ತೈಲಬೆಲೆ ಇಳಿಕೆಯಿಂದ ಅಮೆರಿಕ ಉದ್ದಿಮೆಗಳಲ್ಲಿ ‘ರಕ್ತದೋಕುಳಿ’, ಮುಕೇಶ್ ಅಂಬಾನಿಗೆ ಮಾತ್ರ ಹಣದ ಹೋಳಿ!

ಡಿಜಿಟಲ್ ಕನ್ನಡ ಟೀಮ್

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಸಮಾಚಾರ ನಮಗೆಲ್ಲಾ ಈಗ ಹಳತು. ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಎಲ್ಲಾ ದೈತ್ಯ ತೈಲ ಕಂಪನಿಗಳು ನೆಲೆ ಊರಿರುವುದು ಕೂಡ ತಿಳಿದ ವಿಷಯವೇ. ಹೊಸ ವಿಷಯ ಏನೆಂದರೆ ಕುಸಿಯುತ್ತಿರುವ ತೈಲ ಬೆಲೆಯಿಂದಾಗಿ ಇಲ್ಲಿನ ತೈಲ ಕಂಪನಿಗಳಲ್ಲಿ “ಬ್ಲಡ್ ಬಾತ್ ” ಆಗುತ್ತಿದೆ. ಅರ್ಥಾತ್, ಈ ವಲಯದಲ್ಲಿ ಹತ್ತಾರು ವರ್ಷ ಕೆಲಸ ಮಾಡಿದ ಜನರನ್ನು ಕೆಲಸದಿಂದ ತೆಗೆಯುವುದು, ಸಂಬಳ ಕಡಿತ , ಸೌಲಭ್ಯ- ಸೌಕರ್ಯಗಳ ಕಡಿತ ಹೀಗೆ ಎಲ್ಲಿ, ಹೇಗೆ, ಎಷ್ಟು ಸಾಧ್ಯವೋ ಅಷ್ಟು ಖರ್ಚು ಕಡಿಮೆ ಮಾಡಲು ಈ ಕಂಪನಿಗಳು ಹವಣಿಸುತ್ತಿವೆ. ಕಂಪನಿ ಉಳಿಯಬೇಕು, ಮತ್ತೊಮ್ಮೆ ಅವಕಾಶ ಸೃಷ್ಟಿ ಆದಾಗ ಬೆಳೆಯಬೇಕು ಎಂದರೆ ಈ ರೀತಿಯ ಕಡಿವಾಣ ಅವಶ್ಯಕ.  ತಮ್ಮ ಉಳಿವಿಗಾಗಿ ತೈಲ ಕಂಪನಿಗಳು ಈ ದಾರಿ ಆಯ್ದು ಕೊಂಡವು. ಅವು ಹೇಗೋ ಈ ಪರೀಕ್ಷಾ ಸಮಯವನ್ನು ದಾಟಿ ಬಿಡಬಹುದು. ಇದನ್ನೇ ಜೀವನಕ್ಕೆ ನಂಬಿದ್ದ ಲಕ್ಷಾಂತರ ಉಪ ಉದ್ಯಮಿಗಳು, ನೇರವಾಗಿ ಅಲ್ಲೇ ಕೆಲಸ ಮಾಡುತಿದ್ದ ಕೆಲಸಗಾರರ ಗತಿ ಏನು? ಅಮೆರಿಕದಲ್ಲಿ ಎಲ್ಲವೂ ಸರಿ ಇಲ್ಲ, ಸದ್ಯಕ್ಕೆ ತೈಲ ಮಾರುಕಟ್ಟೆಯಲ್ಲಿ ಹರಿಯುತ್ತಿರುವುದು ತೈಲವಲ್ಲ ರಕ್ತದೋಕುಳಿ.

ಇಳಿಯುತ್ತಿರುವ ತೈಲ ಬೆಲೆ ಭಾರತದ ಆರ್ಥಿಕತೆಗೆ ಒಳ್ಳೆಯದೇ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿದ ತೈಲ ಬೆಲೆಗೆ ಹೋಲಿಸಿದರೆ ಇಲ್ಲಿ ಗ್ರಾಹಕನಿಗೆ ವರ್ಗಾಯಿಸಿದ ಅದರ ಲಾಭ ಅತೀ ಕಡಿಮೆ.

ಆದರೆ…

2016ರ ಆರಂಭದಲ್ಲೇ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸಂಪತ್ತು ವೃದ್ಧಿ ಮಾಡಿಕೊಂಡ ಕೋಟ್ಯಧಿಪತಿಗಳಲ್ಲಿ ಭಾರತದ ಮುಕೇಶ್ ಅಂಬಾನಿ ಪ್ರಥಮ ಸ್ಥಾನದಲ್ಲಿ ಇದ್ದಾರೆ. ಕೇವಲ ಕಚ್ಚಾ ತೈಲದ ಬೆಲೆ ಕುಸಿದರ ಪರಿಣಾಮ ಅಂಬಾನಿ ಖಾತೆಯಲ್ಲಿ  620 ಮಿಲಿಯನ್ ಅಮೆರಿಕ ಡಾಲರ್ ಸಂಪತ್ತು ವೃದ್ಧಿ. ಕಚ್ಚಾ ತೈಲದ ಬೆಲೆ ಕುಸಿದಂತೆ ಇಲ್ಲಿ ಅದರ ಉಪಯೋಗ ಹೆಚ್ಚಾಗುತ್ತದೆ. ಬಹಳ ಮುಖ್ಯವಾಗಿ, ಅಗ್ಗದಲ್ಲಿ ಕಚ್ಚಾತೈಲ ತಂದು ಸಂಸ್ಕರಣೆ ಮಾಡಿಕೊಡುತ್ತಾರಲ್ಲ… ಆ ಸಂಸ್ಕರಣೆಯ ಮಾರ್ಜಿನ್ ಹೆಚ್ಚು ಸಿಗೋದರಿಂದ  ರಿಲಯನ್ಸ್ ಇಂಡಸ್ಸ್ಟ್ರೀಸ್ ನ ತೈಲ ಸಂಸ್ಕರಣಾ ವಿಭಾಗದ ಲಾಭದ ಅಂಶ ಹೆಚ್ಚುತ್ತದೆ. ಪರಿಣಾಮ , ಮುಕೇಶ್ ರ ಆಸ್ತಿ ತಿಂಗಳೊಪ್ಪತ್ತಿನಲ್ಲಿ 620 ಮಿಲಯನ್ ಡಾಲರ್ ಹೆಚ್ಚಾಗುತ್ತೆ.
ಅಮೆರಿಕದ ಕೋಟ್ಯಧಿಪತಿಗಳ ಆಸ್ತಿ ಕರಗುತ್ತಿದ್ದರೆ, ಮುಕೇಶ್ ಅಂಬಾನಿ ಆಸ್ತಿ ಹೆಚ್ಚುತ್ತಿದೆ. ವಾಲ್ಮಾರ್ಟ್ ನ ಆಲಿಸ್ ವಾಟ್ಸನ್ 130 ಮಿಲಯನ್ ಡಾಲರ್ ಆಸ್ತಿ ಹೆಚ್ಚಳದೊಂದಿಗೆ ಎರಡನೇ ಸ್ಥಾನದಲ್ಲಿ ಇದ್ದಾರೆ ಎಂದರೆ  ಮುಖೇಶ್ ಅಂಬಾನಿ ಗಳಿಸಿದ ಲಾಭದ ಅಂದಾಜು ಆಗಬಹುದು!
ಬದುಕೆಂದರೆ ಇಷ್ಟೇ ಅಲ್ಲವೇ ಒಬ್ಬರಿಗೆ ಸೋಲು, ಒಬ್ಬರಿಗೆ ಗೆಲುವು.

ಇಷ್ಟವಾಗ್ತಿದೆಯೇ ಸುದ್ದಿಯ ಸೀಳುನೋಟ? ಹಾಗಾದ್ರೆ ಈ ಲಿಂಕಿನಲ್ಲಿ ಡಿಜಿಟಲ್ ಕನ್ನಡ ಆ್ಯಪ್ ಡೌನ್ಲೋಡ್ ಮಾಡ್ಕೋಳಿ.

Leave a Reply