ಜಾತಿ ಒಂದಿದ್ರೆ ಸಾಲ್ದು ರೇವು ಡಿಯರ್, ಭೈರತಿಯಂಗೆ ದುಡ್ಡೂ ಮಡಗಿರಬೇಕು ಅಂತಿದ್ದಾರಾ ಸಿದ್ರಾಮಣ್ಣ..!

ಡಿಜಿಟಲ್ ಕನ್ನಡ ಟೀಮ್

ರಾಜಕೀಯದಲ್ಲಿ ಜಾತಿಯೇ ಮಿಗಿಲು. ಜಾತಿ ಇಲ್ಲದೇ ರಾಜಕೀಯ ಇಲ್ಲ ಅಂತಿದ್ವಿ. ಈಗ ಜಾತಿ ಜತೆಗೆ ದುಡ್ಡು ಕೂಡ ಇರಬೇಕು ಅನ್ನೋದನ್ನ ಬೆಂಗಳೂರಿನ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಮರುಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಸಾಬೀತಾಗಿದೆ.

ಟಿಕೆಟ್ಟಿಗೆ ಪ್ರಬಲ ಆಕಾಂಕ್ಷಿಗಳಾಗಿರುವ ವಿಧಾನ ಪರಿಷತ್ ಸದಸ್ಯರಾದ ಎಚ್..ಎಂ. ರೇವಣ್ಣ ಹಾಗೂ ಭೈರತಿ ಸುರೇಶ್ ಇಬ್ಬರೂ ಸಿದ್ದರಾಮಯ್ಯನವರ ಪರಮಾಪ್ತರೇ. ಇಬ್ಬರೂ ಸಿದ್ದರಾಮಯ್ಯನವರು ಪ್ರತಿನಿಧಿಸುವ ಕುರುಬ ಸಮುದಾಯದವರೇ. ಆದರೆ ದುಡ್ಡಿನ ವಿಷಯಕ್ಕೆ ಬಂದಾಗ ರಿಯಲ್ ಎಸ್ಟೇಟ್ ಕುಳ ಭೈರತಿ ಮುಂದೆ ರೇವಣ್ಣ ಸ್ವಲ್ಪ ಬಡವರೇ. ಅವರ ಬಡತನವೇ ಟಿಕೆಟ್ಟಿಗೆ ಮುಳುವಾಗಿದ್ದು, ಸಿದ್ದರಾಮಯ್ಯನವರು ಬೈರತಿ ಸುರೇಶ್ ಪರ ಬ್ಯಾಟಿಂಗ್ ಆಡುತ್ತಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡ ಜಾಫರ್ ಷರೀಫ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಸುರೇಶ್ ವಿರುದ್ಧವಾಗಿ ಮಾಡುತ್ತಿರುವ ಯಾವುದೇ ಬೌಲಿಂಗ್ ಗೂ
ಅವರು ಎದೆಗುಂದಿಲ್ಲ. ಬೇರೆ ಅಭ್ಯರ್ಥಿಗಳಂತೂ ಲೆಕ್ಕಕ್ಕೇ ಇಲ್ಲ. ಹೀಗಾಗಿ ಟಿಕೆಟ್ ಸುರೇಶ್ ಪಾಲಾಗುವುದು ನಿಚ್ಚಳವಾಗಿದೆ.

ಹಾಗೇ ನೋಡಿದರೆ ಜೆಡಿಎಸ್ ನಿಂದ ವಿಮುಖರಾಗಿದ್ದ ರಲ್ಲಿ ಸಿದ್ದರಾಮಯ್ಯನವರನ್ನು ಮಾಜಿ ಸಚಿವ ಎಚ್. ವಿಶ್ವನಾಥ್ ಜತೆಗೂಡಿ ಕಾಂಗ್ರೆಸ್ ಗೆ ಕರೆತಂದವರೇ ರೇವಣ್ಣ. ಮೂಲನಿವಾಸಿಗಳು, ವಲಸಿಗರ ನಡುವಣ ಜಟಾಪಟಿಯಲ್ಲಿ ನರಳುತ್ತಿದ್ದ ಸಿದ್ದರಾಮಯ್ಯನವರ ಬೆನ್ನಿಗೆ ನಿಂತವರೂ ಇದೇ ರೇವಣ್ಣ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರೆ ಇಷ್ಟೊತ್ತಿಗೆ ಅವರು ಸಿದ್ದರಾಮಯ್ಯನವರ ಸಂಪುಟದಲ್ಲಿರಬೇಕಿತ್ತು. ಆದರೆ ಹೆಬ್ಬಾಳದಲ್ಲಿ ನಿಂತು ಸೋತರು. ಆದರೂ ಅವರನ್ನು ಮೇಲ್ಮನೆ ಸೇರಿಸಿ ಸಿದ್ದರಾಮಯ್ಯ ಒಂದು ಹಂತಕ್ಕೆ ಋಣಮುಕ್ತರಾದರು.

ಆದರೆ ಅದೇ ಮೇಲ್ಮನೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ವಿರುದ್ಧ ಭೈರತಿ ಸುರೇಶ್ ಗೆದ್ದು ಬರುವಲ್ಲಿ ಇದೇ ಸಿದ್ದರಾಮಯ್ಯನವರ ಕೃಪಾಕಟಾಕ್ಷ ಕೆಲಸ ಮಾಡಿತ್ತು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಭೈರತಿ ಸುರೇಶ್ ಹಾಗೂ ಅವರ ಸಹೋದರ ಶಾಸಕ ಬಸವರಾಜ್ ಮಾಡಿದ್ದ ನೆರವಿನ ಋಣವನ್ನೂ ಅದೇ ರೀತಿ ತೀರಿಸಿಕೊಂಡಿದ್ದರು. ಋಣದ ವಿಚಾರಕ್ಕೆ ಬಂದಾಗ ರೇವಣ್ಣ ಮತ್ತು ಸುರೇಶ್ ಇಬ್ಬರದೂ ಚುಕ್ತಾ. ಆದರೆ ರೇವಣ್ಣನವರಿಗೆ ಸಂಪುಟ ಸೇರುವ ಆಸೆ ಕೈಗೂಡಿರಲಿಲ್ಲ. ಅದಕ್ಕೆ ಹೆಬ್ಬಾಳ ಮರುಚುನಾವಣೆ ವೇದಿಕೆ ಮಾಡಿಕೊಳ್ಳಬೇಕೆಂಬ ಆಸೆ ಚಿಗುರೊಡೆದಿತ್ತು. ಜತೆಗೆ ಮಾಗಡಿ ಬಿಟ್ಟು ಬಂದು ಅರಸಿಕೊಂಡ ಕ್ಷೇತ್ರ ಇದು. ಈಗ ಕೆ.ಆರ್. ಪುರದ ಸುರೇಶ್ ಕಣಕ್ಕಿಳಿದರೆ ಕ್ಷೇತ್ರ ತಮ್ಮ ಕೈ ತಪ್ಪಿಹೋಗುತ್ತದೆ ಎಂಬ ಭಯ. ಹೀಗಾಗಿ ಹಿಂದೆ ಅಲ್ಪಮತಗಳ ಅಂತರದಿಂದ ಸೋತಿರುವ ತಮಗೇ ಟಿಕೆಟ್ ಕೊಡಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಆದರೆ ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ಚುನಾವಣೆಯಲ್ಲಿ ನೆರವು ಮುಂದುವರಿಸಿದ, ಈಗ ಬಂದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ, ಮುಂದೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲೂ ನೆರವಿನ ಹಸ್ತದ ಭರವಸೆ ನೀಡಿರುವ ಧನಿಕ ಭೈರತಿ ಸುರೇಶ್ ಮುಂದೆ ರೇವಣ್ಣನವರ ಹಠ ಕೆಲಸ ಮಾಡುವ ಸಾಧ್ಯತೆ ಕಡಿಮೆ. ಆದರೆ ಈ ಹಠವನ್ನು ಸಂಪುಟ ಸೇರ್ಪಡೆ ಬಯಕೆ ಈಡೇರಿಸಿಕೊಳ್ಳಲು ರೇವಣ್ಣ ಅಸ್ತ್ರ ಮಾಡಿಕೊಳ್ಳಬಹುದು. ಮಂತ್ರಿ ಮಾಡಿದರೆ ಹಿಂದೆ ಸರಿಯುತ್ತೇನೆ ಅನ್ನಬಹುದು. ಈಗಿನ ಚುನಾವಣೆ ಗೆಲ್ಲಲು ಸುರೇಶ್ ಅವರಷ್ಟು ಹಣದ ಹೊಳೆ ಹರಿಸಲು ಸಾಧ್ಯವಿಲ್ಲ ಎಂಬುದು ಅವರಿಗೇ ಚೆನ್ನಾಗಿ ಗೊತ್ತು.  ಆದರೆ ಕ್ಷೇತ್ರ ತಪ್ಪಿಹೋಗುವ ಅಪಾಯವನ್ನು ತಪ್ಪಿಸಿಕೊಳ್ಳಲು ಮಾತ್ರ ಅವರಿಗೆ ಸಾಧ್ಯವಿಲ್ಲ.

Leave a Reply