ಪುರೋಹಿತಶಾಹಿ ಕುತಂತ್ರವೆಂಬ ಮಾಮೂಲಿ ರಾಗ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪರಿಹಾರವಲ್ಲ

ಪ್ರವೀಣ್ ಕುಮಾರ್

ಹೈದರಾಬಾದ್ ವಿವಿಯ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತ ಸಾಗಿದೆ. ಅಂಥ ಒಂದು ವಾದ ಏನೆಂದರೆ, ಸಂಶೋಧನೆಯಲ್ಲಿ ತೊಡಗಿಕೊಂಡಿರುವ ದಲಿತ ವಿದ್ಯಾರ್ಥಿಗಳ ಸಾವು ಇದೇ ಮೊದಲಲ್ಲ ಎಂಬ ಚರ್ಚೆ.

ಇಲ್ಲೊಂದು ಅಪಾಯವಿದೆ. ಖಿನ್ನತೆ, ಹತಾಶೆಗೆ ಒಳಗಾಗಿ ಆತ್ಮಹತ್ಯೆಗೆ ಒಳಗಾಗುತ್ತಿರುವವರನ್ನು ಅವರು ದಲಿತರಾಗಿದ್ದ ಮಾತ್ರಕ್ಕೆ ಪ್ರತ್ಯೇಕವಾಗಿ ಗುರುತಿಸಿ ಆ ಪ್ರಕರಣಗಳನ್ನು ನೋಡಬೇಕೇ ಎಂಬ ಪ್ರಶ್ನೆ. ಆದರೆ, ಇವರೆಲ್ಲರ ಸಾವಿಗೆ ಕಾರಣವಾಗುತ್ತಿರುವುದು ಜಾತಿರಾಜಕೀಯ ಸೇರಿದಂತೆ ಅವಮಾನ, ಅಪಹಾಸ್ಯ, ಕಿರುಕುಳ, ಸ್ಕಾಲರ್ ಶಿಪ್ ತಡೆಹಿಡಿಯುವಂತಹ ಪ್ರಕರಣಗಳು ಎಂದೂ ಗುರುತಿಸಲಾಗುತ್ತಿದೆ.

ದಲಿತರ ಸಾವು, ಮೇಲ್ವರ್ಗದವರ ಸಾವು ಎಂದು ಪ್ರತ್ಯೇಕವಾಗಿ ನೋಡುವ ಕ್ರಮ ಬೇಡವೆನಿಸಿದರೂ, ಕೊನೆಪಕ್ಷ ಮನುಷ್ಯ ನೆಲೆಯಲ್ಲಿ ಇಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲೇಬೇಕಿದೆ.

ದಲಿತ ವಿದ್ಯಾರ್ಥಿಗಳ ಬಗೆಗಿನ ವಿವಿಯಲ್ಲಿ ಅನುಸರಿಸುತ್ತಿರುವ ತಾರತಮ್ಯ ನೀತಿಗಳಿಗೆ ಬೇಸತ್ತು ದಶಕದ ಅವಧಿಯಲ್ಲಿ 8 ಆತ್ಯಹತ್ಯೆ ಪ್ರಕರಣಗಳು ವರದಿಯಾಗಿವೆ. ಆದರೂ ಇದರ ಬಗ್ಗೆ ವಿವಿ ಗಮನ ಹರಿಸಲೇ ಇಲ್ಲಎಂದು ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜುಹಿಲ್ ಆರೋಪಿಸಿದ್ದಾರೆ.

ಹೈದರಾಬಾದ್ ವಿವಿಯಲ್ಲಿ 2013 ರಲ್ಲಿ ವೆಂಕಟೇಶ್ ಎಂಬ ಪಿ.ಎಚ್.ಡಿ ವಿದ್ಯಾರ್ಥಿ ಕ್ಯಾಂಪಸ್ ನಲ್ಲಿಅವಮಾನಕ್ಕೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಂಡರು. ಇನ್ನೂ ಹಲವು ಆತ್ಮಹತ್ಯೆಗಳು ಹಣಕಾಸಿನ ಕೊರತೆಯಿಂದ ನಡೆದಿವೆ. ಅಂದರೆ ಸರ್ಕಾರ ನೀಡುವ ಆರ್ಥಿಕ ಸಹಾಯಧನವನ್ನು ಸರಿಯಾಗಿ ನೀಡದೆ ವರ್ಷಗಟ್ಟಲೇ ಸತಾಯಿಸುವುದರಿಂದ ಬೇಸತ್ತು ಸಾವನಪ್ಪಿದ್ದಾರೆ. 2008 ರಲ್ಲೂ ಭೌತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದ ವಿದ್ಯಾರ್ಥಿ ಸೆಂಥಿಲ್ ಕುಮಾರ್ ಎಂಬುವವರಿಗೆ ನೀಡುತ್ತಿದ್ದ ಫೆಲೋಶಿಪ್ ಅನ್ನು ನಿಲ್ಲಿಸಿದ ಕಾರಣಕ್ಕೆ ಆತ್ಮಹತ್ಯೆಯ ದಾರಿ ಹಿಡಿದರು.

ರೋಹಿತ್ ವೆಮುಲ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ಹಿಂದೆ ನಡೆದ ದಲಿತ ಯುವಕರ ಆತ್ಮಹತ್ಯೆಗಳ ವಿವರಗಳೂ ಅಂತರ್ಜಾಲದಲ್ಲಿ ಸುದ್ದಿ ಮಾಡುತ್ತಿವೆ. ಉದಾಹರಣೆಗೆ ಐಐಟಿ ರೂರ್ಕಿಯಲ್ಲಿ ಸಾವಿಗೆ ಶರಣಾದ ಮನೀಶ್ ಕುಮಾರ್ ಅವರ ಬಗ್ಗೆ, ದಲಿತ ಮತ್ತು ಆದಿವಾಸಿ ವಿದ್ಯಾರ್ಥಿ ಪೋರ್ಟಲ್, 2011ರ ಜುಲೈನಲ್ಲಿ ಪ್ರಕಟಿಸಿದ್ದ ಯೂಟ್ಯೂಬ್ ಸಾಕ್ಷ್ಯಚಿತ್ರ ಈಗ ಮತ್ತೆ ಹಂಚಿಕೆ ಆಗುತ್ತಿದೆ. ‘ಡೆತ್ ಆಫ್ ಅ ಮೆರಿಟ್’ ಎಂಬ ಈ ಸಾಕ್ಷ್ಯಚಿತ್ರ ಪ್ರತಿಪಾದಿಸುವುದೇನೆಂದರೆ ಆ ದಲಿತ ವಿದ್ಯಾರ್ಥಿಗೆ ‘ಚಂ..ಚಂ..ಚಮ್ಮಾರ್’ ಎಂದು ಜಾತಿಯ ಅವಹೇಳನದೊಂದಿಗೆ ಕ್ಯಾಂಪಸ್ ನಲ್ಲಿ ಗೇಲಿ ಮಾಡುತ್ತಿದ್ದರು ಅಂತ.

ಇಲ್ಲಿ ಎರಡು ವಾಸ್ತವಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ಹಿಂದಿನ ಆತ್ಮಹತ್ಯೆಗಳ ಚರಿತ್ರೆ ತೆಗೆದಾಗ, ಈಗ ಸುಭಗರಂತೆ ಮಾತನಾಡುತ್ತಿರುವ ಯಾವ ರಾಜಕೀಯ ಪಕ್ಷಗಳೂ ತಮ್ಮ ಬಳಿ ಅಧಿಕಾರವಿದ್ದಾಗ ಏನೂ ಮಾಡಿರಲಿಲ್ಲ ಎಂಬುದು ನಿಚ್ಚಳ. ಅಂತೆಯೇ ಈ ಕೇಸುಗಳನ್ನೆಲ್ಲ ಹರವಿಟ್ಟುಕೊಂಡು ದಲಿತ ವರ್ಸಸ್ ಮೇಲ್ವರ್ಗ ಅಂತ ಸಿದ್ಧಸೂತ್ರ ಹೊಸೆದರೆ ಸಮಸ್ಯೆ ಯಾವತ್ತೂ ಪರಿಹಾರವಾಗದು. ಏಕೆಂದರೆ ಎಲ್ಲರೂ ಸುಲಭಕ್ಕೆ ಆಕ್ರೋಶದ ಕವಿತೆ ಬರೆದು ಬಿಸಾಡುವಂತೆ ಅಥವಾ ಆರೋಪಿಸುವಂತೆ ಬ್ರಾಹ್ಮಣಿಕೆಯೇ ಎಲ್ಲೆಡೆ ಕೆಲಸ ಮಾಡಿರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಹಂಗಿಸಿಕೊಂಡವನ ಜಾತಿಗಿಂತ ತುಸು ಮೇಲಿನ ಜಾತಿಯಲ್ಲಿ ಗುರುತಿಸಿಕೊಂಡವರೇ ಈ ಸಂಘರ್ಷದಲ್ಲಿ ಭಾಗಿಯಾಗಿರುತ್ತಾರೆ. ಭಾಗಿಯಾದವರೂ ಯಾರೇ ಆಗಿದ್ದರೂ ಅದರ ಹಿಂದೆ ಕೆಲಸ ಮಾಡೋದು ಪುರೋಹಿತಶಾಹಿ ಮನುಸ್ಮೃತಿಯೇ ಅಂತ ಕೂಗಿಕೊಂಡಿದ್ದರೆ, ಹಾಗೆ ಕೂಗುವವರಿಗೆ ರಾಜಕೀಯ ಮೈಲೇಜ್ ಸಿಗಬಹುದಾಗಲೀ, ಸಮಸ್ಯೆಗಂತೂ ಪರಿಹಾರ ಸಿಗದು.

ಹಾಗಾದರೆ ಮಾಡಬಹುದಾಗಿದ್ದೇನು?

ಈ ಸಿದ್ಧಾಂತಗಳ ಸಂಘರ್ಷದಾಚೆ, ಶಿಕ್ಷಣ ಸಂಸ್ಥೆಗಳಲ್ಲಿ ಆಪ್ತ ಸಲಹೆ ದೊರಕುವಂತಿರಬೇಕು. ಹಾಗೆ ನೋಡಿದರೆ, ಕೆಳವರ್ಗದ ಉದ್ಯೋಗವನ್ನು ಆಡಿಕೊಂಡಂತೆ ಮೂಗು ಮುಚ್ಚಿ ಕೂರುವವನೆಂದೋ, ಪುಳಿಚಾರು ಎಂದೋ ಮೇಲ್ವರ್ಗದವರನ್ನು ಆಡಿಕೊಳ್ಳುವ ಎಲ್ಲ ನಮೂನೆಗಳೂ ಪ್ರಚಲಿತದಲ್ಲಿವೆ. ಅಷ್ಟಾಗಿಯೂ ಇದನ್ನು ಮೀರುವ- ಹೌದು ಏನೀಗ ಅಂತ ಪ್ರತಿಕ್ರಿಯಿಸುವ ಶಕ್ತಿ, ಸಾಮಾಜಿಕ ಧ್ವನಿ ಈ ವರ್ಗಕ್ಕಿದೆ. ಇದನ್ನೇ ಶೋಷಿತ ಸ್ಥಾನದಲ್ಲಿರುವವರಿಗೂ ತುಂಬುವ, ನನ್ನನ್ನು ಅವಮಾನಿಸುವ ಶಕ್ತಿ ನಿನಗಿಲ್ಲ ಬಿಡು ಎಂದು ಬಿಗುಮಾನದಿಂದಲೇ ಹೇಳುವ ತರಬೇತು ಈ ವರ್ಗಕ್ಕೆ ಸಿಗುವಂತಾಗಲು ಪ್ರಯತ್ನವಿರಬೇಕು. ಆದರೆ ಶೈಕ್ಷಣಿಕ ಸಂಸ್ಥೆಗಳಲ್ಲಿರುವವರಿಗೂ ಮತ್ತಷ್ಟು ಸಿದ್ಧಾಂತದ ಆಕ್ರೋಶ ಬಡಿಸುವ ಉಮೇದಿದೆಯೇ ಹೊರತು, ಇಂಥ ಕೌನ್ಸೆಲಿಂಗ್ ಗಳಿಗೆಲ್ಲ ಪುರಸೊತ್ತಿಲ್ಲ. ಅಲ್ಲದೇ ಇಂಥ ಮೃದು ಮಾರ್ಗಗಳು ರಾಜಕೀಯ ಬಂಡವಾಳವನ್ನೂ ತರೋದಿಲ್ಲ.

ದಲಿತ ವಿದ್ಯಾರ್ಥಿಗಳ ಒಡಲಾಳದ ತುಮುಲಗಳನ್ನು ಅರ್ಥ ಮಾಡಿಕೊಳ್ಳುವ, ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಡೆಯಲೇಬೇಕು. ಆದರೆ ಅದು ಎಂದಿನಿಂದ ನಡೆದುಬಂದಿರುವ ಪುರೋಹಿತಶಾಹಿ ವರ್ಸಸ್ ಶೋಷಿತ ಎಂಬ ಮಾರ್ಗ ಹಿಡಿದರೆ ಒಂದಷ್ಟು ಬೊಬ್ಬೆ ಕೇಳುವುದಕ್ಕೆ ಸಿಗಬಹುದಷ್ಟೇ. ಪರಿಹಾರ ಸಿಗದು.

Leave a Reply