ಪಾಕಿಸ್ತಾನದ ಬಚಾ ಖಾನ್ ವಿವಿ ಮೇಲೆ ದಾಳಿ ಮಾಡಿದ ಉಗ್ರರು ಕೊಲ್ಲಲು ಬಂದಿದ್ದು ‘ಗಾಂಧಿ’ಯನ್ನು!

 

ಡಿಜಿಟಲ್ ಕನ್ನಡ ಟೀಮ್

ಪಾಕಿಸ್ತಾನದ ಖೈಬರ್ ಪಕ್ತುಂಕ್ವ ಪ್ರಾಂತ್ಯದ ಬಚಾ ಖಾನ್ ವಿಶ್ವವಿದ್ಯಾಲಯದ ಮೇಲೆ ಬುಧವಾರ ನಡೆದಿರುವ ಉಗ್ರದಾಳಿಯಲ್ಲಿ 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮೃತರಾಗಿ 60ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂಬುದು ಸದ್ಯಕ್ಕೆ ಸಿಗುತ್ತಿರುವ ವರದಿ. ಈ ಅಂಕಿಸಂಖ್ಯೆಗಳೆಲ್ಲ ಗಣನೀಯ ಪ್ರಮಾಣದಲ್ಲೇ ಏರುವ ಸಾಧ್ಯತೆಗಳಿವೆ. ಈ ದಾಳಿಯ ಬಗ್ಗೆ ತಿಳಿಯಬೇಕಿರುವ ಚುಟುಕು ಅಂಶಗಳು ಇಲ್ಲಿವೆ.

  • ನಿಮಗೆ ಗೊತ್ತಿರಲಿ. ದಾಳಿಗೊಳಗಾದ ವಿಶ್ವವಿದ್ಯಾಲಯವು ಯಾರ ಹೆಸರಲ್ಲಿನಾಮಕರಣಗೊಂಡಿದೆಯೋ ಆ ಬಚಾ ಖಾನ್ ಅವರ ಪುಣ್ಯತಿಥಿ ಇಂದು. 1988 ಜನವರಿ 20ರಂದು ತೀರಿಕೊಂಡ ಬಚಾ ಖಾನ್ ರ ನಿಜ ನಾಮಧೇಯ ಖಾನ್ ಅಬ್ದುಲ್ ಗಫ್ಫಾರ್ ಖಾನ್. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿಮುಂಚೂಣಿಯಲ್ಲಿದ್ದ ಬಚಾ ಖಾನ್ ಅವರು ಮಹಾತ್ಮ ಗಾಂಧಿ ಜತೆ ಉತ್ತಮ ಸ್ನೇಹ ಹೊಂದಿದ್ದರು. ನಮ್ಮಲ್ಲಿ ಗಾಂಧೀಜಿಗೆ ಇರುವ ವರ್ಚಸ್ಸೇ ಅಲ್ಲಿ ಬಚಾ ಖಾನ್ ಅವರಿಗಿದೆ. ಇವರ ಸಾವಿನ ವಾರ್ಷಿಕಾಚರಣೆ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾಗಲೇ ನಡೆದಿರುವ ದಾಳಿ, ಉಗ್ರವಾದಿಗಳ ಸಿದ್ಧಾಂತ ಏನು ಎಂಬುದನ್ನು ನಿಚ್ಚಳವಾಗಿ ಸಾರುತ್ತಿದೆ.

khan abdul

 

  • ಶೈಕ್ಷಣಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಇಸ್ಲಾಮಿಕ್ ಉಗ್ರರ ಮುಖ್ಯ ಲಕ್ಷಣ. ಆಧುನಿಕ ಶಿಕ್ಷಣ, ಅರಿವುಗಳನ್ನು ವಿರೋಧಿಸುವವರೇ ಇಸ್ಲಾಮಿಕ್ ರಾಷ್ಟ್ರ ಸ್ಥಾಪನೆ ಕನಸು ಕಾಣಲು ಸಾಧ್ಯ. 2014ರಲ್ಲಿ ಪೇಶಾವರದ ಸೈನಿಕ ಶಾಲೆಯ ಮೇಲೆ ಉಗ್ರ ದಾಳಿಯಾದಾಗ 140 ಮಂದಿ ಮೃತರಾಗಿದ್ದರು. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಗ್ಲೋಬಲ್ ಟೆರರಿಸಂ ಡಾಟಾಬೇಸ್ ನ 1970- 2014ರ ಅವಧಿಯ ಅಂಕಿಅಂಶದ ಪ್ರಕಾರ ಪಾಕಿಸ್ತಾನದ 850 ಶಿಕ್ಷಣ ಕೇಂದ್ರಗಳ ಮೇಲೆ ಇಂಥ ದಾಳಿಗಳಾಗಿವೆ.
  • ತಹ್ರೀಕ್ ಈ ತಾಲಿಬಾನ್ ಎಂಬ ಉಗ್ರ ಸಂಘಟನೆ ಅದಾಗಲೇ ದಾಳಿಯ ಹೊಣೆ ಹೊತ್ತಿದೆ. ಹೀಗಾಗಿ, ಇದನ್ನು ಭಾರತದ ಗುಪ್ತಚರ ಸಂಸ್ಥೆಯೇ ಮಾಡಿಸಿತು ಅಂತ ಪಾಕಿಸ್ತಾನದ ಪ್ರಜೆಗಳು ಟ್ವಿಟರ್ ನಲ್ಲಿ ದೂರಿಕೊಂಡಿರುವುದಾಗಲೀ ಅಥವಾ ಇಲ್ಲಿನ ಅತಿರೇಕದ ಉತ್ಸಾಹಿಗಳು ‘ನೋಡ್ರೀ, ಪಠಾಣ್ ಕೋಟ್ ದಾಳಿಗೆ ಪ್ರತಿಯಾಗಿ ಅಜಿತ್ ದೋವಲ್ ಆಗ್ಲೇ ಕೊಟ್ರಲ್ಲ ಪೇಮೆಂಟು’ ಅಂತ ಬೀಗುವುದಾಗಲೀ ಸದ್ಯಕ್ಕೆ ಅಸಂಗತ.
  • ಪಾಕಿಸ್ತಾನದಲ್ಲಿ ಮುಗ್ಧರು ಹತರಾಗುತ್ತಿರುವ ಈ ಸಂದರ್ಭದಲ್ಲಿ, ಭಾರತೀಯರು ನಂಬುವ ‘ಕರ್ಮ ಸಿದ್ಧಾಂತ’ ನೆನಪಿಸುವುದು ಸೂಕ್ತವಾಗದು. ಆದರೆ ವಾಸ್ತವ ಕಟುವೇ. ಉಗ್ರವಾದ ಅಥವಾ ಇನ್ಯಾವುದೇ ಅತಿರೇಕಗಳನ್ನು ಧರ್ಮ, ಐಡೆಂಟಿಟಿಗಳ ಹೆಸರಲ್ಲಿ ಭೂತಾಕಾರವಾಗಿ ಬೆಳೆಸಿದರೆ ಕೊನೆಗೆ ಅದು ಪೋಷಿಸಿದವರನ್ನೇ ಕಾಡುತ್ತದೆ ಎಂಬುದನ್ನು ಪಾಕಿಸ್ತಾನ ಮೊದಲ್ಗೊಂಡು ಜಗತ್ತಿನವರೆಲ್ಲ ಅರ್ಥ ಮಾಡಿಕೊಳ್ಳಲೇಬೇಕು.

Leave a Reply