲ’ ಎಂಬ ರೋಹಿತರ ಹತಾಶೆಗೆ ಹೊಣೆ ಹೊರಬೇಕಾದವರು ಅವರ ಹತ್ತಿರದವರೇ. ವಿಜ್ಞಾನ ಲೇಖಕನಾಗಬೇಕಿದ್ದವನನ್ನು ಕೇವಲ ಸಿದ್ಧಾಂತ ಘೋಷಣೆಗೆ ದುಡಿಸಿಕೊಂಡುಬಿಟ್ಟೆವಾ ಎಂಬ ಚಿಕ್ಕ ಅನುಮಾನವೊಂದು ಅವರ ಸನಿಹದಲ್ಲಿದ್ದವರನ್ನು ಕಾಡಿದರೆ ಮಾತ್ರವೇ ರೋಹಿತ್ ಸಾವಿಗೆ ಸಂತಾಪ ಸಾಧ್ಯವಾಗುತ್ತದೆಯೇ ವಿನಃ, ಕೇವಲ ಸಚಿವೆ ಸ್ಮೃತಿ ಇರಾನಿ ತಲೆದಂಡಕ್ಕೆ ಆಗ್ರಹಿಸಿ ಭಿತ್ತಿಪತ್ರ ಹಿಡಿದುಕೊಂಡಿರೋದರಲ್ಲಲ್ಲ.

ಒಟ್ಟಿನಲ್ಲಿ…

ಕ್ಷಮಿಸು ರೋಹಿತ್ ವೆಮುಲ.. ನಿನ್ನ ಸಾವು ನಮ್ಮಲ್ಲಿ ಯಾವ ಬದಲಾವಣೆಯನ್ನೂ ತಂದಿಲ್ಲ. ಅದ್ಯಾವ ನಿರಂತರ ಸಂಘರ್ಷ ನಿನ್ನ ಭಾವಸೆಲೆ ಬತ್ತಿಸಿ ಬದುಕು ಅರ್ಥಹೀನ ಅನ್ನಿಸಿಬಿಟ್ಟಿತೋ ಅದನ್ನೇ ಮುಂದುವರಿಸಿಕೊಂಡುಹೋಗುವುದರಲ್ಲೇ ನಮಗೆಲ್ಲರಿಗೂ ಆಸಕ್ತಿ ಇದೆ. ಆ ವಾದ- ಈ ವಾದ ಎಂಬುದೆಲ್ಲ ಬೇರೆಯವರ ರುಂಡ ಬೇಡಿ ನಾವು ಹೀರೋಗಳಾಗುವುದಕ್ಕೆ ಮಾಡಿಕೊಂಡಿರುವ ಐಡೆಂಟಿಟಿಗಳಷ್ಟೇ… ನಾವೆಲ್ಲ ಸೇರಿ ನಿನ್ನಂಥ ಹಲವು ಸೃಜನಶೀಲರನ್ನು ಸಾಯಿಸಲಿದ್ದೇವೆ ಹಾಗೂ ಆ ಎಲ್ಲ ಹೆಣಗಳ ಎದುರು ನಮ್ಮ ನಮ್ಮ ಐಡೆಂಟಿಟಿಗಳನ್ನು ಬದುಕಿಸಿಕೊಳ್ಳುತ್ತೇವೆ.

(ಚಿತ್ರಕೃಪೆ- ಅಂತರ್ಜಾಲ)

2 COMMENTS

  1. Swamy,
    Nanage nimma lekhanada uddeshave artavagalilla. Eradu pakshagaladdu anta tappu anta torisuva bhavanataka aveshadalli savannu glorify maduttillave? Avana tappu ellave ellave? Hagendu nimage anisiddo avana koyena lekhanadinda asteya? Nimage vyaktikavagi aa manushya gotto? Avana nadavalikegalu aa patradalli edda samvedhanegalige honduttaveyo? Uttara kandukollade hege aveshada lekhana baredu ha eradu pakshadavaru sari ella annuvudarinda enu prayjanavilla. Nanage vayaktikavagi anisiddu: vidyalayadalli ee vatavaranakke karanaru yaru? university andare hegirabeku? Edara bagge yaru yochisutta ellavalla anta dukhavagutte.

    Dhanyavadagalu

Leave a Reply