ಸಿಎಂ ಸಿದ್ರಾಮಯ್ಯನವರೇ ನೋಡಿ ಈ ಅನ್ಯಾಯನಾ.., ಈಗಲಾದ್ರೂ ತುಂಬಿ ಮಾನವ ಹಕ್ಕು ಆಯೋಗನಾ..!

 

author-thyagarajಬೆಳಗಾವಿಯ ಕಾಡೇಬಜಾರ್ ನಲ್ಲೊಂದು ವೇಶ್ಯಾವಾಟಿಕೆ ತಾಣ. ನಿಪ್ಪಾಣಿ, ಗೋಕಾಕ ಮತ್ತಿತರ ಸುತ್ತಮುತ್ತಲಿನ ಊರಿನ ಕಡುಬಡ ಕುಟುಂಬದ ತರುಣಿಯರು ಇಲ್ಲಿ ಜೀವನೋಪಾಯ ಅರಸಿದ್ದರು. ಪ್ರತಿ ತಿಂಗಳು ಪೊಲೀಸರಿಗೆ ಹಫ್ತಾ ಕೊಟ್ಟುಕೊಂಡು, ಅವರ ಕಣ್ಗಾವಲಿನಲ್ಲೇ ದಂಧೆ ನಡೆಸುತ್ತಿದ್ದರು. ಆದರೆ ವ್ಯಾಪಾರ ಡಲ್ಲಾಗಿ, ಹೊಟ್ಟೆಗೂ ತತ್ವಾರವಾದ ಕಾರಣ ತಾಣದ ತರುಣಿಯರಿಗೆ ಎರಡು ತಿಂಗಳಿಂದೆ ಹಫ್ತಾ ಕೊಡಲಾಗಲಿಲ್ಲ. ಪೊಲೀಸರು ಪದೇ ಪದೇ ಪೀಡಿಸಿದರು. ಹುಡುಗಿಯರು ಅಷ್ಟೇ ಪರಿಪರಿಯಾಗಿ ಗೋಳು ತೋಡಿಕೊಂಡರು. ಆದರೆ ಪೊಲೀಸರ ಕಿವಿಗೆ ಬೀಳಲಿಲ್ಲ. ಅದೊಂದು ದಿನ ಸ್ಟೇಷನ್ ಗೆ ಎಳೆದೊಯ್ದು, ಹೆಣ್ಮಕ್ಕಳು ಅನ್ನೋದನ್ನು ಲೆಕ್ಕಿಸದೇ ರೌಡಿಶೀಟರ್ ಗಳ ಮಾದರಿಯಲ್ಲಿ ವರ್ಕ್ ಮಾಡಿದರು. ಮುಖಮೂತಿ ಮಾಗಿದ ಪರಂಗಿಯಂತಾದರೂ ಬಿಡಲಿಲ್ಲ. ಕಣ್ಣೀರು ಪೊಲೀಸರ ಕಲ್ಲು ಹೃದಯ ಕರಗಿಸಲಿಲ್ಲ.

ಈ ಪೈಶಾಚಿಕ ಕೃತ್ಯ ಸಾಮಾಜಿಕ ಕಾರ್ಯಕರ್ತರ ಮೂಲಕ ಉನ್ನತಾಧಿಕಾರಿಗಳ ಗಮನಕ್ಕೆ ಬಂತು. ಹುಡುಗಿಯರಿಂದ ದೂರು ಕೊಡಿಸಿದರು. ಇದರಿಂದ ಕೆರಳಿದ ಸ್ಥಳೀಯ ಪೊಲೀಸರು, ಈ ಹುಡುಗಿಯರಿಂದಾಗಿ ಅಂಗಡಿಮುಂಗಟ್ಟುಗಳ ವ್ಯಾಪಾರ ಬಿದ್ದೋಗಿದೆ.  ಮಾನಮರ್ಯಾದೆಗಂಜಿ ಜನ ಪೇಟೆಗೆ ಬರ್ತಿಲ್ಲ ಅಂತ ವರ್ತಕರ ಸಂಘದ ಮೂಲಕ ತರುಣಿಯರ ವಿರುದ್ಧ ಕೇಸು ದಾಖಲಿಸಿಬಿಟ್ಟರು. ಅಲ್ಲಿ, ಇಲ್ಲಿ ಕೆಲಸ ಮಾಡ್ತಿದ್ದೇವೆ ಅಂತ ಮನೆಯವರಿಗೆ ಸುಳ್ಳು ಹೇಳಿಕೊಂಡು, ಮೈಮಾರಿ ಜೀವನ ನಡೆಸುತ್ತಿದ್ದ ಯುವತಿಯರು ಪೊಲೀಸರು ಮರ್ಯಾದೆ ಹರಾಜಾಗ್ತಾರೆ ಅಂತ ಹೆದರಿ ಕಂಪ್ಲೆಂಟ್ ವಾಪಸ್ಸು ತೆಗೆದುಕೊಂಡು ಬಿಟ್ಟರು. ಮರ್ಯಾದೆ ಹೋಗೋದಕ್ಕಿಂತ ಪೊಲೀಸರ ಹೊಡೆತ ತಿನ್ನೋದೆ ವಾಸಿ ಅಂತ.

ಇನ್ನೊಂದು ಪ್ರಕರಣ. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಗುಜರಿ ಅಂಗಡಿ ನಡೆಸುತ್ತಿದ್ದ ಕಾರ್ತಿಕ್ ಪೊಲೀಸರಿಗೆ ಪ್ರತಿ ತಿಂಗಳು ಹತ್ತರಿಂದ ಇಪ್ಪತ್ತು ಸಾವಿರ ಮಾಮೂಲಿ ಕೊಡುತ್ತಿದ್ದ. ಮೇಲಧಿಕಾರಿಯೊಬ್ಬರ ಮನೆಗೆ ಗೀಜರ್ ತಗೋಬೇಕು, 70 ಸಾವಿರ ಕೊಡು ಅಂತ ಪೊಲೀಸರು ಡಿಮಾಂಡ್ ಮಾಡಿದರು. ಇವನು ಆಗಲ್ಲ ಅಂದ. 35 ಸಾವಿರ ರುಪಾಯಿ ಕೊಡಲೇಬೇಕು ಅಂದ್ರು ಪೊಲೀಸರು. ಅಷ್ಟು ದುಡ್ಡು ಕೊಡಲಾಗದ ಕಾರ್ತಿಕ್ ಸಾಮಾಜಿಕ ಕಾರ್ಯಕರ್ತರ ಮೂಲಕ ಲಂಚಕೋರ ಪೊಲೀಸರನ್ನು ಟ್ರಾಪ್ ಮಾಡಿಸಿಬಿಟ್ಟ. ಅಲ್ಲಿಂದಾಚೆ ಶುರುವಾಯ್ತು ಪ್ರತೀಕಾರದ ಕತೆ. ಕಳೆದ ಜನವರಿ 13 ರಂದು ಬೆಳಗಿನ ಜಾವ ಶಿವಾಜಿನಗರ ಪೊಲೀಸರು ಕಾರ್ತಿಕ್ ಮನೆಗೆ ದಾಳಿ ಇಟ್ಟರು. ಆದರೆ ಆತ ಊರಲ್ಲಿ ಇರಲಿಲ್ಲದ ಕಾರಣ ಅವನ ತಮ್ಮ, ಎಂಬಿಎ ವಿದ್ಯಾರ್ಥಿ ಸೇಂಥಿಲ್ ನನ್ನು ಎತ್ತಾಕೊಂಡು ಹೋದರು. ಕಾರಣ ಹೇಳಲಿಲ್ಲ. ಮೂರು ದಿನವಾದರೂ ಮನೆಗೂ ಕಳುಹಿಸಲಿಲ್ಲ. ಕೋರ್ಟ್ ಗೂ ಹಾಜರುಪಡಿಸಲಿಲ್ಲ. ಸ್ಟೇಷನ್ ಲಾಗ್ ಬುಕ್ ನಲ್ಲಾಗಲಿ, ಡೈರಿಯಲ್ಲಾಗಲಿ ಅವನ ಹೆಸರು ಬರೆಯಲಿಲ್ಲ. ಕೇಸು ಹಾಕಲಿಲ್ಲ. ಎಫ್ಐಆರೂ ದಾಖಲಿಸಲಿಲ್ಲ. ಆದರೂ ಅಕ್ರಮ ಬಂಧನದಲ್ಲಿಟ್ಟರು. ವಿಷಯ ಮಾನವ ಹಕ್ಕುಗಳ ಹೋರಾಟಗಾರರ ಮೂಲಕ ಮೇಲಧಿಕಾರಿಗಳಿಗೆ ಹೋಯಿತು. ಅವರು ಬಿಡಿಸ್ತೀವಿ ಅಂದ್ರು. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ತಗೋತಿವಿ ಅಂದ್ರು. ಆದರೆ ಸ್ಟೇಷನ್ ನಲ್ಲಿ ಇತ್ಯರ್ಥ ಆಗದಿದ್ದ ಯಾವುದೋ ಹಳೇ ಕಳ್ಳತನದ ಕೇಸ್ ಫಿಟ್ ಆಗಿ ಸೇಂಥಿಲ್ ಜೈಲು ಸೇರಿದ್ದ. ಕಾರ್ತಿಕ್ ಮೇಲಿನ ಸೇಡನ್ನು ಪೊಲೀಸರು ಹೀಗೆ ತೀರಿಸಿಕೊಂಡಿದ್ದರು.

ಕರ್ನಾಟಕದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಆದೂ ಕಾನೂನು ರಕ್ಷಣೆ ಹೊಣೆ ಹೊತ್ತ ಪೊಲೀಸರಿಂದಲೇ ಯಾವ ರೀತಿ ನಡೆಯುತ್ತಿದೆ ಎಂಬುದಕ್ಕೆ ಎರಡು ತಾಜಾ ನಿದರ್ಶನಗಳಿವು. ಪ್ರತಿ ತಿಂಗಳೂ ಇಂಥ ನೂರಾರು ಪ್ರಕರಣಗಳು ನಡೆಯುತ್ತವೆ. ಆಸ್ಪತ್ರೆ, ಸರಕಾರಿ ಕಚೇರಿಗಳು, ಶಿಕ್ಷಣ ಮತ್ತು ಸಾವರ್ಜನಿಕ ಸಂಸ್ಥೆಗಳಲ್ಲಿ ವರದಿ ಆಗುತ್ತವೆ. ಆದರೆ ಪೊಲೀಸ್ ಇಲಾಖೆಯದೇ ಸಿಂಹಪಾಲು. ಜನರಕ್ಷಣೆ ಹೊಣೆ ಹೊತ್ತವರಿಂದಲೇ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ದುರಂತ.

ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಇಂಥ ಪ್ರಕರಣಗಳನ್ನು ನಿಯಂತ್ರಿಸಲು ಆಗುವುದಿಲ್ಲವೇ? ನ್ಯಾಯ ಸಿಗುವುದಿಲ್ಲವೇ? ಪರಿಹಾರ ಕಲ್ಪಿಸಲು, ಅನ್ಯಾಯ ನಿಯಂತ್ರಿಸಲು, ನ್ಯಾಯ ಒದಗಿಸಲು ಕರ್ನಾಟಕ ಮಾನವ ಹಕ್ಕುಗಳ ಆಯೋಗ ಅಂತ ಒಂದು ಸಂಸ್ಥೆಯಿದೆ. ಆದರೆ ಶೋಷಿತರ ತಲೆ ಕಾಯಬೇಕಾದ ಈ ಸಂಸ್ಥೆಗೆ ತಲೆಯೇ ಇಲ್ಲ! ಅಂದರೆ ಈ ಘಟಕಕ್ಕೆ ಬುದ್ದಿ ಇಲ್ಲ ಅಂತಲ್ಲ. ಈ ಘಟಕವನ್ನು ನಿರ್ದಿಷ್ಟ ದಾರಿಯಲ್ಲಿ ಕೊಂಡೊಯ್ಯಬೇಕಾದ, ಅದರ ಜವಾಬ್ದಾರಿಗಳನ್ನು ನಿರ್ದೇಶಿಸಬೇಕಾದ ಮೇಟಿಯೇ ಇಲ್ಲ ಅಂತಷ್ಟೇ ಇದರ ಸೀಮಿತಾರ್ಥ.

ಹೌದು, ಕಳೆದ ಮೂರೂವರೇ ವರ್ಷದಿಂದ ಈ ಆಯೋಗದ ಅಧ್ಯಕ್ಷರ ಹುದ್ದೆ ಖಾಲಿಯಿದೆ. ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರು ಕಾನೂನು ಆಯೋಗದ ಅಧ್ಯಕ್ಷರಾಗಿ ಹೋದ ನಂತರ ಇದು ಭರ್ತಿಯಾಗಿಲ್ಲ. ತಮ್ಮ ಅಧಿಕಾರವನ್ನು ಜತನದಿಂದ ಕಾಪಿಟ್ಟುಕೊಳ್ಳುವಲ್ಲಿ ಪ್ರದರ್ಶಿಸುವ ಅಸ್ಥೆಯನ್ನು ಯಾವೊಬ್ಬ ಆಡಳಿತರೂಢರು ಈ ಹುದ್ದೆ ತುಂಬಲು ಪ್ರದರ್ಶಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಸೇರಿಸಿದಂತೆ.

ಹಾಗಾದರೆ ಅಧ್ಯಕ್ಷರು ಇಲ್ಲದ ಮಾತ್ರಕ್ಕೆ ಆಯೋಗದಲ್ಲಿ ಹೊಣೆ ನಿರ್ವಹಣೆಗೆ ಬೇರಾರೂ ಇಲ್ಲವೇ ಅವರು ಕೆಲಸ ಮಾಡುತ್ತಿಲ್ಲವೇ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ನಿಜ, ಐಎಎಸ್ ಅಧಿಕಾರಿ ಮೀರಾ ಸಕ್ಸೆನಾ ಉಸ್ತುವಾರಿ ಹೊತ್ತಿದ್ದಾರೆ. ಮೇಲಿನ ಎರಡು ಪ್ರಸಂಗಗಳಲ್ಲಿಯೂ ಅವರು ಮಧ್ಯಪ್ರವೇಶಿಸಿದ್ದರು. ಪೊಲೀಸ್ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈ ಪ್ರಕರಣಗಳಲ್ಲಿ ಆಗಿರುವ ಬೆಳವಣಿಗೆಗಳು ಆಯೋಗದ ಅಧಿಕಾರಿಗಳ ಮಾತಿಗೆ ಎಷ್ಟು ಕಿಮ್ಮತ್ತಿದೆ ಎಂಬುದನ್ನು ಸಾಬೀತುಪಡಿಸಿದೆ.

ಇಲ್ಲಿ ಅಧಿಕಾರಿಗಳು ಮತ್ತು ಅಧಿಕಾರಿಗಳ ನಡುವೆ ಅವ್ಯಕ್ತ ಭಾವನಾತ್ಮಕ ಸಂಬಂಧ ಇರುತ್ತದೆ. ವೃತ್ತಿ, ಸಮಾನ ಸ್ಥಾನಮಾನ ಸಾಂದರ್ಭಿಕ ಸಲುಗೆಯನ್ನು ಬೆಸೆದಿರುತ್ತದೆ. ಇಂಥ ಸಂಬಂಧದ ಎದಿರು ಶೋಷಿತನ ನೋವು ಗೌಣವಾಗುತ್ತದೆ. ನ್ಯಾಯ ಅನ್ನೋದು ಪಕ್ಕಕ್ಕೆ ಸರಿಯುತ್ತದೆ. ಮಾನವ ಹಕ್ಕು ಎಂಬುದೆಲ್ಲ ಪುಸ್ತಕದ ಬದನೆಕಾಯಿ ಅಂತಾಗುತ್ತದೆ. ಯಾವ ಕೆಲಸವನ್ನು ಯಾರು ಮಾಡಬೇಕೋ ಅವರೇ ಮಾಡಬೇಕು. ಹಿಂದೆ ಆಯೋಗಕ್ಕೆ ಅಧ್ಯಕ್ಷರು ಅಂತ ಒಬ್ಬರು ಇದ್ದಾಗ ಅವರ ಸ್ಥಾನಬಲದಿಂದ ಇಂಥ ಪ್ರಕರಣಗಳಲ್ಲಿ ಜಬರ್ದಸ್ತು ನ್ಯಾಯಕ್ಕೆ ಆಸ್ಪದ ಇತ್ತು. ಅನ್ಯಾಯದಲ್ಲಿ ಅಂತ್ಯವಾಗುವುದನ್ನು ತಡೆಯಬಹುದಾಗಿತ್ತು. ಯಾರೋ ಒಬ್ಬರು ಕೇಳುವವರು ಇದ್ದಾರೆ ಅಂತಾದಾಗ ತಪ್ಪು ಮಾಡುವವರು ಎರಡೆರಡು ಬಾರಿ ಯೋಚನೆ ಮಾಡುತ್ತಾರೆ. ತಪ್ಪು ಮಾಡಿದವರು ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ನಿಷ್ಪಾಪಿಗೆ ಅನ್ಯಾಯ ಆಗುವುದಾದರೂ ತಪ್ಪುತ್ತದೆ. ಹಿಂದೆ ನ್ಯಾಯಮೂರ್ತಿ ವೆಂಕಟಾಚಲ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಂಥವರು ಲೋಕಾಯುಕ್ತರಾಗಿದ್ದಾಗ ಭ್ರಷ್ಟರಿಗೆ ಹೇಗೆ ಸಿಂಹಸ್ವಪ್ನರಾಗಿದ್ದರು, ರಾಜಕಾರಣಿಗಳು, ಅಧಿಕಾರಿಗಳು ಹೇಗೆಲ್ಲ ನಡುಗುತ್ತಿದ್ದರು ಎಂಬುದು ಎಲ್ಲರ ಕಣ್ಣಮುಂದೆಯೇ ಇದೆ. ಕೆಲವು ಬಾರಿ ಸ್ಥಾನಬಲ ಕೆಲಸ ಮಾಡಿದರೆ, ಇನ್ನೂ ಕೆಲವು ಬಾರಿ ಆ ಸ್ಥಾನದಲ್ಲಿರುವವರ ನಾಮಬಲ ತಪ್ಪು ಎಣಿಸುವವರು ಹಾಗೂ ತಪ್ಪಿತಸ್ಥರ ಜಂಘಾಬಲ ಉಡುಗಿಸಿಬಿಡುತ್ತದೆ.

ಹಾಗಾದರೆ ಸಿದ್ದರಾಮಯ್ಯನವರ ಸರಕಾರ ಮೂರೂವರೇ ವರ್ಷದಿಂದ ಏಕೆ ಈ ಹುದ್ದೆ ಭರ್ತಿ ಮಾಡಿಲ್ಲ, ಅದಕ್ಕೆ ಕೊಡುತ್ತಿರುವ ಕಾರಣವಾದರೂ ಏನು? ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರ ನಂತರ ನ್ಯಾ. ರವೀಂದ್ರ ಅವರನ್ನು ಈ ಹುದ್ದೆಗೆ ತರಲು ಯತ್ನಿಸಲಾಯಿತು. ಆದರೆ ಅವರು ಬರುವುದಿಲ್ಲ ಎಂದರು. ನಂತರ ಧರ್ಮರ್ ಮುರುಗೇಶ್ ಅವರನ್ನು ನೇಮಕ ಮಾಡಿದರೂ ಕನ್ನಡೇತರರು ಎಂಬ ಅಪಸ್ವರ ಕೇಳಿ ಬಂದ ಹಿನ್ನೆಲೆಯಲ್ಲಿ ಅವರೇ ಹುದ್ದೆಯಿಂದ ದೂರ ಉಳಿದರು. ಇದೆಲ್ಲ ಆಗಿದ್ದು 2012, ’13 ರಲ್ಲಿ. ಇದಾದ ನಂತರ ಸರಕಾರ ಇದರ ವಿಚಾರ ಮಾಡುವುದನ್ನೇ ಬಿಟ್ಟುಬಿಟ್ಟಿದೆ. ಯಾರಾದರೂ ಕೇಳಿದರೆ ಆ ಹುದ್ದೆಗೆ ಬರಲು ಯಾರೂ ಸಿಗುತ್ತಿಲ್ಲ ಎಂಬ ಉತ್ತರ ಮುಖ್ಯಮಂತ್ರಿಯವರಿಂದ ಬರುತ್ತಿದೆ. ಆದರೆ ಅದು ತಪ್ಪು ಮಾಹಿತಿ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಅಥವಾ ಹೈಕೋರ್ಟ್ ಗಳ ನಿವೃತ್ತಿ ಮುಖ್ಯ ನ್ಯಾಯಮೂರ್ತಿಗಳನ್ನು ಈ ಹುದ್ದೆಗೆ ತರಲು ಅವಕಾಶವಿದೆ. ಪ್ರಸ್ತುತ ಈ ಹುದ್ದೆಗೆ ಅರ್ಹರಾದ 17 ಮಂದಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ 9 ಮಂದಿ ಹೈಕೋರ್ಟ್ ನಿವೃತ್ತಿ ಮುಖ್ಯ ನ್ಯಾಯಮೂರ್ತಿಗಳು ಲಭ್ಯರಿದ್ದಾರೆ. ಮಾನವ ಹಕ್ಕುಗಳಿಗೆ ಭಾಷೆ, ಗಡಿಯ ಬೇಧ ಇರುವುದಿಲ್ಲ. ಹೀಗಾಗಿ ಕನ್ನಡಿಗರೇ ಆಗಬೇಕು ಎನ್ನುವುದು ನೇಮಕ ತಪ್ಪಿಸಲು ಒಂದು ನೆಪ ಆಗಬಾರದು. ಹಾಗೊಂದು ವೇಳೆ ಕನ್ನಡಿಗರನ್ನೇ ಮಾಡಬೇಕು ಎನ್ನುವುದು ಸರಕಾರದ ಸಂಕಲ್ಪವೇ ಆಗಿದ್ದರೆ ಪಕ್ಕದ ಮಹಾರಾಷ್ಟ್ರದಲ್ಲಿ ಅಲ್ಲಿನ ಮಾನವ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷರಾಗಿ ಕನ್ನಡಿಗರೇ ಆದ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರು ಇದ್ದಾರೆ. ಅವರನ್ನು ಕರ್ನಾಟಕ ಆಯೋಗಕ್ಕೆ ತರಲು ಅವಕಾಶವಿದೆ. ಅಲ್ಲಿಯೂ ಅವರೇ ಬೇಕು ಎನ್ನುವುದಾದರೆ ಕರ್ನಾಟಕ ಆಯೋಗಕ್ಕೆ ಹೆಚ್ಚುವರಿ ಹೊಣೆ ವಹಿಸಲೂ ಅವಕಾಶವಿದೆ. ಸರಕಾರ ಇದ್ಯಾವುದೇ ಪ್ರಯತ್ನವನ್ನು ನಡೆಸಿಲ್ಲ. ಏಕೆಂದರೆ ನೇಮಕ ಅದಕ್ಕೆ ಬೇಕಾಗಿಯೂ ಇಲ್ಲ. ಇಲ್ಲೊಂದು ಗಮನಿಸಿಬೇಕಾದ ಮುಖ್ಯ ವಿಷಯ ಇದೆ. ಕನ್ನಡಿಗರಾದ ಬನ್ನೂರಮಠ ಅವರು ಮಹಾರಾಷ್ಟ್ರದ ಮಟ್ಟಿಗೆ ಅನ್ಯಭಾಷಿಕರಲ್ಲವೇ? ಅವರು ಅಲ್ಲಿ ಕರ್ತವ್ಯ ನಿರ್ವಹಿಸಬಹುದಾದರೆ ಈಗ ಲಭ್ಯರಿರುವ 26 ಮಂದಿ ಆರ್ಹರಲ್ಲಿ ಯಾರನ್ನಾದರೂ ಕರ್ನಾಟಕ ಸರಕಾರ ನೇಮಕ ಮಾಡಬಹುದಲ್ಲವೇ? ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ಕಾರ್ಯಕರ್ತ ಟಿ. ನರಸಿಂಹಮೂರ್ತಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇರೆಗೆ ಮೂರು ತಿಂಗಳಲ್ಲಿ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಬೇಕು ಅಂತ ಹೈಕೋರ್ಟ್ ಆದೇಶ ಕೊಟ್ಟು ಆರು ತಿಂಗಳಾಗಿದೆ. ಸರಕಾರ ನ್ಯಾಯಾಂಗ ನಿಂದನೆಗೂ ತಲೆ ಕೆಡಿಸಿಕೊಂಡಿಲ್ಲ ಅಂದರೆ ಎಷ್ಟಿರಬೇಕು ಅಂದರ ದಾಷ್ಟ್ಯ?!

ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ನೆಪ ಹುಡುಕಲು ಹೊರಟರೆ ಸಾವಿರ ಸಿಗುತ್ತದೆ. ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ಇಚ್ಛಾಶಕ್ತಿ. ಒಂದೊಮ್ಮೆ ಆಯೋಗಕ್ಕೆ ಅಧ್ಯಕ್ಷರು ಬಂದರೆ ಮಾನವ ಹಕ್ಕುಗಳ ಉಲ್ಲಂಘನೆ ಆದ ಜಾಗಕ್ಕೆಲ್ಲ ಅವರು ಎಡತಾಕುತ್ತಾರೆ. ಅದಕ್ಕೆ ಕಾರಣವಾದ ಆಡಳಿತ ವ್ಯವಸ್ಥೆಯನ್ನು ಜಾಡಿಸುತ್ತಾರೆ. ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡುತ್ತಾರೆ. ಇದರಿಂದ ಸರಕಾರಕ್ಕೆ ಮುಜುಗರ ಆಗುತ್ತದೆ. ವರ್ಚಸ್ಸಿನ ಮೇಲೆ ಪ್ರತಿಕೂಲ ಪರಿಣಾಮವನ್ನೂ ಬೀರುತ್ತದೆ. ಕೆಲವೊಮ್ಮೆ ಉತ್ತರ ಪ್ರದೇಶದ ದಾದ್ರಿ ಹತ್ಯೆ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ವಿದ್ಯಾರ್ಥಿ ವೇಮಲ ರೋಹಿತ್ ಆತ್ಮಹತ್ಯೆಯಂಥ ಪ್ರಕರಣಗಳು ಸರಕಾರವನ್ನೇ ತಡವಿಕೊಳ್ಳುತ್ತವೆ. ಯಾಕೆ ಬೇಕು ಇಂಥ ರೇಜಿಗೆ ಅಂತ ಸರಕಾರ ಜಾಣ ಕುರುಡು, ಜಾಣ ಕಿವುಡಿನ ಮೊರೆ ಹೋಗಿರುವಂತಿದೆ. ಒಂದೊಮ್ಮೆ ಆಯೋಗಕ್ಕೊಬ್ಬರು ಅಧ್ಯಕ್ಷರು ಇದ್ದಿದ್ದರೆ ಬೆಳಗಾವಿ ಮತ್ತು ಬೆಂಗಳೂರಿನಂಥ ಪ್ರಕರಣಗಳು ಅಷ್ಟು ಸುಲಭವಾಗಿ ನ್ಯಾಯ ಕಳೆದುಕೊಳ್ಳುತ್ತಿರಲಿಲ್ಲ. ಇಂಥ ಅನೇಕ ಪ್ರಕರಣಗಳಿಗೆ ರಾಜ್ಯ ಸಾಕ್ಷಿಯಾಗುತ್ತಿದೆ. ಆದರೆ ಹೇಳೋರು, ಕೇಳೋರು ಇಲ್ಲದೆ ಅವೆಲ್ಲ ನ್ಯಾಯದ ಜತೆಗೆ ಸಮಾಧಿ ಕಾಣ್ತಿವೆ.

ಲಗೋರಿ : ಹೇಳಿದ್ದನ್ನೆಲ್ಲ ಕೇಳ್ಬಿಟ್ರೆ ಅದು ಸರ್ಕಾರ ಹೆಂಗಾಗ್ತದೆ ಅಲ್ವೇ?

1 COMMENT

  1. Sariyagi helidiri. Siddaramayyanavare innadaru echhettukolli. Niraparadhigalannu, shoshitarannu rakshisi. Punya katkali. Now God has given an opportunity to you to serve these kind of poor people. Make use it other wise next time you will not get opportunity.

Leave a Reply