ಮಂತ್ರಿಗಳ ಮೇಲೆ ಸಿದ್ದರಾಮಯ್ಯ ಬ್ಲಾಕ್ ಮೇಲ್ ರಾಜಕೀಯ ಅಸ್ತ್ರ, ಇನ್ನಿತರ ಚೂರು ಸುದ್ದಿ@ ಸುದ್ದಿಸಂತೆ

 

ಡಿಜಿಟಲ್ ಕನ್ನಡ ಟೀಮ್

ಮುಂದಿನ ವಿಧಾನಸಭೆ ಚುನಾವಣೆ ದಿಕ್ಸೂಚಿ ಆಗಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ಶತಾಯ-ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದಕ್ಕಾಗಿ ಸಂಪುಟ ಸಹೋದ್ಯೋಗಿಗಳ ಮೇಲೆ ಬ್ಲಾಕ್ ಮೇಲ್ ರಾಜಕೀಯ ಅಸ್ತ್ರ ಪ್ರಯೋಗಿಸಿದ್ದಾರೆ.

ಆಯಾ ಜಿಲ್ಲೆಗಳಲ್ಲಿ ಪಕ್ಷದ ಗೆಲುವು ಖಾತರಿಪಡಿಸುವುದು ಉಸ್ತುವಾರಿ ಸಚಿವರ ಹೊಣೆ. ಇಲ್ಲದಿದ್ದರೆ ಗೇಟ್ ಪಾಸ್ ನೀಡಲಾಗುವುದು. ಅದಕ್ಕಾಗಿಯೇ ಪಂಚಾಯಿತಿ ಚುನಾವಣೆ ಮುಗಿಯುತ್ತಿದ್ದಂತೆ ಸಂಪುಟ ಪುನಾರಚನೆ ಇಟ್ಟುಕೊಂಡಿರುವುದು ಎಂದು ಕೆಲವು ಸಚಿವರಿಗೆ ನೇರವಾಗಿ, ಇನ್ನೂ ಕೆಲವು ಸಚಿವರಿಗೆ ಆಪ್ತರ ಮೂಲಕ ಸಂದೇಶ ರವಾನಿಸಿದ್ದಾರೆ.

ಜಿಲ್ಲಾ ಮತ್ತು ಪಂಚಾಯಿತಿ ಚುನಾವಣೆ ನಿಮಗೊಂದು ಟಾರ್ಗೆಟ್. ಅಧಿಕಾರದಲ್ಲಿ ಇರದೇ ಹೋದಾಗಲೇ ಪಕ್ಷ ಹದಿನೈದು ಜಿಲ್ಲಾ ಪಂಚಾಯ್ತಿಗಳಲ್ಲಿ ಅಧಿಕಾರ ಹಿಡಿದಿದೆ. ಈಗ ಅಧಿಕಾರದಲ್ಲಿದ್ದೇವೆ. ಹೀಗಾಗಿ ಕನಿಷ್ಠ  ಇಪ್ಪತ್ತು ಜಿಲ್ಲೆಗಳನ್ನಾದರೂ ಕೈವಶ ಮಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ಮನೆಗೆ ಹೋಗಲು ತಯಾರಿರಬೇಕು ಎಂದು ಖಡಕ್ಕಾಗಿಯೇ ಹೇಳಿದ್ದಾರೆ. ಇಲ್ಲಿನ ಸಾಧನೆ ಮುಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನೀಡಲು ಆಧಾರವಾಗಲಿದೆ ಎಂದು ಹೇಳುವ ಮೂಲಕ ಪಕ್ಕಾ ಬ್ಲಾಕ್ ಮೇಲ್ ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸಿದ್ದಾರೆ.

 

ವೆಮುಲ ಸಾವಲ್ಲೀಗ ರಾಜಕೀಯ

ಹೈದರಾಬಾದ್ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿವಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಾಕ್ಷ ರಾಹುಲ್ ಗಾಂಧಿ ಭಾಗಿಯಾಗಿ ಹೇಳಿದ್ದು-

ಬಿಜೆಪಿ ಸಚಿವರು ದಲಿತ ವಿದ್ಯಾರ್ಥಿಯ ಸಾವಿನ ವಿಚಾರದಲ್ಲಿ ನ್ಯಾಯಯುತವಾಗಿ ನಡೆದುಕೊಂಡಿಲ್ಲ. ಇಷ್ಟಾದ ಮೇಲೆ ವೈಸ್ ಚಾನ್ಸೆಲರ್ ಈ ವಿವಿಯಲ್ಲಿ ಉಳಿದುಕೊಂಡಿರುವುದಕ್ಕೆ ಕಾರಣವೇ ಇಲ್ಲ. ಪ್ರತಿಭಟನೆಯಲ್ಲಿ ತೊಡಗಿರುವವರು ವೆಮುಲರ ಕುಟುಂಬಕ್ಕೆ ಐದು ಕೋಟಿ ರುಪಾಯಿ ಪರಿಹಾರ ಮತ್ತುಉದ್ಯೋಗ ಕೇಳಿರುವುದನ್ನು ಬೆಂಬಲಿಸುತ್ತೇನೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಹೇಳಿದ್ದು- ‘ಇದು ಆತ್ಮಹತ್ಯೆ ಅಲ್ಲ ಕೊಲೆ. ಮೋದಿ ಸರ್ಕಾರ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದೆ. ಇದಕ್ಕೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮುರುಳಿಧರ್ ರಾವ್ ಪ್ರತಿಕ್ರಿಯೆ- ರಾಹುಲ್ ಒಬ್ಬ “ಆದರ್ಶವಿಲ್ಲದ” ನಡವಳಿಕೆಯ ಮನುಷ್ಯ ಮತ್ತು ಕೇಜ್ರಿವಾಲ್ ತೊಂದರೆಯಲ್ಲಿ ಸಿಲುಕಿರುವವರ ಮನೆಯ ನೀರಿನಲ್ಲಿ ಮೀನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇವರು ದಲಿತ ವಿದ್ಯಾರ್ಥಿಯ ಸಾವಿನಲ್ಲಿ ರಾಜಕೀಯ ಮಾಡುವವರು.

 

ಅಮ್ಮ ಸಹಾಯವಾಣಿ

ತಮಿಳುನಾಡಿನಲ್ಲಿ “ಅಮ್ಮ” ಬ್ರಾಂಡ್ ಸರಣಿ ಮುಂದುವರಿದಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ನಿವಾರಣೆಗೆ ಕಾಲ್ ಸೆಂಟರ್ ಮತ್ತು ಉಚಿತ ಕರೆಯ ಸಹಾಯವಾಣಿಗೆ ಮುಖ್ಯಮಂತ್ರಿ ಜಯಲಲಿತಾ ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳವಾರ ಚಾಲನೆ ನೀಡಿದರು.

ಸಾರ್ವಜನಿಕರ ಕುಂದು ಕೊರತೆಗಳ ಶೀಘ್ರ ನಿವಾರಣೆಗಾಗಿ ಈ ಸೌಲಭ್ಯ ಸಹಕಾರಿಯಾಗಲಿದೆ. ಇದು 24 ಗಂಟೆಯು ಚಾಲನೆಯಲ್ಲಿ ಇರಲಿದೆ. ಆರಂಭಿಕವಾಗಿ 138 ಕರೆ ನಿರ್ವಾಹಕರಿದ್ದು ಪ್ರತಿದಿನ 15000 ಕರೆ ಸ್ವೀಕರಿಸುವ ಸಾಮರ್ಥ್ಯವಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆಯ ಮೇಲೆ ಕರೆ ನಿರ್ವಾಹಕರನ್ನು ಹೆಚ್ಚಿಸಲಿದ್ದಾರೆ.

 

ರಿಲಯನ್ಸ್ ಸಿಕ್ಕಾಪಟ್ಟೆ ಲಾಭ

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಆರ್ಥಿಕ ವರ್ಷದ 3 ನೇ ತ್ರೈಮಾಸಿಕದಲ್ಲಿ ಶೇ. 38.5 ರಷ್ಟು ನಿವ್ವಳ ಲಾಭ ಗಳಿಸಿದೆ. ಇದು 2 ನೇ ತ್ರೈಮಾಸಿಕಕ್ಕಿಂತ ಶೇ. 8.5 ರಷ್ಟು ಹೆಚ್ಚು ಲಾಭ ಗಳಿಕೆ.

Leave a Reply