ಜಿಪಿಎಸ್ ಎಂಬ ಅಮೆರಿಕ ವ್ಯವಸ್ಥೆ ನೆಚ್ಚಿಕೊಂಡಿದ್ದವರಿಗೆ ಸ್ವಾವಲಂಬನೆ ‘ಮಾರ್ಗ’ ತೋರಲಿದೆ ಇಸ್ರೋದ ಈ ಉಡ್ಡಯನ

 

ಡಿಜಿಟಲ್ ಕನ್ನಡ ಟೀಮ್

ಈ ವರ್ಷದ ಮೊದಲ ಯಶಸ್ವಿ ಉಡ್ಡಯನವನ್ನು ಬುಧವಾರ ಬೆಳಗ್ಗೆ 9.31 ಕ್ಕೆ ಪೂರೈಸ್ತು ಇಸ್ರೋ. ಐಆರ್ ಎನ್ ಎಸ್ ಎಸ್- 1ಇ ಸರಣಿಯ ಉಪಗ್ರಹ ವ್ಯವಸ್ಥೆಯನ್ನು ಪಿಎಸ್ ಎಲ್ ವಿ- 31 ಉಡ್ಡಯನ ಸಾಧನದ ಮೂಲಕ ಕಕ್ಷೆಗೆ ಸೇರಿಸುವಲ್ಲಿ ಸಫಲವಾಯ್ತು ಇಸ್ರೋ.

‘ಇಂಡಿಯನ್ ರೀಜಿನಲ್ ಸ್ಯಾಟಲೈಟ್ ನ್ಯಾವಿಗೇಷನ್ ಸಿಸ್ಟಮ್’ ಎಂಬ ಏಳು ಉಪಗ್ರಹಗಳನ್ನೊಳಗಂಡ ಈ ಸರಣಿ, ಹೆಸರೇ ಸೂಚಿಸುವಂತೆ ಪ್ರಾದೇಶಿಕ ಸಂಚಾರ ಮಾರ್ಗಸೂಚಿಗೆ ತಂತ್ರಜ್ಞಾನ ಸಹಕಾರವನ್ನು ನೀಡುವಂಥದ್ದು. ಈ ಹಿಂದೆ ಈ ಸರಣಿಯ ನಾಲ್ಕು ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ ಸೇರಿವೆ. ಇದು ಐದನೇ ಉಪಗ್ರಹ. ಎಲ್ಲ ಏಳು ಉಪಗ್ರಹಗಳು ಕಕ್ಷೆಗೆ ಸೇರಿದ ನಂತರವಷ್ಟೇ ಇದರ ತಂತ್ರಜ್ಞಾನ ಉಪಯೋಗಕ್ಕೆ ಸಿಗುತ್ತದೆ.

ದೇಶದ ಬೇರೆ ಬೇರೆ ಭಾಗಗಳ 18 ಕೇಂದ್ರಗಳ ಮೂಲಕ ಈ ಸಮಗ್ರ ಉಪಗ್ರಹ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತದೆ. ಈ ಪೈಕಿ ನಮ್ಮ ರಾಜ್ಯದ ಹಾಸನ ಕೇಂದ್ರವೂ ನಿಯಂತ್ರಣ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಇದೊಂದು ಸ್ವಾಭಿಮಾನಿ ಹೆಜ್ಜೆ ಎಂಬುದರಲ್ಲಿ ಅನುಮಾನ ಬೇಡ. ಏಕೆ ಗೊತ್ತಾ? ನಾವಿವತ್ತು ಮಾರ್ಗಸೂಚಿ ವ್ಯವಸ್ಥೆಗೆ ಅವಲಂಬಿಸಿರುವ ತಂತ್ರಜ್ಞಾನ ಎಂದರೆ ಎಲ್ಲರಿಗೂ ಪರಿಚಿತವಿರುವ ಜಿಪಿಎಸ್ ಅರ್ಥಾತ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್. ಇದು ಅಮೆರಿಕದ್ದು. ಇನ್ನೊಂದು ರಷ್ಯದ ಗ್ಲೊನಾಸ್. ಐಆರ್ ಎನ್ ಎಸ್ ಎಸ್ ನ ಶ್ರೇಣಿಯ ಇನ್ನೆರಡು ಉಪಗ್ರಹಗಳು ಈ ವರ್ಷಾಂತ್ಯದಲ್ಲಿ ಕಕ್ಷೆಗೆ ಸೇರಿ ಕಾರ್ಯಾಚರಣೆ ಪ್ರಾರಂಭಿಸುತ್ತಲೇ ಸಂಚಾರ ಮಾರ್ಗಸೂಚಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಭಾರತವು ಹೊಂದಿರುವ ಅವಲಂಬನೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತದೆ. ಭಾರತದ ಒಳಗೆ ಮತ್ತು ಸುತ್ತಲಿನ 1500 ಕಿ.ಮೀ. ವ್ಯಾಪ್ತಿಯ ಮಾರ್ಗಸೂಚಿ ಗುರುತುಗಳನ್ನು ನೀಡಲಿರುವ ಈ ಉಪಗ್ರಹಗಳು ಎರಡು ಬಗೆಯ ಸೇವೆ ಒದಗಿಸುತ್ತವೆ. ಒಂದು- ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸಿಸ್ಟಮ್. ಇದು ಎಲ್ಲ ಬಳಕೆದಾರರಿಗೆ ಲಭ್ಯ. ಇನ್ನೊಂದು- ಸರ್ಕಾರ, ಆಡಳಿತ ಮಟ್ಟದಲ್ಲಿ ಕೆಲವೇ ಅಧಿಕೃತ ಬಳಕೆದಾರರಿಗೆ ನೀಡಲಾಗುವ ನಿರ್ಭಂದಿತ ಸೇವೆ.

ಆದ್ದರಿಂದಲೇ ಬುಧವಾರ ಕಕ್ಷೆಗೇರಿರುವ ಐದನೇ ಉಪಗ್ರಹವು ಭಾರತದ ತಂತ್ರಜ್ಞಾನ ಸ್ವಾವಲಂಬನೆ ಕನಸಿನ ಬಹುದೊಡ್ಡ ಹೆಗ್ಗುರುತು.

Leave a Reply