ಸುದ್ದಿಸಂತೆ: ಕಾವಲುಗಾರನ ಕೊಂದ ಧನಿಕ ದೋಷಿ, ಕ್ರಿಕೆಟ್ ಸೋಲಿನ ಸರಣಿ, ಉಗ್ರ ಬಂಧನ, ಸ್ಮೃತಿ ಮುರಿದರು ಮೌನ….

ಕಾವಲುಗಾರನಿಗೆ ಕಾರು ಗುದ್ದಿಸಿ ಸಾಯಿಸಿದ ಉದ್ಯಮಿ ವಿರುದ್ಧ ತೀರ್ಪು..

ಶ್ರೀಮಂತರಿಗೂ ಶಿಕ್ಷೆಯಾಗುತ್ತೆ ಎಂಬ ಸಣ್ಣ ಸಮಾಧಾನ ಸಿಗುವ ರೀತಿಯಲ್ಲಿ, ಕಾವಲುಗಾರನ ಮೇಲೆ ಕಾರು ಹಾಯಿಸಿದ್ದ ಉದ್ಯಮಿಯನ್ನು ದೋಷಿ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಬುಧವಾರ ಪರಿಗಣಿಸಿದ್ದು, ಗುರುವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದೆ.

ಕಳೆದ ವರ್ಷದ ಜನವರಿ 29 ರಂದು ಕೇರಳದ ಬೀಡಿ ಉದ್ಯಮಿ ಮಹ್ಮದ್ ನಾಸಿಮ್ ತ್ರಿಸೂರಿನ ಅಪಾರ್ಟಮೆಂಟ್ ಗೆ ಬಂದಾಗ ಕಾವಲುಗಾರ ಚಂದ್ರಬೋಸ್ ಗೇಟ್ ತೆರೆಯಲು ನಿಧಾನ ಮಾಡಿದನು ಎಂದು ಕೊಪಗೊಂಡು ತನ್ನ ಹಮ್ಮರ್ ಕಾರನಲ್ಲಿ ಕಾವಲುಗಾರನನ್ನು ಗುದ್ದಿದ್ದ! ಆಗ ತೀವ್ರವಾಗಿ ಗಾಯಗೊಂಡು 48 ದಿನಗಳ ಜೀವನ್ಮರಣ ಹೋರಾಟ ನಡೆಸಿ ಬೋಸ್ ಸಾವನಪ್ಪಿದರು. ಈ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಬೋಸ್ ಪತ್ನಿ ಆರೋಪಿಗೆ ಮರಣ ದಂಡನೆ ವಿಧಿಸಿ 5 ಕೋಟಿ ರು ಪರಿಹಾರ ಕೋರಿದ್ದರು.

ಮಹ್ಮದ್ ನಾಸಿಮ್ ನ ಮೇಲೆ ಹಲವು ಆರೋಪಗಳಿವೆ. ಇತ್ತೀಚೆಗೆ ನಟ ಮತ್ತು ಈತನ ಸಹಚರರು ಮಾದಕ ವಸ್ತು ಕೊಕೇನ್ ಜೊತೆ ಅಪಾರ್ಟ್ ಮೆಂಟ್ ಒಂದರಲ್ಲಿ   ಬಂಧನವಾಗಿದ್ದರು. ಈ ಅಪಾರ್ಟ್ ಮೆಂಟ್ ನಾಸಿಮ್ ಮಾಲಿಕತ್ವದಾಗಿತ್ತು. ಮತ್ತೊಂದರಲ್ಲಿ ಕಾರು ತಪಾಸಣೆ ನಡೆಸುವ ವೇಳೆ ಮಹಿಳಾ ಇನ್ಸ್ ಪೆಕ್ಟರ್ ಅನ್ನು ಗುರಾಯಿಸಿದ್ದು ಮತ್ತು ತನ್ನ 10 ವರ್ಷದ ಮಗ ಕಾರು ಓಡಿಸುವ ವಿಡಿಯೋವನ್ನು ಯೂಟೂಬ್ ಗೆ ಅಪ್ ಲೋಡ್ ಮಾಡಿದ್ದರು. ಇದರ ವಿರುದ್ಧವೂ ದೂರು ದಾಖಲಾಗಿತ್ತು.

ಉಗ್ರ ಬಂಧನ, ಹರಿದ್ವಾರದಲ್ಲಿ ತಪ್ತು ಭಾರೀ ವಿಧ್ವಂಸ!

ಗಂಗಾ ತೀರದಲ್ಲಿ ನಡೆಯುತ್ತಿರುವ ಅರ್ಧ ಕಂಭ ಮೇಳದ ಮೇಲೆ ದಾಳಿ ಮಾಡಲು ಬಂದಿದ್ದ ಜೈಷ್ ಇ ಮಹ್ಮದ್ ಸಂಘಟನೆಯ 4 ಶಂಕಿತ ಉಗ್ರರನ್ನು ಹರಿದ್ವಾರ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಜನವರಿ 14 ರಿಂದ ಪ್ರಾರಂಭವಾಗಿದ್ದು 4 ತಿಂಗಳಷ್ಟು ದೀರ್ಘಕಾಲ ನಡೆಯುವ ಮೇಳಕ್ಕೆ  ರೈಲುಗಳ ಮೂಲಕ  ನೂರಾರು ಯಾತ್ರಿಗಳು ಸಾವಿರಾರು ಭಕ್ತರು ಆಗಮಿಸುತ್ತಾರೆ. ಇದನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿಗೆ ಸಂಚು ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹರಿದ್ವಾರದ ಸುತ್ತಮುತ್ತ ಹಳ್ಳಿಗಳಲ್ಲಿ ಉತ್ತರಖಂಡ ಮತ್ತು ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಇವರಿಗೆ ಇರಾಕ್ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟಗಳೊಂದಿಗೆ ಸಂಪರ್ಕವಿರುವ ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಮುಂದುವರಿದ ಸೋಲಿನ ಅಭಿಯಾನ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತದ ಆಟಗಾರರು ಎಷ್ಟೇ ಶತಕಗಳನ್ನು ಸಿಡಿಸಿದರು ಜಯವನ್ನು ಒಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೆ ಸರಣಿಯನ್ನು ಕೈಚಲ್ಲಿರುವ ಪ್ರವಾಸಿಗರು ಉಳಿದ ಎರಡು ಪಂದ್ಯಗಳನ್ನಾದರು ಗೆದ್ದು ಸೋಲಿನ ಮುಖಭಂಗವನ್ನು ಕಡಿಮೆ ಮಾಡುವ ನಿರೀಕ್ಷೆ ಹುಸಿಯಾಗಿದೆ. ಐದು ಪಂದ್ಯಗಳ ಪಂದ್ಯಾವಳಿಯಲ್ಲಿ ಬುಧವಾರ ನಡೆದ ನಾಲ್ಕನೇ ಪಂದ್ಯದಲ್ಲಿ  ಕೋಹ್ಲಿ ಮತ್ತು ಧವನ್ ರ ಶತಕದ ನಡುವೆಯೂ ಆಸಿಸ್ ವಿರುದ್ಧ ಭಾರತ 27 ರನ್ ಗಳ ಸೋಲು ಕಂಡಿದೆ.

ನಿಗದಿತ ಒವರ್ ಗಳಲ್ಲಿ ಆಸಿಸ್ ನೀಡಿದ್ದ 349 ರನ್ ಗಳ ಗುರಿ ಬೆನ್ನತ್ತಿದ ಭಾರತ 49.2 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 323 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಭಾರತದ ಪರ ರೋಹಿತ್ (41), ಧವನ್ (106), ಕೋಹ್ಲಿ (106) ರನ್ನುಗಳನ್ನು ಗಳಿಸಿ ಆರಂಭಿಕ ವೇಗ ಗಳಿಸಿಕೊಟ್ಟರು ಮಧ್ಯಮ ಕ್ರಮಾಂಕದ ಆಟಗಾರರ ವೈಫಲ್ಯ ಸೋಲಿಗೆ ಕಾರಣವಾಯಿತು.

ಇನ್ನಿಂಗ್ಸ್ ಆರಂಭಿಸಿದ ಆಸಿಸ್ ವಾರ್ನರ್ (93), ಫಿಂಚ್ (107) ರನ್ ಗಳ ಆರಂಭಿಕ ಭದ್ರ ಬುನಾದಿಯ ಜೊತೆಯಾಟ ಮತ್ತು ಕೆಳ ಕ್ರಮಾಂಕದ ಆಟಗಾರರಾದ ಮಾರ್ಷ್ (33), ಸ್ಮೀತ್ (51), ಮಾಕ್ಸ್ ವೆಲ್ (41) ರ ಉತ್ತಮ ಆಟದಿಂದ 8 ವಿಕೆಟ್ ಕಳೆದುಕೊಂಡು 348 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು. ಕೊನೆಯ ಪಂದ್ಯ ಜನವರಿ 23 ರಂದು ನಡೆಯಲಿದೆ.

ರೋಹಿತ್ ಸಾವು ದಲಿತ ವರ್ಸಸ್ ದಲಿತೇತರ ಅಲ್ಲ…

ಹೈದರಾಬಾದ್ ನ ಕೇಂದ್ರ ವಿವಿಯಲ್ಲಿ ನಡೆದಿರುವ ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣವನ್ನು ದಲಿತ ವರ್ಸಸ್ ದಲಿತೇತರ ಎಂದು ವರ್ಗಿಕರಿಸಿ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ, ಕೆಲವರು ದುರುದ್ದೇಶ ಪೂರ್ವಕವಾಗಿ ಸಮಾಜವನ್ನು ಒಡೆಯುವಂತಹ ಪ್ರಯತ್ನವನ್ನು ನಡೆಸುತ್ತಿದ್ದಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಆರೋಪಿಸಿದರು.

ಸಂಶೋಧನ ವಿದ್ಯಾರ್ಥಿ ರೋಹಿತ್ ವೆಮುಲ ರ ಸಾವನ್ನು ರಾಜಕೀಯಗೊಳಿಸುತ್ತಿದ್ದು ಈ ವಿಚಾರದಲ್ಲಿ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ರೋಹಿತ್ ಸಾವಿನ ಪತ್ರದಲ್ಲಿ ಎಲ್ಲಿಯೂ ಆತನ ಸಾವಿಗೆ ಯಾವುದೇ ಸಚಿವರ, ರಾಜಕೀಯ ಪಕ್ಷಗಳ, ಸಂಘ ಸಂಸ್ಥೆಗಳ ಅಥವಾ ಇನ್ನಿತರ ವ್ಯಕ್ತಿಗಳ ಹೆಸರನ್ನು ಬರೆದಿಲ್ಲ. ಆದರೆ ಇಂತಹ ಸೂಕ್ಷ್ಮ ವಿಚಾರವನ್ನು ತಪ್ಪಾಗಿ ಅರ್ಥೈಸಿಕೊಂಡು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.

Leave a Reply